ಭಾನುವಾರ, ಡಿಸೆಂಬರ್ 8, 2019
24 °C

‘ಜನಪ್ರತಿನಿಧಿಗಳಿಗೆ ಬೇಕಿದೆ ಸಂಸದೀಯ ಪಾಠ....’

ನಾಗೇಶ್ ಶೆಣೈ . Updated:

ಅಕ್ಷರ ಗಾತ್ರ : | |

‘ಜನಪ್ರತಿನಿಧಿಗಳಿಗೆ ಬೇಕಿದೆ ಸಂಸದೀಯ ಪಾಠ....’

ದಾವಣಗೆರೆ: ‘ಮೈಸೂರಿನಲ್ಲಿ ವೈದ್ಯಕೀಯ ಪದವಿ ಓದಿದ್ದ ನಾನು ಜನಸೇವೆ ಮಾಡಬೇಕೆಂಬ ಹಂಬಲ ಹೊಂದಿದವನು. 1980ರ ದಶಕದ ಆರಂಭದಲ್ಲಿ ಆಗಿನ ಶಾಸಕರ ಜೊತೆ ಭಿನ್ನಾಭಿಪ್ರಾಯದಿಂದ ಹಠಕ್ಕೆ ಬಿದ್ದು ರಾಜಕೀಯಕ್ಕೆ ಬಂದೆ. ನನ್ನ ಮಾವ ಕೆ.ಎಚ್‌.ಪಾಟೀಲರಿಗೆ ಆಪ್ತರಾಗಿದ್ದರು. ಹೀಗಾಗಿ ಪಕ್ಷದಿಂದ ಟಿಕೆಟ್‌ ಸಿಗುವುದು ನನಗೆ ಕಷ್ಟವಾಗಲಿಲ್ಲ. ಮೂರು ಸಲ ಶಾಸಕನೂ ಆದೆ. ಜನಪ್ರತಿನಿಧಿಯಾಗಿ ಮಾಡಿದ ಕೆಲಸದ ಬಗ್ಗೆ ತೃಪ್ತಿಯಿದೆ....’

ಹೀಗೆಂದು ತಮ್ಮ ರಾಜಕೀಯ ಜೀವನದ ಆರಂಭ ಮತ್ತು ಉತ್ತುಂಗದ ದಿನಗಳನ್ನು ನೆನಪಿಸಿಕೊಂಡವರು ಡಾ.ವೈ.(ಯರೆಸೀಮೆ) ನಾಗಪ್ಪ ಅವರು. ಹರಿಹರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಅವರು ಕೊನೆಯ ಅವಧಿಯಲ್ಲಿ ಗೆದ್ದ ನಂತರ (ಧರ್ಮಸಿಂಗ್‌ ಸಂಪುಟ– 2005ರಲ್ಲಿ) ಸಮಾಜ ಕಲ್ಯಾಣ ಸಚಿವರೂ ಆಗಿದ್ದರು. ಆರು ಬಾರಿ ಸ್ಪರ್ಧಿಸಿ ಯಶಸ್ಸನ್ನೂ, ಹಿನ್ನಡೆಯನ್ನೂ ಸಮಾನವಾಗಿ ಕಂಡಿದ್ದಾರೆ. 84 ವರ್ಷದ ನಾಗಪ್ಪ ಅವರಿಗೆ ರಾಜಕೀಯ ಸಾಗುತ್ತಿರುವ ಹಾದಿ, ಸಂಸದೀಯ ಶಿಸ್ತು ಪಾಲಿಸದಿರುವ ಜನಪ್ರತಿನಿಧಿಗಳ ಬಗ್ಗೆ ಅಸಮಾಧಾನವೂ ಇದೆ.

ಮೈಸೂರಿನಲ್ಲೇ ಹೈಸ್ಕೂಲ್‌, ಪದವಿ ಓದಿದ್ದ ಅವರು ಅಲ್ಲಿಯೇ ಎಂಬಿಬಿಎಸ್‌ ಪೂರೈಸಿದರು. ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸರ್ಕಾರಿ ವೃತ್ತಿಗೆ ಸೇರಿದ ನಾಗಪ್ಪ ಅವರು ಹುಟ್ಟೂರಿನಲ್ಲಿಯೇ ಸೇವೆ ಸಲ್ಲಿಸುವ ಬಯಕೆಯಿಂದ ಹರಿಹರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದರು. ಈ ಸಮಯದಲ್ಲೇ ಅವರು ರಾಜಕೀಯಕ್ಕೆ ಇಳಿಯಲು ನಿರ್ಧಾರ ಮಾಡಿದ್ದು.

‘ನನಗೂ, ಶಾಸಕ ಶಿವಪ್ಪ ಅವರಿಗೂ ಯಾವುದೊ ಒಂದು ವಿಷಯಕ್ಕೆ ಮನಸ್ತಾಪವಾಯಿತು. ಮನಸ್ಸಿಗೆ ಬೇಸರವಾಯಿತು. ನಾನೂ ಚುನಾವಣೆಗೆ ಸ್ಪರ್ಧಿಸಬೇಕೆಂದು ನಿರ್ಧರಿಸಿದೆ. ಚುನಾವಣೆಗೆ ಸ್ಪರ್ಧಿಸುವಂತೆ ಜನರೂ ಪ್ರೋತ್ಸಾಹಿಸಿದರು. ಸರ್ಕಾರಿ ಸೇವೆ ಬಿಟ್ಟುಬಂದೆ. ‘ಹುಲಕೋಟಿ ಹುಲಿ’ ಕೆ.ಎಚ್‌.ಪಾಟೀಲರು ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದರು. 1983 ಟಿಕೆಟ್‌ ಕೈತಪ್ಪಿತು. 1985ರಲ್ಲಿ ಜನತಾ ಪಕ್ಷದ ಬಿ.ಜಿ.ಕೊಟ್ರಪ್ಪ ಎದುರು ಸೋಲನುಭವಿಸಿದೆ. ನಂತರ 1989ರಲ್ಲಿ ಬಿ.ಪಿ.ಹರೀಶ್ ವಿರುದ್ಧ ಜಯ ಗಳಿಸಿದೆ’ ಎಂದು ಹೇಳಿದರು.

1994ರಲ್ಲಿ ಜನತಾದಳದ ಶಿವಪ್ಪ ಎದುರು ಸೋತರೂ, 1999 ಮತ್ತು 2004ರಲ್ಲಿ ಜಯಗಳಿಸಿದರು. 2008ರಲ್ಲಿ ಬಿ.ಪಿ.ಹರೀಶ್‌ ಎದುರು ಸೋತ ನಂತರ ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.

‘ನಮ್ಮ ರಾಜಕೀಯ ಆರಂಭದ ದಿನಗಳಲ್ಲಿ ಚುನಾವಣೆಗೆ ಇಷ್ಟೊಂದು ಖರ್ಚು ಇರುತ್ತಿರಲಿಲ್ಲ. ಹೆಚ್ಚೆಂದರೆ ₹ 5 ಲಕ್ಷದಿಂದ ₹10 ಲಕ್ಷದೊಳಗೆ ಮುಗಿದು ಹೋಗುತಿತ್ತು. 2008ರಿಂದ ದುಡ್ಡಿನ ಹೊಳೆ ಹರಿಯತೊಡಗಿತು. ಈಗ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಯ ವಾರ್ಡ್‌ ಸದಸ್ಯ ಕೋಟಿಗಟ್ಟಲೆ ಖರ್ಚು ಮಾಡಬೇಕಾದ ಪರಿಸ್ಥಿತಿಯಿದೆ’ ಎನ್ನುತ್ತಾರೆ ಅವರು.

‘ನನ್ನ ಅವಧಿಯಲ್ಲಿ ಹರಿಹರದ ಭೀಮನಗರ, ಕೆ.ಎನ್‌.ಹಳ್ಳಿ, ಹೊಳೆಸಿರಿಗೆರೆ ಮೊದಲಾದ ಕಡೆ ಆಶ್ರಯ ಕಾಲೊನಿ ನಿರ್ಮಿಸಿ ಒಟ್ಟು 5 ಸಾವಿರ ಆಶ್ರಯ ಮನೆಗಳನ್ನು ನೀಡಲಾಗಿತ್ತು’ ಎಂದು ಹೇಳಿದರು. ‘ನಾನು ಸ್ಪರ್ಧಿಸುತ್ತಿದ್ದಾಗ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಈಗಿನಂತೆ ಇರಲಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದೇ ಸ್ಪರ್ಧಿಸಿದ್ದೆ’ ಎಂದು ನೆನಪಿಸಿಕೊಂಡರು.

ಕಾನೂನು ತರಲಿ: ‘ಜನಪ್ರತಿನಿಧಿಗಳಲ್ಲಿ ಈಗ ಶಿಸ್ತು ಕಡಿಮೆಯಾಗುತ್ತಿದೆ. ಸದನಕ್ಕೆ ಗೈರುಹಾಜರಾಗುವವರೇ ಹೆಚ್ಚು. ಸದನದ ಕಲಾಪದಲ್ಲಿ ಭಾಗವಹಿಸಲು ಸಿದ್ಧತೆ ನಡೆಸುವುದಿಲ್ಲ. ಅರ್ಥಪೂರ್ಣ ಚರ್ಚೆಗಳೂ ಕಡಿಮೆಯಾಗಿವೆ. ವೈಯಕ್ತಿಕ ಹಿತಾಸಕ್ತಿ, ಲಾಭಕ್ಕಾಗಿ ರಾಜಕೀಯಕ್ಕೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸದನಕ್ಕೆ ಇಂತಿಷ್ಟು ದಿನಗಳು ಹಾಜರಾಗಲೇ ಬೇಕು ಎಂಬ ಕಾನೂನು ಜಾರಿಯಾದರೆ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.

ಕುಸ್ತಿಯಲ್ಲೂ ಚಾಂಪಿಯನ್‌!

ನಾಗಪ್ಪ ಅವರದು ಪೈಲ್ವಾನರ ಕುಟುಂಬ. ನಾಗಪ್ಪ ಅವರೂ ದಸರಾ ಕುಸ್ತಿ, ವಿಶ್ವವಿದ್ಯಾಲಯ ಮಟ್ಟದಲ್ಲಿ ಕುಸ್ತಿ ಆಡಿದವರು. ‘ನನ್ನ ತಂದೆ, ಅಜ್ಜ ಕೂಡ ಕುಸ್ತಿ ಪೈಲ್ವಾನರು. ನಾನು ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅವರು ದಸರಾ ಕುಸ್ತಿಯಲ್ಲಿ ನಾಲ್ಕು ಬಾರಿ ಚಾಂಪಿಯನ್‌ ಆಗಿದ್ದೆ. ಎಂ.ಜಿ.ಶ್ರೀನಿವಾಸರಾವ್‌ ಸ್ಮಾರಕ ಕುಸ್ತಿ ಸ್ಪರ್ಧೆಯಲ್ಲೂ ಪದಕ ಬಂದಿತ್ತು. ಅಂತರ ವಿಶ್ವವಿದ್ಯಾಲಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಮೂರು ಬಾರಿ ಪ್ರತಿನಿಧಿಸಿದ್ದೆ’ ಎಂದು ಅವರು ಹೆಮ್ಮೆಯಿಂದ ನೆನಪಿಸಿಕೊಂಡರು.

ಪ್ರತಿಕ್ರಿಯಿಸಿ (+)