ಬುಧವಾರ, ಡಿಸೆಂಬರ್ 11, 2019
16 °C

ವಿದ್ಯುತ್‌ ದರ: ಯೂನಿಟ್‌ಗೆ ₹1.62 ಹೆಚ್ಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯುತ್‌ ದರ: ಯೂನಿಟ್‌ಗೆ ₹1.62 ಹೆಚ್ಚಿಸಿ

ಕಲಬುರ್ಗಿ: ‘ಮುಂದಿನ ಆರ್ಥಿಕ ವರ್ಷದಲ್ಲಿ ನಮಗೆ ₹1,160 ಕೋಟಿ ಕೊರತೆಯಾಗಲಿದೆ. ಅದನ್ನು ಸರಿದೂಗಿಸಲು ಎಲ್ಲ ವಿಧದ ವಿದ್ಯುತ್‌ ಸಂಪರ್ಕಗಳಿಗೆ ಯೂನಿಟ್‌ಗೆ ₹1.62ರಷ್ಟು ದರ ಹೆಚ್ಚಳ ಮಾಡಿ’ ಎಂದು ಗುಲಬರ್ಗಾ ವಿದ್ಯುತ್‌ ಸರಬರಾಜು ಕಂಪನಿ (ಜೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಚಿಕ್ಕನಂಜಪ್ಪ ಅವರು ವಿದ್ಯುತ್‌ ನಿಯಂತ್ರಣ ಆಯೋಗವನ್ನು ಕೋರಿದರು.

‘ಜೆಸ್ಕಾಂನವರ ಲೋಪದಿಂದ ಆಗಿರುವ ಹೊರೆಯನ್ನು ನಮ್ಮ ಮೇಲೆ ಹೊರಿಸಬೇಡಿ. ಭ್ರಷ್ಟಾಚಾರ ಮತ್ತು ಆಡಳಿತದ ದುಂದುವೆಚ್ಚಕ್ಕೆ ಕಡಿವಾಣ ಹಾಕಿ. ವಿದ್ಯುತ್‌ ಸೋರಿಕೆ ತಡೆಗಟ್ಟಿ. ಅಧಿಕಾರಿಗಳು ಮತ್ತು ಸಿಬ್ಬಂದಿಯ ಕ್ಷಮತೆ ಹೆಚ್ಚಿಸಿ’ ಎಂದು ಬಳಕೆದಾರರು ಆಗ್ರಹಿಸಿದರು.

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಜೆಸ್ಕಾಂನ 2016–17ನೇ ಸಾಲಿನ ಕಾರ್ಯನಿರ್ವಹಣೆ ಪರಿಶೀಲನೆ ಹಾಗೂ 2018–19ನೇ ಸಾಲಿನ ಕಂದಾಯ ಬೇಡಿಕೆ ಮತ್ತು ದರ ಪರಿಷ್ಕರಣೆ ಕುರಿತ ಸಾರ್ವಜನಿಕರ ಅಹವಾಲು ವಿಚಾರಣೆಯನ್ನು ಶುಕ್ರವಾರ ಇಲ್ಲಿ ನಡೆಸಿದರು.

‘ಆದಾಯ ತೆರಿಗೆ ಪಾವತಿಸುವ ರೈತರ ಪಂಪ್‌ಸೆಟ್‌ಗಳಿಗೂ ಉಚಿತ ವಿದ್ಯುತ್‌ ಕೊಡುವುದು ಬೇಡ’ ಎಂದು ದೀಪಕ್‌ ಗಾಲಾ ಆಗ್ರಹಿಸಿದರು. ‘ವರ್ಷದಲ್ಲಿ ವಿದ್ಯುತ್‌ ಅವಘಡದಿಂದ 157 ಜನ ಮೃತಪಟ್ಟಿದ್ದಾರೆ. ಅವರ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಬೇಕು’ ಎಂದು ವೈಜನಾಥ ಝಳಕಿ ಸಲಹೆ ನೀಡಿದರು.

‘ಬೀದಿ ದೀಪಗಳಿಗೆ ಟೈಮರ್‌ ಅಳವಡಿಸಿ. ರಾತ್ರಿ ವೇಳೆಯಲ್ಲೂ ವಿದ್ಯುತ್‌ ಪೂರೈಸಿ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿ. ಜೆಸ್ಕಾಂ ಬಾಡಿಗೆ ವಾಹನಗಳಿಗೆ ಮಾಡುವ ವೆಚ್ಚ ತಗ್ಗಿಸಿ. ವಿಚಕ್ಷಕ ದಳ ಚುರುಕುಗೊಳಿಸಿ, ವಿದ್ಯುತ್‌ ಕಳ್ಳತನ ತಡೆಯಿರಿ’ ಎಂದು ಕೆಲ ಕೆಲ ಗ್ರಾಹಕರು ಆಗ್ರಹಿಸಿದರು.

ಗ್ರಾಹಕರಾದ ಸಿದ್ರಾಮಯ್ಯ ಹಿರೇಮಠ, ಮಲ್ಲಿಕಾರ್ಜುನ ತಳಕೇರಿ, ಶೀತಲಕುಮಾರ್‌, ಚನ್ನಬಸಯ್ಯ ನಂದಿಕೂರ, ಉಮಾಪತಿ, ತಮ್ಮಣ್ಣ ಬಾಗೇವಾಡಿ, ಸುಭಾಶ್ಚಂದ್ರ, ನರಸಿಂಹ ಮೆಂಡನ್, ಜಂಬಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್ವರ, ದೊಡ್ಡಪ್ಪಗೌಡ ಹುಣಸಗಿ ಮಾತನಾಡಿದರು.

‘₹2,400 ಕೋಟಿ ಸರ್ಕಾರದಿಂದ ಬರಬೇಕಿದೆ. ನಾವು ಕೆಪಿಸಿಎಲ್‌ಗೆ ₹2,500 ಕೋಟಿ ಕೊಡಬೇಕಿದೆ. ಬೀದಿ ದೀಪದ ಬಿಲ್‌ನ್ನು ನಗರ ಸ್ಥಳೀಯ ಸಂಸ್ಥೆಗಳು ಶೇ 100ರಷ್ಟು ಹಾಗೂ ಗ್ರಾಮ ಪಂಚಾಯಿತಿಗಳು ಶೇ 60ರಷ್ಟು ಮಾತ್ರ ಪಾವತಿಸುತ್ತಿವೆ’ ಎಂದು ಜೆಸ್ಕಾಂನವರು ಹೇಳಿದರು. ಆಯೋಗದ ಸದಸ್ಯರಾದ ಎಚ್‌.ಡಿ. ಅರುಣಕುಮಾರ್‌, ಡಿ.ಬಿ. ಮಣಿವೆಲ್‌ರಾಜು ಇದ್ದರು.

ಆಯೋಗದ ಸೂಚನೆ:

*ಈಗ ಪರೀಕ್ಷಾ ಸಮಯ. ವಿದ್ಯುತ್‌ ಕಡಿತ ಮಾಡಬೇಡಿ. ಗುಣಮಟ್ಟದ ವಿದ್ಯುತ್‌ ಪೂರೈಸಿ

*ವಿಚಕ್ಷಕ ದಳ ಜಾಗೃತಗೊಳಿಸಿ, ವಿದ್ಯುತ್‌ ಕಳ್ಳತನ ತಡೆಗಟ್ಟಿ

*ಸಿಬ್ಬಂದಿಗೆ ವರ್ಷಕ್ಕೆ ₹280 ಕೋಟಿ ಸಂಬಳ ಕೊಡುತ್ತಿದ್ದೀರಿ. ಅನಗತ್ಯವಾಗಿ ನೇಮಕ ಮಾಡಿಕೊಂಡು ಹೊರೆ ಹೆಚ್ಚಿಸಿಕೊಳ್ಳಬೇಡಿ

*ವಿದ್ಯುತ್‌ ಅವಘಡದಲ್ಲಿ ಮೃತಪಟ್ಟವರಿಗೆ ನೀಡುವ ಪರಿಹಾರ ಮತ್ತು ಅದನ್ನು ಪಡೆಯುವ ಬಗೆಯ ಬಗೆಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ

*ಗ್ರಾಹಕರ ಕುಂದುಕೊರತೆ ಆಲಿಸಲು ಪ್ರತಿ ಕಚೇರಿಯಲ್ಲಿಯೂ ‘ಸಂದರ್ಶಕರ ಸಮಯ’ ನಿಗದಿ ಮಾಡಿ

*ವಿದ್ಯುತ್‌ ನಷ್ಟದ ಪ್ರಮಾಣ ಬೆಂಗಳೂರಲ್ಲಿ ಶೇ 10ರಷ್ಟಿದ್ದರೆ, ಇಲ್ಲಿ ಶೇ 16ರಷ್ಟಿದೆ. ಇದನ್ನು ಕಡಿಮೆ ಮಾಡಿ‘ಸಿಬ್ಬಂದಿ ವರ್ಗಾಯಿಸಿ; ವಿದ್ಯುತ್‌ ಕಡಿತಗೊಳಿಸಿ’

‘ಒಂದೇ ಸ್ಥಳದಲ್ಲಿ ಹಲವು ವರ್ಷಗಳಿಂದ ಬೀಡುಬಿಟ್ಟಿರುವ ಹಾಗೂ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸದ ಸಿಬ್ಬಂದಿಯನ್ನು ವರ್ಗಾಯಿಸಬೇಕು’ ಎಂದು ಎಂ.ಕೆ. ಶಂಕರಲಿಂಗೇಗೌಡ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.

‘ಇದು ಚುನಾವಣಾ ಸಮಯ. ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಒಂದೇ ಸ್ಥಳದಲ್ಲಿ ಇದ್ದರೆ ಜಿಲ್ಲಾಧಿಕಾರಿಯನ್ನೂ ವರ್ಗಾಯಿಸಲಾಗುತ್ತದೆ. ಇದೇ ನಿಯಮವನ್ನು ಅನ್ವಯಿಸಿ ನಿಮ್ಮವರನ್ನೂ ವರ್ಗಾಯಿಸಿ’ ಎಂದರು.

ಪ್ರತಿಕ್ರಿಯಿಸಿ (+)