ಬೆಳ್ಳಿ ಬೆಕ್ಕಿನ ತುಂಟ ಮರಿಗಳು

7
ಕೃಷ್ಣವೇಣಿ ಕಿದೂರ್

ಬೆಳ್ಳಿ ಬೆಕ್ಕಿನ ತುಂಟ ಮರಿಗಳು

Published:
Updated:
ಬೆಳ್ಳಿ ಬೆಕ್ಕಿನ ತುಂಟ ಮರಿಗಳು

ಬೆಳ್ಳಿ ಬೆಕ್ಕಮ್ಮಳಿಗೆ ತನ್ನ ಮೂರು ಮರಿಗಳ ತುಂಟತನವನ್ನು ದಿನದಿಂದ ದಿನಕ್ಕೆ ಸಹಿಸಲು ಅಸಾಧ್ಯವಾಗಿತ್ತು. ಮಲಗಿದ ಕೂಡಲೆ ಬಂದು ಬಾಲ ಕಚ್ಚಿ ಎಳೆಯುವುದು, ಬೆನ್ನ ಮೇಲೆ ಹತ್ತಿ ಹಾರುವುದು, ಅಮ್ಮನ ಕಿವಿಗೆ ತಮ್ಮ ಪುಟ್ಟ ಬಾಲ ಹಾಕಿ ಕೆದರುವುದು, ಆಕೆಯ ಹೊಟ್ಟೆಗೆ ಕಚ್ಚುವುದು, ಮೀಸೆ ಕೀಳುವುದು, ಪರಚುವುದು ಇತ್ಯಾದಿ ತರಲೆಗಳೇ. ಬೆಳ್ಳಿಗೆ ಸಾಕು ಸಾಕಾಗಿ ಹೋಗಿತ್ತು. ‘ಅದ್ಯಾರಪ್ಪ ಮಕ್ಕಳೆ ಮಾಣಿಕ್ಯ ಅಂತ ಹೇಳಿದವರು! ಇವೂ ಇದ್ದಾವೆ, ಶುದ್ಧ ತರ್ಲೆ, ಯಾರಾದರೂ ಕೇಳಿದರೆ ಕೊಟ್ಟೇ ಬಿಡುವಾ ಅನ್ನಿಸಿದೆ’ ಅಂತ ಗೋಳಾಡ್ತಿದ್ದಳು.

ಹೀಗಿದ್ದಾಗ ಬೆಳ್ಳಿ ಬೆಕ್ಕಮ್ಮಳ ಅಣ್ಣ ಅವಳನ್ನು ನೋಡಲು ಬಂದ. ಸೊರಗಿ ಬಡಕಲಾದ ತಂಗಿಯ ಸ್ಥಿತಿ ನೋಡಿ ಕಂಗಾಲಾಗಿ ಹೋದ. ತಂಗಿ ಮಕ್ಕಳ ಕೀಟಲೆಯಿಂದಾಗಿ ಪಡುವ ಕಷ್ಟವನ್ನು ವಿವರಿಸಿದಳು.

‘ಅಯ್ಯೋ... ಅದ್ಯಾಕೇ ಇನ್ನೂ ಈ ಗಡವಗಳನ್ನು ಮನೆಯಲ್ಲಿಟ್ಕೊಂಡಿದ್ದೀಯ? ನಮ್ಮವರದೇ ಶಾಲೆ ಇದೆ. ಅಲ್ಲಿ ಇಲಿ ಹಿಡಿಯುವುದು, ಜಿರಲೆ ತಿನ್ನುವ ವಿಧಾನ, ಬೇಟೆಯಾಡುವುದು, ಮರ ಹತ್ತುವುದು, ಹಾರುವುದು ಎಲ್ಲ ಕಲಿಸಿಕೊಡ್ತಾರೆ. ಕಳಿಸು ನಿನ್ನ ಮರಿಗಳನ್ನು ನನ್ನೊಡನೆ. ಮೀಸೆ ಬೆಕ್ಕಪ್ಪ ಚೆನ್ನಾಗಿ ಕಲಿಸ್ತಾರೆ. ವಿದ್ಯಾಭ್ಯಾಸ ಮುಗಿದು ಮರಳಿ ನಿನ್ನ ಬಳಿ ಬಂದಾಗ ನೀನೇ ನನ್ನ ಹೊಗಳ್ತೀ ಅವರ ಮೇಧಾವಿತನ ಕಂಡು. ಮೂರನ್ನೂ ನಾನು ಒಯ್ಯುತ್ತೇನೆ. ನನ್ನ ಹೆಂಡತಿ ಚೆನ್ನಾಗಿ ನೋಡಿಕೊಳ್ತಾಳೆ. ಶಾಲೆಗೆ ಹೋಗುವ ವಯಸ್ಸಾದ್ರೂ ಮುದ್ದು ಮಾಡ್ತ ಮನೆಯಲ್ಲಿರಿಸಿಕೊಂಡರೆ ತಪ್ಪೆಲ್ಲ ನಿಂದೇ ಅಲ್ವಾ’ ಎಂದ.

ಬೆಳ್ಳಿಗೆ ಹೌದಲ್ವಾ ಅನ್ನಿಸಿತು. ಅತ್ತು, ಕರೆದು, ಗೋಳಾಡುವ ಮರಿಗಳನ್ನು ಅಣ್ಣನ ಜೊತೆ ಕಳುಹಿಸಿದಳು. ಹಾಯಾಗಿ ಮರದಡಿ ಮಲಗಿ ಚೆನ್ನಾಗಿ ನಿದ್ದೆ ಮಾಡಿದಳು. ಮಕ್ಕಳು ಮೊದಲು ರಚ್ಚೆ ಹಿಡಿದರೂ ಹೊಸ ನೋಟ, ಹೊಸ ಜಾಗಕ್ಕೆ ಹಿಗ್ಗಿನಿಂದಲೇ ನಲಿಯುತ್ತ , ಕುಣಿಯುತ್ತ ನೆಗೆದವು. ದೂರ ಪ್ರಯಾಣದ ಬಳಿಕ ಮಾವನ ಮನೆ ಬಂತು. ನಡೆ ನಡೆದು ಸುಸ್ತಾದ ಮರಿಗಳು ಹಟ ಮಾಡುತ್ತಿದ್ದವು. ಮಾವಯ್ಯ ತನ್ನ ಹೆಂಡತಿಯನ್ನು ಕೂಗಿದ. ಆಕೆ ಮನೆಯ ಚಾವಣಿ ಏರಿ ಕೂತಿದ್ದಳು.

‘ನೋಡಿಲ್ಲಿ. ಇವರೆಲ್ಲ ನನ್ನ ತಂಗಿ ಮಕ್ಕಳು. ಇರಲಿ ಇಲ್ಲಿ. ನಿನಗೂ ಸಹಾಯ. ಮಕ್ಕಳನ್ನು ನೋಡಿಕೊಳ್ಳಲು ಯಾರನ್ನಾದರೂ ಕರೆತನ್ನಿ ಅಂತ ಪೀಡಿಸ್ತಿದ್ದೆಯಲ್ಲ; ಇಲ್ಲಿದ್ದಾವೆ. ಚೆನ್ನಾಗಿ ದುಡಿಸ್ಕೊ. ಸ್ವಲ್ಪ ಅಹಂಕಾರದವು ಅವರಮ್ಮನ ಹಾಗೆ. ಎರಡೇಟು ಬಿದ್ದರೂ ಪರವಾಗಿಲ್ಲ’ ಎಂದು ಹೇಳಿದ.

ತನ್ನ ಮಕ್ಕಳ ತುಂಟತನ ತಡೆಯದೆ ಸೋತ ಬೆಕ್ಕಿಗೆ ಹಿಗ್ಗಿತು. ಸಹಾಯಕ್ಕೆ ಯಾರನ್ನಾದರೂ ತನ್ನಿ ಅಂತ ಗೋಗರೆಯುತ್ತಲೇ ಇದ್ದಳಾಕೆ. ಈಗ ದಷ್ಟಪುಷ್ಟವಾದ ಮೂರು ಮರಿಗಳು ಸಿಕ್ಕರೆ ಲಾಭವೇ ತಾನೇ. ಪಿಳಿ ಪಿಳಿ ಕಣ್ಬಿಡುವ ಬೆಳ್ಳಿಯ ಮರಿಗಳನ್ನು ಮುಂದೆ ತಳ್ಳಿದ ಮಾವ.

‘ನೋಡಿ ನಿಮ್ಮ ಗುರುಗಳು ಅಲ್ಲಿದ್ದಾರೆ. ಅವರು ಹೇಳಿದ ಕೆಲಸ ಮಾಡಿಕೊಂಡು, ವಿಧೇಯರಾಗಿರಬೇಕು. ದಾದಾಗಿರಿ ಮಾಡಿದ್ರೋ ಬಾಲ ಕತ್ತರಿಸ್ತಾರೆ ಗುರುಗಳು. ಈಗಾಗಲೇ ಹತ್ತಾರು ಶಿಷ್ಯರಿಗೆ ಕಿವಿ, ಬಾಲ ಕತ್ತರಿಸಿ ಕಳಿಸಿದ್ದಾರೆ. ಅವರು ಹೇಳಿದಂತೆ ಕೇಳಿದರೆ ಅದೇ ವಿದ್ಯಾಭ್ಯಾಸ. ನಾಲ್ಕೇಟು ಹಾಕಿದರೆ ತಾನೇ ಪಾಠ ಅರ್ಥವಾಗುವುದು’ ಎಂದು ಹಿತವಚನ ಹೇಳಿದ.

ನಾಲ್ಕು ದಿನಗಳು ಕಳೆಯಬೇಕಾದರೆ ಮರಿಗಳಿಗೆ ಶಾಲೆ, ವಿದ್ಯಾಭ್ಯಾಸ ಎಂದರೆ ನಡುಕ ಶುರುವಾಯಿತು. ಕೂತರೆ ತಪ್ಪು, ನಿಂತರೆ ತಪ್ಪು. ಇನ್ನು ಮಾವಯ್ಯನ ಮರಿಗಳೋ ಶುದ್ಧ ಶುಂಠಿಗಳು. ಮರಿ ಜಿರಲೆ ಕಂಡರೂ ಹುಲಿ ಕಂಡ ಹಾಗೆ ಬೆದರಿ ಚೀರಾಡುತ್ತ ಇದ್ದವು. ಅವರ ರಾಗ ಕಿವಿಗೆ ಬಿದ್ದಾಗೆಲ್ಲ ಅಮ್ಮ ಬೆಕ್ಕು ಈ ಮರಿಗಳಿಗೆ ಒದೆ ಕೊಡುತ್ತಿದ್ದಳು. ‘ನಾವೇನೂ ಮಾಡಿಲ್ಲ’ ಅಂತ ಗೋಳಾಡಿದರೂ ಕಿವಿ ತಿರುಪುತ್ತಿದ್ದಳು. ಮೇಷ್ಟ್ರಮ್ಮ ಎಂದರೆ ಮರಿಗಳು ಗಡಗಡನೆ ನಡುಗತೊಡಗಿದವು. ಮಾವ ಬೆಕ್ಕಪ್ಪ ಊರ ಸಂಚಾರಕ್ಕೆ ಹೋದ ಕಾರಣ ಇವುಗಳ ರೋದನ ಕೇಳುವವರಿಲ್ಲದಂತಾಯಿತು. ಬೆಳ್ಳಿಯ ಆರೈಕೆಯಲ್ಲಿ ಗುಂಡು ಗುಂಡಗೆ ಮುದ್ದಾಗಿದ್ದ ಮರಿಗಳು ಬಡಕಲಾಗಿ ಸೋತಿದ್ದವು. ಕೊಬ್ಬು ನಿಮಗೆ. ಅದು ಕರಗಲಿ ಎಂದು ಆಹಾರದಲ್ಲೂ ಕಡಿತವಾಗಿತ್ತು. ಮಕ್ಕಳು ಒಬ್ಬರನ್ನೊಬ್ಬರು ತಬ್ಬಿಕೊಂಡು ರಾತ್ರಿಯಲ್ಲಾ ನಿಶಬ್ದವಾಗಿ ಅಳುತ್ತಿದ್ದವು.

ಇತ್ತ ಊರಿನಲ್ಲಿ ನಾಲ್ಕೇ ದಿನಕ್ಕೆ ಬೆಳ್ಳಿಗೆ ತನ್ನ ಮರಿಗಳನ್ನು ಕಾಣದೆ, ಅವರ ತುಂಟಾಟವಿಲ್ಲದೆ ಬೇಸರವಾಗತೊಡಗಿತು. ಇಲಿ, ಜಿರಲೆ, ಕೀಟ, ಹಲ್ಲಿ ತಿನ್ನುವ ಆಸಕ್ತಿಯೇ ಇಲ್ಲ. ಅವುಗಳ ಬೇಟೆಯಾಡಿ ಹಿಡಿದರೂ ಮರಿಗಳ ನೆನಪಾಗಿ ತಿನ್ನಲು ಮನಸ್ಸಿಲ್ಲ ಆಕೆಗೆ. ಅಣ್ಣನ ಊರಿಗೆ ಸುದ್ದಿ ಕೊಡದೆ ಹೋಗಿ ಗುರುಗಳ ಕೈಲಿ ಪಾಠ ಕಲಿಯುವ ಮಕ್ಕಳನ್ನು ನೋಡಿ ಬರುವ ಆಸೆ ಅದಮ್ಯವಾಯಿತು.

ನಾಲ್ಕಾರು ಕಪ್ಪೆಗಳು, ಇಲಿಗಳು, ಜಿರಲೆ, ಜೇಡ ಎಂದು ಬೇಟೆ ಮಾಡಿ ಚೀಲಕ್ಕೆ ಹಾಕಿ ಮಕ್ಕಳಿಗಾಗಿ ತೆಗೆದುಕೊಂಡು ಹೊರಟಳು. ಹಾದಿ ನಡೆದು ಅಣ್ಣನ ಮನೆ ತಲುಪಿ ಶಾಲೆಯ ದಾರಿ ಕೇಳೋಣವೆಂದು ಅಂಗಳಕ್ಕೆ ಕಾಲಿಟ್ಟರೆ ಅಲ್ಲಿದ್ದ ಬಡಕಲು ಮರಿಗಳು ಅಮ್ಮಾ... ಅಮ್ಮಾ... ಎಂದು ಧಾವಿಸಿ ಬಂದು ಅಪ್ಪಿದವು. ‘ಅರೆ! ಇದ್ಯಾವ ಅಸ್ಥಿಪಂಜರಗಳು’ ಎಂದು ದೂರ ಸರಿಸಿದಾಗ ಮರಿಗಳು ಮತ್ತೂ ಬಿಗಿಯಾಗಿ ಅಂಟಿದವು. ನೋಡಿದಾಗ ತನ್ನವೇ. ಕರುಳು ಬಾಯಿಗೆ ಬಂತು ಆಕೆಗೆ. ದುಂಡು ದುಂಡಗಿದ್ದ ಮುದ್ದು ಮರಿಗಳು ಹೀಗೆ ಬಡಕಲಾಗಿದ್ದರೆ ತಾಯಿ ಕರುಳಿಗೆ ನೋವಾಗದೆ ಇರುತ್ತದಾ? ಕರೆದಾಗ ಅಣ್ಣನಾಗಲಿ, ಅವನ ಹೆಂಡತಿಯಾಗಲಿ ಅಲ್ಲಿರಲಿಲ್ಲ.

‘ಅಮ್ಮ, ಅವರೆಲ್ಲ ಹೊರಗಡೆ ಬೇಟೆಗೆ ಹೋಗಿದ್ದಾರೆ. ನಾವಿನ್ನು ಇಲ್ಲಿ ಶಾಲೆ ಕಲಿಯುವುದಿಲ್ಲ. ಎಲ್ಲವೂ ಬರುತ್ತದೆ ನಮಗೆ. ಮಕ್ಕಳ ಗಲೀಜು ತೆಗೆದು ಒಪ್ಪ ಮಾಡಲು, ಅವರನ್ನು ಎತ್ತಿಕೊಳ್ಳಲು, ಅತ್ತಾಗ ಸಮಾಧಾನ ಮಾಡಲು ಎಲ್ಲ ಕಲಿತಾಯ್ತು. ತುಂಬಾ ಹಸಿವು ದಿನಾಲೂ. ಗುರುಗಳು ಹೊಟ್ಟೆ ತುಂಬಾ ಕೊಡುವುದೇ ಇಲ್ಲಮ್ಮ‘ ಎಂದು ಅತ್ತವು. ಬೆಳ್ಳಿ ಬೆಕ್ಕಿಗೆ ಅರ್ಥವಾಯಿತು. ಅಣ್ಣನ ಮೇಲೆ ಸಿಟ್ಟು ಬಂತು. ಮರಿಗಳನ್ನು ತನ್ನ ಮನೆಗೆಲಸಕ್ಕೆ ಹಾಕಿಕೊಂಡನಲ್ಲ ಅಂತ ಬೇಸರವಾಯಿತು.

‘ನಡೆಯಿರಿ ಮಕ್ಕಳೆ. ಗಂಜಿಯಾಗಲೀ, ನೀರಾಗಲೀ ನಮ್ಮ ಮನೆಯಲ್ಲೇ ಕುಡಿಯಬೇಕು. ಅನ್ಯರ ಮನೆ ನಮ್ಮದಾಗುವುದಿಲ್ಲ, ಹೋಗೋಣ ಮನೆಗೆ’ ಎಂದಳು ಅಮ್ಮ.

‘ಅಮ್ಮಾ, ನಾವಿನ್ನು ತರಲೆ ಮಾಡುವುದಿಲ್ಲ. ನಾವು ಬೇಟೆಯಾಡಿ ನಿನಗೆ ಒಳ್ಳೆಯ ಆಹಾರ ತಂದ್ಕೊಡ್ತೀವಿ ನೋಡು. ಬುದ್ಧಿ ಕಲಿತ ಮಕ್ಕಳಾಗಿದ್ದೇವೆ ಈಗ’ ಎನ್ನುತ್ತಾ

ಬೆಳ್ಳಿ ಬೆಕ್ಕಿನ ಸವಾರಿ ಮಕ್ಕಳ ಸಹಿತ ತನ್ನೂರಿಗೆ ಹೊರಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry