ಸೋಮವಾರ, ಮೇ 25, 2020
27 °C

ದ್ವಿತೀಯ ಪಿಯು ಪರೀಕ್ಷೆಗೆ ಜಿಪಿಎಸ್‌ ನಿಗಾ

ಜೋಮನ್ ವರ್ಗೀಸ್ Updated:

ಅಕ್ಷರ ಗಾತ್ರ : | |

ದ್ವಿತೀಯ ಪಿಯು ಪರೀಕ್ಷೆಗೆ ಜಿಪಿಎಸ್‌ ನಿಗಾ

ಗದಗ: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಮತ್ತು ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆಪತ್ರಿಕೆ ಸಾಗಿಸುವ ವಾಹನಗಳ ಮೇಲೆ ನಿರಂತರ ನಿಗಾ ವಹಿಸಲು ಈ ಬಾರಿ ಜಿಪಿಎಸ್‌ (ಗ್ಲೋಬಲ್‌ ಪೊಸಿಷನಿಂಗ್ ಸಿಸ್ಟಮ್‌)ತಂತ್ರಜ್ಞಾನ ಬಳಸಲು ಪದವಿಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ.

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್‌ 1ರಿಂದ 17ರವರೆಗೆ ನಡೆಯಲಿದೆ. 2016ರಲ್ಲಿ ದ್ವಿತೀಯ ಪಿಯುಸಿ ರಸಾಯನವಿಜ್ಞಾನ ಪ್ರಶ್ನೆ ಪತ್ರಿಕೆ ಖಜಾನೆಯಿಂದಲೇ ಸೋರಿಕೆಯಾಗಿತ್ತು. ಹೀಗಾಗಿ ಈ ಬಾರಿ ಖಜಾನೆಯಿಂದ ಪ್ರಶ್ನೆಪತ್ರಿಕೆ ಸಾಗಿಸುವ ವಾಹನಗಳಿಗೆ ‘ಜಿಪಿಎಸ್‌’ ಸಾಧನ ಅಳವಡಿಸಲು ಇಲಾಖೆ ಮುಂದಾಗಿದೆ. ಇದೇ ಮೊದಲ ಬಾರಿಗೆ ಈ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ.

‘ಜಿಲ್ಲೆಯಲ್ಲಿ ಒಟ್ಟು 18 ಪರೀಕ್ಷಾ ಕೇಂದ್ರಗಳಿದ್ದು, ಈ ಬಾರಿ 11,202 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲಾ ಕೇಂದ್ರದಿಂದ ಈ ಪರೀಕ್ಷಾ ಕೇಂದ್ರಗಳಿಗೆ ಒಟ್ಟು 8 ವಾಹನಗಳಲ್ಲಿ ಪ್ರಶ್ನೆ ಪತ್ರಿಕೆ ರವಾನೆಯಾಗುತ್ತದೆ. ಈ ಎಲ್ಲ ವಾಹನಗಳಿಗ ಜಿಪಿಎಸ್‌ ಅಳವಡಿಸಿಕೊಳ್ಳುವಂತೆ ಸೂಚನೆ ಬಂದಿದೆ. ಫೆ. 24ರಂದು ತಜ್ಞರು ಜಿಪಿಎಸ್‌ ಅಳವಡಿಕೆ ಮಾಡಿಕೊಡಲಿದ್ದಾರೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಆರ್. ಚವ್ಹಾಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಪಿಎಸ್‌ ಅಳವಡಿಕೆಯಿಂದ ಪ್ರಶ್ನೆಪತ್ರಿಕೆ ಸಾಗಿಸುವ ವಾಹನ ಯಾವ ಕ್ಷಣ, ಎಲ್ಲಿದೆ ಎನ್ನುವುದನ್ನು ನಿಖರವಾಗಿ ತಿಳಿಯಬಹುದು. ಯಾವುದೇ ವಿಳಂಬ, ಅಕ್ರಮಕ್ಕೆ ಅವಕಾಶ ಇರುವುದಿಲ್ಲ. ಇದರಜತೆ ಜಿಲ್ಲೆಯ 18 ಪರೀಕ್ಷಾ ಕೇಂದ್ರದಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಸಂಪೂರ್ಣ ನಿಗಾ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಯಲಿದೆ’ ಎಂದು ಅವರು ಹೇಳಿದರು.

‘18 ಕೇಂದ್ರಗಳಲ್ಲಿ 5 ಸೂಕ್ಷ್ಮ ಮತ್ತು 3 ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳಿವೆ. ಇಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತ ನೀಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಒಬ್ಬರು ಅಧಿಕಾರಿ ಮೇಲುಸ್ತುವಾರಿ ವಹಿಸುತ್ತಾರೆ. ಪರೀಕ್ಷಾ ಕೇಂದ್ರಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗಳಿಗೆ ಅನುಗುಣವಾಗಿ ವಿಚಕ್ಷಣಾ ದಳ ನೇಮಿಸಲಾಗಿದೆ. ತಾಲ್ಲೂಕು, ಜಿಲ್ಲಾಮಟ್ಟದ ಸಂಚಾರಿ ವಿಚಕ್ಷಣ ದಳವನ್ನು ನೇಮಿಸಲಾಗಿದೆ. ಒಟ್ಟು 250 ಸಿಬ್ಬಂದಿ ಪರೀಕ್ಷೆ ಸಂದರ್ಭದಲ್ಲಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಅವರು ಹೇಳಿದರು.

ಫಲಿತಾಂಶ ಸುಧಾರಣೆಗೆ ಕ್ರಮ

ಕಳೆದ ಸಾಲಿನ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯು ಗಮನಾರ್ಹ ಪ್ರಗತಿ ದಾಖಲಿಸಿತ್ತು. ಶೇ 53.11ರಷ್ಟು ಫಲಿತಾಂಶ ದಾಖಲಿಸುವ ಮೂಲಕ ರಾಜ್ಯಮಟ್ಟದಲ್ಲಿ 23ನೇ ಸ್ಥಾನ ಪಡೆದಿತ್ತು. 2016ರಲ್ಲಿ ಶೇ 49.28ರಷ್ಟು ಫಲಿತಾಂಶದೊಂದಿಗೆ 29ನೇ ಸ್ಥಾನದಲ್ಲಿತ್ತು. 2015ನೇ ಸಾಲಿನಲ್ಲಿ ಜಿಲ್ಲೆಯು ಫಲಿತಾಂಶದಲ್ಲಿ ಕೊನೆಯ ಸ್ಥಾನ ಗಳಿಸಿತ್ತು.

‘ಕೊನೆಯ ಸ್ಥಾನ’ದ ಅವಮಾನ ಕಿತ್ತೊಗೆಯಲು ಪಿಯು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಉಪನ್ಯಾಸಕರು ರೂಪಿಸಿದ ಹಲವು ಕಾರ್ಯಕ್ರಮಗಳ ಪೈಕಿ ವಿದ್ಯಾರ್ಥಿ ಸಹಾಯವಾಣಿ, ಕಂಠಪಾಠ ಕಳೆದ ಬಾರಿ ಸಾಕಷ್ಟು ಫಲ ನೀಡಿತ್ತು.

ಈ ಬಾರಿಯೂ ಪ್ರಶ್ನೆಪತ್ರಿಕೆ ಬಿಡಿಸುವ ಕಾರ್ಯಾಗಾರ, ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ, ವಸತಿ ನಿಲಯಗಳಲ್ಲಿ ತಜ್ಞ ಉಪನ್ಯಾಸಕರಿಂದ ಇಂಗ್ಲಿಷ್‌ ತರಬೇತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ 3 ಬಾರಿ ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗಿದೆ. ಈ ಎಲ್ಲ ಪ್ರಯತ್ನಗಳ ಫಲವಾಗಿ ರಾಜ್ಯಮಟ್ಟದಲ್ಲಿ ಫಲಿತಾಂಶ ಪಟ್ಟಿಯಲ್ಲಿ 10ರೊಳಗೆ ಸ್ಥಾನ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎಂದು ಕೆ.ಆರ್‌. ಚವ್ಹಾಣ ಹೇಳಿದರು.

* * 

ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಬಿಡಿಸುವ ಕಾರ್ಯಾಗಾರ ಆಯೋಜಿಸಲಾಗಿದೆ. ಈ ಬಾರಿ ಫಲಿತಾಂಶ ಪಟ್ಟಿಯಲ್ಲಿ 10ರ ಒಳಗೆ ಸ್ಥಾನ ಪಡೆಯುವ ಗುರಿ ಇದೆ ಕೆ.ಆರ್.ಚವ್ಹಾಣ ಡಿಡಿಪಿಯು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.