ಬುಧವಾರ, ಡಿಸೆಂಬರ್ 11, 2019
23 °C
ಪಾಲಿಕೆ ಕಚೇರಿಯಲ್ಲಿ ದಾಂದಲೆ l ಎಫ್‌ಐಆರ್ ದಾಖಲಾದ ಬಳಿಕ ನಾಪತ್ತೆಯಾಗಿದ್ದ ಆರೋಪಿ

ಗೆಳತಿ ಮನೆಯಲ್ಲಿ ಸಿಕ್ಕಿಬಿದ್ದ ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೆಳತಿ ಮನೆಯಲ್ಲಿ ಸಿಕ್ಕಿಬಿದ್ದ ನಾರಾಯಣಸ್ವಾಮಿ

ಬೆಂಗಳೂರು: ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿ ದಾಂದಲೆ ಮಾಡಿ ಪರಾರಿಯಾಗಿದ್ದ ಕಾಂಗ್ರೆಸ್‌ನ ಕೆ.ಆರ್.ಪುರ ಬ್ಲಾಕ್ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ (52), ಶುಕ್ರವಾರ ನಸುಕಿನ ವೇಳೆ ಗೆಳತಿಯ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಕೆ.ಆರ್.ಪುರ ಶಾಸಕ ಬೈರತಿ ಬಸವರಾಜು ಅವರ ಆಪ್ತರಾಗಿರುವ ನಾರಾಯಣಸ್ವಾಮಿ, ವಿವಾದಿತ ಜಮೀನಿಗೆ ಖಾತೆ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಫೆ.16ರ ಬೆಳಿಗ್ಗೆ ಪಾಲಿಕೆ ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದರು. ಅಲ್ಲದೆ, ಕಡತಗಳ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚುವುದಕ್ಕೂ ಮುಂದಾಗಿ

ದ್ದರು. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಸಂಬಂಧ ಪಾಲಿಕೆಯ ಪ್ರಭಾರ ಕಂದಾಯ ಅಧಿಕಾರಿ ಸತೀಶ್ ಕುಮಾರ್ ಫೆ.20ರಂದು ರಾಮಮೂರ್ತಿನಗರ ಠಾಣೆಗೆ ದೂರು ಕೊಟ್ಟಿದ್ದರು. ಅಲ್ಲಿಯವರೆಗೂ ಮನೆಯಲ್ಲೇ ಇದ್ದ ಆರೋಪಿ, ತಮ್ಮ ವಿರುದ್ಧ ಎಫ್ಐಆರ್ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆಯೇ ಮೊಬೈಲ್ ಸ್ವಿಚ್ಡ್‌ಆಫ್ ಮಾಡಿಕೊಂಡು ಕಾರಿನಲ್ಲಿ ಮೈಸೂರಿಗೆ ತೆರಳಿದ್ದರು.

ಬಸ್‌ನಲ್ಲಿ ಸುತ್ತಾಟ: ಮೈಸೂರು ತಲುಪಿದ ಬಳಿಕ, ಅವರ ಚಾಲಕ ನಾಗರಾಜ್ ಕಾರು ತೆಗೆದುಕೊಂಡು ನಗರಕ್ಕೆ ಮರಳಿದ್ದ. ಅಲ್ಲಿಂದ ಬಸ್ ಪ್ರಯಾಣ ಆರಂಭಿಸಿ‌ದ್ದ ನಾರಾಯಣಸ್ವಾಮಿ, ಚಿಕ್ಕಮಗಳೂರು, ಮಂಗಳೂರು, ಕುಕ್ಕೆಸುಬ್ರಹ್ಮಣ್ಯದಲ್ಲಿ  ಸುತ್ತಾಡಿ ಕೊನೆಗೆ ಕಲಬುರ್ಗಿಗೆ ತೆರಳಿದ್ದರು. ಗುರುವಾರ ರಾತ್ರಿ 11 ಗಂಟೆಗೆ ನಗರಕ್ಕೆ ಹಿಂದಿರುಗಿ ಕಲ್ಕೆರೆ ಸಮೀಪದ ಬಂಜಾರಲೇಔಟ್‌ನಲ್ಲಿರುವ ಗೆಳತಿ ಮನೆಯಲ್ಲಿ ಆಶ್ರಯ ಪಡೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‘ರಾತ್ರಿ 1 ಗಂಟೆ ಸುಮಾರಿಗೆ ಪತ್ನಿಗೆ ಕರೆ ಮಾಡಿದ್ದ ಅವರು, ‘ನಾನು ಬೆಂಗಳೂರಿನಲ್ಲೇ ಸುರಕ್ಷಿತವಾಗಿದ್ದೇನೆ’ ಎಂದಷ್ಟೇ ಹೇಳಿದ್ದರು. ಆದರೆ, ನಿರ್ದಿಷ್ಟವಾಗಿ ಯಾವ ಪ್ರದೇಶ ಎಂಬುದನ್ನು ತಿಳಿಸಿರಲಿಲ್ಲ.‌ ಇದರಿಂದ ಅನುಮಾನಗೊಂಡ ಪತ್ನಿ, ‘ನೀವು ಎಲ್ಲಿದ್ದೀರಾ ಎಂಬುದು ಗೊತ್ತಾಗಿದೆ. ಈಗಲೇ ಬಂಜಾರಲೇಔಟ್‌ಗೆ ಬರುತ್ತೇನೆ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದರು. ಆರೋಪಿಯ ಮೊಬೈಲ್ ಕರೆಗಳ (ಸಿಡಿಆರ್) ಮೇಲೆ ನಿಗಾ ಇಟ್ಟಿದ್ದ ನಮಗೆ, ಅವರು ಪತ್ನಿಯನ್ನು ಸಂಪರ್ಕಿಸಿರುವ ವಿಚಾರ ಗೊತ್ತಾಯಿತು. ಕೂಡಲೇ ನಾವು ಪತ್ನಿಗೆ ಕರೆ ಮಾಡಿ ವಿಚಾರಣೆ ನಡೆಸಿದೆವು. ಆಗ, ಪತಿ ಗೆಳತಿಯ ಮನೆಯಲ್ಲಿ ಇರಬಹುದು ಎಂದು ಸಂಶಯ ವ್ಯಕ್ತಪ‍ಡಿಸಿದರು.’

‘ತಕ್ಷಣ ಮಫ್ತಿಯಲ್ಲಿ ಆ ಮನೆಗೆ ತೆರಳಿದ ಇನ್‌ಸ್ಪೆಕ್ಟರ್ ಚಂದ್ರಾಧರ್ ನೇತೃತ್ವದ ತಂಡ, ಅಲ್ಲಿಂದಲೂ ಪರಾರಿಯಾಗುವ ಯತ್ನದಲ್ಲಿದ್ದ ನಾರಾಯಣಸ್ವಾಮಿ ಅವರನ್ನು ವಶಕ್ಕೆ ಪಡೆದುಕೊಂಡಿತು’ ಎಂದು ತಿಳಿಸಿದರು.

ಪೆಟ್ರೋಲ್ ಅಲ್ಲ ಪಾನೀಯ: ‘ನಾನು ಬಿಬಿಎಂಪಿ ಕಚೇರಿಯಲ್ಲಿ ಎರಚಿದ್ದು ಪೆಟ್ರೋಲ್ ಅಲ್ಲ. ಅದು ತಂಪು ಪಾನೀಯ. ಶಾಸಕರಿಂದ ಕರೆ ಮಾಡಿಸಿದರೂ ಬಿಬಿಎಂಪಿ ಅಧಿಕಾರಿಗಳು ನನ್ನ ಕೆಲಸ ಮಾಡಿಕೊಟ್ಟಿರಲಿಲ್ಲ. ಹೀಗಾಗಿ, ಹೆದರಿಸಿ ಕೆಲಸ ಮಾಡಿಸಿಕೊಳ್ಳಲು ನಿರ್ಧರಿಸಿದ್ದೆ. ಅಂಗಡಿಯೊಂದರಲ್ಲಿ ತಂಪು ಪಾನೀಯ ಖರೀದಿಸಿ, ಅದನ್ನು ನೀರಿನ ಬಾಟಲಿಯಲ್ಲಿ ಹಾಕಿಕೊಂಡು ಕಚೇರಿಗೆ ತೆರಳಿದ್ದೆ’ ಎಂದು ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾಗಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಫ್‌ಐಆರ್ ದಾಖಲಾದ ಬಳಿಕ ತಲೆಮರೆಸಿಕೊಳ್ಳುವ ಯೋಚನೆ ನನಗೆ ಇರಲಿಲ್ಲ. ಬಿಜೆಪಿ ಕಾರ್ಯಕರ್ತನಾಗಿರುವ ನನ್ನ ತಮ್ಮ ಕೃಷ್ಣಪ್ಪನ ಮಾತು ಕೇಳಿ ಹಾಗೆ ಮಾಡಿಬಿಟ್ಟೆ. ‘ನೀನು ಎಲ್ಲಿಗಾದರೂ ಹೋಗಿಬಿಡು. ಇಲ್ಲವಾದರೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ. ವಕೀಲರ ಮೂಲಕ ಜಾಮೀನು ಅರ್ಜಿ ಸಲ್ಲಿಸೋಣ. ಜಾಮೀನು ಮಂಜೂರಾದ ಬಳಿಕ ಮನೆಗೆ ವಾಪಸಾಗು’ ಎಂದು ಹೇಳಿದ್ದ. ಆತನ ಮಾತು ಕೇಳದೆ ನಾನು ಅಂದೇ ಶರಣಾಗಬೇಕಿತ್ತು’ ಎಂದಿದ್ದಾರೆ.

ಆರೋಪಿಯನ್ನು ಶುಕ್ರವಾರ ಮಧ್ಯಾಹ್ನ ಬಿಬಿಎಂಪಿ ಕಚೇರಿ ಬಳಿ ಕರೆದುಕೊಂಡು ಹೋಗಿದ್ದ ‍ಪೊಲೀಸರು, ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದರು. ಅಲ್ಲದೆ, ನಾರಾಯಣಸ್ವಾಮಿ ಗಲಾಟೆ ಬಳಿಕ ಅಲ್ಲೇ ಎಸೆದು ಹೋಗಿದ್ದ ಬಾಟಲಿಯನ್ನೂ ಜಪ್ತಿ ಮಾಡಿದರು.

ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಹತ್ತನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

***

ಎಫ್‌ಎಸ್‌ಎಲ್‌ಗೆ ಬಾಟಲಿ

‘ನಾರಾಯಣಸ್ವಾಮಿ ಕಡತಗಳ ಮೇಲೆ ಎರಚಿದ್ದು ಪೆಟ್ರೋಲ್‌ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಪ್ರಕರಣ ದಾಖಲಾದ ದಿನ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ತಜ್ಞರು ಸ್ಥಳ ಪರಿಶೀಲಿಸಿದ್ದಾರೆ. ಈಗ ಜಪ್ತಿ ಮಾಡಿರುವ ಬಾಟಲಿಯನ್ನೂ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದೇವೆ. ತಜ್ಞರ ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

 

ಪ್ರತಿಕ್ರಿಯಿಸಿ (+)