ಭಾನುವಾರ, ಡಿಸೆಂಬರ್ 8, 2019
24 °C

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಮಹಾರಾಷ್ಟ್ರ ಸವಾಲು

Published:
Updated:
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಮಹಾರಾಷ್ಟ್ರ ಸವಾಲು

ನವದೆಹಲಿ (ಪಿಟಿಐ): ಕರುಣ್ ನಾಯರ್ ನಾಯಕತ್ವದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌ ಸೆಮಿಫೈನಲ್ ಪಂದ್ಯದಲ್ಲಿ ಶನಿವಾರ ಮಹಾರಾಷ್ಟ್ರ ತಂಡದ ಸವಾಲು ಎದುರಿಸಲಿದೆ.

ಬೌಲಿಂಗ್‌ನಲ್ಲಿ ಪ್ರಬಲವಾಗಿರುವ ಮಹಾರಾಷ್ಟ್ರ ತಂಡಕ್ಕೆ ಸವಾಲು ಒಡ್ಡಲು ರಾಜ್ಯ ತಂಡದ ಬ್ಯಾಟ್ಸ್‌ಮನ್‌ಗಳು ಸಜ್ಜಾಗಿದ್ದಾರೆ. ಟೂರ್ನಿಯಲ್ಲಿ ಒಟ್ಟು 552  ರನ್ ಕಲೆಹಾಕಿರುವ ಮಯಂಕ್ ಅಗರವಾಲ್‌ ಪ್ರಮುಖ ಭರವಸೆ ಎನಿಸಿದ್ದಾರೆ. ‌

ಕರುಣ್‌ ನಾಯರ್‌ (209) ಹಾಗೂ ರವಿಕುಮಾರ್‌ ಸಮರ್ಥ್‌ (296) ಕೂಡ ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬಿದ್ದಾರೆ. ಸ್ಟುವರ್ಟ್ ಬಿನ್ನಿ ಕೂಡ ಉತ್ತಮ ಇನಿಂಗ್ಸ್ ಕಟ್ಟಬಲ್ಲರು.

18 ಪಾಯಿಂಟ್ಸ್‌ಗಳಿಂದಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದ ಮಹಾರಾಷ್ಟ್ರ ತಂಡ ಟೂರ್ನಿಯ ಆರಂಭದಿಂದಲೂ ಉತ್ತಮ ಆಟದ ಮೂಲಕ ಗಮನ ಸೆಳೆದಿದೆ. ಬಲಿಷ್ಠ ಮುಂಬೈ ತಂಡವನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಮಣಿಸಿತ್ತು.

‘ಸಾಕಷ್ಟು ಶ್ರಮವಹಿಸಿ ತಂಡವನ್ನು ಕಟ್ಟಿದ್ದೇವೆ.  ಎಲ್ಲರೂ ಸಂಘಟಿತರಾಗಿ ಆಡಿದ್ದಾರೆ.ಅಗರವಾಲ್ ಹಾಗೂ ಸಮರ್ಥ್ ನಮ್ಮ ಬೌಲರ್‌ಗಳನ್ನು ಕಾಡಬಹುದು. ಅವರನ್ನು ಕಟ್ಟಿಹಾಕಲು ಸಿದ್ದರಿದ್ದೇವೆ’ ಎಂದು ಮಹಾರಾಷ್ಟ್ರ ತಂಡದ ನಾಯಕ ರಾಹುಲ್ ತ್ರಿಪಾಠಿ ಹೇಳಿದ್ದಾರೆ.

ಮಹಾರಾಷ್ಟ್ರ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಲ್ಲಿ ೃತುರಾಜ್‌ ಗಾಯಕವಾಡ್‌ (329), ತ್ರಿಪಾಠಿ (234), ಅಂಕಿತ್ ಭಾವ್ನೆ (288), ನೌಶಾದ್ ಶೇಖ್‌ (247) ಮುಂಚೂಣಿಯಲ್ಲಿದ್ದಾರೆ. ಶ್ರೀಕಾಂತ್‌ ಮುಂಢೆ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 70ರನ್ ಗಳಿಸಿದ್ದರು.

ಸತ್ಯಜಿತ್ ಬಚವ್‌ ಒಟ್ಟು 9 ವಿಕೆಟ್‌ಗ‌ಳನ್ನು ಗಳಿಸಿ ಬೌಲಿಂಗ್ ವಿಭಾಗದಲ್ಲಿ ಗಮನಸೆಳೆದಿದ್ದಾರೆ. ಆಫ್‌ ಸ್ಪಿನ್ನರ್ ಪ್ರಶಾಂತ್ ಕೋರೆ ಹಾಗೂ ಪ್ರದೀಪ್‌ ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಬಲ್ಲರು.

ಕರ್ನಾಟಕ ತಂಡವು ಈ ಬಾರಿಯ ದೇಶಿ ಋತುವಿನಲ್ಲಿ ನಾಕೌಟ್ ಹಂತದಲ್ಲಿ ನಿರಾಸೆ ಅನುಭವಿಸಿತ್ತು.ಡಿಸೆಂಬರ್‌ನಲ್ಲಿ ರಣಜಿ ಟ್ರೋಫಿ

ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ  ಮತ್ತು ಮುಷ್ತಾಕ್ ಅಲಿ ಟ್ವೆಂಟಿ–20 ಟೂರ್ನಿಯ ಸೂಪರ್‌ ಲೀಗ್‌ನಲ್ಲಿ ಸೋತಿತ್ತು. ಇದೀಗ ಏಕದಿನ ಮಾದರಿಯಲ್ಲಿ ಪ್ರಶಸ್ತಿ ಗೆಲ್ಲುವ ಛಲದಲ್ಲಿದೆ. ನಾಲ್ಕರ ಘಟ್ಟದ ಸವಾಲು ಎದುರಿಸಲು ಸಿದ್ಧವಾಗಿದೆ.

ಪಂದ್ಯ ಆರಂಭ ಬೆಳಿಗ್ಗೆ 9ಕ್ಕೆ

ಪ್ರತಿಕ್ರಿಯಿಸಿ (+)