ಶುಕ್ರವಾರ, ಡಿಸೆಂಬರ್ 13, 2019
27 °C
ಉಡುಪಿ: ‘ಗ್ರಾಮ ಸ್ವರಾಜ್ ಚಿಂತನ– ಮಂಥನ’ ಕಾರ್ಯಕ್ರಮಕ್ಕೆ ಚಾಲನೆ

ದ್ವಿಸ್ತರ ಪಂಚಾಯತ್ ರಾಜ್ ವ್ಯವಸ್ಥೆಗೆ ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದ್ವಿಸ್ತರ ಪಂಚಾಯತ್ ರಾಜ್ ವ್ಯವಸ್ಥೆಗೆ ಒಲವು

ಉಡುಪಿ: ಪರಾಮರ್ಶೆಯ ಹಿನ್ನೋಟದ ಮೂಲಕ ಭವಿಷ್ಯವನ್ನು ಇನ್ನಷ್ಟು ಬಲವಾಗಿ ಕಟ್ಟುವ 73ನೇ ಸಂವಿಧಾನ ತಿದ್ದುಪಡಿಯ 25 ವರ್ಷಾಚರಣೆ ‘ಗ್ರಾಮ ಸ್ವರಾಜ್ ಚಿಂತನ– ಮಂಥನ’ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರಕಿತು.

ಪಂಚಾಯತ್ ರಾಜ್ ವ್ಯವಸ್ಥೆಯ ಅವಲೋಕನದ ಎರಡು ದಿನಗಳ ಕಾರ್ಯಕ್ರಮಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಚಾಲನೆ ನೀಡಿದರು. ತ್ರಿಸ್ತರ ವ್ಯವಸ್ಥೆಯ ಜನಪ್ರತಿನಿಧಿಗಳು, ಪಂಚಾಯತ್ ರಾಜ್ ಪ್ರೇಮಿಗಳು, ಪರಿಣತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

73ನೇ ಸಂವಿಧಾನ ತಿದ್ದುಪಡಿಯ ಪುನರ್ ಅವಲೋಕನ ಮತ್ತು ಬದಲಾವಣೆಯ ಹಿನ್ನೋಟ ವಿಷಯ ಕುರಿತು ಮಾತನಾಡಿದ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಮೀನಾಕ್ಷಿ ಸುಂದರಂ,  ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಅವರ ಅಧಿಕಾರವಧಿಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಆ ನಂತರ ಈ ವ್ಯವಸ್ಥೆಗೆ 73ನೇ ಸಂವಿಧಾನ ತಿದ್ದುಪಡಿಯ ಮೂಲಕ ಸಾಂವಿಧಾನಿಕ ಬಲ ದೊರೆತ ನಂತರ ಆದ ಬದಲಾವಣೆಯ ಘಟನಾವಳಿಗಳನ್ನು ಸಂಕ್ಷಿಪ್ತವಾಗಿ ಮುಂದಿಟ್ಟರು. ಈ ವ್ಯವಸ್ಥೆಯಿಂದ ಬದಲಾವಣೆ ಆಗಿದೆ ಎಂದು ಹೇಳುತ್ತಲೇ ಆಗಬೇಕಾದ ಬದಲಾವಣೆಗಳ ಬಗ್ಗೆ ಅವರು ಮಾಹಿತಿ ನೀಡಿದರು.

‘ದ್ವಿಸ್ತರ ಪಂಚಾಯತ್ ರಾಜ್ ವ್ಯವಸ್ಥೆ ಉತ್ತಮ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ತಾಲ್ಲೂಕು ಪಂಚಾಯಿತಿಗೆ ಚುನಾಯಿತಿ ಪ್ರತಿನಿಧಿಗಳನ್ನು ನೇಮಕ ಮಾಡದೆ ನಾಮ ನಿರ್ದೇಶನ ಮಾಡಬಹುದು. ಆಗ ಪಂಚಾಯತ್‌ರಾಜ್ ವ್ಯವಸ್ಥೆ ಇನ್ನಷ್ಟು ವೇಗವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಒಂದು ಸಂಸ್ಥೆ ಬೆಳೆಯಬೇಕು, ಯಶಸ್ವಿಯಾಗಬೇಕು ಎಂದರೆ ಅದಕ್ಕೆ ಹಣಕಾಸು ಹಾಗೂ ದಕ್ಷ ಅಧಿಕಾರಿಗಳನ್ನು ನೀಡಬೇಕು. ಈ ಹಿನ್ನೆಲೆಯಲ್ಲಿ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳು ಜಾರಿಯಾಗಿವೆಯೇ ಎಂದು ನೋಡಬೇಕು. ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಚರ್ಚಿಸಿ ಅನುಷ್ಠಾನ ಮಾಡಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ತಾಲ್ಲೂಕು ಪಂಚಾಯತ್‌ರಾಜ್ ಒಕ್ಕೂಟದ ಗೌರವ ಅಧ್ಯಕ್ಷ ಜನಾರ್ದನ ಮರವಂತೆ, ಕೇರಳ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯಾನಂದ ಇದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉಡುಪಿ, ಕಾರ್ಕಳ, ಕುಂದಾಪುರ ತಾಲ್ಲೂಕು ಪಂಚಾಯಿತಿ, ಕುಂದಾಪುರ ತಾಲ್ಲೂಕು ಪಂಚಾಯತ್‌ರಾಜ್ ಒಕ್ಕೂಟ ಹಾಗೂ ಗ್ರಾಮ ಪಂಚಾಯತ್‌ ಹಕ್ಕೊತ್ತಾಯ ಆಂದೋಲನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

**

ಗ್ರಾಮ ಆಡಳಿತದ ಬಗ್ಗೆ ಸಂವಿಧಾನದ ರಾಜ್ಯ ನಿರ್ದೇಶಕ ತತ್ವದಲ್ಲಿಯೇ ಉಲ್ಲೇಖ ಇದೆ. ಅದನ್ನು ಜಾರಿ ಮಾಡಲು ಹಣ, ಯೋಜನೆ ಹಾಗೂ ಅಧಿಕಾರಿ ವರ್ಗ ಬೇಕು

ನಂದನ ರೆಡ್ಡಿ, ಪಂಚಾಯತ್‌ರಾಜ್ ಕಾಯ್ದೆ ತಿದ್ದುಪಡಿ ಸಮಿತಿ ಸದಸ್ಯೆ

ಪ್ರತಿಕ್ರಿಯಿಸಿ (+)