ಏಕಪಕ್ಷೀಯ ನಿರ್ಧಾರ: ಜೆಡಿಎಸ್‌ ಟೀಕೆ

7

ಏಕಪಕ್ಷೀಯ ನಿರ್ಧಾರ: ಜೆಡಿಎಸ್‌ ಟೀಕೆ

Published:
Updated:

ಕನಕಪುರ: ಹಾರೋಹಳ್ಳಿ ಗ್ರಾಮದಲ್ಲಿ ಚಾಮುಂಡಿ ಅಮ್ಮನವರ ವಿಗ್ರಹ ಪುನರ್‌ ಪ್ರತಿಷ್ಠಾಪನೆಯಲ್ಲಿ ತಾಲ್ಲೂಕು ಆಡಳಿತ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ. ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಹಾರೋಹಳ್ಳಿ ನಾಗರಿಕರು ಹಾಗೂ ಜೆ.ಡಿ.ಎಸ್‌.ನ ಮುಖಂಡರು ವಿರೋಧ ವ್ಯಕ್ತಪಡಿಸಿದರು.

ವಿಗ್ರಹ ಪುನರ್‌ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಆರ್‌.ಯೋಗಾನಂದ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಸಿದ ಸಭೆಯಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ನಡೆಯಿತು.

ಸುಮಾರು 400 ವರ್ಷಗಳ ಇತಿಹಾಸವಿರುವ ಹಾರೋಹಳ್ಳಿ ಚಾಮುಂಡೇಶ್ವರಿ ಅಮ್ಮನವರ ದೇವಾಲಯವನ್ನು ರಸ್ತೆ ವಿಸ್ತರಣೆ ಸಂದರ್ಭದಲ್ಲಿ ತೆರವುಗೊಳಿಸಲಾಗಿತ್ತು. ಮಾ.1ರಿಂದ ಚಾಮುಂಡೇಶ್ವರಿ ಅಮ್ಮನವರ ಜಾತ್ರೆ ಇರುವುದರಿಂದ ತಾಲ್ಲೂಕು ಆಡಳಿತ  ಅದಕ್ಕೂ ಮುನ್ನವೇ ದೇವಿಯ ವಿಗ್ರಹ ಪ್ರತಿಷ್ಠಾಪನೆ ಮಾಡಿ ಗರ್ಭಗುಡಿ ಉದ್ಘಾಟಿಸಲು ಫೆ.24ರಿಂದ 26ರ ವರೆಗೆ ದಿನಾಂಕ ನಿಗದಿ ಮಾಡಿ ಸಭೆ ಕರೆದಿತ್ತು.

ದೇವಾಲಯ ತೆರವುಗೊಳಿಸುವಾಗ ಮತ್ತು ಬೇರೆ ಸ್ಥಳದಲ್ಲಿ ಪ್ರತಿಷ್ಠಾಪನೆಗೆ ನಿವೇಶನ ಗುರುತಿಸುವಾಗ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡ ತಾಲ್ಲೂಕು ಆಡಳಿತ ದೇವಾಲಯ ಉದ್ಘಾಟನೆಯ ಸಂದರ್ಭದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ತರಾತುರಿಯಲ್ಲಿ ಉದ್ಘಾಟನೆ ಮಾಡಲು ಮುಂದಾಗಿದೆ ಎಂದು ಕೆಲವರು ಆರೋಪಿಸಿದರು.

ಜೆ.ಡಿ.ಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸ್ಥಳೀಯ ಶಾಸಕರಾಗಿದ್ದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಏಕಪಕ್ಷೀಯವಾಗಿ ನಿರ್ಣಯ ಮಾಡಿ ಕಾಟಚಾರಕ್ಕೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಲಾಗಿದೆ. ಇದೊಂದು ಕಾಂಗ್ರೆಸ್‌ ನಿಯೋಜಿತ ಕಾರ್ಯಕ್ರಮ ಎಂದು ಜೆ.ಡಿ.ಎಸ್‌ ಮುಖಂಡ ಎಂ.ಮಲ್ಲಪ್ಪ, ಸೋಮಶೇಖರ್‌, ಮಾದೇವ್‌ ಸಭೆಯಲ್ಲಿ ದೂರಿದರು.‌

ತಹಶೀಲ್ದಾರ್‌ ಆರ್‌.ಯೋಗಾನಂದ ಮಧ್ಯಪ್ರವೇಶಿಸಿ ಧಾರ್ಮಿಕ ಸಂಪ್ರದಾಯದಂತೆ ದೇವಾಲಯದ ಗರ್ಭಗುಡಿ ನಿರ್ಮಾಣ ಮಾಡಿ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ. ಆಗಮಿಕರು ಗೊತ್ತುಪಡಿಸಿದ ದಿನಾಂಕದಂದು ಪ್ರತಿಷ್ಠಾಪನೆ ನಡೆಯಲಿದೆ. ಸಾರ್ವಜನಿಕರು ಪಾಲ್ಗೊಂಡು ಸಹಕರಿಸಬೇಕೆಂದು ಮನವಿ ಮಾಡಿದರು.

ಹಾರೋಹಳ್ಳಿ ಸಬ್‌ ಇನ್‌ಸ್ಪೆಕ್ಟರ್‌ ಸಿ.ಕೃಷ್ಣಕುಮಾರ್‌ ಗದ್ದಲ ನಿಯಂತ್ರಿಸಿ ಸಭೆಗೆ ಅನುವು ಮಾಡಿಕೊಟ್ಟರು. ಜೆ.ಡಿ.ಎಸ್‌. ಮತ್ತು ಕಾಂಗ್ರೆಸ್‌ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು, ಪಕ್ಷದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry