ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಾಲಮನ್ನಾಕ್ಕೆ ಒತ್ತಾಯಿಸಿ ಪ್ರತಿಭಟನೆ

Last Updated 24 ಫೆಬ್ರುವರಿ 2018, 7:12 IST
ಅಕ್ಷರ ಗಾತ್ರ

ಚಾಮರಾಜನಗರ: ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಶುಕ್ರವಾರ ರಾಜ್ಯ ಕಬ್ಬು ಬೆಳೆಗಾರರ ಸಂಘ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಯಿತು.

ಸಂತೇಮರಹಳ್ಳಿ ವೃತ್ತದ ಬಳಿಯ ಅಂಚೆ ಕಚೇರಿಯ ಮುಂಭಾಗ ಸಮಾವೇಶಗೊಂಡ ರೈತರು ರಾಷ್ಟ್ರೀಯ ಹೆದ್ದಾರಿ 209ಅನ್ನು ತಡೆದು ಸಾಲಮನ್ನಾ ಮಾಡುವಂತೆ ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ರೈತರನ್ನು ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದರು.

ರೈತರ ಸಾಲಮನ್ನಾ ಮಾಡಲು ಕೇಂದ್ರ, ರಾಜ್ಯ ಸರ್ಕಾರಗಳು ಮೀನಮೇಷ ಎಣಿಸುತ್ತಿದ್ದು, ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿದರು.

ಬಂಡವಾಳಶಾಹಿಗಳ ಸಾವಿರಾರು ಕೋಟಿ ಸಾಲಮನ್ನಾ ಮಾಡಿರುವ ಕೇಂದ್ರ ಸರ್ಕಾರ, ರೈತರ ಸಾಲಮನ್ನಾ ಮಾಡುವ ಮನಸ್ಸು ಮಾಡುತ್ತಿಲ್ಲ. ರಾಜ್ಯ, ದೇಶದಲ್ಲೆಡೆ ರೈತರ ಸರಣಿ ಆತ್ಮಹತ್ಯೆಗಳು ನಡೆಯುತ್ತಿದೆ. ದೇಶಕ್ಕೆ ಅನ್ನ ಹಾಕುವ ರೈತರ ಸಮಸ್ಯೆ ಆಲಿಸದೆ ಇರುವುದು ದೇಶದ ದುರಂತವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಸ್ವಾಮಿನಾಥನ್‌ ವರದಿ ಜಾರಿಗೊಳಿಸುವುದಾಗಿ ಹೇಳಿದ್ದವರು ಈಗ ವರದಿಯನ್ನು ಜಾರಿಗೆ ತರಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.

ನೀರವ್‍ಮೋದಿ, ವಿಜಯಮಲ್ಯ ಅವರು ಲಕ್ಷಾಂತರ ಕೋಟಿ ರೂಪಾಯಿ ಸಾಲ ಪಡೆದು ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಯಾವುದೇ ಯಾತ್ರೆ ನಡೆಸಿದರೂ ಪ್ರಯೋಜನವಿಲ್ಲ. ರೈತರನ್ನು ಕಡೆ ಗಣಿಸುತ್ತಿರುವ ಸರ್ಕಾರಗಳಿಗೆ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯ, ಕೇಂದ್ರ ಸರ್ಕಾರಗಳು ರೈತರ ಸಂಪೂರ್ಣ ಕೃಷಿ ಸಾಲಮನ್ನಾ ಮಾಡಿ ರೈತರ ರಕ್ಷಣೆಗೆ ಮುಂದಾಗಬೇಕು. ಕಬ್ಬುದರ ನಿಗದಿ, ಬೆಳೆವಿಮೆ ಮೊತ್ತವನ್ನು ತಕ್ಷಣವೇ ಪಾವತಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಸಂಘದ ತಾಲ್ಲೂಕು ಅಧ್ಯಕ್ಷರಾದ ಎಚ್. ಮೂಕಳ್ಳಿ ಮಹದೇವಸ್ವಾಮಿ, ಕುಂತೂರು ಪ್ರಭುಸ್ವಾಮಿ, ಮುಖಂಡರಾದ ಲಿಂಗಣಾಪುರ ಪುಟ್ಟಸ್ವಾಮಿ, ಬಾಣಹಳ್ಳಿ ಜಯಶಂಕರ್, ಶಿವಕುಮಾರಸ್ವಾಮಿ, ಮನು, ಪ್ರಭುಸ್ವಾಮಿ, ಮಹದೇವಪ್ಪ, ರೇವಣ್ಣ, ಮೂಡ್ಲುಪುರ ರೇವಣ್ಣ, ತೆಳ್ಳನೂರು ನಾಗೇಂದ್ರ, ಕಾವುದವಾಡಿ ಮಹದೇವಸ್ವಾಮಿ, ಶಿವಪುರ ಮಾದಪ್ಪ ಪಾಲ್ಗೊಂಡಿದ್ದರು.

ನೆರೆ ರಾಜ್ಯಗಳಿಗೆ ಕಬ್ಬು ಸಾಗಣೆ ನಿರ್ಬಂಧ

ಚಾಮರಾಜನಗರ: ಸರ್ಕಾರದ ಆದೇಶ ಅನುಸಾರ ರಾಜ್ಯದಲ್ಲಿ ಬೆಳೆದಿರುವ ಕಬ್ಬನ್ನು ನೆರೆರಾಜ್ಯಗಳಿಗೆ ಸಾಗಣೆ ಮಾಡುವುದನ್ನು ಜಿಲ್ಲೆಯಲ್ಲೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ.

ಕಳೆದ 3 ವರ್ಷಗಳಿಂದಲೂ ಬರಗಾಲದಿಂದಾಗಿ ಕಬ್ಬು ಬೆಳೆ ವಿಸ್ತೀರ್ಣ ಹಾಗೂ ಉತ್ಪಾದನೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ ಹಾಗೂ ಹೊರರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಸಾಗಾಣಿಕೆಯಾಗುತ್ತಿರುವುದರಿಂದ ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಲಭ್ಯವಾಗುತ್ತಿಲ್ಲ.

ಆದ್ದರಿಂದ 2017-18ನೇ ಸಾಲಿನಲ್ಲಿ ರಾಜ್ಯದಲ್ಲಿ ಬೆಳೆದಿರುವ ಕಬ್ಬನ್ನು ನೆರೆಯ ರಾಜ್ಯಗಳಿಗೆ ಸಾಗಣೆಯಾಗದಂತೆ ನಿರ್ಬಂಧಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.ಈ ಸಂಬಂಧ ಗಡಿಭಾಗದ ಜಿಲ್ಲೆಯಲ್ಲೂ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT