ಬುಧವಾರ, ಡಿಸೆಂಬರ್ 11, 2019
15 °C

ಸ್ಕೈವಾಕ್‌ ಉದ್ಘಾಟನೆ ನನೆಗುದಿಗೆ

ವಡ್ಡನಹಳ್ಳಿ ಬೊಜ್ಯನಾಯ್ಕ್ Updated:

ಅಕ್ಷರ ಗಾತ್ರ : | |

ಸ್ಕೈವಾಕ್‌ ಉದ್ಘಾಟನೆ ನನೆಗುದಿಗೆ

ದೇವನಹಳ್ಳಿ: ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ 7ರ ಕನ್ನಮಂಗಲ ಗೇಟ್ ಒಂದಲ್ಲ ಒಂದು ರೀತಿಯಿಂದ ಖ್ಯಾತಿ ಮತ್ತು ಅಪಖ್ಯಾತಿಯನ್ನು ಬೆನ್ನಿಗೆ ಅಂಟಿಸಿಕೊಂಡಿದೆ ಎಂಬುದು ಸ್ಥಳೀಯರ ಆರೋಪ.

ಸಾವಿನ ಜಂಕ್ಷನ್ ಎಂದೆ ಅಪಖ್ಯಾತಿಗೆ ಗುರಿಯಾಗಿರುವ ಈ ಗೇಟ್ ಬಳಿ ಎರಡು ವರ್ಷಗಳಿಂದ ಸರಣಿ ಅಪಘಾತ ನಡೆದು ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಎಚ್ಚೆತ್ತುಕೊಂಡ ಸ್ಥಳೀಯ ಜನಪ್ರತಿನಿಧಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಸ್ಥಳೀಯರ ಒತ್ತಡಕ್ಕೆ ಮಣಿದು ರಸ್ತೆ ದಾಟಲು ಸ್ಕೈವಾಕ್ ನಿರ್ಮಾಣ ಮಾಡಲು ಚಿಂತಿಸಿತು. ಇದೀಗ ಕಾಮಗಾರಿ ಮುಗಿದರೂ ಲೋಕಾರ್ಪಣೆಯಾಗಿಲ್ಲ ಎಂದು ಸ್ಥಳೀಯ ನಿವಾಸಿ ಕುಮಾರ ನಾಯ್ಕ ಹೇಳುತ್ತಾರೆ.

ಇಲ್ಲಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಂತರ ಕೇವಲ 3 ಕಿ.ಮೀ. ವಿಮಾನನಿಲ್ದಾಣಕ್ಕೆ ನಿತ್ಯ ಸಂಚರಿಸುವ ಟ್ಯಾಕ್ಸಿ, ಕ್ಯಾಬ್ ವಾಹನಗಳು 8 ರಿಂದ 10 ಸಾವಿರ ಎಂದು ಅಂದಾಜಿಸಲಾಗಿದೆ ಎಂದು ಸಂಚಾರ ಪೊಲೀಸ್ ಇಲಾಖೆ ಮಾಹಿತಿ ನೀಡಿವೆ.

ಬಹುತೇಕ ಬಾಡಿಗೆ ವಾಹನಗಳನ್ನು ಕನ್ನಮಂಗಲ ಗೇಟ್ ನಲ್ಲಿ ನಿರ್ಮಾಣವಾಗಿರುವ ಸ್ಕೈವಾಕ್ ಅಕ್ಕಪಕ್ಕ, ಗೇಟ್ ನಿಂದ ಸಾಗುವ ರಸ್ತೆ ಮಾರ್ಗದ ಬಳಿ ನಿಲ್ಲಿಸುತ್ತಾರೆ. ಅಲ್ಲದೆ ಮೇಲ್ಸೇತುವೆ ಕೆಳಗಡೆ, ಸರ್ವೀಸ್ ರಸ್ತೆ ಅಕ್ಕ ಪಕ್ಕ, ಟೋಲ್ ಗೇಟ್ ಬಳಿ ಹೆಚ್ಚಾಗಿ ನಿಲ್ಲಿಸಲಾಗುತ್ತದೆ. ಈ ವಾಹನಗಳಿಂದ ಗ್ರಾಮಗಳಿಗೆ ಹೋಗಲು ಮತ್ತೆ ಬರಲು ತೊಂದರೆಯಾಗುತ್ತಿದೆ ಕುಮಾರ ನಾಯ್ಕ ತಿಳಿಸುತ್ತಾರೆ.

ಕನ್ನಮಂಗಲ ಗ್ರಾಮ ಹೆದ್ದಾರಿ 7ರ ರಸ್ತೆಯಿಂದ ಆರಂಭಗೊಂಡು ರಸ್ತೆಯ ಎರಡೂ ಬದಿಗಳಲ್ಲಿ ಶಾಲಾ, ಕಾಲೇಜು, ಬ್ಯಾಂಕ್‌ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಎರಡು ಶಾಲೆಗಳಲ್ಲಿ ಶಿಕ್ಷಣ ಪಡೆಯಲು 1,200 ವಿದ್ಯಾರ್ಥಿಗಳು ಕನ್ನಮಂಗಲ ಗೇಟ್‌ ಗೆ ಬರುತ್ತಾರೆ. ಶೇ25 ರಷ್ಟು ವಿದ್ಯಾರ್ಥಿಗಳು ಅಕ್ಕಪಕ್ಕದ ಗ್ರಾಮಗಳಿಂದ ನಡೆದುಕೊಂಡು ಬರುತ್ತಾರೆ. ಶೇ50 ರಷ್ಟು ವಿದ್ಯಾರ್ಥಿಗಳು ಬಿಎಂಟಿಸಿ ಬಸ್‌ಗಳಲ್ಲಿ ಬರುತ್ತಾರೆ. ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿ ನಿಲ್ಲಿಸಿದ ಕಾರುಗಳೇ ಅಡ್ಡಿಯಾಗುತ್ತಿವೆ. ವೇಗಕ್ಕೂ ಮಿತಿಯಿಲ್ಲ. ವಿದ್ಯಾರ್ಥಿಗಳು ಮತ್ತು ಪಾದಚಾರಿಗಳು ರಸ್ತೆಯಲ್ಲಿ ಓಡಾಡಲು ಭಯ ಪಡುವಂತಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಕೆ.ಶ್ರೀನಿವಾಸ್.

‘ರಾಷ್ಟ್ರೀಯ ಹೆದ್ದಾರಿ 7ರ ರಸ್ತೆ ವ್ಯಾಪ್ತಿ ಮಾತ್ರ ಸಂಚಾರ ಪೊಲೀಸ್ ಮಿತಿ ಎಂಬುದಾಗಿ ಸಂಚಾರ ಪೊಲೀಸರು ತಿಳಿಸುತ್ತಾರೆ. ಕಾನೂನು ಸುವ್ಯವಸ್ಥೆ ಪೊಲೀಸರು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಹಾಗಾದರೆ ಇಲ್ಲಿನ ಪರಿಸ್ಥಿತಿ ನಿಭಾಯಿಸುವವರು ಯಾರು’ ಎಂದು ಅವರು ಆಕ್ರೋಶ ಸೂಚಿಸಿದ್ದಾರೆ.

ಕಾರು ಪಾರ್ಕಿಂಗ್ ಮಾಡಿಕೊಂಡು ಸಿಗರೇಟ್‌, ಬೀಡಿ, ಗುಟ್ಕಾ ಜಗಿಯುತ್ತ ಕುಳಿತಿರುತ್ತಾರೆ. ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಇದರಿಂದ ಕೆಟ್ಟ ಚಟಗಳ ಸಂದೇಶ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕಾರು ಚಾಲಕರ ಮಕ್ಕಳಿಗೆ ಇದೆ ಪರಿಸ್ಥಿತ ಎದುರಾದರೆ ಇವರು ಸುಮ್ಮನೆ ಇರುತ್ತಾರೆಯೇ ಎಂದು ಕೆ.ಶ್ರೀನಿವಾಸ್ ಪ್ರಶ್ನಿಸಿದ್ದಾರೆ.

ಕಾರಿನಲ್ಲೇ ಮದ್ಯ ಸೇವನೆ

ಗೇಟ್‌ನಿಂದ ಗ್ರಾಮಕ್ಕೆ ಹಾದು ಹೋಗುವ 80 ಅಡಿ ಅಗಲದ ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಪಕ್ಕದಲ್ಲಿ ನಿಲುಗಡೆ ಏರ್ಪಡಿಸಲಿ. ಇಲ್ಲದಿದ್ದರೆ ಹೆದ್ದಾರಿ ರಸ್ತೆ ಪಕ್ಕದಲ್ಲಿ ನಿಲುಗಡೆ ಮಾಡಿದರೂ ಅಭ್ಯಂತರ ಇಲ್ಲ. ಕೆಲ ಚಾಲಕರು ಮಧ್ಯಾಹ್ನದ ನಂತರ ರಸ್ತೆ ಬದಿಯಲ್ಲಿ ಕಾರಿನಲ್ಲೇ ಮದ್ಯ ಸೇವಿಸುತ್ತಾರೆ ಎಂದು ಸ್ಥಳೀಯ ನಿವಾಸಿ ರಾಧಮ್ಮ ಆರೋಪಿಸುತ್ತಾರೆ.

ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿನಿಯರು, ಮಹಿಳೆಯರನ್ನು ನೋಡುವ ದೃಷ್ಟಿ ಭಯ ಹುಟ್ಟಿಸುತ್ತದೆ. ಇದು ಯಾವ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದು ಗೊತ್ತಿಲ್ಲ. ಸಮಸ್ಯೆ ಪರಿಹಾರವಾಗಬೇಕು ಅಷ್ಟೇ ಎನ್ನುತ್ತಾರೆ.

ಪ್ರತಿಕ್ರಿಯಿಸಿ (+)