ಸೋಮವಾರ, ಡಿಸೆಂಬರ್ 9, 2019
25 °C
ಹದಿನಾಲ್ಕನೇ ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಬೀಳ್ಕೊಡುಗೆ ನುಡಿಗಳಿಲ್ಲದೆ ಕ್ಷೇತ್ರಕ್ಕೆ ಮರಳಿದ ಶಾಸಕರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಳ್ಕೊಡುಗೆ ನುಡಿಗಳಿಲ್ಲದೆ ಕ್ಷೇತ್ರಕ್ಕೆ ಮರಳಿದ ಶಾಸಕರು!

ಬೆಂಗಳೂರು: ಹದಿನಾಲ್ಕನೇ ವಿಧಾನಸಭೆಯ ಕೊನೆಯ ಅಧಿವೇಶನದ ಕಡೇ ದಿನದ ಸಂಜೆ ಕಲಾಪದ ವೇಳೆ ಸದಸ್ಯರ ಸಂಖ್ಯೆ ಕಡಿಮೆ ಇತ್ತು. ಕಲಾಪವನ್ನು ಅನಿರ್ದಿಷ್ಟಾವಧಿ ಮುಂದೂಡುವ ವೇಳೆಗೆ ಮುಖ್ಯಮಂತ್ರಿಯವರೂ ಇರಲಿಲ್ಲ. ಯಾರಿಂದಲೂ ಬೀಳ್ಕೊಡುಗೆ ಮಾತುಗಳೂ ಕೇಳಿ ಬರಲಿಲ್ಲ.

ಕಲಾಪ ಮುಕ್ತಾಯವಾಗುತ್ತಿದ್ದಂತೆ ಶಾಸಕರು ತಮ್ಮ ತಮ್ಮ ದಾರಿ ಹಿಡಿದರು. ಮೊಗಸಾಲೆಯಲ್ಲಿ ಎದುರು ಸಿಕ್ಕವರಿಗೆ ‘ಮತ್ತೊಮ್ಮೆ ಗೆದ್ದು ಬನ್ನಿ’ ಎಂಬ ಶುಭಾಶಯ ವಿನಿಮಯವಾಗುತ್ತಿದ್ದದ್ದು ಕಂಡು ಬಂತು.

ಶುಕ್ರವಾರ ಬೆಳಿಗ್ಗೆ ಬಜೆಟ್‌ ಚರ್ಚೆಯ ಮೇಲಿನ ಉತ್ತರ ನೀಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಎಲ್ಲ ಶಾಸಕರಿಗೆ ಚುನಾವಣೆಯಲ್ಲಿ ಟಿಕೆಟ್‌ ಸಿಗಲಿ, ಚುನಾವಣೆಯಲ್ಲಿ ಗೆದ್ದು ಬರಲಿ’ ಎಂದೂ ಹಾರೈಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಚುನಾವಣೆಯಲ್ಲಿ ತಾವೇ ಗೆದ್ದು ಬಂದು ಅಧಿಕಾರ ಹಿಡಿಯುವ ಮಾತಗಳನ್ನು ಆಡಿದರು.

ಚುನಾವಣೆ ಪ್ರಚಾರದ ಧಾವಂತದಲ್ಲಿದ್ದ ಸಾಕಷ್ಟು ಶಾಸಕರು ಮಧ್ಯಾಹ್ನದ ಬಳಿಕ ಸದನದ ಕಡೆ ತಲೆ ಹಾಕಲಿಲ್ಲ. ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಕೆಲವೇ ಶಾಸಕರು ಮಾತ್ರ ಉಳಿದಿದ್ದರು. ಅವರಲ್ಲೂ ಮುಂದಿನ ಚುನಾವಣೆಯಲ್ಲಿ ಗೆಲುವು ಮತ್ತು ಸೋಲಿನ ಲೆಕ್ಕಾಚಾರಗಳೇ ನಡೆದಿದ್ದವು. ಜೆಡಿಎಸ್‌ನ ಎಚ್‌.ಡಿ.ರೇವಣ್ಣ ತಮ್ಮ ಪ್ರಶ್ನೆಯೊಂದಕ್ಕೆ ಉತ್ತರ ಬೇಕು ಎಂದು ಕೊನೆ ಗಳಿಗೆಯಲ್ಲೂ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿ ವಿಫಲರಾದರು.

ಆರೋಗ್ಯ ಸಚಿವ ಕೆ.ಆರ್.ರಮೇಶ್‌ ಕುಮಾರ್‌ ಶಾಸಕರನ್ನು ಚಿಂತನೆಗೆ ಹಚ್ಚುವ ವಿದಾಯದ ನುಡಿಗಳನ್ನು ಆಡಿದರು. ‘ನಾವು ಎಲ್ಲೆಲ್ಲಿಂದಲೋ ಬಂದಿದ್ದೇವೆ. ಇಲ್ಲಿಗೆ ಬಂದಿದ್ದು ಆಕಸ್ಮಿಕ. 1978 ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿ ಬಂದೆ. ಆಗಿನಿಂದಲೂ ಕಾಲ ಹಾಳಾಗಿ ಹೋಗಿದೆ ಎಂಬ ಮಾತುಗಳನ್ನು ಕೇಳುತ್ತಲೇ ಬಂದಿದ್ದೇನೆ. ಆದರೆ, ನಾವು ಸಾರ್ವಜನಿಕರಿಗೆ ಉತ್ತರದಾಯಿಗಳಾಗಿ ನಡೆದುಕೊಂಡಿದ್ದೇವೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು’ ಎಂದು ಹೇಳಿದರು.

‘ಪ್ರಜಾಪ್ರಭುತ್ವವನ್ನು ಜನ ವಿಫಲಗೊಳಿಸಿಲ್ಲ. ಅದನ್ನು ವಿಫಲಗೊಳಿಸುತ್ತಿರುವವರು ನಾವು ಮತ್ತು ರಾಜಕೀಯ ಪಕ್ಷಗಳು. 1971 ರಲ್ಲಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್‌ ಪಕ್ಷವನ್ನು ಬಹುಮತದಿಂದ ಗೆಲ್ಲಿಸಿದರು. ಅದೇ ಜನ 1977 ರಲ್ಲಿ ಸೋಲಿಸಿದರು. ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದ್ದರಷ್ಟೇ ಪ್ರಜಾತಂತ್ರ ಪರಿಪೂರ್ಣ ಎನ್ನಬಹುದು. ಈಗ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ’ ಎಂದು ರಮೇಶ್‌ ಕುಮಾರ್ ಬೇಸರ ವ್ಯಕ್ತ‍ಪಡಿಸಿದರು.

‘ಕಲಾಪದ ವೇಳೆಯಲ್ಲಿ ನಾವು ನಡೆದುಕೊಳ್ಳುವ ರೀತಿ, ಬಳಸುವ ಭಾಷೆಯ ಬಗ್ಗೆ ಎಚ್ಚರಿಕೆ ಇರಬೇಕು. ಮುಂದಿನ ಪೀಳಿಗೆಗೆ ಏನು ಬಿಟ್ಟು ಹೋಗುತ್ತೇವೆ ಎಂಬ ಕಾಳಜಿಯೂ ಇರಬೇಕು. ಒಳ್ಳೆಯ ಸಂದೇಶಗಳನ್ನು ಬಿಟ್ಟು ಹೋಗಬೇಕು’ ಎಂದು ಅವರು ಕಿವಿಮಾತು ಹೇಳಿದರು.

***

43 ಗಂಟೆ 34 ನಿಮಿಷ ಕಾರ್ಯಕಲಾಪ

14 ನೇ ವಿಧಾನಸಭೆಯ 16 ನೇ ಅಧಿವೇಶನವು ಒಟ್ಟು 43 ಗಂಟೆ 34 ನಿಮಿಷಗಳ ಕಾಲ ನಡೆಯಿತು. ಧನ ವಿನಿಯೋಗವೂ ಸೇರಿ ಒಟ್ಟು 18 ಮಸೂದೆಗಳನ್ನು ಮಂಡಿಸಲಾಯಿತು. ಅದರಲ್ಲಿ 17 ಮಸೂದೆಗಳು ಅಂಗೀಕಾರಗೊಂಡವು. 1 ಮಸೂದೆಯನ್ನು ಹಿಂದಕ್ಕೆ ಪಡೆಯಲಾಯಿತು.

ಶಾಸಕರಿಂದ 1691 ಪ್ರಶ್ನೆಗಳನ್ನು ಸ್ವೀಕರಿಸಲಾಗಿತ್ತು. ಸದನದಲ್ಲಿ ಉತ್ತರಿಸಲು ತೀರ್ಮಾನಿಸಲಾಗಿದ್ದ 189 ಪ್ರಶ್ನೆಗಳ ಪೈಕಿ 135 ಪ್ರಶ್ನೆಗಳಿಗೆ ಉತ್ತರ ನೀಡಲಾಯಿತು. ಲಿಖಿತ ಮೂಲಕ ಉತ್ತರಿಸುವ 1392 ಪ್ರಶ್ನೆಗಳ ಪೈಕಿ 761 ಪ್ರಶ್ನೆಗಳಿಗೆ ಉತ್ತರ ಮಂಡಿಸಲಾಯಿತು. 28 ಪ್ರಶ್ನೆಗಳನ್ನು ತಿರಸ್ಕರಿಸಲಾಯಿತು.

ಪ್ರತಿಕ್ರಿಯಿಸಿ (+)