7

ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಲು ಸ್ಕೌಟ್ಸ್‌ ಪೂರಕ

Published:
Updated:

ಶಿಕಾರಿಪುರ: ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವ ಕಾರ್ಯವನ್ನು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌  ಸಂಸ್ಥೆ ಮಾಡುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಸಿದ್ದಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆ ಹಾಗೂ ಸ್ಕೌಟ್ಸ್‌ ಭವನ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ನಿರಂತರ ಚಟುವಟಿಕೆಯನ್ನು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ನಡೆಸಬೇಕು. ಸಂಸ್ಥೆ ನಡೆಸುವ ಚಟುವಟಿಕೆಗಳಿಗೆ ಶಿಕ್ಷಣ ಇಲಾಖೆ ಸಹಕಾರ ನೀಡಲಿದೆ ಎಂದರು.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಹೆಚ್ಚು ಗಮನ ನೀಡಬೇಕು. ಪರೀಕ್ಷೆ ಸಮಯ ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತಯಾರಿ ನಡೆಸಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ಕಾರ್ಯಾಧ್ಯಕ್ಷ ಬಿ.ಸಿ. ವೇಣುಗೋಪಾಲ್‌ ಮಾತನಾಡಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ಯಾವುದೇ ಜಾತಿ ಹಾಗೂ ವ್ಯಕ್ತಿಗೆ ಸೀಮಿತವಾಗಿಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಪ್ರತಿ ಶಾಲೆಯಲ್ಲಿ ಕನಿಷ್ಠ 10 ವಿದ್ಯಾರ್ಥಿಗಳನ್ನು ಒಳಗೊಂಡ ಸ್ಕೌಟ್ಸ್‌ ಘಟಕ ಸ್ಥಾಪಿಸಲು ಶಿಕ್ಷಕರು ಮುಂದಾಗಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸ್ಕೌಟ್ಸ್‌ ಜಿಲ್ಲಾ ಪ್ರಧಾನ ಆಯುಕ್ತ ಎಚ್‌.ಡಿ. ರಮೇಶ್‌ಶಾಸ್ತ್ರಿ ಸ್ಕೌಟ್‌ ಭವನ ಉದ್ಘಾಟಿಸಿದರು. ಸ್ಕೌಟ್ಸ್‌ ಪದಾಧಿಕಾರಿಗಳಾದ ಕೆ.ಪಿ. ಬಿಂದುಕುಮಾರ್, ಉಮೇಶ್‌ಶಾಸ್ತ್ರಿ, ಶಿವಶಂಕರ್‌, ಸಿ.ಎಂ. ಪರಮೇಶ್ವರಯ್ಯ, ರಾಮಚಂದ್ರಪ್ಪ, ತಿಪ್ಪೇಶ್‌, ಚಂದ್ರಪ್ಪ, ಸಾಗರ ರಂಗಪ್ಪ, ನಾಗರಾಜ್‌, ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ದಿನೇಶ್‌, ಕಸಾಪ ಮಾಜಿ ಅಧ್ಯಕ್ಷ ಸಿ. ಸುದರ್ಶನ್‌, ದಲಿತ ಮುಖಂಡ ಜೋಸೆಫ್‌ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry