ಗೌರಿ ಹತ್ಯೆ; ನಾಲ್ವರು ವಶಕ್ಕೆ

7

ಗೌರಿ ಹತ್ಯೆ; ನಾಲ್ವರು ವಶಕ್ಕೆ

Published:
Updated:
ಗೌರಿ ಹತ್ಯೆ; ನಾಲ್ವರು ವಶಕ್ಕೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತ ಕೆ.ಟಿ. ನವೀನ್ ಅಲಿಯಾಸ್ ಹೊಟ್ಟೆ ಮಂಜ ಸೇರಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಮಂಡ್ಯ ಜಿಲ್ಲೆ ಕದಲೂರು ಗ್ರಾಮದ ನವೀನ್‌, ಫೆ.18ರ ಸಂಜೆ 6 ಗಂಟೆ ಸುಮಾರಿಗೆ ಪಿಸ್ತೂಲ್‌ನೊಂದಿಗೆ ಮೆಜೆಸ್ಟಿಕ್‌ಗೆ ಬಂದಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ದಾಳಿ ನಡೆಸಿದ್ದ ಸಿಸಿಬಿ ಇನ್‌ಸ್ಪೆಕ್ಟರ್ ಬಿ.ರಾಜು ನೇತೃತ್ವದ ತಂಡ, ಆತನನ್ನು ವಶಕ್ಕೆ ಪಡೆದು ನಾಡಪಿಸ್ತೂಲ್ ಹಾಗೂ ‘ಪಾಯಿಂಟ್‌ 32’ ರಿವಾಲ್ವರ್‌ನ ಐದು ಜೀವಂತ ಗುಂಡುಗಳನ್ನು ಜಪ್ತಿ ಮಾಡಿತ್ತು. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನವೀನ್ ಬಳಿ ಪಿಸ್ತೂಲ್ ಸಿಕ್ಕಿದ್ದರಿಂದ ಹಾಗೂ ಆಗ ಸಂಘಟನೆಯೊಂದರ ಕಾರ್ಯಕರ್ತನಾಗಿದ್ದರಿಂದ ಅನುಮಾನಗೊಂಡ ಎಸ್‌ಐಟಿ ಅಧಿಕಾರಿಗಳು, ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಆತ ನೀಡಿದ ಮಾಹಿತಿ ಆಧರಿಸಿ ಗುರುವಾರ ರಾತ್ರಿ ಮಂಗಳೂರಿನ ಮೂವರು ಯುವಕರನ್ನು ನಗರಕ್ಕೆ ಕರೆತಂದಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಎಸ್‌ಐಟಿ ಮುಖ್ಯಸ್ಥ ಎಂ.ಎನ್.ಅನುಚೇತ್, ‘ನವೀನ್‌ನನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಿ, ನ್ಯಾಯಾಲಯದ ಅನುಮತಿ ಮೇರೆಗೆ 9 ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದೇವೆ. ಆತ ಯಾವ ಉದ್ದೇಶಕ್ಕಾಗಿ ನಗರಕ್ಕೆ ಬಂದಿದ್ದ ಹಾಗೂ ಶಸ್ತ್ರಾಸ್ತ್ರ ಕೊಟ್ಟವರು ಯಾರು ಎಂಬ ನಿಟ್ಟಿನಲ್ಲಿ ವಿಚಾರಣೆ ನಡೆಸುತ್ತಿದ್ದೇವೆ. ಈವರೆಗೆ ‘ಪಾಯಿಂಟ್‌ 32’ನ 15 ಜೀವಂತ ಗುಂಡುಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಹೇಳಿದರು.

ಹಂತಕರಿಗೆ ನೆರವಾಗಿದ್ದಾನೆ: ಗೌರಿ ಹಂತಕರ ಬಗ್ಗೆ ನವೀನ್‌ಗೆ ಪೂರ್ತಿ ಮಾಹಿತಿ ಇದೆ. ಈತ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿಲ್ಲ. ಆದರೆ, ಅವರು ನಗರಕ್ಕೆ ಬರಲು ಹಾಗೂ ಕೃತ್ಯ ಎಸಗಿ ಪರಾರಿಯಾಗಲು ಸಹಾಯ ಮಾಡಿದ್ದಾನೆ. ಹತ್ಯೆಗೈದ ಬಳಿಕ ಹಂತಕರು ಒಮ್ಮೆಯೂ ಈತನನ್ನು ಸಂಪರ್ಕಿಸಿಲ್ಲ. ಹೀಗಾಗಿ, ಅವರನ್ನು ಪತ್ತೆ ಮಾಡುವುದು ಎಸ್‌ಐಟಿಗೆ ಕಷ್ಟವಾಗಿದೆ ಎಂದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry