ಬುಧವಾರ, ಡಿಸೆಂಬರ್ 11, 2019
24 °C
ನಮ್ಮ ಮೆಟ್ರೊ: ಬಿರುಕು ಬಿಟ್ಟ ಹಳಿ ದುರಸ್ತಿ

ಮೆಟ್ರೊ ಸೇವೆ ತಾತ್ಕಾಲಿಕ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಟ್ರೊ ಸೇವೆ ತಾತ್ಕಾಲಿಕ ಸ್ಥಗಿತ

ಬೆಂಗಳೂರು: ಹಳಿ ದುರಸ್ತಿ ಸಲುವಾಗಿ ಹಸಿರು ಮಾರ್ಗದಲ್ಲಿ ಆರ್‌.ವಿ.ರಸ್ತೆ–ಯಲಚೇನಹಳ್ಳಿ ನಡುವೆ ಇದೇ 24ರಂದು (ಶನಿವಾರ) ರಾತ್ರಿ 9ರಿಂದ ಮೆಟ್ರೊ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಸೋಮವಾರ ಬೆಳಿಗ್ಗೆ 5 ಗಂಟೆಯಿಂದ ಸೇವೆ ಪುನಾರಂಭಗೊಳ್ಳಲಿದೆ.

ಹಸಿರು ಮಾರ್ಗದ ಬನ ಶಂಕರಿ, ಜೆ.ಪಿ.ನಗರ ಹಾಗೂ ಯಲ ಚೇನಹಳ್ಳಿ ಮೆಟ್ರೊ ಸೇವೆ ಮಾತ್ರ ವ್ಯತ್ಯಯವಾಗಲಿದೆ.

ಈ ಮಾರ್ಗದ ಉಳಿದ ನಿಲ್ದಾಣಗಳಲ್ಲಿ ಸೇವೆ ಎಂದಿನಂತೆ ಮುಂದುವರಿಯಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ತಿಳಿಸಿದೆ.

ಉತ್ತರ–ದಕ್ಷಿಣ ಕಾರಿಡಾರ್‌ನ ಯಲಚೇನಹಳ್ಳಿ ನಿಲ್ದಾಣದ ಬಳಿ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಫೆ.8ರಂದು ರಾತ್ರಿ ತಪಾಸಣೆ ವೇಳೆ ಪತ್ತೆಯಾಗಿತ್ತು. ಮೆಜೆಸ್ಟಿಕ್‌ ಕಡೆಯಿಂದ ಸಾಗುವ ರೈಲುಗಳು ಈ ನಿಲ್ದಾಣದ ಬಳಿ ಹಳಿ ಬದಲಾಯಿಸಬೇಕಾಗುತ್ತಿತ್ತು. ಹಾಗಾಗಿ ಫೆ.9ರಿಂದ ಈ ನಿಲ್ದಾಣದ ಒಂದು ಪ್ಲ್ಯಾಟ್‌ಫಾರ್ಮ್‌ ಅನ್ನು ಮಾತ್ರ ಬಳಸಲಾಗುತ್ತಿತ್ತು. ‌

‘ಬಿರುಕು ಬಿಟ್ಟಿರುವ ಹಳಿಯ ಉಕ್ಕಿನ ಪಟ್ಟಿಯನ್ನು ಹೊರತೆಗೆದು ಬೇರೆ ಪಟ್ಟಿಯನ್ನು ಜೋಡಿಸಬೇಕಾಗುತ್ತದೆ. ದುರಸ್ತಿ ಕಾರ್ಯದ ವೇಳೆ ಈ ಮಾರ್ಗದ ವಿದ್ಯುತ್‌ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಬೇಕಾಗುತ್ತದೆ. ಹಾಗಾಗಿ ಮೂರು ನಿಲ್ದಾಣಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ’ ಎಂದು ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೆಟ್ರೊ ಸೇವೆ ವ್ಯತ್ಯಯದಿಂದ ಪ್ರಯಾಣಿಕರಿಗೆ ಆಗುವ ಅನನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ. ಆರ್‌.ವಿ.ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿ ನಡುವೆ ಬಿಎಂಟಿಸಿ ವತಿಯಿಂದ ಶನಿವಾರ ರಾತ್ರಿ ಹಾಗೂ ಭಾನುವಾರ ಹೆಚ್ಚುವರಿ ಬಸ್‌ ಸೌಕರ್ಯ ಒದಗಿಸಲಾಗುವುದು’ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್‌ ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)