ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇನ್ನೊಂದು ಮದ್ವೆ ಬಗ್ಗೆ ಯೋಚಿಸ್ತೀನಿ ಮೊದಲು ವಿಚ್ಛೇದನ ಕೊಡ್ಸಿ’

Last Updated 23 ಫೆಬ್ರುವರಿ 2018, 20:19 IST
ಅಕ್ಷರ ಗಾತ್ರ

ಬೆಂಗಳೂರು: ‘ಎರಡನೇ ಮದುವೆಯಾಗುವ ಬಗ್ಗೆ ಯೋಚನೆ ಮಾಡಿ ತೀರ್ಮಾನ ತಗೋತೀನಿ. ಮೊದಲು ಈ ಗಂಡನಿಂದ ವಿಚ್ಛೇದನ ಕೊಡಿಸಿ...’

‘ವಿಚ್ಛೇದನ ಕೋರಿರುವ ಪ್ರಕರಣವನ್ನು ಮೈಸೂರಿಗೆ ವರ್ಗಾಯಿಸಬೇಕು’ ಎಂಬ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರ ಮಹಿಳೆಯ ಖಡಕ್‌ ನುಡಿಗಳನ್ನು ಕೇಳಿ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಕ್ಷಣಕಾಲ ಆವಾಕ್ಕಾದರು.

‘ಏನಮ್ಮಾ, ನೀನು ವಿಚ್ಛೇದನ ಪಡೆಯುವ ಮುನ್ನ ಒಮ್ಮೆ ಮಧ್ಯಸ್ಥಿಕೆ ಕೇಂದ್ರಕ್ಕೆ ಹೋಗಿ ನಿನ್ನ ಗಂಡನೊಂದಿಗೆ ಸುದೀರ್ಘವಾಗಿ ಚರ್ಚಿಸು. ನಿಮ್ಮಿಬ್ಬರ ಜಗಳದಲ್ಲಿ ನಿಮ್ಮ ಐದು ವರ್ಷದ ಹೆಣ್ಣು ಮಗುವಿನ ಭವಿಷ್ಯ ಹಾಳಾಗುತ್ತದೆ. ಯೋಚಿಸಿ ನೋಡು. ನೀವಿಬ್ಬರೂ ಒಂದಾಗಿ ಬಾಳಿದರೆ ಚೆನ್ನ’ ಎಂಬ ಸಲಹೆ ನೀಡಿದರು.

ಈ ಮಾತಿಗೆ ಆಕೆ, ‘ನನಗೆ ಗಂಡ ಬೇಡ. ವಿಚ್ಛೇದನ ಬೇಕು’ ಎಂದಳು.

ಇದಕ್ಕೆ ಕೋರ್ಟ್‌ನಲ್ಲಿ ಹಾಜರಿದ್ದ ಗಂಡ, ‘ಸ್ವಾಮಿ, ನನಗೆ ವಿಚ್ಛೇದನ ನೀಡುವ ಬಯಕೆ ಇಲ್ಲ. ಈಗಲೂ ಆಕೆ ನನ್ನೊಂದಿಗೆ ಬಂದರೆ ಕರೆದೊಯ್ಯುತ್ತೇನೆ’ ಎಂದು ಉತ್ತರಿಸಿದ.

ಇದಕ್ಕೆ ನ್ಯಾಯಮೂರ್ತಿಗಳು, ‘ಏನಮ್ಮಾ, ನಿನಗೆ ಇನ್ನೊಂದು ಮದುವೆ ಆಗುವ ಯೋಚನೆ ಏನಾದರೂ ಇದೆಯೇ’ ಎಂದು ಪ್ರಶ್ನಿಸಿದರು.

ಆಗ ಮಹಿಳೆ, ‘ಅದನ್ನು ಆಮೇಲೆ ತೀರ್ಮಾನ ಮಾಡ್ತೀನಿ. ಗಂಡನ ಜೊತೆ ಮಾತುಕತೆ ನಡೆಸುವುದಾದರೆ ಆತನೇ ಮೈಸೂರಿಗೆ ಬರಲಿ. ಮೈಸೂರಿನ ಮಧ್ಯಸ್ಥಿಕೆ ಕೇಂದ್ರದಲ್ಲೇ ಮಾತುಕತೆ ನಡೆಸಲು ಅವಕಾಶ ಮಾಡಿಕೊಡಿ. ಬೆಂಗಳೂರಾದರೆ ಒಂದೇ ಬಾರಿ ಬರುತ್ತೇನೆ’ ಎಂದಳು.

ಇದಕ್ಕೆ ಆಕ್ಷೇಪಿಸಿದ ಗಂಡ, ‘ಸ್ವಾಮಿ ನಾನು ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದೇನೆ. ಪ್ರತಿಬಾರಿ ಮೈಸೂರಿಗೆ ಹೋಗಲು ಸಾಕಷ್ಟು ಹಣ ಖರ್ಚಾಗುತ್ತದೆ. ಈಗಲೂ ಹೆಂಡತಿಯನ್ನು ಸ್ವೀಕರಿಸಲು ಸಿದ್ಧನಿದ್ದೇನೆ’ ಎಂದ.

‘ಇಬ್ಬರೂ ಮಾರ್ಚ್ 3 ರಂದು ಮಧ್ಯಾಹ್ನ 12 ಗಂಟೆಗೆ ಮೈಸೂರಿನ ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಬೇಕು. ಅವರೊಂದಿಗೆ ಚರ್ಚಿಸಲು ಹಿರಿಯ ಹಾಗೂ ಅನುಭವಿ ಮಧ್ಯಸ್ಥಿಕೆದಾರರನ್ನು ನೇಮಿಸಬೇಕು. ಚರ್ಚೆ ಬಳಿಕ ಮಧ್ಯಸ್ಥಿಕೆದಾರರು ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕು’ ಎಂದು ನಿರ್ದೇಶಿಸಿದ ನ್ಯಾಯಮೂರ್ತಿಗಳು ವಿಚಾರಣೆ ಮುಂದೂಡಿದರು.

ಶುಕ್ರವಾರ ವಿಚಾರಣೆಗೆ ಮೈಸೂರಿನಿಂದ ಬಂದಿದ್ದ ಮಹಿಳೆಗೆ ನ್ಯಾಯಮೂರ್ತಿಗಳು ಆಕೆಯ ಗಂಡನಿಂದ ಪ್ರಯಾಣ ವೆಚ್ಚಕ್ಕೆಂದು ₹500 ಕೊಡಿಸಿದರು.

ವಿಚ್ಛೇದನ ಕೋರಿರುವ ಮಹಿಳೆ ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾಳೆ. ಗಂಡ ಬೆಂಗಳೂರಿನವರು. ಈಕೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಇರುವ ವಿಚ್ಛೇದನ ಅರ್ಜಿಯನ್ನು ಮೈಸೂರಿಗೆ ವರ್ಗಾಯಿಸುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲು ತುಳಿದಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT