ಶುಕ್ರವಾರ, ಡಿಸೆಂಬರ್ 6, 2019
26 °C

ಆಧಾರ್ ತಿದ್ದುಪಡಿಗೆ ಬೇಕು 10 ತಿಂಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಧಾರ್ ತಿದ್ದುಪಡಿಗೆ ಬೇಕು 10 ತಿಂಗಳು!

ರಾಮನಗರ: ನೀವೇನಾದರೂ ಹೊಸತಾಗಿ ಆಧಾರ್‌ಗೆ ನೋಂದಾಯಿಸಿಕೊಳ್ಳಬೇಕೆ? ಇಲ್ಲವೇ ತಿದ್ದುಪಡಿ ಮಾಡಿಕೊಳ್ಳಬೇಕೆ? ಹಾಗಿದ್ದಲ್ಲಿ ಈಗ ಅರ್ಜಿ ಸಲ್ಲಿಸಿ, ಮುಂದಿನ ಡಿಸೆಂಬರ್‌ಗೆ ನೋಂದಣಿ ಮಾಡಿಕೊಳ್ಳಿ!

ಹೀಗಂತ ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ಆಧಾರ್‌ ನೋಂದಣಿ ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಇಲ್ಲಿನ ಸಿಬ್ಬಂದಿ ದಿನಾಂಕ ಕೊಡುತ್ತಿದ್ದಾರೆ. ಸಣ್ಣದೊಂದು ನೋಂದಣಿ, ತಿದ್ದುಪಡಿಗೆ ಜನರು ಬರೋಬ್ಬರಿ ಹತ್ತು ತಿಂಗಳು ಕಾಯಬೇಕಿದೆ.

ಆಧಾರ್‌ ನೋಂದಣಿ ಮತ್ತು ತಿದ್ದುಪಡಿಯಲ್ಲಿ ಆಗುತ್ತಿರುವ ವಿಳಂಬ ಪ್ರಕ್ರಿಯೆಯನ್ನು ಹೇಳಲು ಇದಕ್ಕಿಂತ ಉದಾಹರಣೆ ಬೇಕಿಲ್ಲ. ರಾಮನಗರಕ್ಕೆ ಸದ್ಯ ಇದೊಂದೇ ಆಧಾರ್‌ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ನಿತ್ಯ ನೂರಾರು ಮಂದಿ ಬಂದು ನಿರಾಸೆಯಿಂದ ವಾಪಸ್ ಆಗುತ್ತಿದ್ದಾರೆ.

ಸದ್ಯ ಶಿಕ್ಷಣ ಹಕ್ಕು ಕಾಯ್ದೆಯ ಅಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಆರಂಭಗೊಂಡಿದೆ. ಅರ್ಜಿ ಸಲ್ಲಿಕೆಗೆ ಪೋಷಕರ ಜೊತೆಗೆ ಮಗುವಿನ ಆಧಾರ್ ಸಂಖ್ಯೆ ಕೂಡ ಬೇಕಿದೆ. ಅದಕ್ಕೆಂದು ಬಡ ಜನರು ಈ ಕೇಂದ್ರಕ್ಕೆ ಬರುತ್ತಿದ್ದಾರೆ. ಆದರೆ ಇಲ್ಲಿನ ವಿಳಂಬ ಪ್ರಕ್ರಿಯೆ ಅವರನ್ನು ನಿದ್ದೆಗೆಡಿಸಿದೆ.

ಕಡ್ಡಾಯ ಶಿಕ್ಷಣ ಕಾಯ್ದೆ ಯಡಿಯಲ್ಲಿ (ಆರ್.ಟಿ.ಇ) ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣಕ್ಕಾಗಿ ಸರ್ಕಾರ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮಗುವಿನ ಆಧಾರ್ ಕಾರ್ಡು ಅಗತ್ಯವಿದೆ. ಆದರೆ ರಾಮನಗರದಲ್ಲಿ ಇರುವುದೊಂದು ಆಧಾರ್‌ ನೋಂದಣಿ ಕೇಂದ್ರದಲ್ಲಿ ಸರ್ವರ್ ಡೌನ್ ಎಂಬ ಕಾರಣ ಕೊಟ್ಟು ಜನರನ್ನು ಸಾಗಹಾಕಲಾಗುತ್ತಿದೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.

‘ಆರ್‌ಟಿ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಅದಕ್ಕೆ ಆಧಾರ್ ಕಡ್ಡಾಯ ಮಾಡಲಾಗಿದೆ. ಮಕ್ಕಳಿಗೆ ಆಧಾರ್‌ ಸಿಗದಿದ್ದರೆ ಅರ್ಜಿ ಹಾಕುವುದಾದರೂ ಹೇಗೆ’ ಎಂದು ಕೇಂದ್ರಕ್ಕೆ ಬಂದಿದ್ದ ಭ್ರಮರಾಂಭಿಕಾ ಎಂಬುವರು ಪ್ರಶ್ನಿಸಿದರು.

‘ಸರ್ಕಾರದ ಸವಲತ್ತು ಪಡೆಯಲು, ಬ್ಯಾಂಕ್ ಖಾತೆ ತೆಗೆಯಲು, ಸಿಮ್ ಕಾರ್ಡ್‍ ಪಡೆಯಲು... ಹೀಗೆ ಪ್ರತಿಯೊಂದಕ್ಕೂ ಆಧಾರ್‌ ಕಾರ್ಡು ಬೇಕು, ಆದರೆ ಹೊಸ ಕೇಂದ್ರಗಳ ವ್ಯವಸ್ಥೆ ಮಾಡಿಲ್ಲ’ ಎಂದು ಹನುಮಂತರಾಜು ಎಂಬುವರು ಹೇಳಿದರು.

‘ಬೆಳಿಗ್ಗೆ 8 ಗಂಟೆಗೆ ಬಂದಿದ್ದೇವೆ. ಮಧ್ಯಾಹ್ನ 2 ಗಂಟೆಯಾದರು ನೋಂದಣಿ ಸಾಧ್ಯವಾಗಿಲ್ಲ. ಇನ್ನೊಂದೆ ಜೆರಾಕ್ಸ್‌ ಅಂಗಡಿಗಳಲ್ಲಿ ಆಧಾರ್‌ ಕಾರ್ಡ್‌ನ ತಿದ್ದುಪಡಿ ಅರ್ಜಿಗಳನ್ನು ₹30ಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಸುಲಿಗೆಯನ್ನು ಕೇಳುವವರು ಇಲ್ಲದಾಗಿದೆ’ ಎಂದು ದೂರಿದರು.

ಸಿಬ್ಬಂದಿ ಹೇಳುವುದೇನು?: ‘ದಿನವೊಂದಕ್ಕೆ 300 ರಿಂದ 400 ಮಂದಿ ನೋಂದಣಿ, ತಿದ್ದುಪಡಿಗೆ ಬರುತ್ತಿದ್ದಾರೆ. ದಿನಕ್ಕೆ ಗರಿಷ್ಠ 40 ನೋಂದಣಿಗಳು ಮಾತ್ರ ಸಾಧ್ಯ. ಹೀಗಾಗಿ ವಿಧಿಯಿಲ್ಲದೆ ಆಧಾರ್‌ ನೋಂದಣಿಗೆ ಇಂತಹ ದಿನ ಬನ್ನಿ ಎಂದು ಟೋಕನ್ ಕೊಡುತ್ತಿದ್ದೇವೆ’ ಎಂದು ಕೇಂದ್ರದಲ್ಲಿನ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರು. ಆಗಾಗ್ಗೆ ಸರ್ವರ್ ಸಮಸ್ಯೆ ಇರುವುದರಿಂದ ಒಟ್ಟಾರೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದರು.

ಆಧಾರ್‌ ಅದಾಲತ್‌ಗೆ ಚಿಂತನೆ

ಆಧಾರ್ ಕೇಂದ್ರಗಳ ಕೊರತೆಯಿಂದಾಗಿ ಸಮಸ್ಯೆ ಉದ್ಭವಿಸಿದೆ. ನಾಡಕಚೇರಿಯಲ್ಲಿನ ಕೇಂದ್ರಗಳ ಆಪರೇಟರ್‌ಗಳಿಗೆ ಅನುಮತಿ ನೀಡುವಂತೆ ಹಾಗೂ ಹೆಚ್ಚುವರಿ ಕಿಟ್‌ ಪೂರೈಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ರಾಮನಗರ ತಹಶೀಲ್ದಾರ್‌ ಮಾರುತಿ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಚೆಗಷ್ಟೇ ಆಧಾರ್ ಅದಾಲತ್‌ ಅನ್ನು ಆಯೋಜಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಂದು ತಿಂಗಳ ಕಾಲ ಪೂರ್ಣ ಪ್ರಮಾಣದ ಅದಾಲತ್‌ ಹಮ್ಮಿಕೊಳ್ಳಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

* * 

ಶೀಘ್ರದಲ್ಲಿಯೇ ಒಂದು ತಿಂಗಳ ಕಾಲ ಆಧಾರ್ ಅದಾಲತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದರಿಂದ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆ

ಮಾರುತಿ ಪ್ರಸನ್ನ

ತಹಶೀಲ್ದಾರ್, ರಾಮನಗರ

ಪ್ರತಿಕ್ರಿಯಿಸಿ (+)