ಮೇನೆ ಇಗೋ ಅಣಿಯಾಗಿದೆ

7
ಪೂರ್ಣಿಮಾ ಸುರೇಶ್

ಮೇನೆ ಇಗೋ ಅಣಿಯಾಗಿದೆ

Published:
Updated:
ಮೇನೆ ಇಗೋ ಅಣಿಯಾಗಿದೆ

ದಾಟಬೇಕೀಗ ಋಣದ ಪಾತಕವನ್ನು;

ತೊಡೆದು ಬಿಡಬೇಕು ಅಂಟಿರುವ ಕಿಲುಬನ್ನು;

ಅದಕೆಂದೇ ಕಾದಿರುವೆ, ನಾಳೆ ಮೊಗದೋರಲಿರುವ

ಸೂರ್ಯನಿಗಾಗಿ ಕಾತರಿಸಿ:

ಕತ್ತಲೀಗ ಅಮರಿ

ಒಳ ಹೊರಗನಾಳುತಿದೆ ಉಸಿರನ್ನು ಒತ್ತರಿಸಿ;

ಬೇಕಿದೆ ಸೂತಕದ ಈ ರಾತ್ರಿಗೊಂದು

ಚುಕ್ಕೆ ಹಣತೆಯ ದೀಪ್ತಿ;

ಚದುರಬೇಕಾಗಿದೆ ಮನವ ಮುಸುಕಿರುವ ಸುಪ್ತಿ.

ನನ್ನ ಅಂಗಳದಲ್ಲಿ ನಾನೇ ನೆಟ್ಟಿರುವ

ಗುಲಾಬಿ, ದಾಸವಾಳಗಳ

ಧ್ಯಾನಸ್ಥ ಸ್ಥಿತಿಯ ಮೌನ ಮೊಗ್ಗುಗಳು.

ತಮ್ಮೊಳಗೇ ಬಿಚ್ಚಿಟ್ಟಿರುವ

ಘಮಘಮ ಮಕರಂದವರ್ಪಿಸಲು

ಕಾದಿರುವೆ ನಾಳೆ ಮೈದೋರಲಿರುವ ಸೂರ್ಯನಿಗಾಗಿ.

ಕಿರಣದೀಟಿಗಳೊಡನೆ ಅವ ಬಂದು

ಋಣದ ಸೂತಕ ಹರಿಯಲೆಂದು.

ಪರಮಾನ್ನ ಪಂಚಾಮೃತ ತಯಾರಿಸಿಯಾಗಿದೆ;

ಮಧುಮಧುರ ಕ್ಷೀರ ಅಣಿಯಾಗಿದೆ;

ಆದರದನ್ನು ಬಳಸಬಾರದೆಚ್ಚರ

ಬಗೆಯನ್ನು ತಡೆದಿದೆ;

ಮೊದಲು ಕಿತ್ತೊಗೆಯಬೇಕು ಸೂತಕದ ಬಲೆ:

ಸ್ವಚ್ಛಗೊಳಿಸಬೇಕು ತೊಳೆದು ಕಲುಷಿತ ಹೊಲೆ;

ದೂಳು ಕವಿದು ಮಲಿನಗೊಂಡಿರುವುದಲ್ಲಲ್ಲಿ;

ಗುರುತಿರದಂತೆ ಅದನು ಗುಡಿಸಿ ಸಾರಿಸಬೇಕು;

ದೇವರ ಗುಡಿಗೂ ಚಾಚಿದೆ ಸೂತಕದ ಕರಿನೆರಳು;

ಉಸಿರುಗಟ್ಟಿಸುವ ಘಾಟಿನ ಉರುಳು;

ಹಂಗಿನ ಸೂತಕದ ಸಂಕೋಲೆಯಿಂದ

ಬಿಡಿಸಿಕೊಳ್ಳಬೇಕಾಗಿದೆ ನನ್ನನ್ನು.

ಹೊಸ ಅರಿವಿನ ಬೆಳಕಲ್ಲಿ ತೆರೆಯಬೇಕು ಒಳಗಣ್ಣನ್ನು;

ನಾಳೆ ಭೇಟಿಯಾಗುವ ಪ್ರಕಾಶದಲ್ಲಿ ಮುಖವನೀಕ್ಷಿಸಬೇಕು;

ಉದ್ದೀಪಿಸುವ ನವ ಭಾವನೆಗಳಿಗೆ

ಅಂದದ ವೇದಿಕೆ ಕಟ್ಟಬೇಕು.

ಮಾಡಿಟ್ಟ ಅಡುಗೆಯನ್ನು ಬಾಯ್ದೆರೆದು ಕೂತ ಎಲೆಗಳಿಗೆ ಬಡಿಸಿರುವೆ;

ಗಿಡದ ಮೊಗ್ಗುಗಳೆಲ್ಲ ಬಿರಿದು ನರುಗಂಪು ಪಸರಿಸಿವೆ.

ಗರ್ಭಗುಡಿಯೊಳಗೆ ಮೆರೆದಿರುವ ನನ್ನ ನೀಲನಿಗೆ

ಪಚ್ಚೆಕರ್ಪೂರ ಧೂಪ ದೀಪದಾರತಿಯನೆತ್ತಬೇಕು.

ಹ್ಞಾ , ಕಿವಿಯ ಬಳಿ ಪಿಸುಗುಡಬೇಡ, ಗೆಳೆಯ

ಹಂಗಿನ ಸೂತಕವು ಕಳೆದಾಗಿದೆ;

ನಾನೀಗ ಪೊರೆ ಕಳಚಿ ಹಾರಲಿದ್ದೇನೆ

ವಿಮಲ ಜ್ಯೋತಿಯ ಕಡೆಗೆ.

ಮೇನೆ ಇಗೋ ಅಣಿಯಾಗಿದೆ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry