ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ; ಗೂಂಡಾಗಿರಿಗೆ ಕಡಿವಾಣ’

Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಚೇತನಾ ತೀರ್ಥಹಳ್ಳಿ, ಲೇಖಕಿ
*ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತೇನೆ ಎನ್ನುತ್ತೀರಿ? ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗುವವರ ಪ್ರಮಾಣ ಕರ್ನಾಟಕದಲ್ಲಿ ಶೇ 2.8ರಷ್ಟಿದ್ದು, ಇದು ದೇಶದಲ್ಲೇ ಅತ್ಯಂತ ಕಡಿಮೆ ಇದೆ. ಶಿಕ್ಷೆ ಪ್ರಮಾಣ ಹೆಚ್ಚಿಸಲು ಏನು ಕ್ರಮ?

ಜಯಲಕ್ಷ್ಮಿ ಪಾಟೀಲ, ಕಿರುತೆರೆ ಕಲಾವಿದೆ
* ಅತ್ಯಾಚಾರಕ್ಕೆ ಒಳಗಾದ ಪ್ರಕರಣಗಳಲ್ಲಿ ನ್ಯಾಯ ಸಿಗುವುದು ಕಡಿಮೆ. ಭರವಸೆಯ ಮೇಲೆ ಎಷ್ಟು ದಿನ ಬದುಕುವುದು? ಅತ್ಯಾಚಾರ ಪ್ರಕರಣ ವರದಿಯಾದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರ ನೆರವಿಗೆ ಧಾವಿಸುವ ಪೊಲೀಸ್, ವಕೀಲ, ವೈದ್ಯರು, ಮನೋವೈದ್ಯರು ಇರುವ ‘ರೇಪ್ ಕಿಟ್‌’ ಯೋಜನೆ ಜಾರಿಯಾಗಲೇ ಇಲ್ಲ.

‌ಡಾ. ಸುಶಿ ಕಾಡನಕುಪ್ಪೆ‌, ದಂತ ವೈದ್ಯೆ
*ಬಹುಸಂಸ್ಕೃತಿ ಇರುವ ದೇಶದಲ್ಲಿ ಮಹಿಳೆಯರ ಘನತೆ ಎತ್ತಿ ಹಿಡಿಯಲು ನಿಮ್ಮ ಕಾರ್ಯಕ್ರಮಗಳೇನು? ಲಿಂಗ ಮತ್ತು ಸಾಮಾಜಿಕ ಅಸಮಾನತೆ ನಿವಾರಿಸಲು ಏನು ಮಾಡುತ್ತೀರಿ?

ಯಡಿಯೂರಪ್ಪ ಹೇಳಿದ್ದೇನು?
ಮಹಿಳೆಯರು ನಡುರಾತ್ರಿಯಲ್ಲಿ ನಿರ್ಭೀತಿಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಬೇಕಾದರೆ ಅತ್ಯಾಚಾರಿಗಳಿಗೆ, ಕಿರುಕುಳ ನೀಡುವವರಿಗೆ ಶಿಕ್ಷೆ ವಿಧಿಸುವಂತಾಗಬೇಕು. ನಾನು ಅಧಿಕಾರಕ್ಕೆ ಬಂದರೆ ಈ ವಿಷಯದಲ್ಲಿ ಬಿಗಿಯಾದ ಕಾನೂನು ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಸಂವಾದದಲ್ಲಿ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಗೂಂಡಾಗಿರಿ ಹೆಚ್ಚಾಗಿದೆ. ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ರೌಡಿಗಳು, ದಬ್ಬಾಳಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿದರೆ ಇಂತಹ ಪ್ರಕರಣಗಳು ಮರುಕಳಿಸುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.

‘ನೀವು ಏನು ಕ್ರಮ ಕೈಗೊಳ್ಳುತ್ತೀರಿ’ ಎಂದು ಮರುಪ್ರಶ್ನೆ ಹಾಕಿದಾಗ, ‘ಉತ್ತರ ಪ್ರದೇಶದಲ್ಲಿ ವಿಪರೀತ ಗೂಂಡಾಗಿರಿ ನಡೆಯುತ್ತಿತ್ತು. ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾದ ಮೇಲೆ ಗೂಂಡಾಗಿರಿ ಮಾಡುವವರ ವಿರುದ್ಧ ಎನ್‌ಕೌಂಟರ್‌ ಮಾಡಲಾಯಿತು. ಅಲ್ಲಿ ಪರಿಸ್ಥಿತಿ ತಹಬಂದಿಗೆ ಬಂದಿದೆ’ ಎಂದು ಹೇಳಿದರು.

‘ಅತ್ಯಾಚಾರದಲ್ಲಿ ಉತ್ತರ ಪ್ರದೇಶ ನಂ.2 ಇದೆ’ ಎಂದು ಚೇತನಾ ತೀರ್ಥಹಳ್ಳಿ ಕಾಲೆಳೆದರು.

‘ಅಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದು ಆರೇಳು ತಿಂಗಳಾಯಿತಷ್ಟೆ. ನೀವು ಹಿಂದಿನ ಲೆಕ್ಕವನ್ನು ಹೇಳುತ್ತಿದ್ದೀರಿ. ಕರ್ನಾಟಕದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮಾದರಿಯಲ್ಲಿ ಬಿಗಿ ಕ್ರಮ ಕೈಗೊಂಡು, ರೌಡಿಗಳನ್ನು ಮಟ್ಟ ಹಾಕುತ್ತೇವೆ. ಅತ್ಯಾಚಾರಿಗಳನ್ನಂತೂ ಸಹಿಸುವುದೇ ಇಲ್ಲ. ಮೂರು ನಾಲ್ಕು ತಿಂಗಳು ಕಾದು ನೋಡಿ’ ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದರು.

‘ಮಹಿಳಾ ಸಬಲೀಕರಣಕ್ಕೆ ನಿಮ್ಮ ಆದ್ಯತೆ ಏನು? ಎಂಬ ಪ್ರಶ್ನೆಗೆ, ‘ನಾನು ಮುಖ್ಯಮಂತ್ರಿಯಾಗಿದ್ದಾಗ ಕೂಲಿ ಮಾಡುವ, ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಸ್ವಾವಲಂಬಿ ಬದುಕು ಕಲ್ಪಿಸುವ ಉದ್ದೇಶದಿಂದ 16.50 ಲಕ್ಷ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಸಬಲೀಕರಣ, ಉದ್ಯೋಗಕ್ಕೆ ಪೂರಕವಾದ ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ. ಇನ್ನಷ್ಟು ಯೋಜನೆಗಳನ್ನು ಜಾರಿ ಮಾಡುತ್ತೇವೆ’ ಎಂದು ಹೇಳಿದರು.

‘ಚುನಾವಣೆಯಲ್ಲಿ ಎಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೀರಿ, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಎಷ್ಟರ ಮಟ್ಟಿಗೆ ಪ್ರಾತಿನಿಧ್ಯ ಸಿಗಲಿದೆ’ ಎಂಬ ಪ್ರಶ್ನೆಗೆ, ‘ದೊಡ್ಡ ಮಟ್ಟದ ಪೈಪೋಟಿ ಇರುವ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯ. ಗೆಲ್ಲುವ ಕಡೆಗಳಲ್ಲಿ ಮಹಿಳೆಯರಿಗೆ ಟಿಕೆಟ್ ಕೊಡುತ್ತೇವೆ. ಬೇರೆ ಪಕ್ಷಕ್ಕಿಂತ ಹೆಚ್ಚಿನ ಪ್ರಾತಿನಿಧ್ಯ ನೀಡುವುದಂತೂ ಖಚಿತ’ ಎಂದರು.

‘ಮಹಿಳೆಯರ ಘನತೆ ಎತ್ತಿಹಿಡಿಯಲು ಕಾರ್ಯಕ್ರಮ ಏನು’ ಎಂಬ ಪ್ರಶ್ನೆಗೆ, ‘ತ್ರಿವಳಿ ತಲಾಖ್ ಬಗ್ಗೆ ನಿಮ್ಮ ನಿಲುವೇನು’ ಎಂದು ಮರು ಪ್ರಶ್ನೆ ಹಾಕಿದ ಯಡಿಯೂರಪ್ಪ, ‘ನಿಮ್ಮ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವೆ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT