ಸೋಮವಾರ, ಡಿಸೆಂಬರ್ 9, 2019
17 °C

ಬಿಜೆಪಿ ಸಮಾವೇಶಕ್ಕೆ ಅಮಿತ್ ಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಸಮಾವೇಶಕ್ಕೆ ಅಮಿತ್ ಶಾ

ಬೀದರ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಫೆ.24 ರಂದು ಜಿಲ್ಲೆಗೆ ಬರಲಿರುವ ಪ್ರಯುಕ್ತ ಅವರ ಸ್ವಾಗತಕ್ಕೆ ಪಕ್ಷದ ಜಿಲ್ಲಾ ಘಟಕ ಸಿದ್ಧತೆ ಮಾಡಿಕೊಂಡಿದೆ.

ಶನಿವಾರ ರಾತ್ರಿ 8.30ಕ್ಕೆ ವಿಶೇಷ ವಿಮಾನದ ಮೂಲಕ ಶಾ ಅವರು ನಗರಕ್ಕೆ ಬರಲಿದ್ದು, ಪಕ್ಷದ ಪದಾಧಿಕಾರಿಗಳು ಸೇರಿದಂತೆ ಸುಮಾರು 2,500 ಕಾರ್ಯಕರ್ತರು ಸ್ವಾಗತ ಕೋರಲಿದ್ದಾರೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ನಗರದಲ್ಲಿ ಶುಕ್ರವಾರ  ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಅಮಿತ್ ಶಾ ಫೆ. 25 ರಂದು ಬೆಳಿಗ್ಗೆ 9 ಗಂಟೆಗೆ ನರಸಿಂಹ ಝರಣಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವರು. ಬೆಳಿಗ್ಗೆ 10.15ಕ್ಕೆ ಹುಮನಾಬಾದ್ ತಾಲ್ಲೂಕಿನ ಮಂಗಲಗಿ ಗ್ರಾಮಕ್ಕೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡ ರೈತ ಶಿವರಾಜ ಬಸಲಿಂಗಪ್ಪ ಆಲರೆಡ್ಡಿ ಕುಟುಂಬಕ್ಕೆ ಸಾಂತ್ವನ ಹೇಳುವರು. ಬೆಳಿಗ್ಗೆ 11ಕ್ಕೆ ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಕಬ್ಬು ಬೆಳೆಗಾರರೊಂದಿಗೆ ಸಮಾಲೋಚನೆ ನಡೆಸುವರು. ಬೆಳಿಗ್ಗೆ 11.45ಕ್ಕೆ ಕೆಐಡಿಬಿ ಹೆಲಿಪ್ಯಾಡ್‌ಗೆ ಬಂದು ಹೆಲಿಕಾಪ್ಟರ್‌ ಮೂಲಕ ಸುರಪುರಕ್ಕೆ ತೆರಳುವರು.

ಫೆ.26 ರಂದು ಸೇಡಂನಿಂದ ಹೆಲಿಕಾಪ್ಟರ್‌ ಮೂಲಕ ಸಂಜೆ 4.30ಕ್ಕೆ ಬಸವಕಲ್ಯಾಣಕ್ಕೆ ಬರುವರು. ಸಂಜೆ 4.40 ರಿಂದ 5.40ರ ವರೆಗೆ ಅನುಭವ ಮಂಟಪ ವೀಕ್ಷಿಸುವರು. ಸಂಜೆ 5.45ಕ್ಕೆ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಬಸವಕಲ್ಯಾಣ, ಭಾಲ್ಕಿ ಹಾಗೂ ಹುಮನಾಬಾದ್ ತಾಲ್ಲೂಕುಗಳ ಏಳು ಸಾವಿರ ಕಾರ್ಯಕರ್ತರು ವಿಶೇಷ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವರು. ಅಮಿತ್ ಶಾ ಸಂಜೆ 7.45ಕ್ಕೆ ಗುರುದ್ವಾರಕ್ಕೆ ಭೇಟಿ ಕೊಟ್ಟು ರಾತ್ರಿ 8.30ಕ್ಕೆ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸುವರು ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ್‌ ಠಾಕೂರ್, ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷ ಬಾಬು ವಾಲಿ, ಬಾಬುರಾವ್‌ ಕಾರಭಾರಿ, ಜಿಲ್ಲಾ ವಕ್ತಾರ ಬಸವರಾಜ ಜೋಜನಾ ಇದ್ದರು.

ಖೂಬಾ ಸಂಪರ್ಕಿಸಿಲ್ಲ: ಬೆಲ್ದಾಳೆ

ಬೀದರ್‌: ‘ಬಸವಕಲ್ಯಾಣದ ಜೆಡಿಎಸ್‌ ಶಾಸಕ ಬಿಜೆಪಿ ಬಾಗಿಲು ತಟ್ಟುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರು ಬಿಜೆಪಿಯ ಯಾವ ಮುಖಂಡರನ್ನೂ ಸಂಪರ್ಕಿಸಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ತಿಳಿಸಿದರು.

‘ಬಸವಕಲ್ಯಾಣದಿಂದ ಸ್ಪರ್ಧಿಸಲು ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದಾರೆ. ಅವರಿಗೆ ಪಕ್ಷ ಟಿಕೆಟ್‌ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

‘ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಅಮಿತ್‌ ಶಾ ಬಸವಕಲ್ಯಾಣಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಬಸವಣ್ಣನ ಬಗ್ಗೆ ಪ್ರಸ್ತಾಪಿಸಿದ ನಂತರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅನುಭವ ಮಂಟಪಕ್ಕೆ ಭೇಟಿ ನೀಡಿ ಹೋಗಿದ್ದಾರೆ’ ಎಂದು ತಿಳಿಸಿದರು.

‘ರಾಹುಲ್‌ ಗಾಂಧಿಗೆ ದೇಶದ ಸಂಸ್ಕೃತಿ ಗೊತ್ತಿಲ್ಲ. ಅವರಿಗೆ ಸರಿಯಾಗಿ ರಾಷ್ಟ್ರಗೀತೆ ಹಾಡಲು ಬರುತ್ತದೆಯೋ ಇಲ್ಲವೋ ಎನ್ನುವ ಸಂಶಯ ಬರುತ್ತಿದೆ’ ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)