‘ಪುಸ್ತಕ ಜಾಥಾ’ಕ್ಕೆ ಬಜೆಟ್‌ನಲ್ಲಿ ₹ 1.5 ಕೋಟಿ

7

‘ಪುಸ್ತಕ ಜಾಥಾ’ಕ್ಕೆ ಬಜೆಟ್‌ನಲ್ಲಿ ₹ 1.5 ಕೋಟಿ

Published:
Updated:
‘ಪುಸ್ತಕ ಜಾಥಾ’ಕ್ಕೆ ಬಜೆಟ್‌ನಲ್ಲಿ ₹ 1.5 ಕೋಟಿ

ದಾವಣಗೆರೆ: ಪುಸ್ತಕ ಪ್ರಾಧಿಕಾರ ಒಳಗೊಂಡಂತೆ ವಿವಿಧ ಅಕಾಡೆಮಿಗಳು ಪ್ರಕಟಿಸಿದ ಪುಸ್ತಕಗಳನ್ನು ಜನರಿದ್ದ ಸ್ಥಳಕ್ಕೆ ತೆಗೆದುಕೊಂಡು ಹೋಗಿ ರಿಯಾಯ್ತಿ ದರದಲ್ಲಿ ಮಾರಾಟ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ‘ಪುಸ್ತಕ ಜಾಥಾ’ ಅನುಷ್ಠಾನ ಹಮ್ಮಿಕೊಂಡಿದ್ದು, ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ₹ 1.5 ಕೋಟಿ ಮೀಸಲಿಟ್ಟಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಚ್ಚುಮೆಚ್ಚಿನ ಪುಸ್ತಕ ಯೋಜನೆಯಡಿ ಪ್ರೌಢಶಾಲಾ ವಿದ್ಯಾರ್ಥಿ ಗಳನ್ನು ಸಂಘಟಿಸಿ ನೆಚ್ಚಿನ ಪುಸ್ತಕ ಕುರಿತು ವರದಿ ಸಲ್ಲಿಸಿದರೆ ₹ 5 ಸಾವಿರ ಪ್ರೋತ್ಸಾಹ ನೀಡಲಾಗುವುದು. ಕಾಲೇಜು ವಿದ್ಯಾರ್ಥಿಗಳಿಗೆ ಜಾಣ-ಜಾಣೆಯರ ಬಳಗ ಯೋಜನೆಯಡಿ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಗುವುದು’ ಎಂದರು.

ಹಸ್ತಪ್ರತಿಯಿಂದ ಡಿಟಿಪಿ, ಕರಡಚ್ಚು ತಿದ್ದುವುದು, ಮುಖಪುಟ ವಿನ್ಯಾಸ ಇತ್ಯಾದಿಗಳಿಗೆ ಸಂಬಂಧಿಸಿ ದಂತೆ ಮಹಿಳೆಯರಿಗೆ ಶಿಬಿರ ಏರ್ಪಡಿಸಲಾಗುವುದು ಎಂದು ಹೇಳಿದರು.

ವಿಶೇಷ ಕೋರ್ಸ್‌: ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಕಾಶನದ ವಿವಿಧ ಹಂತಗಳಾದ ಹಸ್ತಪ್ರತಿಯಿಂದ ಆರಂಭಿಸಿ ಡಿಟಿಪಿ ಕರಡಚ್ಚು ತಿದ್ದುವುದು, ಪುಸ್ತಕ ಪ್ರಕರಣೆ, ಪ್ರಕಾಶನ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲು ಹಂಪಿ ಕನ್ನಡ ವಿಶ್ವವಿದ್ಯಾಲಯ, ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸಲು ಯೋಚಿಸಲಾಗಿದೆ ಎಂದರು.

ಪುಸ್ತಕೋದ್ಯಮ ಹುಟ್ಟಿ ಈವರೆಗೆ ನಡೆದು ಬಂದ ದಾರಿ ಬಗ್ಗೆ ಗ್ರಂಥ ಪ್ರಕಟಿಸಲು ಸಮಿತಿ ರಚಿಸಲಾಗಿದೆ. ರಾಜ್ಯದಲ್ಲಿ 22 ಕಡೆಗಳಲ್ಲಿ ಪ್ರಾಧಿಕಾರದ ಪರವಾಗಿ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಕಾರ್ಯನಿರ್ವಹಿಸುತ್ತಿದ್ದು, ಇವುಗಳನ್ನು ಇನ್ನಷ್ಟು ಸಕ್ರಿಯಗೊಳಿಸಲಾಗುವುದು. 2016ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹಧನ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮೊದಲು ನಡೆದ ಸಭೆಯಲ್ಲಿ ದಲಿತ ಮುಖಂಡರು ಮಾತನಾಡಿ, ‘ದಲಿತ ಸಮ್ಮೇಳನದಲ್ಲಿ ಸ್ಥಳೀಯ ಹೋರಾಟಗಾರ ಬಿ.ಕೃಷ್ಣಪ್ಪ ಅವರ ಜೀವನ ಸಾಧನೆ ಕುರಿತು ಗೋಷ್ಠಿ ನಡೆಸಬೇಕು. ಅಲ್ಲದೇ, ಸ್ಥಳೀಯ ಕಲಾವಿದರಿಗೆ ಗೋಷ್ಠಿಯಲ್ಲಿ ಅವಕಾಶ ನೀಡಬೇಕು’ ಎಂದು ಸಲಹೆ ನೀಡಿದರು.

ಸಭೆಯಲ್ಲಿ ದಲಿತ ಮುಖಂಡರಾದ ಚೌಡಪ್ಪ, ನಿಂಗಪ್ಪ, ಹೆಗ್ಗೆರೆ ರಂಗಪ್ಪ, ಉಚ್ಚಂಗಿ ಪ್ರಸಾದ್, ಸಾಹಿತಿ ಮಲ್ಲಿಕಾರ್ಜುನ ಕಡಕೋಳ, ಮಳಲಕೆರೆ ಗುರುಮೂರ್ತಿ, ಜಯಪ್ಪ, ಹುಚ್ಚವ್ವನಹಳ್ಳಿ ಭೀಮಪ್ಪ, ಸಿ.ಬಸವರಾಜಪ್ಪ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ,

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರೂ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry