ಬುಧವಾರ, ಡಿಸೆಂಬರ್ 11, 2019
22 °C

ಅಮೆರಿಕದ ಮಹಿಳೆಗೆ ಲೈಂಗಿಕ ಕಿರುಕುಳ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕದ ಮಹಿಳೆಗೆ ಲೈಂಗಿಕ ಕಿರುಕುಳ: ಬಂಧನ

ಗಂಗಾವತಿ (ಕೊಪ್ಪಳ ಜಿಲ್ಲೆ): ಪ್ರವಾಸಕ್ಕೆ ಬಂದಿದ್ದ ಅಮೆರಿಕದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಹನುಮನಹಳ್ಳಿಯ ಆನಂದ ಮಲ್ಲಾರೆಡ್ಡಿ ಕರ್ನಾಟಿ ಎಂಬಾತನನ್ನು ಗ್ರಾಮೀಣ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ವಿದೇಶಿ ಮಹಿಳೆಯು ಪತಿಯೊಂದಿಗೆ ಆನೆಗೊಂದಿ ಸಮೀಪವಿರುವ ವಿರೂಪಾಪುರ ಗಡ್ಡೆಯ ಸುತ್ತಲಿನ ಪ್ರವಾಸಿ ತಾಣ ನೋಡಲು ಫೆಬ್ರುವರಿ 4ರಂದು ಬಂದಿದ್ದು, ಹನುಮನಹಳ್ಳಿಯ ‘ಬಾಲಾ ಕೆಫೆ’ಯಲ್ಲಿ ತಂಗಿದ್ದರು. ಈ ವೇಳೆ ಮಹಿಳೆ ಅನಾರೋಗ್ಯಕ್ಕೆ ಒಳಗಾದರು.

‘ತಾನು ಫಿಸಿಯೋಥೆರಪಿಸ್ಟ್‌ ಎಂದು ಪರಿಚಯಿಸಿಕೊಂಡ ಆರೋಪಿಯು ಕೆಫೆಯಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಮಹಿಳೆಯ ವಿಶ್ವಾಸ ಗಳಿಸಿದ. ನಂತರ ಮಸಾಜ್ ಮಾಡುವುದಾಗಿ ಮನೆಗೆ ಕರೆದುಕೊಂಡು ಹೋದ. ಅಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ಹೆದರಿ ಪ್ರವಾಸವನ್ನು ಮೊಟಕುಗೊಳಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೆರಿಕಕ್ಕೆ ಮರಳುವ ಮುನ್ನ ದೆಹಲಿಯ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಈ ಮಾಹಿತಿಯನ್ನು ಕೊಪ್ಪಳ ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿಗೆ ರವಾನಿಸಿದ್ದರು.

‘ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಮಹಿಳೆಗೆ ನಾವೇ ಕರೆ ಮಾಡಿ, ಮಾಹಿತಿ ಸಂಗ್ರಹಿಸಿ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿ ಅನೂಪ್‍ ಎ.ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)