ಶುಕ್ರವಾರ, ಡಿಸೆಂಬರ್ 6, 2019
25 °C

ವಿರೋಧದ ನಡುವೆಯೂ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರೋಧದ ನಡುವೆಯೂ ಲೋಕಾರ್ಪಣೆ

ನಾಗಮಂಗಲ: ತಾಲ್ಲೂಕಿನ ಕದಬಹಳ್ಳಿ ಯಲ್ಲಿ ಪೂರ್ಣಗೊಳ್ಳದ ಸಮುದಾಯ ಭವನವೊಂದನ್ನು ಶುಕ್ರವಾರ ಉದ್ಘಾಟಿಸಲು ಮುಂದಾದ ಶಾಸಕ ಎನ್.ಚಲುವರಾಯಸ್ವಾಮಿ ನಡೆಯನ್ನು ಗ್ರಾಮಸ್ಥರು ವಿರೋಧಿಸಿದರು. ಆದರೆ, ಪ್ರತಿಭಟನೆ, ವಿರೋಧದ ನಡುವೆಯೂ ಭವನ ಲೋಕಾರ್ಪಣೆ ಮಾಡಿದರು.

ವಿವರ: ಮುಜರಾಯಿ ಇಲಾಖೆಗೆ ಸೇರಿದ ಕಾವೇಟಿ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಭವನ ಕಾಮಗಾರಿ 30 ವರ್ಷಗಳಿಂದ ಕುಂಟುತ್ತಾ ಸಾಗಿದೆ. ಭವನಕ್ಕೆ ಮಾಜಿ ಸಂಸದರಾದ ಅಂಬರೀಷ್, ರಮ್ಯಾ ಮತ್ತು ಸಂಸದ ಸಿ.ಎಸ್. ಪುಟ್ಟರಾಜು ಮತ್ತು ಮಾಜಿ ಶಾಸಕ ಸುರೇಶ್‌ಗೌಡ, ಶಾಸಕ ಎನ್. ಚಲುವರಾಯಸ್ವಾಮಿ ಅವರು ತಮ್ಮ ಅನುದಾನದಲ್ಲಿ ಹಣ ನೀಡಿದ್ದರು. ಆದರೆ, ಸಮುದಾಯ ಭವನಕ್ಕೆ ಮೂಲಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರು ಮತ್ತು ಸ್ನಾನಗೃಹ ಹಾಗೂ ಅಡುಗೆ ಕೋಣೆ ನಿರ್ಮಾಣಗೊಂಡಿಲ್ಲ. ಇದನ್ನು ಈಗ ಶಾಸಕ ಎನ್.ಚಲುವರಾಯಸ್ವಾಮಿ ಅವರು ಚುನಾವಣಾ ಸಂದರ್ಭದಲ್ಲಿ ಉದ್ಘಾಟಿಸಲು ಹೊರಟಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಬುಧವಾರದಿಂದಲೇ ಶಾಸಕರು ತಮ್ಮ ಬೆಂಬಲಿಗರನ್ನು ಮುಂದೆ ಬಿಟ್ಟು ಸಮುದಾಯ ಭವನವನ್ನು ಉದ್ಘಾಟಿಸಲು ತಯಾರಿ ನಡೆಸಿದ್ದರು. ಇದು ಗ್ರಾಮಸ್ಥರಿಗೆ ಸಿಟ್ಟು ತರಿಸಿತ್ತು. ಸಮುದಾಯ ಭವನ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಇಲಾಖೆಯ ಉಸ್ತುವಾರಿಯಲ್ಲಿ ನಿರ್ಮಾಣಗೊಂಡಿದೆ. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನೂ ಮುದ್ರಿಸಲಾಗಿದೆ. ಆದರೆ, ಈ ಬಗ್ಗೆ ಸಂಸದ ಸಿ.ಎಸ್. ಪುಟ್ಟರಾಜು, ವಿಧಾನ ಪರಿಷತ್ ಸದ್ಯರಾದ ಕೆ.ಟಿ. ಶ್ರೀಕಂಠೇಗೌಡ ಮತ್ತು ಅಪ್ಪಾಜಿಗೌಡ ಅವರಿಗೆ ಮಾಹಿತಿ ಇರಲಿಲ್ಲ.

‘ಆಹ್ವಾನ ಪತ್ರಿಕೆಯ ಬಗ್ಗೆ ನಮಗೆ ಗೊತ್ತಿಲ್ಲ’ ಎನ್ನುತ್ತಾರೆ ಕೆ.ಟಿ. ಶ್ರೀಕಂಠೇಗೌಡ. ಗುರುವಾರ ಸಂಜೆ ಸ್ಥಳಕ್ಕೆ ಬಂದ ಮಾಜಿ ಶಾಸಕ ಸುರೇಶ್‌ ಗೌಡ, ಗ್ರಾಮಸ್ಥರೊಂದಿಗೆ ಚರ್ಚಿಸಿ ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳದಂತೆ ಮನವಿ ಮಾಡಿದರು. ‘ಶಾಸಕರಾದವರು ದಬ್ಬಾಳಿಕೆ ಮಾಡದೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಇದು ಹೀಗೆ ಮುಂದುವರಿದರೆ ಮುಂದಾಗುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ’ ಸುರೇಶ್‌ ಗೌಡ ಹೇಳಿದರು.

ಶುಕ್ರವಾರ ಬೆಳಿಗ್ಗೆ ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ಬಂದ ಶಾಸಕ ಎನ್.ಚಲುವರಾಯಸ್ವಾಮಿ ಅವರಿಗೆ ಭವನದ ಒಳಗೆ ಹೋಗದಂತೆ ಸ್ಥಳೀಯರು ಪ್ರತಿರೋಧ ತೋರಿದರು. ಭವನದ ಕಬ್ಬಿಣದ ಬಾಗಿಲುಗಳನ್ನು ಹಾಕಿ ಶಾಸಕರಿಗೆ ಧಿಕ್ಕಾರ ಕೂಗಿದರು.

ಶಾಸಕರ ಬೆಂಬಲಿಗರು ಅವರ ಪರವಾಗಿ ಜೈಕಾರ ಹಾಕುತ್ತಾ ತಳ್ಳಾಟ– ನೂಕಾಟದ ನಡುವೆ ಭವನದ ಒಳಗೆ ಚಲುವರಾಯಸ್ವಾಮಿಯನ್ನು ಹೊತ್ತೊಯ್ದರು. ನಂತರ ಹೊರಗಡೆ ಹಾಕಿದ್ದ ವೇದಿಕೆಯ ಮುಂಭಾಗದಲ್ಲೂ ಪರ– ವಿರೋಧ ಘೋಷಣೆಗಳು ಮೊಳಗಿದವು. ಆಗ ಮಧ್ಯೆ ಪ್ರವೇಶಿಸಿದ ಪೊಲೀಸರು ಶಾಸಕರ ವಿರೋಧಿ ಬಣವನ್ನು ದೇವಾಲಯದ ಆವರಣದಿಂದ ಹೊರಹಾಕಿದರು.

‘ಇದಕ್ಕೂ ಮುಜರಾಯಿ ಇಲಾಖೆಗೂ ಸಂಬಂಧವಿಲ್ಲ, ಇದು ವಿರೋಧಿಗಳು ಕುಚೇಷ್ಟೆಗೆ ಮಾಡಿದ ಕೆಲಸ. ಅಭಿವೃದ್ಧಿಯನ್ನು ಸಹಿಸದ ಕೆಲವರು ಇಂಥದ್ದನ್ನು ಮಾಡುತ್ತಿರುತ್ತಾರೆ. ಇಲ್ಲಿ ಪ್ರತಿಭಟಿಸುತ್ತಿರುವವರು ಒಂದು ಬಿಂದಿಗೆ ನೀರನ್ನು ಅಥವಾ ಇಟ್ಟಿಗೆಯನ್ನು, ಒಂದು ಲೋಡ್ ಕಲ್ಲನ್ನು ತಂದು ಹಾಕಿದ್ದರೂ ನಾನು ಸಮುದಾಯ ಭವನದಲ್ಲಿ ಅವರ ಹೆಸರನ್ನು ಕೆತ್ತಿಸುತ್ತಿದ್ದೆ’ ಎಂದು ಚಲುವರಾಯಸ್ವಾಮಿ ಹೇಳಿದರು.

ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದಾಸೇಗೌಡ, ಉಪಾಧ್ಯಕ್ಷೆ ಜಯಲಕ್ಷಮ್ಮ, ಸದಸ್ಯ ನವೀನ್‌ಕುಮಾರ್, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಿ. ರಾಜೇಗೌಡ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಂ. ರಾಮಸ್ವಾಮಿಗೌಡ, ಎನ್. ಟಿ. ಕೃಷ್ಣಮೂರ್ತಿ, ಮುಕುಂದ, ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ರಾಮಣ್ಣ ಇದ್ದರು.

ಪ್ರತಿಕ್ರಿಯಿಸಿ (+)