ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು

Last Updated 24 ಫೆಬ್ರುವರಿ 2018, 5:47 IST
ಅಕ್ಷರ ಗಾತ್ರ

ಮಸ್ಕಿ: ಮಸ್ಕಿ ಪುರಸಭೆಯಲ್ಲಿ ಶುಕ್ರವಾರ ನಡೆದ 2018-19ನೇ ಸಾಲಿನ ಬಜೆಟ್ ಸಭೆಯಲ್ಲಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಉಪ್ಪಾರ ₹2.55 ಲಕ್ಷ ಗಾತ್ರದ ಉಳಿತಾಯ ಬಜೆಟ್‌ ಮಂಡಿಸಿದರು.

ಪಟ್ಟಣದ ಪುರಸಭೆಯಲ್ಲಿ ಮೌನೇಶ ಮುರಾರಿ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಗ್ರಾಮದೇವತೆ ಭ್ರಮರಾಂಬದೇವಿ ಸ್ಮರಣೆ ಮಾಡಿ ಬಜೇಟ್ ಓದಲು ಆರಂಭಿಸಿದ ರೇಣುಕಾ ಉಪ್ಪಾರ, ಪಟ್ಟಣದ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿದರು.

2015-16ನೇ ಸಾಲಿನ 14ನೇ ಹಣಕಾಸು ಯೋಜನೆಯಲ್ಲಿ ₹55.83 ಲಕ್ಷ, 2018-19ನೇ ಸಾಲಿನಲ್ಲಿ ₹1.68 ಲಕ್ಷ ಹಾಗೂ ಎಸ್ಎಫ್‌ಸಿ ಅನುದಾನ ₹1.72 ಲಕ್ಷ ಸೇರಿ ಒಟ್ಟು ₹ 3.87 ಕೋಟಿ ಅನುದಾನ ಬಂದಿದೆ ಎಂದು ವಿವರಿಸಿದರು.

ಇದರಲ್ಲಿ ಆಡಳಿತ ನಿರ್ವಹಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಳಕೆ ಮಾಡಿಕೊಳ್ಳಬಹುದಾಗಿದೆ. ಕುಡಿಯುವ ನೀರು, ಒಳ ಚರಂಡಿ ಹಾಗೂ ಬೀದಿ ದೀಪಗಳ ಅಳವಡಿಕೆಗೆ ಪ್ರತಿ ವಾರ್ಡ್‌ಗೆ ಹಣ ಹಂಚಿಕೆ ಮಾಡಲಾಗುವುದು ಎಂದರು. ಒಟ್ಟು ₹2.12 ಕೋಟಿ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಸದಸ್ಯರು ಸೂಚಿಸಿದ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ಲಾಸ್ಟಿಕ್ ಬಳಕೆ ನಿಷೇಧ, ಸ್ಮಶಾನ ಅಭಿವೃದ್ಧಿ, ಸಾಮೂಹಿಕ ಹಾಗೂ ಸಾರ್ವಜನಿಕ ಶೌಚಾಲಯ, ಘನತ್ಯಾಜ್ಯ ನಿರ್ವಹಣೆ, ಸಮುದಾಯ ಆಸ್ತಿಗಳ ನಿರ್ವಹಣೆ, ರಸ್ತೆ ಮತ್ತು ಪಾದಚಾರಿ ಮಾರ್ಗ ನಿರ್ಮಾಣ, ಕಚೇರಿ ಹಾಗೂ ಚಿತಾಗಾರ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

2018-19ನೇ ಸಾಲಿನಲ್ಲಿ ವಿವಿಧ ಮೂಲಗಳಿಂದ ₹17.33 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ತಿಳಿಸಿದ ಅವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ನಿಯಮದ ಪ್ರಕಾರ ಅನುದಾನ ಮೀಸಲಿಡಲಾಗುವುದು ಎಂದು ಹೇಳಿದರು. ಬಜೆಟ್‌ನಲ್ಲಿ ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಎಲ್ಲಾ ಸದಸ್ಯರು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಶಾಸಕರ ಹೆಸರು ಬಿಟ್ಟಿದ್ದಕ್ಕೆ ಆಕ್ರೋಶ: ನಗರೋತ್ಥಾನ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭಿವೃದ್ಧಿ ಯೋಜನೆಯ ಅಡಿ ಪುರಸಭೆಗೆ ₹ 15 ಕೋಟಿ ಅನುದಾನ ತರಲು ಪ್ರಯತ್ನ ನಡೆಸಿದ ಶಾಸಕ ಪ್ರತಾಪಗೌಡ ಪಾಟೀಲ ಅವರ ಹೆಸರನ್ನು ಸಭೆಯಲ್ಲಿ ಪ್ರಸ್ತಾಪ ಮಾಡದೇ ಇರುವುದಕ್ಕೆ ಕಾಂಗ್ರೆಸ್ ಸದಸ್ಯರಾದ ಎಂ. ಅಮರೇಶ, ಸುರೇಶ ಹರಸೂರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಮಾತನಾಡಿ, ಶಾಸಕರ ಪ್ರಯತ್ನದಿಂದ ಹೆಚ್ಚಿನ ಅನುದಾನ ಬಂದಿದೆ. ಶಾಸಕರ ಹೆಸರು ಬಿಟ್ಟಿದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದು ಸದಸ್ಯರನ್ನು ಸಮಾಧಾನ ಪಡಿಸಿದರು.

ವಿರೋಧ ಪಕ್ಷದ ನಾಯಕ ಸುರೇಶ ಹರಸೂರು, ಎಂ. ಅಮರೇಶ, ಯಲ್ಲೋಜಿರಾವ್, ಪುಷ್ಪಾ ಸೊಪ್ಪಿಮಠ, ವಿಜಯಲಕ್ಷ್ಮೀ ಪಾಟೀಲ, ಪುರಸಭೆ ಉಪಾಧ್ಯಕ್ಷ ರವಿಕುಮಾರ ಪಾಟೀಲ, ಆಡಳಿತ ಪಕ್ಷದ ಸದಸ್ಯರಾದ ಕಿರಣ್ ಸಾನಬಾಳ, ಪೊನಂರಾಣಿ, ಆಂಜನೇಯ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆ ನೀಡಿದರು.

* * 

2018-19ನೇ ಸಾಲಿನ ಬಜೆಟ್ ಜನಪರವಾಗಿದೆ. ಎಲ್ಲಾ ವರ್ಗಕ್ಕೂ ಅನುದಾನ ಮೀಸಲಿಡುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡಲಾಗಿದೆ.
-ಮೌನೇಶ ಮುರಾರಿ,
ಅಧ್ಯಕ್ಷ, ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT