ಬುಧವಾರ, ಡಿಸೆಂಬರ್ 11, 2019
26 °C
ಪ್ರಶ್ನೋತ್ತರ: ನೇರಾನೇರ

ಯಡಿಯೂರಪ್ಪ ಸಂವಾದದಲ್ಲಿ ಪ್ರಶ್ನೋತ್ತರ: ನೇರಾನೇರ

Published:
Updated:
ಯಡಿಯೂರಪ್ಪ ಸಂವಾದದಲ್ಲಿ  ಪ್ರಶ್ನೋತ್ತರ: ನೇರಾನೇರ

ರಾಕೇಶ್, ರಿಯಲ್ ಎಸ್ಟೇಟ್‌ ಕನ್ಸಲ್ಟೆಂಟ್‌

* ನವೋದ್ಯಮ ಆರಂಭಿಸುವವರಿಗೆ ಉತ್ತೇಜನ ಸಿಗುತ್ತಿಲ್ಲ. ರೇರಾ ಕಾಯ್ದೆ ಬಂದ ಮೇಲೆ ರಿಯಲ್ ಎಸ್ಟೇಟ್ ಕಂಪನಿಗಳಿಂದ ದುಬಾರಿ ಶುಲ್ಕ ವಸೂಲು ಮಾಡಲಾಗುತ್ತಿದೆ. ಇದನ್ನು ತಪ್ಪಿಸುವಿರಾ?

ಬಿಎಸ್‌ವೈ: ಕೈಗಾರಿಕೆ ಸ್ಥಾಪಿಸುವವರು ಎದುರಿಸುತ್ತಿರುವ ಅಡ್ಡಿ, ಆತಂಕ, ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ, ಅನಗತ್ಯ ವಿಳಂಬ ತಪ್ಪಿಸಲು ಕ್ರಮ ಕೈಗೊಳ್ಳುವೆ. ಉದ್ಯಮ ಸ್ನೇಹಿ ಆಡಳಿತ ತರುತ್ತೇನೆ.

***

ಚಂದ್ರಶೇಖರ ಮೇಟಿ

* ‘ಕೃಷ್ಣಾ ಎ ಸ್ಕೀಮ್‌ನಲ್ಲಿ 700 ಟಿಎಂಸಿ ಅಡಿ, ಬಿ ಸ್ಕೀಮ್‌ನಲ್ಲಿ 200 ಟಿಎಂಸಿ ಅಡಿ ನೀರು ರಾಜ್ಯಕ್ಕೆ ಹಂಚಿಕೆಯಾಗಿದೆ. ಯೋಜನೆಗಳ ಹೆಸರಿನಲ್ಲಿ ದುಡ್ಡು ನೀರಿನಂತೆ ಹರಿದಿದೆ. ಆದರೆ, ಯೋಜನೆಗಳು ಜನರನ್ನು ತಲುಪಿಲ್ಲ. ಬಗರ್‌ಹುಕುಂ ಸಮಸ್ಯೆಗೆ ಏನು ಪರಿಹಾರ?

ಬಿಎಸ್‌ವೈ: ಇದನ್ನು ಕಾಲಮಿತಿಯಲ್ಲಿ ಬಳಸಲು ಯೋಜನೆ ರೂಪಿಸಿ, ಅನುದಾನ ನೀಡಲಾಗುವುದು. ಬಗರ್‌ಹುಕುಂ ಸಾಗುವಳಿ ಸೇರಿದಂತೆ ಬಡವರು, ಜೀವನೋಪಾಯಕ್ಕಾಗಿ ಒತ್ತುವರಿ ಮಾಡಿಕೊಂಡಿರುವವರಿಗೆ ಭೂಮಿ ಸಕ್ರಮ ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ.

‌***

ನಳಿನಿ, ರೈತ ಚಳವಳಿ ಕಾರ್ಯಕರ್ತೆ

* ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (ಎಪಿಎಂಸಿ) ಶೇ 10ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ಅದನ್ನು ತಪ್ಪಿಸುತ್ತೀರಾ? ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡುತ್ತೀರಾ?

ಬಿಎಸ್‌ವೈ: ಎಪಿಎಂಸಿಗಳಿಂದ ರೈತರಿಗೆ ಉಪಯೋಗವಾಗುತ್ತಿಲ್ಲ, ಸುಲಿಗೆ ನಡೆಯುತ್ತಿದೆ ಎಂಬುದು ಗೊತ್ತಿದೆ. ಅದನ್ನು ತಡೆಯಲು ಕ್ರಮ ಕೈಗೊಳ್ಳುವೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುವಂತೆ ವ್ಯವಸ್ಥೆ ಮಾಡುವೆ.

***

ಪಿ. ಶೇಷಾದ್ರಿ, ನಿರ್ದೇಶಕ

*ವೀರಶೈವ– ಲಿಂಗಾಯತ ವಿವಾದದ ಬಗ್ಗೆ ತಮ್ಮ ನಿಲುವೇನು?

ಬಿಎಸ್‌ವೈ: ಸಿದ್ಧಗಂಗಾ ಶ್ರೀಗಳು, ವೀರಶೈವ ಮಹಾಸಭಾದ ಶಾಮನೂರು ಶಿವಶಂಕರಪ್ಪ ನಿಲುವಿಗೆ ನಮ್ಮ ಸಹಮತ. ಈ ವಿಷಯದಲ್ಲಿ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಪ್ರತ್ಯೇಕ ಧರ್ಮದ ಅಗತ್ಯ ಇಲ್ಲ. ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿ ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾಗಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ನಾಳೆ ಇನ್ನೊಂದು ಸಮಾಜ ಒಡೆಯುವ ಯೋಚನೆ ಮಾಡುತ್ತದೆ. ಕೊನೆ ಯಾವಾಗ ಇದಕ್ಕೆ?

***

ವಾಸುದೇವ ಶರ್ಮಾ, ಮಕ್ಕಳ ಹಕ್ಕುಗಳ ಹೋರಾಟಗಾರ

* ರಾಜ್ಯದಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಇರುವ ನಾಲ್ಕೈದು ಇಲಾಖೆಗಳು ನವಗ್ರಹಗಳಂತೆ ಕೆಲಸ ಮಾಡುತ್ತಿವೆ. ಅವುಗಳ ನಡುವೆ ಸಮನ್ವಯ ಇಲ್ಲ. ಇಲ್ಲಿ ಸಮನ್ವಯ ಸಾಧಿಸಿ ಮಕ್ಕಳ ಸಮಗ್ರ ಅಭಿವೃದ್ಧಿಗೆ ಮುಂದಾಗಲು ನಿಮ್ಮ ಯೋಚನೆ ಏನು?

ಬಿಎಸ್‌ವೈ: ವಿವಿಧ ಇಲಾಖೆಗಳ ನಡುವೆ ಸಮನ್ವಯ ಮೂಡಿಸಿ ಬಲಪಡಿಸುವ ಕೆಲಸ ಮಾಡುತ್ತೇವೆ.

***

ಎನ್‌.ಸಿ. ಗೋಪಿನಾಥ್‌ ಉದ್ಯಮಿ

*ಸಣ್ಣ ಕೈಗಾರಿಕೆಗಳಿಗೆ 28 ಸಂಕೋಲೆಗಳನ್ನು ಹಾಕಲಾಗಿದೆ. ಕಾರ್ಮಿಕರ ವೇತನವನ್ನು ಶೇ 40ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಕೈಗಾರಿಕೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಲು ನಿಮ್ಮ ಯೋಜನೆ ಏನು?

ಬಿಎಸ್‌ವೈ: ಕಾರ್ಮಿಕರು ಶ್ರಮಜೀವಿಗಳು. ಅವರಿಗೆ ಕನಿಷ್ಠ ವೇತನ ಹಾಗೂ ಸವಲತ್ತು ನೀಡಲೇಬೇಕು.

ಪ್ರತಿಕ್ರಿಯಿಸಿ (+)