ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜವಂಶಸ್ಥರಿಂದ ವಿರಾಗಿಗೆ ಅಭಿಷೇಕ

Last Updated 24 ಫೆಬ್ರುವರಿ 2018, 9:09 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ‘ಶ್ರವಣಬೆಳಗೊಳ ಮತ್ತು ಮೈಸೂರು ಸಂಸ್ಥಾನದ ನಡುವೆ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ’ ಎಂದು ಮೈಸೂರಿನ ರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶುಕ್ರವಾರ ಹೇಳಿದರು.

ವಿಂಧ್ಯಗಿರಿಯನ್ನು ಕಾಲ್ನಡಿಗೆಯಲ್ಲಿ ಹತ್ತಿ ಪ್ರಥಮ ಮೋಕ್ಷಗಾಮಿ ಭಗವಾನ್‌ ಬಾಹುಬಲಿ ಸ್ವಾಮಿಗೆ ಜಲಾಭಿಷೇಕ ನೆರವೇರಿಸಿದ ನಂತರ ಅವರು ಮಾತನಾಡಿದರು.

‘ಹಿಂದೆಯೂ ಮಹಾಮಸ್ತಕಾ ಅಭಿಷೇಕದಲ್ಲಿ ರಾಜ ಮನೆತನದವರು ಪಾಲ್ಗೊಂಡಿದ್ದರು. ನಾವು ಆ ಸಂಪ್ರದಾಯ ಮುಂದುವರಿಸುತ್ತಿದ್ದೇವೆ. ಬಾಹುಬಲಿಗೆ ಅಭಿಷೇಕ ಕಾರ್ಯವನ್ನು ವೀಕ್ಷಿಸಿದ್ದು ಅದ್ಭುತ ಅನುಭವ. ಈ ಭವ್ಯ ಪರಂಪರೆ ಖುಷಿ ತಂದಿದೆ’ ಎಂದರು.

ಬೆಳಿಗ್ಗೆ 11ಕ್ಕೆ ಯದುವೀರ ಕೃಷ್ಣದತ್ತ ಒಡೆಯರ್ ಅವರು ವಿಂಧ್ಯಗಿರಿ ಬೆಟ್ಟವನ್ನು ಪಶ್ಚಿಮ ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ಏರಿದ್ದು, ಅಸಂಖ್ಯ ಜನರ ಸಮ್ಮುಖದಲ್ಲಿ ವೈರಾಗ್ಯಮೂರ್ತಿಗೆ, ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಜತೆಗೂಡಿ ಜಲಾಭೀಷೇಕ ನೇರವೇರಿಸಿ, ಪುಷ್ಪಾರ್ಚನೆ ಮಾಡಿದರು.

‘ನಾನು ಚಿಕ್ಕವನಿದ್ದಾಗ, ಶ್ರವಣಬೆಳಗೊಳಕ್ಕೆ ಬಂದಿದ್ದೆ ಎಂದು ಸ್ಮರಿಸಿದರು. ಕ್ಷೇತ್ರದ ಪೀಠಾಧಿಪತಿಯು ಈ ಸಂದರ್ಭ ಯದುವೀರರಿಗೆ ಬೆಳ್ಳಿ ಕಳಶ ನೀಡಿ ಗೌರವಿಸಿದರು.

1940ರ ಫೆ.26ರಂದು ನಡೆದ ಮಹಾಮಸ್ತಕಾಭಿಷೇಕದಲ್ಲಿ ಮೈಸೂರಿನ ರಾಜ ಕೃಷ್ಣರಾಜ ಒಡೆಯರ್‌ ಅವರು ರಾಜಕುಮಾರ ಜಯಚಾಮರಾಜ ಒಡೆಯರ್‌ ಅವರ ಜೊತೆಯಲ್ಲಿ ಭಾಗವಹಿಸಿ ಬಾಹುಬಲಿ ಸ್ವಾಮಿಗೆ ಅಭಿಷೇಕವನ್ನು ಮಾಡಿದ್ದರು. ನಂತರ 1953ರ ಮಾರ್ಚ್‌ 5ರಂದು ಆಗ ಕರ್ನಾಟಕದ ರಾಜ್ಯಪಾಲರಾಗಿದ್ದ ಜಯಚಾಮರಾಜ ಒಡೆಯರ್‌ ಅವರು ಪ್ರಥಮ ಅಭಿಷೇಕವನ್ನು ನೆರವೇರಿಸಿದ್ದರು. ಈ ವರ್ಷ 7ನೇ ದಿನದ ಮಹಾಮಸ್ತಕಾಭಿಷೇಕದಲ್ಲಿ ಯದುವೀರ ಕೃಷ್ಣದತ್ತ ಒಡೆಯರ್‌ ಭಾಗವಹಿಸಿ ಪರಂಪರೆ ಮುಂದುವರಿಸಿದರು.

ಶುಕ್ರವಾರ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ 1008 ಕಲಶಗಳ ಸ್ಥಾಪನೆ ಮಾಡಿ ಜಲಾಭಿಷೇಕ ನೆರವೇರಿಸಲಾಯಿತು.

ನಂತರ ಎಳನೀರು, ಕಬ್ಬಿನಹಾಲು, ಹಾಲು, ಕಲ್ಕಚೂರ್ಣ, ಅರಿಸಿನ, ಕಷಾಯ, ಚತುಷ್ಕೋನ ಕಲಶ, ಕೇಸರಿ, ಶ್ರೀಗಂಧ, ಚಂದನ, ಅಷ್ಟಗಂಧ, ಶಾಂತಿಧಾರಾ ಮಹಾಮಂಗಳಾರತಿ ನೆರವೇರಿಸಲಾಯಿತು. ಇಂದಿನ ಮಹೋತ್ಸವದಲ್ಲಿ ಸಹಸ್ರಾರು ಜನರು ಭಕ್ತಿಯನ್ನು ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT