ಬುಧವಾರ, ಡಿಸೆಂಬರ್ 11, 2019
16 °C

ವಿಸ್ತೃತ ಕ್ರಿಯಾಯೋಜನೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಸ್ತೃತ ಕ್ರಿಯಾಯೋಜನೆಗೆ ಸಿದ್ಧತೆ

ಬಳ್ಳಾರಿ: ‘ಗಣಿಗಾರಿಕೆ ಸ್ಥಳದಲ್ಲಿ ಜೀವ ಕಳೆದುಕೊಂಡವರು ಮತ್ತು ಗಣಿಗಾರಿಕೆ ನಿಂತ ಬಳಿಕ ಉದ್ಯೋಗ ಕಳೆದುಕೊಂಡವರ ಪುನಶ್ಚೇತನಕ್ಕೆ ಜಿಲ್ಲಾಡಳಿತ ನಿರ್ಧರಿಸಿದ್ದು, ಜಿಲ್ಲಾ ಖನಿಜ ಪ್ರತಿಷ್ಠಾನದ ಮೂಲಕ ನೆರವು ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್ ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಗಣಿ ಕಾರ್ಮಿಕರ ಸಭೆ ನಡೆಸಿದ ಅವರು, ‘ಪ್ರತಿಷ್ಠಾನದ ಮೂಲಕ ವಿಸ್ತೃತ ಕ್ರಿಯಾ ಯೋಜನೆಯನ್ನು ರೂಪಿಸುವ ಸಿದ್ಧತೆ ನಡೆದಿದೆ’ ಎಂದು ತಿಳಿಸಿದರು.

‘ಸಾವಿಗೀಡಾದವರು ಮತ್ತು ಕೆಲಸ ಕಳೆದುಕೊಂಡವರ ಮಾಹಿತಿ ಗಳನ್ನು ಸಂಗ್ರಹಿಸಲಾಗುವುದು. ಏಜೆನ್ಸಿ

ಯೊಂದರ ಮೂಲಕ ಪ್ರತಿಯೊಬ್ಬರಿಗೂ ವಿಶಿಷ್ಟ ಗುರುತಿನ ಚೀಟಿ ನೀಡಲಾಗುವುದು. ಅವರ ಸಮಗ್ರ ಮಗ್ರ ಅಭಿವೃದ್ಧಿಗೆ ಮತ್ತು ಜೀವನೋಪಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಮೂರು ತಿಂಗಳ ಗಡುವು: ‘ಯೋಜನೆ ತಯಾರಾದ ಬಳಿಕ ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಮೂರು ತಿಂಗಳ ಗಡುವು ವಿಧಿಸಲಾಗುವುದು. ಎಲ್ಲ ಸಂತ್ರಸ್ತರಿಗೂ ನ್ಯಾಯಬದ್ಧ ಸೌಲಭ್ಯಗಳು ದೊರಕುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಹಣ ಸಂಗ್ರಹ: ‘ಖನಿಜ ಪ್ರತಿಷ್ಠಾನ ಜಾರಿಯಲ್ಲಿದ್ದರೂ, ಕೆಲ ಕಾಲ ಗಣಿ ಕಂಪೆನಿಗಳು ತಮ್ಮ ಪಾಲಿನ ಹಣವನ್ನು ಪಾವತಿಸಿರಲಿಲ್ಲ. ಕಂಪೆನಿಗಳ ಗುತ್ತಿಗೆದಾರರ ಸಭೆ ನಡೆಸಿ, ಮನವರಿಕೆ ಮಾಡಿದ ಬಳಿಕವೇ ಪ್ರತಿಷ್ಠಾನದಲ್ಲಿ ಹಣ ಸಂಗ್ರಹವಾಯಿತು’ ಎಂದರು.

ಉದ್ಯೋಗ ಷರತ್ತು: ‘ಈ ಮುಂಚೆ ಕೆಲಸ ನಿರ್ವಹಿಸಿ ಕೆಲಸ ಕಳೆದುಕೊಂಡ ಗಣಿ ಕಾರ್ಮಿಕರಿಗೆ ಉದ್ಯೋಗ ನೀಡಬೇಕು ಎಂಬ ಷರತ್ತನ್ನು ಗಣಿಗಳ ಇ– -ಹರಾಜು ಸಂದರ್ಭದಲ್ಲೇ ವಿಧಿಸಬೇಕು ಎಂದು ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಜೀವ ಕಳೆದುಕೊಂಡವರಿಗೆ ಪರಿಹಾರ ನೀಡುವ ಕುರಿತೂ ಗಮನ ಸೆಳೆಯಲಾಗುವುದು’ ಎಂದು ಹೇಳಿದರು.

ಮತ್ತೆ ಸಭೆ: ’ಗಣಿ ಗುತ್ತಿಗೆದಾರರೊಂದಿಗೆ ಮತ್ತೆ ಸಭೆ ನಡೆಸಿ, ಈಗಾಗಲೇ ಕೆಲಸ ಮಾಡಿರುವ ಅನುಭವವುಳ್ಳ ಮತ್ತು ಯುವ ಕಾರ್ಮಿಕರಿಗೆ ಉದ್ಯೋಗ ನೀಡುವಂತೆ ಮನ ಒಲಿಸಲಾಗುವುದು. ಗಣಿ ಕಾರ್ಮಿಕರಿಗೆ ಸಂಬಂಧಿಸಿದಂತೆ ಕಾರ್ಮಿಕ ನ್ಯಾಯಮಂಡಳಿಗಳಲ್ಲಿ ಇತ್ಯರ್ಥವಾಗದೇ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದರು. ಕಾರ್ಮಿಕ ಅಧಿಕಾರಿ ನಾಗರಾಜ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಂಜುನಾಥಗೌಡ ಇದ್ದರು.

ಪ್ರತಿಕ್ರಿಯಿಸಿ (+)