ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿಯರಿಗೆ ಸೀಮಂತ, ಬಾಣಂತಿಯರಿಗೆ ಕಿಟ್ ವಿತರಣೆ

Last Updated 24 ಫೆಬ್ರುವರಿ 2018, 7:36 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಆರೋಗ್ಯ ಪೂರ್ಣ ಮಗುವಿನ ಜನನಕ್ಕೆ ಗರ್ಭಿಣಿಯ ಸಂಪೂರ್ಣ ಆರೋಗ್ಯ ಅತಿ ಮುಖ್ಯ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ಅಭಿಪ್ರಾಯಪಟ್ಟರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಯೋಜನೆ ಅಡಿಯಲ್ಲಿ ಅಂತಾಪುರ ಮತ್ತು ನಂದಿಹಳ್ಳಿ ಗ್ರಾಮಗಳ ಜ್ಞಾನ ವಿಕಾಸ ಸ್ವಸಹಾಯ ಸಂಘಗಳ ಆಶ್ರಯದಲ್ಲಿ ಸಮೀಪದ ಅಂತಾಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಬಾಣಂತಿ ಮತ್ತು ಗರ್ಭಿಣಿಯರ ಆರೈಕೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಗರ್ಭಿಣಿಯು ನವಮಾಸಗಳಲ್ಲಿ ಉತ್ತಮ ಆಹಾರ, ಸ್ವಚ್ಛತೆಯನ್ನು ಹೊಂದಿದ್ದರೆ ಮಾತ್ರ ಆರೋಗ್ಯವಂತ ಮಗು ಜನಿಸುತ್ತದೆ. ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶು ಮತ್ತು ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ ಹಾಗೂ ದಿನ ಭತ್ಯೆಯಾಗಿ ದಿನಕ್ಕೆ ₹ 174 ನೀಡಲಾಗುವುದು. ಅಲ್ಲದೆ, ತಾಯಿ ಕಾರ್ಡ್‌ ವಿತರಿಸಿ, ಅದರಲ್ಲಿ ಮಗುವಿಗೆ ಎರಡು ವರ್ಷ ಆಗುವವರೆಗಿನ ಮಾಹಿತಿಯನ್ನು ನೀಡಲಾಗಿರುತ್ತದೆ’ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಕಂಬಾಳಿಮಠ ಮಾತನಾಡಿ, ‘ಮುಟ್ಟು ನಿಂತ ಎರಡು ತಿಂಗಳ ಒಳಗೆ ಮಹಿಳೆಯರು ಆಶಾ ಕಾರ್ಯಕರ್ತೆಯರ ಅಥವಾ ಅಂಗನವಾಡಿ ಕಾರ್ಯಕರ್ತೆಯರ ಬಳಿ ಬಂದು ಮೂತ್ರ ಪರೀಕ್ಷೆ ಮಾಡಿಸಿಕೊಂಡು, ಗರ್ಭ ಧರಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ನಂತರ ಸರ್ಕಾರಿ ಆಸ್ಪತ್ರೆಗೆ ಬಂದರೆ ರಕ್ತ ಪರೀಕ್ಷೆ ಸೇರಿ ಎಲ್ಲಾ ವಿಧದ ಪರೀಕ್ಷೆ ಮತ್ತು ಔಷಧೋಪಚಾರಗಳನ್ನು ಉಚಿತವಾಗಿ ಮಾಡಲಾಗುವುದು’ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಬಿ. ಗಣೇಶ್, ತಾಲ್ಲೂಕು ಯೋಜನಾಧಿಕಾರಿ ಯಶವಂತ್ ಮಾತನಾಡಿದರು. ಬಿ.ದುರ್ಗ ಸಮುದಾಯ ಕೇಂದ್ರದ ಆರೋಗ್ಯ ಆಪ್ತ ಸಮಾಲೋಚಕಿ ರೂಪಶ್ರೀ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮದ 9 ಗರ್ಭಿಣಿಯರಿಗೆ ಬಳೆ, ಹರಿಶಿಣ–ಕುಂಕುಮ, ಹೂವು, ಹಣ್ಣು, ಸೀರೆ, ರವಿಕೆಗಳನ್ನು ನೀಡಿ ಸಾಮೂಹಿಕ ಸೀಮಂತ ಮಾತಲಾಯಿತು. ಬಾಣಂತಿಯರಿಗೆ ಕಿಟ್‌ಗಳನ್ನು ವಿತರಿಸಲಾಯಿತು.

ಲೋಕೇಶ್‌ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಜಯನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಜಯಪ್ಪ, ಶಿಕ್ಷಕ ಚಂದ್ರಪ್ಪ, ಒಕ್ಕೂಟದ ಅಧ್ಯಕ್ಷ ಜಗದೀಶ್, ಮಂಗಳೂರಿನ ಎ.ಜೆ. ಆಸ್ಪತ್ರೆಯ ಮಂಜುನಾಥ್, ವಲಯ ಮೇಲ್ವಿಚಾರಕಿ ಅನ್ನಪೂರ್ಣ, ಸಮನ್ವಯಾಧಿಕಾರಿ ಗಂಗಮ್ಮ, ಗ್ರಾಮ ಪಂಚಾಯ್ತಿ ಸದಸ್ಯೆ ಪಾರವತಮ್ಮ, ಪ್ರಗತಿ ಬಂಧು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರು, ಅಂತಾಪುರ ಮತ್ತು ನಂದಿಹಳ್ಳಿ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT