ಭಾನುವಾರ, ಡಿಸೆಂಬರ್ 8, 2019
25 °C

ಸಾಲ ವಂಚನೆಗೆ ಅಂಕುಶ: ಬ್ಯಾಂಕುಗಳಿಗೆ ಹೊಸ ನಿಯಮ ರೂಪಿಸಿದ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಲ ವಂಚನೆಗೆ ಅಂಕುಶ: ಬ್ಯಾಂಕುಗಳಿಗೆ ಹೊಸ ನಿಯಮ ರೂಪಿಸಿದ ಕೇಂದ್ರ

ನವದೆಹಲಿ: ಉದ್ಯಮ ಸಂಸ್ಥೆಗಳಿಗೆ ಬ್ಯಾಂಕುಗಳು ದೊಡ್ಡ ಮೊತ್ತದ ಸಾಲ ನೀಡಿ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ರೂಪಿಸಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ಆಭರಣ ಉದ್ಯಮಿ ನೀರವ್‌ ಮೋದಿ ₹11,400 ಕೋಟಿ ವಂಚನೆ ಮಾಡಿರುವುದರ ಬೆನ್ನಿಗೇ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ.

₹250 ಕೋಟಿಗಿಂತ ಹೆಚ್ಚು ಮೊತ್ತದ ಸಾಲಗಳ ಸ್ಥಿತಿಗತಿ ಮೇಲೆ ನಿಗಾ ಇರಿಸಲು ವಿಶೇಷ ಪ್ರತಿನಿಧಿಯನ್ನು ನೇಮಕ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯವು ಬ್ಯಾಂಕುಗಳಿಗೆ ಸೂಚಿಸಿದೆ.

ಉದ್ಯಮ ಸಂಸ್ಥೆಗಳಿಗೆ ಬ್ಯಾಂಕುಗಳ ಒಕ್ಕೂಟದ ಮೂಲಕ ಸಾಲ ನೀಡುವಾಗ ಅಂತಹ ಒಕ್ಕೂಟದಲ್ಲಿ ಏಳಕ್ಕಿಂತ ಹೆಚ್ಚು ಬ್ಯಾಂಕುಗಳು ಇರಬಾರದು. ಒಕ್ಕೂಟದ ಮೂಲಕ ನೀಡುವ ಸಾಲದಲ್ಲಿ ಪ್ರತಿ ಬ್ಯಾಂಕ್‌ ಕನಿಷ್ಠ ಶೇ 10ರಷ್ಟು ಮೊತ್ತ ನೀಡಬೇಕು ಎಂಬ ನಿಯವನ್ನು

ಪಿಎನ್‌ಬಿ ಹಗರಣ ಬಹಿರಂಗವಾಗುವುದಕ್ಕೆ ಒಂದು ವಾರ ಮೊದಲೇ ರೂಪಿಸಲಾಗಿತ್ತು.

ಈ ನಿಯಮಗಳನ್ನು ಆದಷ್ಟು ಬೇಗನೆ ಜಾರಿಗೆ ತರಬೇಕು ಎಂದು ಹಣಕಾಸು ಸಚಿವಾಲಯವು ಬ್ಯಾಂಕುಗಳಿಗೆ ಸೂಚಿಸಿದೆ. ಹಗರಣದ ತನಿಖೆ ಇನ್ನಷ್ಟು ಉತ್ತಮವಾಗಿ ನಡೆಯುವುದಕ್ಕಾಗಿ ಬ್ಯಾಂಕ್‌ನ ಉನ್ನತ ಅಧಿಕಾರಿಗಳನ್ನು ಬದಲಾಯಿಸಬೇಕೇ ಎಂಬ ಬಗ್ಗೆ ಸಚಿವಾಲಯವು ಬ್ಯಾಂಕ್‌ ಮಂಡಳಿಗಳ ಬ್ಯೂರೋದ ಸಲಹೆ ಕೇಳಿದೆ.

ಹಗರಣದಲ್ಲಿ ಬೇರೆ ಬ್ಯಾಂಕುಗಳಿಗೆ ನಷ್ಟವಾಗಿದ್ದರೆ ಅದನ್ನು ತುಂಬಿಕೊಡಬೇಕು ಎಂದು ಪಿಎನ್‌ಬಿಗೆ ಸೂಚಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ. ಸಾಲದ ಹೊರೆ ಎಷ್ಟು ಎಂಬುದು ನಿರ್ಧಾರವಾದಬಳಿಕ ನಷ್ಟ ಭರ್ತಿ ಮಾಡಲಾಗುವುದು ಎಂದು ಪಿಎನ್‌ಬಿ ಹೇಳಿತ್ತು.

ನಿಯಮಗಳೇನು?

l ಸಾಲ ಮರುಪಾವತಿ ಬಾಕಿಯ ಮಾಹಿತಿ ತಕ್ಷಣ ಬಹಿರಂಗ

l ಅಂತರಬ್ಯಾಂಕ್‌ ದೂರಸಂಪರ್ಕ ವ್ಯವಸ್ಥೆ (ಸ್ವಿಫ್ಟ್‌) ಬಳಕೆಯ ಮೇಲೆ ನಿರ್ಬಂಧ; ಸ್ವಿಫ್ಟ್‌ ಮೂಲಕ ಸಾಲ ಖಾತರಿ ಪತ್ರಗಳನ್ನು ನೀಡಲಾಗುತ್ತದೆ ಮತ್ತು ಬ್ಯಾಂಕುಗಳ ನಡುವೆ ಸಂವಹನ ನಡೆಯುತ್ತದೆ

l ಸ್ವಿಫ್ಟ್‌ ಬಳಕೆದಾರರ ಸಂಖ್ಯೆ ಮತ್ತು ಬ್ಯಾಂಕ್‌ ವ್ಯವಸ್ಥಾಪಕರು ಕಳುಹಿಸಬಹುದಾದ ಸ್ವಿಫ್ಟ್‌ ಸಂದೇಶಗಳಿಗೆ ಮಿತಿ

ಪ್ರತಿಕ್ರಿಯಿಸಿ (+)