ಮಂಗಳವಾರ, ಡಿಸೆಂಬರ್ 10, 2019
20 °C
ಶಿಕ್ಷಕರ, ಪೋಷಕರ ವೈಯಕ್ತಿಕ ಮಾಹಿತಿ ಹಂಚಿಕೆಯ ಆತಂಕ ದೂರ

ದತ್ತಾಂಶ ಹಂಚಿಕೆ: ಒಪ್ಪಂದ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದತ್ತಾಂಶ ಹಂಚಿಕೆ: ಒಪ್ಪಂದ ರದ್ದು

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ‘ಸ್ಕೂಗ್‌ಲಿಂಕ್‌ ಪ್ರೈವೆಟ್‌ ಲಿಮಿಟೆಡ್‌’ ಜತೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರಿಂದ ಒಡಂಬಡಿಕೆಯನ್ನು ಇಲಾಖೆ ಶುಕ್ರವಾರ ರದ್ದುಗೊಳಿಸಿದೆ. 

ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲೀಕರಿಸಿ, ಶಿಕ್ಷಕರ ಜ್ಞಾನವನ್ನು ಹಂಚುವ ಉದ್ದೇಶಕ್ಕೆ ವೇದಿಕೆ ಕಲ್ಪಿಸಲು ಇದೇ ವರ್ಷದ ಫೆಬ್ರುವರಿ 3ರಂದು ಇಲಾಖೆ ಈ ಒಡಂಬಡಿಕೆ ಮಾಡಿಕೊಂಡಿತ್ತು. ಇದರಿಂದ ರಾಜ್ಯದ ಸರ್ಕಾರಿ, ಖಾಸಗಿ ಅನುದಾನಿತ, ಖಾಸಗಿ ಅನುದಾನರಹಿತ ಶಾಲೆಗಳಲ್ಲಿನ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು.

‘ಇಲಾಖೆಯು ವೈಯಕ್ತಿಕ ಮಾಹಿತಿಯ ದತ್ತಾಂಶವನ್ನು ಖಾಸಗಿ ಕಂಪನಿಗಳ ಜತೆ ವಿನಿಮಯ ಮಾಡಿಕೊಳ್ಳುವುದು ಸರಿಯಲ್ಲ ಇದು ಖಾಸಗಿತನದ ಉಲ್ಲಂಘನೆಯಾಗುತ್ತದೆ’ ಎಂದು ಶಿಕ್ಷಣ ತಜ್ಞರು, ಶಾಲಾ ಆಡಳಿತ ಮಂಡಳಿ ಸಂಘಟನೆಯ ಪದಾಧಿಕಾರಿಗಳು ದೂರಿದ್ದರು. ಕಾನೂನು ಹೋರಾಟ ಕೈಗೊಳ್ಳುವುದಾಗಿಯೂ ಎಚ್ಚರಿಸಿದ್ದರು.

ಸಾರ್ವಜನಿಕವಾಗಿ ಈ ಕುರಿತು ವ್ಯಾಪಕ ಟೀಕೆ ವ್ಯಕ್ತವಾದ ನಂತರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಸೂಚನೆ ಮೇರೆಗೆ ಒಡಂಬಡಿಕೆ ರದ್ದಾಗಿದೆ.

ಒಡಂಬಡಿಕೆಗೆ ತಿದ್ದುಪಡಿ ಮಾಡಿದ್ದ ಇಲಾಖೆ: ಶಾಲಾ ಆಡಳಿತ ಮಂಡಳಿಯವರು ವಿರೋಧ ವ್ಯಕ್ತಪಡಿಸಿದ್ದರಿಂದ ಗುರುವಾರವೇ ಈ ಒಡಂಬಡಿಕೆಗೆ ಇಲಾಖೆ ತಿದ್ದುಪಡಿ ಮಾಡಿತ್ತು. ‘ಯಾವುದೇ ವೈಯಕ್ತಿಕ ಮಾಹಿತಿ ಹಂಚಿಕೆಗೆ ಅವಕಾಶ ಸಿಗದಂತೆ ಕೇವಲ, ಅಂಕಿ ಅಂಶಗಳ ದತ್ತಾಂಶವನ್ನು ಹಂಚಿಕೊಳ್ಳುವುದಕ್ಕೆ ಮಾತ್ರ ಒಪ್ಪಂದ ಪೂರಕ’ ಎಂದು ತಿದ್ದುಪಡಿಯಲ್ಲಿ ತಿಳಿಸಲಾಗಿತ್ತು.

ಅಷ್ಟರಲ್ಲಿ ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಆಡಳಿತ ಮಂಡಳಿಗಳ ಸಂಘಟನೆಯ ಪದಾಧಿಕಾರಿಗಳು ಈ ಕುರಿತು ಸಚಿವ ತನ್ವೀರ್‌ ಸೇಠ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದರು.

***

ನನ್ನ ದಿಕ್ಕು ತಪ್ಪಿಸಿದ್ದಾರೆ: ಸಚಿವ ಸೇಠ್‌

‘ಈ ಒಡಂಬಡಿಕೆಗೆ ಸಂಬಂಧಿಸಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ನನಗೆ ಬೇರೆಯದೇ ಮಾಹಿತಿ ನೀಡಿ ದಿಕ್ಕು ತಪ್ಪಿಸಿದ್ದಾರೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ಸೇಠ್‌ ದೂರಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯಾವುದೇ ಶಿಕ್ಷಕರ, ವಿದ್ಯಾರ್ಥಿಗಳ ಮತ್ತು ಪೋಷಕರ ಮಾಹಿತಿಯನ್ನು ಖಾಸಗಿಯವರಿಗೆ ನೀಡಲು ಆಗುವುದಿಲ್ಲ. ಒಂದು ವೇಳೆ ಕೊಟ್ಟರೆ ಅದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಉಲ್ಲಂಘನೆಯಾಗುತ್ತದೆ’ ಎಂದು ಹೇಳಿದ್ದಾರೆ.

‘ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮುಂದಾಗುವ ಖಾಸಗಿ ಕಂಪನಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸುವ ಒಡಂಬಡಿಕೆ ಇದು ಎಂದು ಅಧಿಕಾರಿಗಳು ತಿಳಿಸಿದ್ದರು. ಹಾಗಾಗಿ ಅದಕ್ಕೆ ಸಮ್ಮತಿ ಸೂಚಿಸಿದ್ದೆ. ಆದರೆ ಈಗ ಅದರ ಪೂರ್ಣ ಮಾಹಿತಿ ದೊರೆತಿದ್ದು, ಅದರ ನೈಜ ಉದ್ದೇಶ ಗೊತ್ತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಇಲಾಖೆಯ ಸಚಿವರಿಗೆ ತಪ್ಪು ಮಾಹಿತಿ ನೀಡಿ, ದಾರಿತಪ್ಪಿಸಿ ಒಡಂಬಡಿಕೆಗೆ ಒಪ್ಪಿಗೆ ಪಡೆದಿರುವುದು ಅಕ್ಷಮ್ಯ. ಈ ಕುರಿತು ಸಂಬಂಧಿಸಿದ ಅಧಿಕಾರಿ (ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್) ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗೆ ಶಿಫಾರಸು ಮಾಡುತ್ತೇನೆ’ ಎಂದೂ ಅವರು ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)