ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಜವಾದ ಶಕ್ತಿ ನಿಮ್ಮ ಮತ’

Last Updated 24 ಫೆಬ್ರುವರಿ 2018, 7:39 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ನಮ್ಮ ಮತ ಅಮೂಲ್ಯ ಅದಕ್ಕೆ ಬೆಲೆ ಕಟ್ಟಬೇಡಿ’, ‘ನಾವು ಮತ ಚಲಾಯಿಸದಿದ್ದರೆ ದೇಶಕ್ಕೆ ದೊಡ್ಡ ನಷ್ಟ’, ‘ಮತದಾರ ಆಗಿರುವುದಕ್ಕೆ ಹೆಮ್ಮೆ ಪಡು. ಮತ ನೀಡಲು ತಯಾರಾಗು’, ‘ಯಾರು ಪ್ರಗತಿಪರ ಕೆಲಸ ಮಾಡುತ್ತಾರೋ ಅವರಿಗೆ ಮತ ಹಾಕೋಣ’, ‘ನಿಜವಾದ ಶಕ್ತಿ ನಿಮ್ಮ ಮತ’...

ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ ಶುಕ್ರವಾರ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಸಕ್ರಿಯವಾಗಿ ಭಾಗವಹಿಸುವ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳ ಕೈಯಲ್ಲಿದ್ದ ನಾಮಫಲಕಗಳಲ್ಲಿ ಕಂಡ ಸ್ಲೋಗನ್‌ಗಳು ಇವು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಅವರು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ‘ಮತ ಚಲಾಯಿಸುವುದು ಅತ್ಯಂತ ಪವಿತ್ರವಾದ ಕರ್ತವ್ಯ. ಆದ್ದರಿಂದ ಮತದಾರರೂ ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು’ ಎಂದು ಸಲಹೆ ನೀಡಿದರು.

ಕಳೆದ ಚುನಾವಣೆಗಳಲ್ಲಿ ಮತದಾನ ನಡೆದಿರುವುದನ್ನು ಗಮನಿಸಿದಲ್ಲಿ ಗ್ರಾಮೀಣ ಭಾಗದವರು ಉತ್ತಮವಾಗಿ ಹಕ್ಕು ಚಲಾಯಿಸಿದ್ದು, ಶೇಕಡವಾರು ಮತದಾನ ಹೆಚ್ಚಾಗಿದೆ. ಆದರೆ, ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಿನ ಜನರು ವಿದ್ಯಾವಂತರಿದ್ದರೂ ಸಹ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಲು ಆಸಕ್ತಿ ವಹಿಸದೆ ಇರುವುದು ಉತ್ತಮ ಬೆಳೆವಣಿಗೆಯಲ್ಲ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಮೊದಲು ಚಲಾಯಿಸಿ, ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮುಂದಾಗಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎನ್.ರವೀಂದ್ರ ಮಾತನಾಡಿ, ಮತದಾನ ಮಾಡುವುದು 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕನ ಪವಿತ್ರ ಕಾರ್ಯ. ಹಾಗಾಗಿ ಎಲ್ಲರೂ ತಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ನಗರ, ಪಟ್ಟಣ ಪ್ರದೇಶದ ಜನರು ಮತದಾನ ಮಾಡುವಲ್ಲಿ ನಿರಾಸಕ್ತಿ ತೋರುತ್ತಿರುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ. ಆದ್ದರಿಂದ ತಪ್ಪದೇ ಮತ ಚಲಾಯಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ. ಜೋಷಿ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಸವರಾಜಪ್ಪ, ತಹಶೀಲ್ದಾರ್ ಮಲ್ಲಿಕಾರ್ಜುನ್, ತಾಲ್ಲೂಕು ಪಂಚಾಯ್ತಿ ಇಒ ಲಕ್ಷ್ಮೀಪತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ವಿ. ನೀರಜ್ ಇದ್ದರು.

ಜಿಲ್ಲಾ ಕ್ರೀಡಾಂಗಣ ರಸ್ತೆಯಿಂದ ಪ್ರಾರಂಭವಾದ ಜಾಥಾವೂ ಜೋಗಿಮಟ್ಟಿ ರಸ್ತೆ, ಬುದ್ಧ ನಗರ, ಪ್ರಶಾಂತ್ ನಗರ, ಕೆಳಗೋಟೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಯಿತು.

ವಿವಿಧ ಶಾಲಾ ಕಾಲೇಜುಗಳ ನೂರಾರು ಸಂಖ್ಯೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾನವ ಸರಪಳಿ ನಿರ್ಮಿಸುವ ಮೂಲಕ ಮತದಾನ ಮಹತ್ವ ಸಾರಿದರು. ಭಾರತೀಯ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಸ್ವೀಪ್ ಸಮಿತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮತದಾರನಿಗೆ ವಿಶಿಷ್ಟ ಸ್ಥಾನವಿದೆ: ಐದು ವರ್ಷ ನಮ್ಮನ್ನಾಳಲು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡದಿದ್ದಲ್ಲಿ ದೇಶ, ರಾಜ್ಯ, ಸಮಾಜದ ಅಭಿವೃದ್ಧಿ ಕುಂಠಿತವಾಗಲಿದೆ. ಆದ್ದರಿಂದ ಮತದಾರ ತಮ್ಮ ಹಕ್ಕನ್ನು ಸರಿಯಾಗಿ ಚಲಾಯಿಸುವ ಮೂಲಕ ನಿಮಗೆ ಬೇಕಾದ ಉತ್ತಮರನ್ನು ಆಯ್ಕೆ ಮಾಡಿಕೊಂಡಲ್ಲಿ ಅವರಿಂದ ಗುಣಮಟ್ಟದ ಆಡಳಿತ ನಿರೀಕ್ಷಿಸಬಹುದು. ಮತದಾರನಿಗೆ ವಿಶಿಷ್ಟವಾದ ಸ್ಥಾನವಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಜಿಲ್ಲಾ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT