ಸಾಲ ಕೊಡದಿದ್ದರೆ ಮೊಕದ್ದಮೆ

7

ಸಾಲ ಕೊಡದಿದ್ದರೆ ಮೊಕದ್ದಮೆ

Published:
Updated:

ತುಮಕೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ನಿಗಮ ಮತ್ತು ದೇವರಾಜ ಅರಸು ನಿಗಮ ಶಿಫಾರಸು ಮಾಡಿವೆ. ಸಹಾಯಧನ ಮಂಜೂರು ಮಾಡಿವೆ. ಆದರೆ, ಬ್ಯಾಂಕುಗಳು ಸಾಲ ಮಂಜೂರು ಮಾಡದೇ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ಬಿ.ಸುರೇಶ್‌ಗೌಡ ಹೇಳಿದರು.

ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಕೈದಾಳ ಗ್ರಾಮದ ಸಮುದಾಯ ಭವನದಲ್ಲಿ ನಡೆದ ವಾಲ್ಮೀಕಿ ನಿಗಮ ಮತ್ತು ಅಂಬೇಡ್ಕರ್ ನಿಗಮದಿಂದ ಸೌಲಭ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿನಾಕಾರಣ ವಿಳಂಬ ಮಾಡಿ ಕೇವಲ ಸಾಲ ಮಾತ್ರ ನೀಡಿ ಸಹಾಯ ಧನವನ್ನು ಠೇವಣಿ ಮಾಡಿಕೊಳ್ಳುವುದು ರಿಸರ್ವ್‌ ಬ್ಯಾಂಕ್‌  ನಿಯಮಾವಳಿ ಉಲ್ಲಂಘನೆ ಮಾಡಿದಂತಾಗುತ್ತದೆ. ಬ್ಯಾಂಕ್ ವ್ಯವಸ್ಥಾಪಕರು ಇದೇ ಧೋರಣೆ ಮುಂದುವರಿಸಿದರೆ ಅಂತಹವರ ವಿರುದ್ಧ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಹೇಳಿದರು.

ದಲಿತರು ಮುಖ್ಯವಾಹಿನಿಗೆ ಬರಲಿ: ಸೌಕರ್ಯ ಬಳಸಿಕೊಂಡು ದಲಿತರು ಮುಖ್ಯವಾಹಿನಿಗೆ ಬರಬೇಕು ಎಂದರು. ಹೈನುಗಾರಿಕೆ, ಮೇಕೆ, ಕುರಿ ಸಾಕಾಣಿಕೆಗೆ, ಚರ್ಮ ಕುಟೀರಕ್ಕೆ ನೇರ ಸಾಲ ಸೌಲಭ್ಯ ಯೋಜನೆಯಡಿ 638 ಮಂದಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಗ್ರಾಮಾಂತರ ಕ್ಷೇತ್ರದಲ್ಲಿ ಸೌಲಭ್ಯ ಕೇಳಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ ಜನರು ವಾಸಿಸುವ ಕಾಲೊನಿಗಳಿಗೂ ಅನೇಕ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸದಸ್ಯರಾದ ಶಿವಕುಮಾರ್, ನರಸಿಂಹಮೂರ್ತಿ, ಅನಿತಾ ಸಿದ್ಧೇಗೌಡ, ವೈ.ಎಚ್.ಹುಚ್ಚಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ, ಉಪಾಧ್ಯಕ್ಷ ಶಾಂತಕುಮಾರ್, ಹೆತ್ತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರಣ್ಣ, ಜಿಲ್ಲಾ ವ್ಯವಸ್ಥಾಪಕ ನಾಗೇಶ್, ಪ್ರೇಮಾ, ಭಕ್ತ ಕುಚೇಲ, ಶ್ರೀನಿವಾಸ್, ಹೃಷಿಕೇಶ್, ಕುಮುದಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry