ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿದೆ ಪ್ರವಾಸಿತಾಣಗಳ ಸಮಗ್ರ ಚಿತ್ರಣ

ಮೂರು ದಿನಗಳ ಪ್ರವಾಸ ಮತ್ತು ಪ್ರವಾಸೋದ್ಯಮ ಮೇಳಕ್ಕೆ ಚಾಲನೆ
Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಸ ಮತ್ತು ಪ್ರವಾಸೋದ್ಯಮ ಮೇಳ (ಟಿಟಿಎಫ್) ನಗರದಲ್ಲಿ ಶುಕ್ರವಾರ ಆರಂಭವಾಗಿದ್ದು, ನೂರಾರು ಪ್ರವಾಸಿ ಸ್ಥಳಗಳ ಸಮಗ್ರ ಚಿತ್ರಣ ಈ ಮೇಳದಲ್ಲಿ ಲಭ್ಯ.

ಟಿಟಿಎಫ್‌ ಹಾಗೂ ಸಂಜೀವಿನಿ ಆಯುಷ್ ಹೆಲ್ತ್ ಫೆಸ್ಟಿವಲ್ ಸಂಸ್ಥೆ ಸಹಯೋಗದಲ್ಲಿ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಮೇಳದಲ್ಲಿ ಖಾಸಗಿ ಹೋಟೆಲ್‌ ಉದ್ಯಮಿಗಳು, ವಿಮಾನಯಾನ ಸಂಸ್ಥೆಗಳು, ಟ್ರಾವೆಲ್ ಏಜೆಂಟರು, ಆನ್‌ಲೈನ್ ಟ್ರಾವೆಲ್ ಕಂಪನಿಗಳು, ರೈಲ್ವೆ ಇಲಾಖೆ, ಟ್ರಾವೆಲ್ ಮಾರುಕಟ್ಟೆ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

‘10 ಸಾವಿರಕ್ಕೂ ಹೆಚ್ಚು ವೀಕ್ಷಕರು ಭಾಗವಹಿಸುವ ನಿರೀಕ್ಷೆ ಹೊಂದಿದ್ದೇವೆ. ದೇಶದ ನೂರಾರು ಟ್ರಾವೆಲ್ ಸಂಸ್ಥೆಗಳು ಒಂದೇ ಸೂರಿನಡಿ ಸೇರಿ ಉದ್ಯಮವನ್ನು ವೃದ್ಧಿಸಿಕೊಳ್ಳಲು ಮೇಳ ವೇದಿಕೆ ಕಲ್ಪಿಸಿದೆ’ ಎಂದು ಫೇರ್‌ಫೆಸ್ಟ್ ಮೀಡಿಯಾ ಲಿಮಿಟೆಡ್‌ನ ಅಧ್ಯಕ್ಷ ಸಂಜೀವ್ ಅಗರವಾಲ್‌ ಅಭಿಪ್ರಾಯಪಟ್ಟರು.

‘ರಾಜ್ಯದ ಸಾಕಷ್ಟು ಪ್ರದೇಶಗಳನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬಹುದು. ಪ್ರವಾಸಿಗರು ಜವಾಬ್ದಾರಿಯಿಂದ ನಡೆದುಕೊಳ್ಳದೆ, ಅವುಗಳ ಅಂದವನ್ನು ಹಾಳು ಮಾಡುತ್ತಿದ್ದರೆ, ಎಲ್ಲವೂ ವ್ಯರ್ಥವಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌ ತಿಳಿಸಿದರು.
***
‘ಟ್ಯಾಗ್‌ಲೈನ್‌ ಕೊಡಿ’

ಹೀಗೊಂದು ಸ್ಪರ್ಧೆಯನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದೆ. ಸದ್ಯ ‘ಒಂದು ರಾಜ್ಯ ಹಲವು ಜಗತ್ತು’ ಎಂಬ ಟ್ಯಾಗ್‌ಲೈನ್‌ ‌ಇದೆ. ಜಾಗತಿಕ ಪ್ರವಾಸೋದ್ಯಮ ಹಾಗೂ ಪ್ರವಾಸಿಗರ ಭಾವನೆಗಳು ಬದಲಾಗಿರುವ ಈ ಸಂದರ್ಭಕ್ಕೆ ಅನುಗುಣವಾಗಿ ನೂತನ ಟ್ಯಾಗ್‌ಲೈನ್‌ ಅನ್ವೇಷಣೆಗೆ ಇಲಾಖೆ ಮುಂದಾಗಿದೆ.

ರಾಜ್ಯದ ಪ್ರವಾಸಿ ತಾಣಗಳ ಅಸ್ಮಿತೆ, ಅನನ್ಯತೆ ಹಾಗೂ ಅನುಭವಗಳ ಒಳನೋಟವನ್ನು ಸೂಚಿಸುವಂತಹ ಟ್ಯಾಗ್‌ಲೈನ್‌ ಅನ್ನು ಜನರು ಕಳುಹಿಸಿ ಕೊಡಬಹುದು. ಕನ್ನಡ, ಇಂಗ್ಲಿಷ್‌ ಎರಡರಲ್ಲೂ ಇರಬಹುದು.

ಇದೇ ಮಾರ್ಚ್‌ 1ರ ಒಳಗೆ ಬರಹಗಳನ್ನು contest@karnatakatourism.orgಗೆ ಕಳುಹಿಸಬೇಕು. ವಿಜೇತರಿಗೆ ₹2 ಲಕ್ಷ ಬಹುಮಾನ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಸಂಪರ್ಕ: 080–22352424/2235 2525

***
‘ಪ್ರವಾಸಿ ಎಕ್ಸ್‌ಪೋ’ ಮುಂದೂಡಿಕೆ

ಇದೇ 28ರಿಂದ ಆರಂಭವಾಗಬೇಕಿದ್ದ ‘ಅಂತರರಾಷ್ಟ್ರೀಯ ಪ್ರವಾಸಿ ಎಕ್ಸ್‌ಪೊ–2018’ (ಕೆಐಟಿಇಎಸ್‌) ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಕುಮಾರ್‌ ಪುಷ್ಕರ್‌ ತಿಳಿಸಿದರು.

‘ಕಾರ್ಯಕ್ರಮ ಆಯೋಜನೆಯ ಗುತ್ತಿಗೆ ಪಡೆದಿದ್ದ ಕಂಪನಿಯು ನಿಯಮ ಪಾಲಿಸಿಲ್ಲ. ಹಾಗಾಗಿ ಗುತ್ತಿಗೆ ರದ್ದುಪಡಿಸಲಾಗಿದ್ದು, ಹೊಸದಾಗಿ ಟೆಂಡರ್‌ ಕರೆಯಬೇಕು. ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

ಪ್ರವಾಸೋದ್ಯಮ ವಲಯ ವಿಸ್ತರಣೆ, ವಿದೇಶಿ ಪ್ರವಾಸಿಗರನ್ನು ಸೆಳೆಯುುವುದು, ಇಲ್ಲಿನ ಪ್ರವಾಸಿ ತಾಣಗಳನ್ನು ಪರಿಚಯಿಸುವುದು ಹಾಗೂ ಪ್ರವಾಸೋದ್ಯಮ ಸಂಬಂಧಿ ಉದ್ಯಮಗಳಿಗೆ ನೆರವಾಗುವ ಉದ್ದೇಶಗಳಿಂದ ಈ ಕಾರ್ಯಕ್ರಮ ಏರ್ಪಡಿಸಲು ಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು 25ಕ್ಕೂ ಹೆಚ್ಚು ದೇಶಗಳ 400ಕ್ಕೂ ಹೆಚ್ಚು ನೋಂದಾಯಿತ ಖರೀದಿದಾರರು ಮತ್ತು ಮಾಧ್ಯಮ ಪ್ರತಿನಿಧಿಗಳು ಆಸಕ್ತಿ ತೋರಿದ್ದರು.
**
ಅಂಕಿ ಅಂಶ

8
ದೇಶಗಳು ಮೇಳದಲ್ಲಿ ಪಾಲ್ಗೊಂಡಿವೆ

21
ಭಾಗವಹಿಸಿರುವ ರಾಜ್ಯಗಳು

180
ಭಾಗವಹಿಸಿರುವ ವಿವಿಧ ಸಂಸ್ಥೆಗಳ ಪ್ರತಿನಿಧಿಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT