ಶುಕ್ರವಾರ, ಡಿಸೆಂಬರ್ 6, 2019
26 °C

ವಿಶ್ವಕಪ್ ಬ್ಯಾಸ್ಕೆಟ್‌ಬಾಲ್‌ ಏಷ್ಯಾ ಅರ್ಹತಾ ಸುತ್ತಿನ ಪಂದ್ಯ: ಭಾರತ ತಂಡದ ಕನಸು ಭಗ್ನ

Published:
Updated:
ವಿಶ್ವಕಪ್ ಬ್ಯಾಸ್ಕೆಟ್‌ಬಾಲ್‌ ಏಷ್ಯಾ ಅರ್ಹತಾ ಸುತ್ತಿನ ಪಂದ್ಯ: ಭಾರತ ತಂಡದ ಕನಸು ಭಗ್ನ

ಬೆಂಗಳೂರು: ಉತ್ತಮ ಆರಂಭ ಕಂಡರೂ ನಂತರ ಎದುರಾಳಿಗಳ ತಂತ್ರಗಳಿಗೆ ಕಂಗೆಟ್ಟ ಭಾರತ ತಂಡ ನಿರಾಸೆ ಅನುಭವಿಸಿತು.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ವಿಶ್ವಕಪ್‌ ಬ್ಯಾಸ್ಕೆಟ್‌ಬಾಲ್ ಏಷ್ಯಾ ಮಟ್ಟದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ಪ್ರವಾಸಿ ಜೋರ್ಡನ್‌ಗೆ 102–88ರಿಂದ ಮಣಿಯಿತು.

ಈ ಜಯದೊಂದಿಗೆ ಜೋರ್ಡನ್‌ ಅರ್ಹತಾ ಸುತ್ತಿನ ಮೊದಲ ಹಂತದಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದರೆ ಭಾರತದ ಖಾತೆ ತೆರೆಯುವ ಕನಸು ಭಗ್ನವಾಯಿತು. ಮೊದಲ ಎರಡು ಪಂದ್ಯಗಳಲ್ಲಿ ಭಾರತ ತಂಡ ಲೆಬನಾನ್ ಮತ್ತು ಸಿರಿಯಾ ವಿರುದ್ಧ ಸೋತಿತ್ತು.

ಭಾರತದ ಆರಂಭ ಉತ್ತಮವಾಗಿತ್ತು. ನಾಯಕ ಸತ್ಪಾಲ್ ಸಿಂಗ್‌, ಅರವಿಂದ್ ಅಣ್ಣಾದುರೈ ಮತ್ತು ಜಸ್ಟಿನ್‌ ಜೋಸೆಫ್‌ ಅಮೋಘ ಆಟದ ಬಲದಿಂದ ಮೊದಲ ಐದು ನಿಮಿಷ ನಿರಂತರ ಪಾಯಿಂಟ್‌ಗಳನ್ನು ಹೆಕ್ಕಿತು. ಹೀಗಾಗಿ ಮೊದಲ ವಿರಾಮದ ವೇಳೆ ತಂಡ 14–10ರ ಮುನ್ನಡೆ ಗಳಿಸಿತು. ನಂತರ ಈ ಅಂತರವನ್ನು 18–10ಕ್ಕೆ ಏರಿಸಿತು.

ಆದರೆ ಜೋರ್ಡನ್‌ ಆಟಗಾರರು ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಫ್ರೀ ಥ್ರೋ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಪ್ರವಾಸಿ ತಂಡದವರು ಭಾರತದ ಪಾಳಯದಲ್ಲಿ ನಿರಾಸೆ ಮೂಡಿಸಿದರು. ಮೊದಲ ಕ್ವಾರ್ಟರ್‌ನಲ್ಲಿ ಡಾರ್ ಟಕ್ಕರ್‌, ಯೂಸುಫ್‌ ಅಬು ವಜನೇಹ್ ಮತ್ತು ಮಹಮ್ಮದ್ ಶಹೆರ್‌ ಹುಸೇನ್‌ ಕ್ರಮವಾಗಿ ನಾಲ್ಕು, ಎರಡು ಮತ್ತು ಮೂರು ಫ್ರೀ ಥ್ರೋಗಳಲ್ಲಿ ಪೂರ್ಣ ಪಾಯಿಂಟ್‌ಗಳನ್ನು ಬಾಚಿಕೊಂಡರು.

ದ್ವಿತೀಯ ಕ್ವಾರ್ಟರ್‌ನಲ್ಲಿ ಜೋರ್ಡನ್ ಆಟಗಾರರು ಇನ್ನಷ್ಟು ಪ್ರಬಲ ಆಟ ಆಡಿದರು. ಭಾರತದ ರಕ್ಷಣಾ ಕೋಟೆಯನ್ನು ಬೇಧಿಸಿದ ಅವರು ನಾಲ್ಕು ಬಾರಿ ಫ್ರೀ ಥ್ರೋಗಳನ್ನು ಸದ್ಬಳಕೆ ಮಾಡಿಕೊಂಡರು. ಇದರಿಂದ ಒಟ್ಟು 25 ಪಾಯಿಂಟ್‌ ಬಗಲಿಗೆ ಹಾಕಿಕೊಳ್ಳುವಲ್ಲಿ ತಂಡ ಯಶಸ್ವಿಯಾಯಿತು. ರಕ್ಷಣಾ ವಿಭಾಗದಲ್ಲೂ ಚಾಕಚಕ್ಯತೆ ಮೆರೆದ ತಂಡ ಕೇವಲ 18 ಪಾಯಿಂಟ್‌ಗಳನ್ನು ಮಾತ್ರ ಬಿಟ್ಟುಕೊಟ್ಟು 51–38ರ ಮುನ್ನಡೆ ಸಾಧಿಸಿತು.

ಮೂರನೇ ಕ್ವಾರ್ಟರ್‌ನಲ್ಲಿ ಭಾರತ ತಂಡದವರು ಎದುರಾಳಿಗಳಿಗೆ ಅನಿರೀಕ್ಷಿತ ಪೆಟ್ಟು ನೀಡಿದರು. ಒಂದು ಪಾಯಿಂಟ್ ಕೂಡ ಬಿಟ್ಟು ಕೊಡದೆ 11 ಪಾಯಿಂಟ್ ಹೆಕ್ಕಿ ಮುನ್ನಡೆಯುವ ಪ್ರಯತ್ನ ಮಾಡಿತು. ಆದರೆ ನಿರ್ಣಾಯಕ ಹಂತದಲ್ಲಿ ಮೂರು ಬಾರಿ ಫ್ರೀ ಥ್ರೋಗಳನ್ನು ಬಿಟ್ಟುಕೊಟ್ಟು ಕೈಸುಟ್ಟುಕೊಂಡಿತು.

ಈ ಕ್ವಾರ್ಟರ್‌ನ ಅಂತಿಮ ನಿಮಿಷದಲ್ಲಿ ಜಸ್ಟಿನ್ ಗಳಿಸಿದ ಮೂರು ಪಾಯಿಂಟ್‌ಗಳ ಬಲದಿಂದ ಭಾರತ ಹಿನ್ನಡೆಯನ್ನು ಐದು ಪಾಯಿಂಟ್‌ಗಳಿಗೆ ಕುಗ್ಗಿಸಿಕೊಂಡಿತು. ಕೊನೆಯ ಕ್ವಾರ್ಟರ್‌ನಲ್ಲಿ ಜೋರ್ಡನ್‌ ಆಕ್ರಮಣವನ್ನು ತೀವ್ರಗೊಳಿಸಿ ಪಾಯಿಂಟ್‌ಗಳನ್ನು ಮೂರಂಕಿ ದಾಟಿಸಿತು. ಕೊನೆಯ ಕ್ಷಣಗಳಲ್ಲಿ ಪ್ರಬಲ ಪೈಪೋಟಿ ನೀಡಿ ಈ ಕ್ವಾರ್ಟರ್‌ನಲ್ಲಿ 27 ಪಾಯಿಂಟ್‌ಗಳನ್ನು ಹೆಕ್ಕಿ ದರೂ ಭಾರತಕ್ಕೆ ಸೋಲಿನಿಂದ ಪಾರಾಗಲು

ಸಾಧ್ಯವಾಗಲಿಲ್ಲ. ರವಿ ಭಾರದ್ವಾಜ್‌, ಅನಿಲ್‌ ಕೃಷ್ಣೆ ಮತ್ತು ಕನ್ನಡಿಗ ಅರವಿಂದ್ ಆರ್ಮುಗಂ ಅವರನ್ನು ಹೊರಗಿರಿಸಿದ ಭಾರತ ತಂಡದ ಆಡಳಿತ ವಿದೇಶದಲ್ಲಿ ಆಡಿ ಬಂದ ಅಮೃತ್ ಪಾಲ್ ಸಿಂಗ್ ಮತ್ತು ಅಮ್ಜೋತ್ ಸಿಂಗ್ ಅವರಿಗೆ ಸ್ಥಾನ ನೀಡಿತ್ತು.

ಪ್ರತಿಕ್ರಿಯಿಸಿ (+)