ಸೋಮವಾರ, ಡಿಸೆಂಬರ್ 9, 2019
25 °C
ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ವಿರುದ್ಧದ ಪ್ರಕರಣ

ಜಾಮೀನು ಅರ್ಜಿ ವಿಚಾರಣೆ ಫೆ.26ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಮೀನು ಅರ್ಜಿ ವಿಚಾರಣೆ ಫೆ.26ಕ್ಕೆ

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹಾಗೂ ಆತನ ಸಹಚರರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯ ಸೋಮವಾರಕ್ಕೆ (ಫೆ.26) ಮುಂದೂಡಿತು.

ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ವಿಚಾರಣೆ ಆರಂಭಿಸಿದ ನ್ಯಾಯಾಧೀಶರು, ಪ್ರಕರಣದ ನೇರ ವಿಚಾರಣೆಗೆ ಅಡ್ಡಿಯಾಗಿದ್ದ ಇತರರ ಅರ್ಜಿಗಳನ್ನು ಮೊದಲು ‌ಇತ್ಯರ್ಥಗೊಳಿಸಿದರು.

‘ವಿದ್ವತ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ನಾನೂ ಅಭಿಯೋಜನೆಗೆ ನೆರವು ನೀಡುತ್ತೇನೆ’ ಎಂದು ಸ್ವಯಂ ಸೇವಾ ಸಂಸ್ಥೆಯೊಂದರ ಪರವಾಗಿ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ನ್ಯಾಯಾಲಯ ಶನಿವಾರಕ್ಕೆ ಕಾಯ್ದಿರಿಸಿತು.

ಹಿರಿಯ ವಕೀಲ ಶ್ಯಾಮಸುಂದರ್ ಅವರನ್ನು ಪ್ರಕರಣದ ವಿಶೇಷ ಅಭಿಯೋಜಕರನ್ನಾಗಿ ನೇಮಿಸಿರುವುದಾಗಿ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿತು. ಹೀಗಾಗಿ, ಕಾಯಂ ಅಭಿಯೋಜಕರಾಗಿದ್ದ ನರೇಂದ್ರ ಮಡಿಕೇರಿ ಅವರು ಪ್ರಕರಣದಿಂದ ಹಿಂದೆ ಸರಿದರು.

ನಾಟಕೀಯ ಬೆಳವಣಿಗೆಗಳು: ನಲಪಾಡ್ ಜಾಮೀನು ಹಾಗೂ ಎಸ್‌ಪಿಪಿ ನೇಮಕದ ಆಕ್ಷೇಪ ಸಂಬಂಧ ವಿಚಾರಣೆಗಳು ನಡೆಯುತ್ತಿದ್ದ ಕಾರಣ, ನ್ಯಾಯಾಲಯದ ಆವರಣದಲ್ಲಿ ವಕೀಲರು ಕಿಕ್ಕಿರಿದು ತುಂಬಿದ್ದರು. ವಿಚಾರಣೆ ಪ್ರಾರಂಭವಾಗುತ್ತಿದ್ದಂತೆಯೇ ಒಂದರ ಹಿಂದೆ ಒಂದರಂತೆ ನಾಟಕೀಯ ಬೆಳವಣಿಗೆಗಳು ನಡೆದವು.

ವಿದ್ವತ್ ತಂದೆ ಲೋಕನಾಥನ್ ಪರವಾಗಿ ನ್ಯಾಯಾಲಯಕ್ಕೆ ಸಹಾಯ ಮಾಡಲು ತಮಗೆ ಅವಕಾಶ ನೀಡಬೇಕು ಎಂದು ಶ್ಯಾಮಸುಂದರ್ ಗುರುವಾರ ಇದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಸರ್ಕಾರ ಇವರನ್ನೇ ಎಸ್‌ಪಿಪಿಯಾಗಿ ಶುಕ್ರವಾರ ಬೆಳಿಗ್ಗೆ ಅಧಿಸೂಚನೆ ಹೊರಡಿಸಿದ್ದರಿಂದ ಒಂದು ರೀತಿಯ ಗೊಂದಲ ಸೃಷ್ಟಿಯಾಯಿತು. ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಶ್ಯಾಮಸುಂದರ್ ಮೊದಲ ಅರ್ಜಿಯನ್ನು ವಾಪಸ್ ಪಡೆದು ಗೊಂದಲ ನಿವಾರಿಸಿದರು.‌

‘ಆರೋಪಿಗಳಿಗೆ ಜಾಮೀನು ನೀಡದಂತೆ ಈಗಾಗಲೇ ನರೇಂದ್ರ ಮಡಿಕೇರಿ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಅದಕ್ಕೆ ನಾನು ಹೆಚ್ಚುವರಿ ಅಂಶಗಳನ್ನು ಸೇರಿಸಬೇಕಿದ್ದು, ಸ್ವಲ್ಪ ಕಾಲಾವಕಾಶ ನೀಡಬೇಕು’ ಎಂದು ಶ್ಯಾಮಸುಂದರ್ ಕೋರಿದರು. ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದರು.

***

ವಿದ್ವತ್‌ ಆರೋಗ್ಯದಲ್ಲಿ ಚೇತರಿಕೆ : ಇಂದ್ರು ವಾದ್ವಾನಿ

‘ಚಿಕಿತ್ಸೆಗೆ ವಿದ್ವತ್‌ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಮೂಗು ತೀವ್ರವಾಗಿ ಗಾಯಗೊಂಡಿದ್ದರೂ ಶ್ವಾಸಕೋಶ ಉತ್ತಮ ಸ್ಥಿತಿಯಲ್ಲಿಯೇ ಇದೆ. ಡಿಸ್ಚಾರ್ಜ್‌ ಮಾಡುವ ಬಗ್ಗೆ ನಿರ್ಧರಿಸಿಲ್ಲ. ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಇಡಲಾಗಿದೆ’ ಎಂದು ಮಲ್ಯ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಂದ್ರು ವಾದ್ವಾನಿ ತಿಳಿಸಿದರು.

‘ಸಿಂಗಪುರದಿಂದ ವೈದ್ಯರನ್ನು ಕರೆಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಆದರೆ, ಈಗಲೇ ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ’ ಎಂದು ವಿದ್ವತ್‌ ಸಹೋದರ ಸಾತ್ವಿಕ್‌ ಲೋಕನಾಥ್‌ ತಿಳಿಸಿದರು.

ಬಿಜೆಪಿ ಶಾಸಕರ ಭೇಟಿ: ಆರೋಗ್ಯ ವಿಚಾರಿಸಲು ಶುಕ್ರವಾರ ಮಲ್ಯ ಆಸ್ಪತ್ರೆಗೆ ತೆರಳಿದ್ದ ಶಾಸಕರಾದ ಜಗದೀಶ್‌ ಶೆಟ್ಟರ್‌, ಆರ್‌. ಅಶೋಕ್‌ ಹಾಗೂ ವೈ.ಎ.ನಾರಾಯಣಸ್ವಾಮಿ ಅವರಿಗೆ ವಿದ್ವತ್‌ ಭೇಟಿ ಸಾಧ್ಯವಾಗಲಿಲ್ಲ.

ಐಸಿಯುನಲ್ಲಿರುವ ವಿದ್ವತ್‌ಗೆ ಸೋಂಕು ತಗಲಬಹುದು ಎಂಬ ಕಾರಣಕ್ಕೆ ವೈದ್ಯರು ಭೇಟಿಗೆ ಅವಕಾಶ ನೀಡಲಿಲ್ಲ. ಅವರ ಕುಟಂಬದವರೊಂದಿಗೆ ಮಾತನಾಡಿದ ಮುಖಂಡರು, ‘ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸಬೇಡಿ’ ಎಂದು ಸಲಹೆ ನೀಡಿದರು.

‘ಮೊಹಮದ್‌ ನಲಪಾಡ್‌ ಹಾಗೂ ಆತನ ಸ್ನೇಹಿತರು ಗಾಂಜಾ ಮತ್ತಿನಲ್ಲಿ ಹಲ್ಲೆ ನಡೆಸಿರಬಹುದು. ಕೆಫೆಯಲ್ಲಿ ಹೊಡೆದಿರುವುದಲ್ಲದೇ ಮತ್ತೊಮ್ಮೆ ವಾಹನ ನಿಲುಗಡೆ ಪ್ರದೇಶದಲ್ಲೂ ಹಲ್ಲೆ ನಡೆಸಿದ್ದಾರೆ. ಹೀಗಿದ್ದೂ ಪೊಲೀಸರು ಗಾಂಜಾ ಸೇವನೆ ಬಗ್ಗೆ ಪರೀಕ್ಷೆ ನಡೆಸದಿರುವುದು ಅಚ್ಚರಿ ಉಂಟುಮಾಡಿದೆ. ಈಗಲಾದರೂ ಆ ಬಗ್ಗೆ ತನಿಖೆ ನಡೆಸಬೇಕು’ ಎಂದು ಆರ್‌.ಅಶೋಕ್‌ ಒತ್ತಾಯಿಸಿದರು.

ನಗರದಲ್ಲಿ ಗಾಂಜಾ ಮಾರಾಟ ಹೆಚ್ಚಾಗಿದೆ. ಇತ್ತೀಚೆಗೆ ನಗರ ಪೊಲೀಸರು 130 ಕೆ.ಜಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ. ಗಾಂಜಾ ಮಾರಾಟ ವಿರೋಧಿಸಿದ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರಾದ ಸಂತೋಷ್‌, ಕದಿರೇಶ್‌ ಕೊಲೆಯಾಗಿದೆ ಎಂದು ಹೇಳಿದರು.

ಮೂವರಿಗಾಗಿ ಶೋಧ: ವಿದ್ವತ್ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ಶೋಧ ನಡೆಸಿದ್ದಾರೆ.

‘ಯುಬಿ ಸಿಟಿಯ ಫರ್ಜಿ ಕೆಫೆಯ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ತಲೆಮರೆಸಿಕೊಂಡಿರುವ ಶ್ರೀಕೃಷ್ಣ, ಆಸ್ಟಿನ್ ಟೌನ್‌ನ ನವಾಜ್ ಹಾಗೂ ಇನೊಬ್ಬ ವ್ಯಕ್ತಿ ಸಹ ಹಲ್ಲೆ ಮಾಡಿರುವುದು ಗೊತ್ತಾಗಿದೆ. ಹೀಗಾಗಿ, ಅವರಿಗಾಗಿ ಹುಡುಕಾಟ ನಡೆಸಿದ್ದೇವೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

‘ಜಯನಗರದ 7ನೇ ಹಂತದಲ್ಲಿ ವಾಸವಾಗಿರುವ ಶ್ರೀಕೃಷ್ಣ, ಎಂಜಿನಿಯರಿಂಗ್ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿ ನಲಪಾಡ್ ಜತೆ ತಿರುಗಾಡುತ್ತಿದ್ದ. ಹಲ್ಲೆ ನಡೆದ ಬಳಿಕ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿರುವ ಆತ ಗೆಳೆಯರ ಮೊಬೈಲ್‌ಗಳಿಂದ ಪೋಷಕರ ಜತೆ ಮಾತನಾಡುತ್ತಿದ್ದಾನೆ. ಆ ಬಗ್ಗೆ ನಿಗಾ ಇಟ್ಟಿದ್ದೇವೆ’ ಎಂದರು.

ಪ್ರತಿಕ್ರಿಯಿಸಿ (+)