ದಶಕಗಳ ಕನಸು ನನಸಾದ ಕ್ಷಣ

7

ದಶಕಗಳ ಕನಸು ನನಸಾದ ಕ್ಷಣ

Published:
Updated:
ದಶಕಗಳ ಕನಸು ನನಸಾದ ಕ್ಷಣ

ಹಿರೇಕೆರೂರ: ಅನೇಕ ವರ್ಷಗಳ ಹೋರಾಟದ ಫಲವಾಗಿ ತಾಲ್ಲೂಕಿನ ರಟ್ಟೀಹಳ್ಳಿ ಭಾಗವನ್ನು ವಿಭಜಿಸಿ ಸರ್ಕಾರ ಹೊಸ ತಾಲ್ಲೂಕು ಘೋಷಣೆ ಮಾಡಿದೆ. ರಟ್ಟೀಹಳ್ಳಿ ಕೇಂದ್ರವಾಗಿಸಿಕೊಂಡು ನೂತನ ತಾಲ್ಲೂಕು ಫೆ.24ರಂದು ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.

ಅಭಿವೃದ್ಧಿ ದೃಷ್ಟಿಯಿಂದ 126 ಹಳ್ಳಿಗಳನ್ನು ಹೊಂದಿದ್ದ ಹಿರೇಕೆರೂರ ತಾಲ್ಲೂಕನ್ನು ಸಮನಾಗಿ 63 ಹಳ್ಳಿಗಳಂತೆ ವಿಭಾಗ ಮಾಡಿ, ಹೋಬಳಿ ಕೇಂದ್ರವಾಗಿರುವ ರಟ್ಟೀಹಳ್ಳಿಯ ಸುತ್ತಮುತ್ತಲಿನ ಹಳ್ಳಿಗಳನ್ನು ಸೇರಿಸಿ ಸರ್ಕಾರ ತಾಲ್ಲೂಕು ಘೋಷಣೆ ಮಾಡಿದೆ. ಹೊಸ ತಾಲ್ಲೂಕಿನಿಂದ ಈ ಭಾಗದ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ ಎಂಬ ನಿರೀಕ್ಷೆ ಇದೆ.

ತಾಲ್ಲೂಕು ರಚನೆ ಕುರಿತು ಸರ್ಕಾರ ನೇಮಿಸಿದ್ದ ಗದ್ದಿಗೌಡರ ಹಾಗೂ ಹುಂಡೇಕಾರ ಸಮಿತಿಗಳು ರಟ್ಟೀಹಳ್ಳಿ ತಾಲ್ಲೂಕು ಕೇಂದ್ರ ಮಾಡುವುದು ಸೂಕ್ತ ಎಂಬ ವರದಿಯನ್ನು ನೀಡಿದ್ದವು. ಆದರೆ ಅದಕ್ಕೆ ಇಲ್ಲಿಯವರೆಗೆ ಕಾಲ ಕೂಡಿ ಬಂದಿರಲಿಲ್ಲ, ಈಗ ಹೊಸ ತಾಲ್ಲೂಕು ಕಾರ್ಯಾರಂಭ ಮಾಡುತ್ತಿರುವುದು ಈ ಭಾಗದ ಜನತೆಯಲ್ಲಿ ಸಂಭ್ರಮ ಹೆಚ್ಚಿಸಿದೆ.

ವಿಸ್ತೀರ್ಣ ಮತ್ತು ಜನಸಂಖ್ಯೆ: 2011ರ ಜನಗಣತಿ ಪ್ರಕಾರ ಹಿರೇಕೆರೂರ ತಾಲ್ಲೂಕಿನ ಒಟ್ಟು ಜನಸಂಖ್ಯೆ 2,31,115 ಇದೆ. ಹಿರೇಕೆರೂರ ತಾಲ್ಲೂಕು ಇಬ್ಭಾಗ ಮಾಡಿ ರಚಿಸಿರುವ ನೂತನ ರಟ್ಟೀಹಳ್ಳಿ ತಾಲ್ಲೂಕಿನ ಜನಸಂಖ್ಯೆ 1,10, 975. ನೂತನ ರಟ್ಟಿಹಳ್ಳಿ ತಾಲ್ಲೂಕು 1,02, 163 ಎಕರೆ ಭೌಗೋಳಿಕ ವಿಸ್ತೀರ್ಣ ಹೊಂದಿದೆ. ಇದರಲ್ಲಿ 11, 185. 01 ಎಕರೆ ನೀರಾವರಿ, 13,513.14 ಎಕರೆ ಅರಣ್ಯಕ್ಷೇತ್ರ, 231.08 ಎಕರೆ ಹುಲ್ಲುಗಾವಲು ಇದೆ.

ರಟ್ಟೀಹಳ್ಳಿ ತಾಲ್ಲೂಕಿಗೆ ೬೩ ಹಳ್ಳಿಗಳು: ರಟ್ಟೀಹಳ್ಳಿ, ತೋಟಗಂಟಿ, ಕಡೂರು, ಹಿರೇಮಾದಾಪುರ, ಚಿಕ್ಕಯಡಚಿ, ಹಿರೆಯಡಚಿ, ಕ್ಯಾತನಕೇರಿ, ಹಿರೆಮೊರಬ, ಶಿರಗುಂಬಿ, ದೊಡ್ಡಗುಬ್ಬಿ, ಮಕರಿ, ಹಳ್ಳೂರು, ಕಮಲಾಪುರ, ಮೈದೂರು, ಶಂಕರನಹಳ್ಳಿ ಎಂ.ಡಿ., ಕಿರಗೇರಿ, ಪುರದಕೇರಿ, ಚಟ್ನಳ್ಳಿ, ಗುಳ್ಳಾಪುರ, ಕಣವಿಸಿದ್ದಗೇರಿ, ಸಣ್ಣಗುಬ್ಬಿ, ಪರ್ವತಸಿದ್ದಗೇರಿ, ಜೋಕನಾಳ, ಯಲಿವಾಳ, ಮಳಗಿ, ಚಪ್ಪರದಹಳ್ಳಿ, ಚಿಕ್ಕಮೊರಬ, ಕುಡಪಲಿ, ಬಡಸಂಗಾಪುರ, ಯಡಗೋಡ, ಹಿರೆಕಬ್ಬಾರ, ಗಲಗಿನಕೊಪ್ಪ, ಚಿಕ್ಕಕಬ್ಬಾರ, ಇಂಗಳಗೊಂದಿ, ಸತ್ತಗಿಹಳ್ಳಿ, ಗುಂಡಗಟ್ಟಿ, ಹೊಸಳ್ಳಿ, ತಡಕನಹಳ್ಳಿ, ಕೆಂಚಾಯಿಕೊಪ್ಪ, ಅಂಗಾರಗಟ್ಟಿ, ಹಳಿಯಾಳ, ಮೇದೂರು, ಗಂಗಾಯಿಕೊಪ್ಪ, ಹೊಸಕಟ್ಟಿ, ತಿಮಲಾಪುರ, ನಾಗವಂದ, ಅಣಜಿ, ಗುಡ್ಡದಮಾದಾಪುರ, ಕೋಡಮಗ್ಗಿ, ಯತ್ತಿನಹಳ್ಳಿ ಎಂ.ಎಂ., ಹುಲ್ಲತ್ತಿ, ಹಿರೆಮತ್ತೂರ, ನೇಶ್ವಿ, ಮಾವಿನತೋಪು, ಕೋಡಿಹಳ್ಳಿ, ಮಾಸೂರು, ರಾಮತೀರ್ಥ, ಖಂಡೇಬಾಗೂರು, ತಿಪ್ಪಾಯಿಕೊಪ್ಪ, ಲಿಂಗದೇವರಕೊಪ್ಪ, ಕುಂಚೂರು, ಬತ್ತಿಕೊಪ್ಪ ಹಾಗೂ ತಿಮಲಾಪುರ.

ಕಚೇರಿಗೆ ಕಟ್ಟಡ: ತಾಲ್ಲೂಕು ಕಚೇರಿಗೆ ಕಟ್ಟಡಗಳನ್ನು ಗುರುತಿಸಿದೆ. ಇಲ್ಲಿನ ತುಂಗಾ ಮೇಲ್ದಂಡೆ ಯೋಜನೆ ಕಚೇರಿಗೆ ಸೇರಿದ 36 ವಸತಿಗೃಹಗಳನ್ನು ವಿವಿಧ ಇಲಾಖೆಗಳ ತಾಲ್ಲೂಕು ಕಚೇರಿಗಳನ್ನಾಗಿಸಿಕೊಳ್ಳಲು ಮುಂದಾಗಿದೆ. ರಟ್ಟೀಹಳ್ಳಿ ಪಟ್ಟಣದಲ್ಲಿ ಕೆಲವು ಕಚೇರಿಗಳನ್ನು ಸಹ ಗುರುತಿಸಲಾಗಿದೆ.

ಕೆ.ಎಚ್.ನಾಯಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry