ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಗ್ನೇಶ್ ಮೇವಾನಿ ಎನ್‌ಕೌಂಟರ್‌ಗೆ ಗುಜರಾತ್‌ ಪೊಲೀಸರಿಂದ ಸಂಚು?

Last Updated 24 ಫೆಬ್ರುವರಿ 2018, 6:20 IST
ಅಕ್ಷರ ಗಾತ್ರ

ಅಹಮದಾಬಾದ್: ದಲಿತ ನಾಯಕ, ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ಗುಜರಾತ್‌ ಪೊಲೀಸರು ಸಂಚು ರೂಪಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನ ವ್ಯಕ್ತವಾಗಿದೆ.

ಗುಜರಾತ್‌ನ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನೊಳಗೊಂಡ ವಾಟ್ಸ್‌ಆ್ಯಪ್ ಗ್ರೂಪೊಂದರಲ್ಲಿ ಹಂಚಿಕೊಳ್ಳಲಾಗಿರುವ ಎರಡು ವಿಡಿಯೊಗಳೇ ಈ ಅನುಮಾನಕ್ಕೆ ಕಾರಣವಾಗಿದೆ. ವಿಡಿಯೊಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

‘ಲೆಕ್ಕ ಚುಕ್ತಾ’ ವಿಡಿಯೊ ವೈರಲ್: ‘ಎಡಿಆರ್‌ ಪೊಲೀಸ್ ಆ್ಯಂಡ್ ಮೀಡಿಯಾ’ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅಹಮದಾಬಾದ್‌ ಗ್ರಾಮೀಣ ಡಿವೈಎಸ್‌ಪಿ ಆರ್‌.ಬಿ. ದೇವ್‌ಧಾ ಹಂಚಿಕೊಂಡಿದ್ದ ವಿಡಿಯೊ ಶುಕ್ರವಾರ ವೈರಲ್ ಆಗಿತ್ತು. ರಾಜಕಾರಣಿಯಂತೆ ಕಾಣಿಸುವ ವ್ಯಕ್ತಿಯೊಬ್ಬನನ್ನು ಪೊಲೀಸರು ಹೊಡೆಯುತ್ತಿರುವ ದೃಶ್ಯ ಮೊದಲ ವಿಡಿಯೊದಲ್ಲಿದೆ. ಇನ್ನೊಂದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎನ್‌ಕೌಂಟರ್ ವಿಷಯಕ್ಕೆ ಸಂಬಂಧಿಸಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ದೃಶ್ಯವಿದೆ. ಜತೆಗೆ, ‘ಪೊಲೀಸರ ತಂದೆಯಾಗಲು ಬಯಸುವವರನ್ನು, ಪೊಲೀಸರನ್ನು ‘ಲಖೋಟ’ ಎಂದು ಕರೆಯುವವರನ್ನು ಮತ್ತು ಪೊಲೀಸರ ವಿಡಿಯೊ ಮಾಡುವ ನಿಮ್ಮಂಥವರ ಜತೆ ಪೊಲೀಸರು ಹೀಗೆ ವರ್ತಿಸಲಿದ್ದಾರೆ. ಲೆಕ್ಕ ಚುಕ್ತಾ ಮಾಡಲಾಗುವುದು – ಗುಜರಾತ್ ಪೊಲೀಸ್’ ಎಂದು ಹೇಳಲಾಗಿದೆ.

ವಿಡಿಯೊ ಬಗ್ಗೆ ಸ್ಪ‍ಷ್ಟನೆ ನೀಡಿರುವ ಡಿವೈಎಸ್‌ಪಿ, ‘ಬೇರೊಂದು ಗ್ರೂಪಿನಲ್ಲಿ ಬಂದ ವಿಡಿಯೊವನ್ನು ಕಾಪಿ ಪೇಸ್ಟ್ ಮಾಡಿದ್ದೆನಷ್ಟೆ. ಅದನ್ನು ತಪ್ಪಾಗಿ ಬಿಂಬಿಸಲಾಗಿದೆ. ಅದು ವೈಯಕ್ತಿಕ ಸಂದೇಶವಲ್ಲ, ಬೆದರಿಕೆಯೂ ಅಲ್ಲ. ಈಗ ಅದೇ ವಿಡಿಯೊ ಇತರ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ’ ಎಂದು ಹೇಳಿದ್ದಾರೆ.

ಇದೊಂದು ಗಂಭೀರ ಪ್ರಕರಣ. ಇಬ್ಬರು ಪೊಲೀಸರು ನನ್ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ. ಈ ಕುರಿತು ಡಿಜಿಪಿ, ಗೃಹ ಸಚಿವ ಮತ್ತು ಗೃಹ ಇಲಾಖೆ ಕಾರ್ಯದರ್ಶಿಗೆ ದೂರು ನೀಡುವೆ ಎಂದು ಜಿಗ್ನೇಶ್ ಮೇವಾನಿ ದೂರವಾಣಿ ಮೂಲಕ ಮಾಹಿತಿ ನೀಡಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

‘ಜಿಗ್ನೇಶ್ ಮೇವಾನಿಯ ಎನ್‌ಕೌಂಟರ್? ನನ್ನನ್ನು ಹೇಗೆ ಕೊಲ್ಲಬಹುದೆಂಬ ಬಗ್ಗೆ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ ಸಂಭಾಷಣೆಯನ್ನು ಬಹಿರಂಗಪಡಿಸಿದ ಗುಜರಾತಿ ವೆಬ್‌ಪೋರ್ಟಲ್‌ನ ಲಿಂಕ್ ಇಲ್ಲಿದೆ. ನೀವಿದನ್ನು ನಂಬುತ್ತೀರಾ?’ ಎಂದು ಮೇವಾನಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT