ಶುಕ್ರವಾರ, ಡಿಸೆಂಬರ್ 13, 2019
27 °C

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ‘ಚತುಷ್ಕೋನ ಸ್ಪರ್ಧೆ’

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ‘ಚತುಷ್ಕೋನ ಸ್ಪರ್ಧೆ’

ಮೊಳಕಾಲ್ಮುರು: ಸಾಮಾನ್ಯವಾಗಿ ಚುನಾವಣೆಯಲ್ಲಿ ಪಕ್ಷಗಳ ನಡುವೆ ತ್ರಿಕೋನ, ಚತುಷ್ಕೋನ ಸ್ಪರ್ಧೆಗಳು ಏರ್ಪಡುವುದು ಸಹಜ. ಆದರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ಪಡೆದುಕೊಳ್ಳಲು ‘ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ.

ಈಗ ಇದು ಕೇವಲ ಸ್ಪರ್ಧೆಯಾಗಿ ಉಳಿಯದೇ, ಟಿಕೆಟ್ ಆಕಾಂಕ್ಷಿಗಳ ನಡುವೆ ಮುಸುಕಿನ ಗುದ್ದಾಟದವರೆಗೂ ಹೋಗಿದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡುವ ಹಂತಕ್ಕೂ ತಲುಪಿದೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಚುನಾವಣೆಯ ಕಾವು ಏರುವ ಮೊದಲು ಬಳ್ಳಾರಿ ಗ್ರಾಮಾಂತರ ಶಾಸಕ ಎನ್.ವೈ. ಗೋಪಾಲಕೃಷ್ಣ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಬಾಬು ನಡುವೆ ಪೈಪೋಟಿ ನಡೆಯುತ್ತಿತ್ತು.

ತಿಂಗಳಿಂದ ಈಚೆಗೆ ನಟ ಹಾಗೂ ಮಾಜಿ ಸಂಸದ ಶಶಿಕುಮಾರ್ ಮತ್ತು ವಿಧಾನ ಪರಿಷತ್‌ ಸದಸ್ಯ ವಿ.ಎಸ್. ಉಗ್ರಪ್ಪ ಅವರೂ ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ. ತಾವೂ ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೊಂಡು ಶಶಿಕುಮಾರ್ ಅವರು ಕೆಲ ದಿನಗಳ ಹಿಂದೆ ಕ್ಷೇತ್ರದಲ್ಲಿ ಸುತ್ತಾಡಿದ್ದರು. ಇದೀಗ ಉಗ್ರಪ್ಪ ಅವರೂ ಭೇಟಿ ನೀಡಿ ತಮ್ಮ ಆಪ್ತರೊಂದಿಗೆ ಸಭೆ ನಡೆಸಿದ್ದರಿಂದ ಪಕ್ಷದ ಮುಖಂಡರ ಆತಂಕ ದುಪ್ಪಟ್ಟಾಗಿದೆ.

ಶಶಿಕುಮಾರ್‌ ಅವರು ಸ್ಥಳೀಯ ಮುಖಂಡರಿಲ್ಲದೇ ನೇರವಾಗಿ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಉಗ್ರಪ್ಪ ಅವರು ಮುಖಂಡರ ಜತೆ ಚರ್ಚಿಸಿ, ಅವರನ್ನು ಜತೆಯಲ್ಲಿ ಕರೆದುಕೊಂಡು ಓಡಾಡುತ್ತಿದ್ದಾರೆ. ಇದು ಸ್ಥಳೀಯ ಟಿಕೆಟ್‌ ಆಕಾಂಕ್ಷಿಗಳಿಗೆ ಸಿಟ್ಟು ಬರುವಂತೆ ಮಾಡಿದೆ.

ತಳಕು ಹಾಗೂ ನಾಯಕನಹಟ್ಟಿ ಭಾಗದ ಮುಖಂಡರು, ಅದರಲ್ಲೂ ಎನ್‌.ವೈ.ಗೋಪಾಲಕೃಷ್ಣ ಬಗ್ಗೆ ಕಳೆದ ಚುನಾವಣೆಯಿಂದ ಅತೃಪ್ತಿ ಹೊಂದಿರುವ ಮುಖಂಡರು ಈ ಬಾರಿ ಹೊಸ ಮುಖಕ್ಕೆ ಟಿಕೆಟ್‌ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ‘ಎನ್‌.ವೈ.ಗೆ ಪರ್ಯಾಯವಾಗಿ ಉಗ್ರಪ್ಪಗೆ ಟಿಕೆಟ್‌ ನೀಡಿದರೆ ಪರವಾಗಿಲ್ಲ' ಎಂಬ ಸಂದೇಶ ನೀಡುತ್ತಿದ್ದಾರೆ.

‘ಇಂಥ ಬೆಳವಣಿಗೆಯಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಆರೋಪಿಸಿ ಗೋಪಾಲಕೃಷ್ಣ ಹಾಗೂ ಅವರ ಬೆಂಬಲಿಗರು ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ.ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಈ ನಾಲ್ವರ ಜೊತೆಗೆ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ವಿಜಯನಾಯಕ, ಕರಣ್‌ ಬೋರಯ್ಯ ಅವರ ಹೆಸರೂ ಕೇಳಿಬರುತ್ತಿದೆ.

ಟಿಕೆಟ್‌ಗೆ ಯಾರು ಎಷ್ಟೇ ಒತ್ತಡ ತಂದರೂ ಪಕ್ಷ ನಡೆಸುತ್ತಿರುವ ಆಂತರಿಕ ಸಮೀಕ್ಷೆ ವರದಿ ಆಧರಿಸಿ ಅಂತಿಮಗೊಳಿಸಲಾಗುವುದು ಎಂದು ಪಕ್ಷದ ಉಸ್ತುವಾರಿ ವೇಣುಗೋಪಾಲ್‌ ಸೂಚಿಸಿದ್ದಾರೆ ಎನ್ನಲಾಗಿದೆ. ಇದರ ನಡುವೆಯೂ ಆಕಾಂಕ್ಷಿಗಳು ಗ್ರಾಮಗಳಿಗೆ ಭೇಟಿ ನೀಡಿ ಮತದಾರರ ಕುಶಲೋಪರಿ ವಿಚಾರಿಸುತ್ತಿರುವುದು ಚರ್ಚೆಗೆ ಆಸ್ಪದ ನೀಡಿದೆ.

* * 

ನಾನು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಎರಡು ಸಾರಿ ಸ್ಪರ್ಧಿಸಿದ್ದೇನೆ. ನಾನು ಪಕ್ಕದ ಜಿಲ್ಲೆಯವನು, ಸ್ಪರ್ಧೆಗಾಗಿ ಭೇಟಿ ನೀಡಿದ್ದೇನೆ ಎಂಬ ಆರೋಪ ಸರಿಯಲ್ಲ.

ವಿ.ಎಸ್‌. ಉಗ್ರಪ್ಪ ಎಂಎಲ್‌ಸಿ

ಪ್ರತಿಕ್ರಿಯಿಸಿ (+)