ಶುಕ್ರವಾರ, ಡಿಸೆಂಬರ್ 13, 2019
27 °C

ನೀರವ್‌ ಮೋದಿ, ಸಾಲಮನ್ನಾ ಗದ್ದಲ: ಮುಖ್ಯಮಂತ್ರಿ ಭಾಷಣಕ್ಕೆಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರವ್‌ ಮೋದಿ, ಸಾಲಮನ್ನಾ ಗದ್ದಲ: ಮುಖ್ಯಮಂತ್ರಿ ಭಾಷಣಕ್ಕೆಅಡ್ಡಿ

ಬೆಂಗಳೂರು: 14ನೇ ವಿಧಾನಸಭೆಯ ಕಡೆಯ ಅಧಿವೇಶನದ ಕೊನೆಯ ದಿನ ಬಿಜೆಪಿ ಸದಸ್ಯರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾಷಣಕ್ಕೆ ಅಡ್ಡಿಪಡಿಸಿ, ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು. ವಿರೋಧ ಪಕ್ಷದ ಸದಸ್ಯರ ವರ್ತನೆಗೆ ಆಡಳಿತ ಪಕ್ಷದಿಂದಲೂ ಪ್ರತಿರೋಧ ವ್ಯಕ್ತವಾದ್ದರಿಂದ ಭಾರಿ ಕೋಲಾಹಲ ಉಂಟಾಯಿತು.

ಬಜೆಟ್‌ ಮೇಲೆ ನಡೆದ ಚರ್ಚೆಗೆ ಉತ್ತರಿಸಲು ತಮಗೆ ಅವಕಾಶ ಕೊಡದೆ ಬಿಜೆಪಿ ಸದಸ್ಯರು ಧರಣಿ ನಡೆಸಿದ್ದರಿಂದ ಕೆಂಡಾಮಂಡಲವಾದ ಸಿದ್ದರಾಮಯ್ಯ, ‘ಬಿಜೆಪಿ ಸದಸ್ಯರು ಗೂಂಡಾಗಳು, ಕೂಗುಮಾರಿಗಳು, ಶಾಸಕರಾಗಲು ಅಯೋಗ್ಯರು’ ಎಂದು ಹರಿಹಾಯ್ದರು.

ವಿಧಾನ ಪರಿಷತ್ತಿನಲ್ಲೂ ಮುಖ್ಯಮಂತ್ರಿ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ಕೊಡಲು ಆರಂಭಿಸಿದಾಗ ಬಿಜೆಪಿ ಸದಸ್ಯರು ಗದ್ದಲವೆಬ್ಬಿಸಿದರು. ‘ನೀವು ಸದನದಲ್ಲಿ ರಾಜಕೀಯ ಮಾತನಾಡುತ್ತಿದ್ದೀರಿ. ಇದನ್ನು ಕೇಳುವುದಕ್ಕೆ ನಾವು ತಯಾರಿಲ್ಲ. ನಿಮ್ಮ ಭಾಷಣ ಬಹಿಷ್ಕರಿಸುತ್ತೇವೆ’ ಎಂದು ಪ್ರತಿಭಟಿಸಿ ಸಭಾತ್ಯಾಗ ಮಾಡಿದರು.

ಮುಖ್ಯಮಂತ್ರಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ’ಸಹಕಾರ ಸಂಸ್ಥೆಗಳಲ್ಲಿನ ₹50 ಸಾವಿರವರೆಗಿನ ಅಲ್ಪಾವಧಿ ಸಾಲ ಮನ್ನಾ ಮಾಡಲಾಗಿದೆ. ಒಟ್ಟು  22.27 ಲಕ್ಷ ರೈತರ ₹8,165 ಕೋಟಿ ಮನ್ನಾ ಆಗಿದೆ. ಇದುವರೆಗೆ ₹4ಸಾವಿರ ಕೋಟಿ ಮೊತ್ತವನ್ನು ಅಪೆಕ್ಸ್‌ ಬ್ಯಾಂಕ್‌ಗೆ ಪಾವತಿಸಲಾಗಿದೆ. 2018–19ನೇ ಸಾಲಿನ ಬಜೆಟ್‌ನಲ್ಲೂ ₹4ಸಾವಿರ ಕೋಟಿ ಮೀಸಲಿಡಲಾಗಿದೆ’ ಎಂದರು.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ರೈತರು ಸಹಕಾರಿ ವಲಯದಲ್ಲಿ ಮಾಡಿರುವ ₹ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು. ಮಾತಿನ ನಡುವೆ ಉತ್ತರ ಪ್ರದೇಶದ ಉದಾಹರಣೆ ಕೊಟ್ಟರು.

ಈ ಹಂತದಲ್ಲಿ ಕಾಂಗ್ರೆಸ್‌ ಸದಸ್ಯ ಕೆ.ಎನ್‌. ರಾಜಣ್ಣ, ಉತ್ತರ ಪ್ರದೇಶ ಸರ್ಕಾರ ಸಣ್ಣ ಹಾಗೂ ಅತೀ ಸಣ್ಣ ರೈತರ ಸಾಲವನ್ನಷ್ಟೇ ಮನ್ನಾ ಮಾಡಿದೆ. ನಮ್ಮ ಸರ್ಕಾರ ಎಲ್ಲ ರೈತರ ಸಾಲ ಮನ್ನಾ ಮಾಡಿದೆ ಎಂದು ತಿರುಗೇಟು ಕೊಟ್ಟರು. ಅಲ್ಲದೆ, ವಜ್ರದ ವ್ಯಾಪಾರಿ ನೀರವ್‌ ಮೋದಿ ವಂಚನೆ ಪ್ರಕರಣ ಕುರಿತು ಅವರು ಪ್ರಸ್ತಾಪಿಸಿದ್ದು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಜಟಾಪಟಿಗೆ ಕಾರಣವಾಯಿತು.

ಜಗದೀಶ್‌ ಶೆಟ್ಟರ, ಸದಸ್ಯರಾದ ಸಿ.ಟಿ. ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರರು, ‘ನೀರವ್‌ ಮೋದಿ, ಮಲ್ಯ ಅವರಿಗೆ ಯುಪಿಎ ಸರ್ಕಾರದ ಅವಧಿಯಲ್ಲೇ ಸಾಲ ನೀಡಲಾಗಿದೆ. ಕಾಂಗ್ರೆಸ್‌ನ ಹೊಣೆಗೇಡಿತನವೇ ಇದಕ್ಕೆ ಕಾರಣ. ಮುಖ್ಯಮಂತ್ರಿಗೆ ಬಜೆಟ್‌ ಬಗ್ಗೆ ಗಂಭೀರವಾಗಿ ಉತ್ತರ ನೀಡುವ ಮನಸ್ಸಿಲ್ಲ. ಇದೊಂದು ಸಂತೆಯೊಳಗಿನ ಭಾಷಣವಾಗಿದೆ’ ಎಂದು ಏರಿದ ದನಿಯಲ್ಲಿ ವಾಗ್ದಾಳಿ ನಡೆಸಿದರು.

ಇದಕ್ಕೆ ಸಚಿವರಾದ ರೋಷನ್ ಬೇಗ್, ಪ್ರಿಯಾಂಕ ಖರ್ಗೆ, ಪ್ರಮೋದ್ ಮಧ್ವರಾಜ್, ಕೃಷ್ಣ ಬೈರೇಗೌಡ, ಡಾ. ಶರಣ ಪ್ರಕಾಶ ಪಾಟೀಲ ಸೇರಿದಂತೆ ಆಡಳಿತ ಪಕ್ಷದ  ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಬಿರುಸಿನ ವಾಗ್ವಾದ ನಡೆದು ಗೊಂದಲ ಉಂಟಾಯಿತು.

ಆಗ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ ಅವರು, ‘ನನ್ನ ಉತ್ತರಕ್ಕೆ ಅಡ್ಡಿಪಡಿಸುವುದು ಸರಿ ಅಲ್ಲ. ನಿಮ್ಮ ನಡವಳಿಕೆ ಅತಿಯಾಯಿತು. ಸಭಾಧ್ಯಕ್ಷರು ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ವಿರೋಧ ಪಕ್ಷದ ನಾಯಕನಾಗಿದ್ದಾಗ ನಾನು ಈ ರೀತಿ ಎಂದೂ ಮಾಡಿರಲಿಲ್ಲ. ನಿಮ್ಮನ್ನೆಲ್ಲ ಹೊರಗೆ ಹಾಕಬೇಕಾ?’ ಎಂದು ರೇಗಿದರು.

ಆದರೂ, ಪಟ್ಟು ಬಿಡದ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದ್ದರಿಂದ ಸದನದ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು. ಬಳಿಕ ಸದನ ಸೇರಿದಾಗಲೂ ಧರಣಿ ಮುಂದುವರಿಯಿತು.

‘ಸಾಲದಲ್ಲಿ, ಭ್ರಷ್ಟಾಚಾರದಲ್ಲಿ, ಅತ್ಯಾಚಾರಗಳಲ್ಲಿ, ಸುಳ್ಳು ಭಾಷಣ ಮಾಡುವುದರಲ್ಲಿ, ಭಂಡತನದಲ್ಲಿ, ರೈತರ ಆತ್ಮಹತ್ಯೆಯಲ್ಲಿ ಕಾಂಗ್ರೆಸ್‌ ಸರ್ಕಾರದ್ದು ನಂಬರ್‌ 1 ಸ್ಥಾನ. ಅರ್ಕಾವತಿ ಹಗರಣದ ವರದಿ ಬಹಿರಂಗಪಡಿಸಿ’ ಎಂದು ಬಿಜೆಪಿ ಸದಸ್ಯರು ಘೋಷಣೆ ಹಾಕಿದರು. ಧರಣಿ ನಡುವೆಯೇ ಸಿದ್ದರಾಮಯ್ಯ ಅವರು ತಮ್ಮ ಭಾಷಣ ಮುಂದುವರಿಸಿದರು.

ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಹೇಳಿದ್ದು

* ಬಿಜೆಪಿ ಭ್ರಷ್ಟಾಚಾರದ ಗಂಗೋತ್ರಿ. ಮೋದಿ ಅವರೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ

* ಬ್ಯಾಂಕ್‌ಗೆ ₹11 ಸಾವಿರ ಕೋಟಿ ವಂಚಿಸಿದ ನೀರವ್‌ ಮೋದಿಗೆ ಪ್ರಧಾನಿ ಮೋದಿ ಬೆಂಬಲವಾಗಿದ್ದಾರೆ.

* ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಲ ಮನ್ನಾ ಮಾಡಿ ಅಂದರೆ ನನ್ನ ಬಳಿ ನೋಟು ಪ್ರಿಂಟ್‌ ಮಾಡುವ ಯಂತ್ರ ಇಲ್ಲ ಎಂದಿದ್ದರು ಯಡಿಯೂರಪ್ಪ. ಇಂದು ಸಾಲ ಮನ್ನಾ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ.

* ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲಾಗಿತ್ತು. ಆದರೆ, ಕೇಂದ್ರ ಸ್ಪಂದಿಸಲಿಲ್ಲ. ಮನಮೋಹನ್‌ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ₹77 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು. ರಾಜ್ಯದಲ್ಲಿ ಒಟ್ಟು ₹57 ಸಾವಿರ ಕೋಟಿ ಸಾಲ ಇದೆ. ಇದರಲ್ಲಿ ₹42 ಸಾವಿರ ಕೋಟಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿದೆ. ಹೀಗಾಗಿ, ಈ ವಿಷಯದ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಗೆ ಇಲ್ಲ.

*2007ರ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಅನ್ವಯ ಆರ್ಥಿಕ ಶಿಸ್ತು ಕಾಪಾಡಲಾಗಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಸಹ ರಾಷ್ಟ್ರಮಟ್ಟಕ್ಕಿಂತ ಹೆಚ್ಚಾಗಿದೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ₹4.15 ಲಕ್ಷ ಕೋಟಿ ಸಾಲವಿದೆ.

* ವಾಸ್ತವಿಕ ನೆಲೆಗಟ್ಟಿನಲ್ಲಿ ಬಜೆಟ್‌ ಮಂಡಿಸಲಾಗಿದೆ. ಇದಕ್ಕೆ ಪಾವಿತ್ರ್ಯತೆ ಇಲ್ಲ ಎನ್ನುವ ಜಗದೀಶ್‌ ಶೆಟ್ಟರ ಆರೋಪದಲ್ಲಿ ಹುರುಳಿಲ್ಲ.

ಕಾಗದದ ಚೂರು ಎಸೆದ ಸದಸ್ಯರು: ಧರಣಿ ಸಂದರ್ಭದಲ್ಲಿ ಕೆಲವು ಬಿಜೆಪಿ ಸದಸ್ಯರು ಪ್ರಶ್ನೋತ್ತರದ ಪ್ರತಿಗಳನ್ನು ಹರಿದು ಪೀಠದ ಮುಂದೆ ಎಸೆದರು. ಕೆಲವು ಕಾಗದ ಚೂರುಗಳು ಸಭಾಧ್ಯಕ್ಷರ ಪೀಠದ ಮೇಲೇ ಬಿದ್ದವು. ಇದರಿಂದ ಆಕ್ರೋಶಗೊಂಡ ಮುಖ್ಯಮಂತ್ರಿ, ‘ಸ್ಪೀಕರ್‌ ಮೇಲೆ ಕಾಗದ ಎಸೆಯುತ್ತಿದ್ದೀರಿ. ನಿಮಗೆ ಮಾನ, ಮರ್ಯಾದೆ ಇಲ್ಲವೇ?’ ಎಂದು ಕಿಡಿಕಾರಿದರು.

ಪರಿಷತ್‌ನಲ್ಲಿ ಸಭಾತ್ಯಾಗ

’ಬಜೆಟ್‌ ಮೇಲಿನ ಚರ್ಚೆಗೆ ಅವಕಾಶ ನೀಡದೆ ಉತ್ತರ ಹೇಳಲು ಬಂದಿದ್ದೀರಿ’ ಎಂದು ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದಾಗ ವಿಧಾನಪರಿಷತ್‌ನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.

’ಚರ್ಚೆ ಇಲ್ಲದೆಯೇ ಲೇಖಾನುದಾನಕ್ಕೂ ಒಪ್ಪಿಗೆ ಪಡೆಯುವ ಸಂಪ್ರದಾಯ ಹಿಂದೆಂದೂ ನಡೆದಿರಲಿಲ್ಲ. ಚರ್ಚೆಗೆ ಅವಕಾಶ ನೀಡಬೇಕು. ನಾವು ನಿಮ್ಮ ಉತ್ತರ ಕೇಳಲು ಸಿದ್ಧರಿಲ್ಲ’ ಎಂದು ಏರಿದ ದನಿಯಲ್ಲಿ ಬಿಜೆಪಿ ಸದಸ್ಯರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ’ನಿಮಗೆ ಚರ್ಚೆ ಮಾಡಲು ಅವಕಾಶವಿತ್ತು. ನಾನಾಗಲಿ ಅಥವಾ ಸಭಾಪತಿಗಳಾಗಲಿ ನಿರ್ಬಂಧ ವಿಧಿಸಿರಲಿಲ್ಲ’ ಎಂದರು.

ಇದರಿಂದ ಅತೃಪ್ತಗೊಂಡ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಆಗ ಆಕ್ರೋಶಗೊಂಡ ಮುಖ್ಯಮಂತ್ರಿ, ‘ಹೋಗಿ, ಹೋಗಿ..., ನೀವು ಲೂಟಿಕೋರರು’ ಎಂದರು.

ಪ್ರತಿಕ್ರಿಯಿಸಿ (+)