ಎಚ್‌1ಬಿ ವೀಸಾ ನಿಯಮ ಕಠಿಣ: ಭಾರತದ ಐ.ಟಿ. ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ

7

ಎಚ್‌1ಬಿ ವೀಸಾ ನಿಯಮ ಕಠಿಣ: ಭಾರತದ ಐ.ಟಿ. ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ

Published:
Updated:
ಎಚ್‌1ಬಿ ವೀಸಾ ನಿಯಮ ಕಠಿಣ: ಭಾರತದ ಐ.ಟಿ. ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ

ವಾಷಿಂಗ್ಟನ್‌ (ಪಿಟಿಐ): ಎಚ್‌1ಬಿ ವೀಸಾ ನೀಡುವ ಪ್ರಕ್ರಿಯೆಯನ್ನು ಕಠಿಣಗೊಳಿಸುವ ಹೊಸ ನೀತಿಯನ್ನು ಅಮೆರಿಕ ಸರ್ಕಾರ ಪ್ರಕಟಿಸಿದೆ. ಒಂದು ಮತ್ತು ಒಂದಕ್ಕಿಂತ ಹೆಚ್ಚು ಕಡೆ ಹೊರಗುತ್ತಿಗೆ ರೀತಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಎಚ್‌1ಬಿ ವೀಸಾ ಪಡೆಯವುದು ಹೊಸ ನೀತಿಯಿಂದಾಗಿ ಕಷ್ಟವಾಗಲಿದೆ.

ಇದು ಭಾರತದ ಮಾಹಿತಿ ತಂತ್ರಜ್ಞಾನ (ಐ.ಟಿ.) ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಹೊರಗುತ್ತಿಗೆ ಸ್ಥಳದಲ್ಲಿ ನಿರ್ದಿಷ್ಟ

ಮತ್ತು ವೃತ್ತಿಪರ ಪರಿಣತಿಯ ಅಗತ್ಯ ಇರುವ ಕೆಲಸ ಇದೆ ಎಂಬುದನ್ನು ವೀಸಾ ಪಡೆಯುವ ಕಂಪನಿಯು ಸಾಬೀತು ಮಾಡ

ಬೇಕು ಎಂದು ಹೊಸ ನೀತಿ ಹೇಳುತ್ತದೆ.

ಎಚ್‌1ಬಿ ವೀಸಾ ವ್ಯವಸ್ಥೆಯಿಂದ ಭಾರತದ ಐ.ಟಿ. ಕಂಪನಿಗಳು ಅತಿ ಹೆಚ್ಚು ಪ್ರಯೋಜನ ಪಡೆಯುತ್ತಿವೆ. ದೊಡ್ಡ ಸಂಖ್ಯೆಯ ಐ.ಟಿ. ಉದ್ಯೋಗಿ

ಗಳು ಎಚ್‌1ಬಿ ವೀಸಾ ಪಡೆದುಕೊಂಡು ಹೊರಗುತ್ತಿಗೆ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕದ ಬ್ಯಾಂಕ್‌ಗಳು, ಟ್ರಾವೆಲ್‌ ಏಜೆನ್ಸಿ

ಗಳು ಮತ್ತು ಇತರ ಸಂಸ್ಥೆಗಳಲ್ಲಿ ಭಾರತದ ಐ.ಟಿ. ವೃತ್ತಿಪರರು ನಿಯೋಜಿತರಾಗಿದ್ದಾರೆ.

ಈತನಕ ಎಚ್‌1ಬಿ ವೀಸಾಗಳನ್ನು ಮೂರು ವರ್ಷಗಳಿಗೆ ನೀಡಲಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ, ಹೊರಗುತ್ತಿಗೆ ಸಂಸ್ಥೆಯಲ್ಲಿ ಎಷ್ಟು ಸಮಯ ಕೆಲಸ ಇದೆಯೋ ಅಷ್ಟು ಅವಧಿಗೆ ಮಾತ್ರ ವೀಸಾ ನೀಡಲಾಗುವುದು.

ಅಮೆರಿಕ ಪೌರತ್ವ ಮತ್ತು ವಲಸೆ ಸೇವಾ ಇಲಾಖೆಯು (ಯುಎಸ್‌ಸಿಐಎಸ್‌) ಗುರುವಾರ ಹೊಸ ನೀತಿಯನ್ನು ಪ್ರಕಟಿಸಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ‘ಅಮೆರಿಕದ ವಸ್ತುಗಳನ್ನೇ ಖರೀದಿಸಿ, ಅಮೆರಿಕನ್ನರನ್ನೇ ಕೆಲಸಕ್ಕೆ ನೇಮಿಸಿ’‍ ಎಂಬ ಸರ್ಕಾರಿ ಆದೇಶಕ್ಕೆ ಅನುಗುಣವಾಗಿ ಈ ನೀತಿಯನ್ನು ರೂಪಿಸಲಾಗಿದೆ. ಇದು ಅಮೆರಿಕದ ಕೆಲಸಗಾರರು ಮತ್ತು ವೃತ್ತಿಪರರ ಹಿತರಕ್ಷಣೆಗಾಗಿ ರೂಪಿಸಿದ ನೀತಿ ಎಂದು ಯುಎಸ್‌ಸಿಐಎಸ್‌ ಹೇಳಿದೆ.

ಹೊಸ ನೀತಿಯು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಯುಎಸ್‌ಸಿಐಎಸ್‌ ತಿಳಿಸಿದೆ. ಅಮೆರಿಕದ ಆರ್ಥಿಕ ವರ್ಷ ಅಕ್ಟೋಬರ್‌ 1ರಿಂದ ಆರಂಭವಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್‌ ಮೊದಲ ವಾರದಲ್ಲಿ ಎಚ್‌1ಬಿ ವೀಸಾ ಪ್ರಕ್ರಿಯೆ ಆರಂಭವಾಗುತ್ತದೆ. ಮುಂದಿನ ವರ್ಷದ ವೀಸಾ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಹೊಸ ನೀತಿ ಜಾರಿಗೆ ಬರಲಿದೆ.

ವಿಶೇಷ ಪರಿಣತಿಯ ಕೆಲಸಕ್ಕೆ ನಿಯೋಜಿಸುವುದಕ್ಕಾಗಿಯೇ ವೀಸಾ ಪಡೆಯಲಾಗುತ್ತಿದೆ ಎಂಬುದನ್ನು ವೀಸಾಕ್ಕೆ ಅರ್ಜಿ ಹಾಕಿದ ಕಂಪನಿಯು ಸಾಬೀತು ಮಾಡಬೇಕು. ಈ ಕೆಲಸದ ಅವಧಿ ಎಷ್ಟು ಎಂಬುದನ್ನು ಸೂಚಿಸಬೇಕು. ವೀಸಾ ಪಡೆಯುವ ಕಂಪನಿ ಮತ್ತು ಆ ವೀಸಾದಲ್ಲಿ ಕೆಲಸಕ್ಕೆ ನಿಯೋಜಿತರಾಗುವ ವ್ಯಕ್ತಿಯ ನಡುವೆ ಈ ಅವಧಿಯ ಉದ್ದಕ್ಕೂ ಉದ್ಯೋಗದಾತ–ಉದ್ಯೋಗಿ ಸಂಬಂಧ ಇರಲೇಬೇಕು ಎಂಬುದು ಹೊಸ ನೀತಿಯ ನಿಯಮಗಳಲ್ಲಿ ಸೇರಿದೆ.

ವಿಸ್ತರಣೆಯೂ ಕಷ್ಟ: ಎಚ್‌1ಬಿ ವೀಸಾ ವಿಸ್ತರಣೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ. ವೀಸಾ ಅವಧಿಯ ಯಾವುದೇ ದಿನಗಳಲ್ಲಿ ಉದ್ಯೋಗಿಗೆ ಕೆಲಸ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದ್ದರೆ ಅಂಥವರ ವೀಸಾ ವಿಸ್ತರಣೆ ಬಹಳ ಕಷ್ಟವಾಗಲಿದೆ.

ಅಮೆರಿಕದ ಸಂಸ್ಥೆಗಳು ಕೆಲವೊಮ್ಮೆ ಉದ್ಯೋಗಿಯ ಗುತ್ತಿಗೆಯನ್ನು ದಿಢೀರ್ ರದ್ದು ಮಾಡುತ್ತವೆ. ಅಂತಹ ಸಂದರ್ಭದಲ್ಲಿ ಉದ್ಯೋಗಿ ಕೆಲವು ಕಾಲ ಕೆಲಸ ಇಲ್ಲದೇ ಇರಬೇಕಾಗುತ್ತದೆ.

‘ಹೀಗೆ ಕೆಲಸ ಇಲ್ಲದ ಅವಧಿಯಲ್ಲಿ ಉದ್ಯೋಗಿಗೆ ವೇತನ ನೀಡಿಲ್ಲ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ಇದನ್ನು ವೀಸಾ ನಿಯಮಗಳ ಉಲ್ಲಂಘನೆ ಮತ್ತು ವ್ಯವಸ್ಥೆಯ ದುರ್ಬಳಕೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಎಚ್‌1ಬಿ ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸುವಾಗ, ಆ ವರೆಗಿನ ಅವಧಿಯಲ್ಲಿ ಯಾವುದೇ ನಿಯಮದ ಉಲ್ಲಂಘನೆ ಆಗಿಲ್ಲ ಎಂಬುದನ್ನು ಅರ್ಜಿದಾರ ಕಂಪನಿಯು ಸಾಬೀತು ಮಾಡಬೇಕು’ ಎಂದು ಯುಎಸ್‌ಸಿಐಎಸ್‌ ಹೇಳಿದೆ.

ಎಚ್‌1ಬಿ ವೀಸಾ ಎಂದರೇನು

ಇದು ಅಮೆರಿಕದಲ್ಲಿ ಕೆಲಸ ಮಾಡುವುದಕ್ಕೆ ನೀಡಲಾಗುವ ತಾತ್ಕಾಲಿಕ ವೀಸಾ. ವೃತ್ತಿಪರರಿಗಷ್ಟೇ ಈ ವೀಸಾ ನೀಡಲಾಗುತ್ತದೆ. ಅಮೆರಿಕದಲ್ಲಿ ಈ ಕೆಲಸಗಳನ್ನು ಮಾಡಬಲ್ಲವರ ಕೊರತೆ ಇದ್ದರೆ ಮಾತ್ರ ವೀಸಾ ನೀಡಬೇಕು ಎಂಬುದು ನಿಯಮ.

ಸಮಗ್ರ ಮಾಹಿತಿ ಕಡ್ಡಾಯ

ವೀಸಾಕ್ಕೆ ಅರ್ಜಿ ಸಲ್ಲಿಸುವಾಗ ವಿವಿಧ ಮಾಹಿತಿಗಳನ್ನು ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ಯಾವ ಕೆಲಸ ನಿರ್ವಹಿಸುವುದಕ್ಕಾಗಿ ವ್ಯಕ್ತಿಯನ್ನು ಕರೆಸಿಕೊಳ್ಳಲಾಗುತ್ತಿದೆ, ಅದರ ತಾಂತ್ರಿಕ ವಿವರಗಳು, ಮಾರುಕಟ್ಟೆ ವಿಶ್ಲೇಷಣೆ, ವೆಚ್ಚದ ವಿಶ್ಲೇಷಣೆಗಳೆಲ್ಲವನ್ನೂ ನೀಡಬೇಕು. ಹಾಗೆಯೇ, ವಿಶೇಷ ಪರಿಣತಿಯ ವ್ಯಕ್ತಿಯು ನಿರ್ವಹಿಸುವ ಕೆಲಸಗಳೇನು, ಅವರ ಅರ್ಹತೆ ಏನು, ಗುತ್ತಿಗೆ ಅವಧಿಯಲ್ಲಿ ಅವರಿಗೆ ದೊರೆಯುವ ವೇತನ ಮತ್ತು ಇತರ ಪ್ರಯೋಜನಗಳು ಏನು, ವಾರಕ್ಕೆ ಎಷ್ಟು ತಾಸಿನ ಕೆಲಸ ಇರುತ್ತದೆ, ಅವರ ಮೇಲ್ವಿಚಾರಕರು ಯಾರು ಮುಂತಾದ ವಿವರಗಳನ್ನೂ ಕಂಪನಿಯು ಸಲ್ಲಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry