‘ತಡಿಯಾಂಡಮೊಳ್’ ಪರಿಯ ಪೇಳುವೆನು ಕೇಳ್‌!

7
ಸಹನಾ ಬಾಳ್ಕಲ್‌

‘ತಡಿಯಾಂಡಮೊಳ್’ ಪರಿಯ ಪೇಳುವೆನು ಕೇಳ್‌!

Published:
Updated:
‘ತಡಿಯಾಂಡಮೊಳ್’ ಪರಿಯ ಪೇಳುವೆನು ಕೇಳ್‌!

ಚಾರಣ ಇದೆಯಲ್ಲ, ಇದೊಂಥರ ಹುಚ್ಚು... ಪ್ರತಿ ಬಾರಿ ಕೈ ಕಾಲು ಬೆಂಡೆತ್ತಿಕೊಂಡಾಗಲೂ ಇನ್ನು ಸಾಕು, ಸದ್ಯ ಮತ್ತೆಲ್ಲೂ ಹೋಗಲಾರೆ ಎಂದುಕೊಳ್ಳುವುದು. ಮೈ ಮನಕ್ಕೆ ಮುದ ಮೂಡಿಸುವ ಮಜದ ಮಾಯೆ ನೋಡಿ! ಹೊಸ ಬೆಟ್ಟದ ಸುದ್ದಿ ಬಂದಾಗ ಮತ್ತೆ ಟೆಮ್ಟೇಷನ್!

ಆ ಬಾರಿ ಆಸೆ ಹುಟ್ಟಿಸಿದ್ದು ತಡಿಯಾಂಡಮೊಳ್ ಬೆಟ್ಟ. ಮುಂದಿನ ವಾರಾಂತ್ಯವೇ ಹೋಗುವುದು ಎಂದು ತೀರ್ಮಾನವಾದಾಗ ಸಮಯದ ಅಭಾವ ಧುತ್ತೆಂದು ಕಾಣಿಸಿಕೊಂಡಿತು. ‘ಎಲ್ಲರೂ ಪ್ರಿ ಬುಕ್ಡ್, ಕೇವಲ ನಾಲ್ಕೇ ಜನ ಅವಲೇಬಲ್’ ಅಂದಾಗಂತೂ, ‘ತಡಿಯಾಂಡಮೊಳ್ ತಂಪು ತಂಗಾಳಿ ತಿನ್ನಲು ತೀರಾ ತರಾತುರಿ ಆಯ್ತಲ್ಲಾ?’ ಎಂದೇ ಎನಿಸಿತು. ಆದರೆ ಮುಂದಿನ ಒಂದೆರಡು ತಿಂಗಳು ಚಾರಣಕ್ಕೆ ಸಮಯ ಹೊಂದಿಸುವ ಅವಕಾಶ ಇಲ್ಲವೆಂಬ ಅರಿವಾಗಿ, ಇದೊಂದು ಅನುಭವವು ನಮ್ಮ ಬುತ್ತಿಗೆ ಸೇರಲಿ ಅಂದುಕೊಂಡೆವು. ಆದರೆ ಅಕ್ಷರಶಃ ‘ಅನುಭವವೇ’ ಆಗುತ್ತದೆ ಎಂದು ಆಗ ಆಂದುಕೊಂಡಿರಲಿಲ್ಲ!

ಹಗುರಾದ ಭಾವನೆಗಳ ಹೊತ್ತು ನಿಸರ್ಗದ ಮುಡಿಯೇರುವುದು. ಹಸಿರು- ಹೂವು- ಹಾವು- ಹಕ್ಕಿ ಇತ್ಯಾದಿ ಸೊಬಗ ಬಗೆ ಬಗೆದು ಮಗೆದು ನವಿರಾದ ನೆಂಪು- ಕಂಪು ಹೊತ್ತು ಮರಳಿ ಮುಂದಿನ ಚಟುವಟಿಕೆಗಳಿಗೆ ಹೊಸತನ ತುಂಬಿಕೊಳ್ಳುವುದಿದೆಯಲ್ಲ, ಅದೊಂದು ಭಾಗ್ಯ ಎಂದುಕೊಳ್ಳುವವಳು ನಾನು. ನನಗಂತೂ ಕೆಲಸದ ಮಧ್ಯೆ ವಿಶ್ರಾಂತಿ ತೆಗೆದುಕೊಳ್ಳುವ ಒಂದು ಬಗೆ - ಚಾರಣ.

ಸಾಮಾನ್ಯವಾಗಿ ಚಾರಣದ ಜಾಗದ ಪೂರ್ಣ ಮಾಹಿತಿಯನ್ನು ಮೊದಲೇ ಕಲೆ ಹಾಕಿಟ್ಟುಕೊಳ್ಳುವ ನಾನು ತಡಿಯಾಂಡಮೊಳ್ ಬಗ್ಗೆ ಎಲ್ಲ ಮಾಹಿತಿ ತಿಳಿದಿರಲಿಲ್ಲ. ಈ ಸಲ ತೀರಾ ಸಾಹಸ ಬೇಡ, ಆರಾಮವಾಗಿ ಸಮಯ ಕಳೆಯೋಣ ಎಂದು ತೀರ್ಮಾನಿಸಿದ್ದೆವು. ಹತ್ತಿರದಲ್ಲೇ ಉಳಿಯುವ ವ್ಯವಸ್ಥೆಯೂ ಆಗಿತ್ತು.

ಚಾರಣಕ್ಕೆ ಹೊರಡಲು ಇನ್ನೇನು ಎರಡು ದಿನ ಇತ್ತು. ‘ಬೆಟ್ಟ ಹತ್ತುವುದು ಮತ್ತು ಇಳಿಯುವುದು ಎರಡೂ ಸೇರಿಸಿ ಸುಮಾರು ಇಪ್ಪತ್ತು ಕಿಲೋಮೀಟರ್ ಆಗಬಹುದು, ಯಾವುದಕ್ಕೂ ಇವತ್ತು ಮನೆಗೆ ಹೋಗಿ ಪ್ಯಾಕಿಂಗ್ ಮಾಡಿಬಿಡೋಣ’ ಎಂದು ಸಂಗಾತಿಯ ಮೊಬೈಲ್ ಸಂದೇಶ. ಸ್ವಲ್ಪ ಹೊತ್ತಲ್ಲೇ ಚಾರಣಕ್ಕೆ ಬರುವ ಗೆಳತಿಗೆ ಫೋನಾಯಿಸಿದರೆ, ಚಾರಣದ ಒಟ್ಟು ದೂರ ಹತ್ತು ಕಿಲೋ ಮೀಟರ್ ಮಾತ್ರ, ನಾಲ್ಕೈದು ಗಂಟೆ ಸಾಕು, ಹಾಗಾಗಿ ತುಂಬಾ ಸಿದ್ಧತೆಯನ್ನೇನೂ ಮಾಡಿಲ್ಲ ಎನ್ನಬೇಕೆ..!

ಏನಿದು ಗೊಂದಲ ಎಂದು ಹುಡುಕಹೊರಟೆ... ಚಾರಣ ಆರಂಭಿಸುವ ಸ್ಥಳ ಬೇರೆ ಬೇರೆ ಕಡೆ ಇದೆ. ಹಾಗಾಗಿ ಕ್ರಮಿಸುವ ದೂರದಲ್ಲೂ ಅಂತರವಿದೆ ಎಂಬುದು ತಿಳಿಯಿತು. ಅಕ್ಟೋಬರ್ ತಿಂಗಳಾದ್ದರಿಂದ ಮತ್ತು ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸಂಭವಿಸಬಹುದಾದ ಸಾಧ್ಯತೆ ಇರುವುದರಿಂದ ಮಳೆಗೆ ಸಿದ್ಧವಾಗಬೇಕಿತ್ತು. ಸಣ್ಣ ಮಳೆಯ ರೇನ್ ಗೇರ್ - ‘ಪಾಂಚೊ’ ತಂದು ತುಂಬ ದಿನವಾಗಿರಲಿಲ್ಲ. ಅವಶ್ಯಕತೆ ಬಿದ್ದರೆ ಅದನ್ನೇ ಉದ್ಘಾಟನೆ ಮಾಡಿದರಾಯ್ತೆಂದು ಬ್ಯಾಗಿಗೇರಿಸಿಕೊಂಡೆ. ರೆಸಾರ್ಟ್‌ನಲ್ಲೇ ಬುತ್ತಿ ಕಟ್ಟುಕೊಳ್ಳುವುದಾದರೂ ಯಾವುದಕ್ಕೂ ನಾವು ನಿಮ್ಮ ಜತೆ ಇರುತ್ತೇವೆ ಎಂದು ಬಾಳೆಹಣ್ಣು, ಸವತೆಕಾಯಿ, ಎನರ್ಜಿ ಡ್ರಿಂಕ್ಸ್‌, ಡ್ರೈ ಫ್ರೂಟ್ಸ್ ನನ್ನ ಬ್ಯಾಗ್ ಒಳಗೆ ಜಾಗ ಕಂಡುಕೊಂಡಿದ್ದವು.

ವಿರಾಜಪೇಟೆ ಮೂಲಕ ಕಾಕಬ್ಬೆಯಲ್ಲಿನ ಒಂದು ರೆಸಾರ್ಟ್ ಸೇರಿ ಬೆಳಗಿನ ನಿತ್ಯಕರ್ಮ ಮುಗಿಸಿ ಬುತ್ತಿ ಎತ್ತಿಕೊಂಡಾಗಿತ್ತು. ಕರ್ನಾಟಕದ ಅತಿ ಎತ್ತರದ ಬೆಟ್ಟಗಳಲ್ಲೊಂದನ್ನು ಏರಹೊರಟಿದ್ದೇನೆಂಬ ಖುಷಿ.

ರೆಸಾರ್ಟ್‌ನಿಂದಲೇ ಒಳಹಾದಿಯೊಂದಿದೆ; ಅದು ಚಾರಣ ಮಾರ್ಗವನ್ನೇ ಸೇರುತ್ತದೆ ಎಂಬ ಲೋಕಲ್ ಮಾಹಿತಿ ಕಲೆ ಹಾಕಿದೆವು. ಯಾವ ಜಿಪಿಎಸ್ ಪಂಟನೂ ಇದನ್ನು ಹೇಳಿರಲಿಲ್ಲ. ಈ ದಾರಿಯಲ್ಲಿ ಸುಮಾರು ದೂರ ಸಾಗಿದ ಮೇಲೆ ಉಳಿದ ಚಾರಣಿಗರೆಲ್ಲ ಹೋಗುವ ದಿಕ್ಕಿನಲ್ಲೇ ನಮ್ಮನ್ನು ಕೂಡಿಸುತ್ತದೆ ಎಂದು ತಿಳಿಯಿತು. ನಮ್ಮ ಜತೆ ಮಣಿ ಎಂಬ ಒಬ್ಬ ಗೈಡ್ ಬರಲು ತಯಾರಾದ್ದ. ಸರಿ, ಅವನನ್ನು ಹಿಂಬಾಲಿಸುವ ಎಂದು ಹೊರಟೆವು.

ಆರಂಭದಲ್ಲೇ ನನ್ನ ಕಾಲು, ಕೈ ಕೊಡುವ ಬೆಲ್ ಬಾರಿಸತೊಡಗಿತ್ತು. ಎಡಗಾಲು ಕಲ್ಲಿಗೆ ತಾಗಿಸಿಕೊಂಡು ಉಳುಕಿಕೊಂಡಿತು. ಉಳಿದ ಚಾರಣಕ್ಕೆ ಸಿದ್ಧವಾದಂತೆ ಈ ಬಾರಿ ದೇಹವನ್ನು ತಯಾರು ಮಾಡಿಕೊಂಡಿರಲಿಲ್ಲ. ಕೆಲ ವಾರದ ಹಿಂದಷ್ಟೇ ಜ್ವರ ಬಡಿದು, ಬೇಗ ಬಿಡಿಸಿ ಎದ್ದುಕೊಂಡಿದ್ದೆಲ್ಲ ನೆನಪಾಗತೊಡಗಿತು. ಬೇಕಿತ್ತೇ ಇದು ಎಂಬ ಭಾವ ಇನ್ನೊಂದು ಬಾರಿ ಮೂಡಿತು.

ಪರ್ವತದ ತುದಿ ಸೇರಲು ಹಲವಾರು ಬೆಟ್ಟದ ಸಾಲನ್ನು ದಾಟಬೇಕು. ಪ್ರತಿ ಬೆಟ್ಟದ ದಾರಿಯೂ ಭಿನ್ನ. ಒಂದೆಡೆ ಕಾಡೆಮ್ಮೆ ಸಗಣಿಯ ಘಮವೇ ಮೂಗತುಂಬ, ಇನ್ನೊಂದೆಡೆ ಬೋಳು ಗುಡ್ಡದ ಬಿಸಿಲೇ ತಲೆತುಂಬ. ಮಂಜಿನ ಮಧ್ಯೆಯೇ ಹಾದುಹೋಗುವ ಮುದ, ಕಿರಿದಾದ ಕಾಲುದಾರಿ, ವಿವಿಧ ಬಣ್ಣದ ಹೂ ಬಿಟ್ಟಿರುವ ಹುಲ್ಲುಹಾಸು- ಇಲ್ಲಿಯೇ ತಂಗೋಣ ಅನ್ನಿಸಿತ್ತು. ತಡಿಯಾಂಡಮೊಳ್ ಚಾರಣಿಗರಿಗೆ ಮಾತ್ರವಲ್ಲ, ನಿಸರ್ಗ ತಜ್ಞರನ್ನೂ, ಭೂಗೋಳ ಶಾಸ್ತ್ರಜ್ಞರನ್ನೂ ಸೆಳೆಯಯುವುದರಲ್ಲಿ ಆಶ್ಚರ್ಯವಿಲ್ಲ ಎನಿಸಿದ್ದೇ ಅಲ್ಲಿ.

ಬಹುಶಃ ನಾನು ಆವರೆಗೆ ಸಾಗಿದ ಚಾರಣದ ಅತ್ಯಂತ ಮನಮೋಹಕ ಅಷ್ಟೇ ಸವಾಲಿನ ದಾರಿಯದು. ಆರಂಭದ ಮನಸ್ಸಿನ ತುಮುಲ, ದಾರಿ ಸಾಗತೊಡಗಿದಂತೆ ಬದಿ ಸರಿಯುವುದೆಂಬ ಮಾತು ಸತ್ಯ ಎನಿಸತೊಡಗಿತ್ತು. ನನ್ನ ಕಾಲು ನೋವು ‘ತನ್ನ ಕಥೆಯ ಕೇಳ್ವರ್‍ಯಾರ್’ ಎಂದು ಬಾಯಿ ಬಿಗಿದುಕೊಂಡಿರಬೇಕು. ಅದರ ಕಾಟ ಕಡಿಮೆಯಾಗಿತ್ತು. ಅದಕ್ಕೆ ಕಾಂಪ್ಲಿಮೆಂಟರಿಯಾಗಿ ನಮ್ಮೆಲ್ಲರ ಕಾಲು ಗಾಡಿಗೆ ಪೆಟ್ರೋಲ್ ಹಾಕೋಣವೆಂದು ಇನ್ನೊಂದು ಗುಡ್ಡದ ಮೇಲೆ ಸ್ವಲ್ಪ ಕಾಲ ಕಳೆದೆವು.

ಬೆಟ್ಟದ ಮೇಲೆ ಹರಟುತ್ತ ರಾಮನಗರ ಚಾರಣ ಕಥೆ ಹೇಳುತ್ತ ಶೋಲೆ ಸಿನಿಮಾದ ದೃಶ್ಯ ನೆನಪಾಗುತ್ತಿದ್ದಂತೆ ಎದುರಿಗೆ ಕಂಡು ಬಂದಿದು ಶೋಲಾ ಕಾಡು. ಆಹಾ! ಶೋಲಾದ ಶೋಕಿಯೇನು!! ಹುಲ್ಲುಗಾವಲನ್ನು ತನ್ನ ಅಂಗರಕ್ಷಕರೆಂಬಂತೆ ಸುತ್ತಲೂ ಇಟ್ಟುಕೊಂಡು, ತಾನು ರಾಜನಂತೆ ಮೆರೆಯುವ ಮರಗಳ ವೈಖರಿಗೆ ಎಂಥವರೂ ಹುಬ್ಬೇರಿಸಲೇಬೇಕು. ಇದರ ವಿಶೇಷವೇನೆಂದರೆ, ದಕ್ಷಿಣ ಭಾರತದ ಘಟ್ಟ ಪ್ರದೇಶದ ಮೇಲೆ ಹೋದಂತೆಲ್ಲ ಕಾಣುವ ಹುಲ್ಲುಗಾವಲಿನ ಮಧ್ಯೆ ಮಾತ್ರ ಈ ಕಾಡು ಕಾಣುತ್ತದೆ. ಎರಡು ಕಣಿವೆಗಳ ನಡುವಿನ ಜಾಗದಲ್ಲಿ ತೇಪೆ ತೇಪೆಯಾಗಿ ಎದ್ದು ರಾಜಾರೋಷವಾಗಿ ಎದ್ದು ನಿಂತಿರುತ್ತವೆ ಅಲ್ಲಿನ ಮರಗಳು.

ಅದರ ನಡುವೆಯೇ ಸಾಗಿ ಶೋಲೆ ಸೀಳಿಕೊಂಡೇ ನಾವು ತಡಿಯಾಂಡಮೊಳ್ ತುದಿ ತಲುಪುವುದು. ಬೆಟ್ಟದ ತುದಿಯಲ್ಲಿ ಮಧ್ಯಾಹ್ನದ ಊಟ-ವಿಶ್ರಾಂತಿ ಎಂದು ಕಲ್ಪಿಸಿಕೊಳ್ಳುತ್ತ ಹೆಜ್ಜೆ ಹಾಕತೊಡಗಿದೆವು. ಶುರುವಾಯಿತು ಮಳೆರಾಯನ ಹನಿಗವನ. ನಡು ಮಧ್ಯಾಹ್ನ ಆಗುವುದರಲ್ಲಿತ್ತು. ಇನ್ನೂ ಎಲ್ಲರೂ ಸಾಗುವ ಚಾರಣದ ಹಾದಿಗೆ ಸೇರಿಕೊಂಡಿರಲೇ ಇಲ್ಲ.

ದಾರಿ ತೋರಿಸಲು ಬಂದ ಮಣಿಯೆಂಬ ಮಾಣಿಯನ್ನು ಕೇಳುವುದು ಅಂತಾಯ್ತು. ಆತ ಮೊದಲೇ ನಿರ್ಧರಿಸಿಬಿಟ್ಟಿದ್ದ ಅನ್ನಿಸುತ್ತೆ - ತಾನೂ ಯಾವತ್ತು ಇವರಿಗಿಂತ ಕೊಂಚ ಮುಂದಿರಬೇಕು ಎಂದು! ಕಾಣಲು ಸಿಗುತ್ತಿದ್ದನೇ ಹೊರತು ಮಾತಿಗೆ ಸಿಕ್ಕಿರಲೇ ಇಲ್ಲ. ಕೈಕಾಲ್ ಸನ್ನೆ ಮಾಡಿ ಅವನನ್ನು ನಿಲ್ಲಿಸಿ ಇನ್ನೆಷ್ಟು ದೂರ ಎಂದು ಕೇಳಿದರೆ ‘ಇನ್ನೂ ನಾಲ್ಕು ಬೆಟ್ಟ ಹತ್ತಬೇಕು ಸಾಮಿ’ ಎಂದು ಸುಮ್ಮನಾಗಿ ಬಿಡಬೇಕೆ..? ಆತನಿಗೆ ಸಮಯದ ಮಾನವೂ ತಿಳಿಯದು, ದೂರದ ಮಾನವೂ ಬಗೆ ಹರಿಯದು. ನಮ್ಮ ಭಾಷೆಯೂ ಸರಿಯಾಗಿ ಬಾರದು. ಆತನದೇನಿದ್ದರೂ ಗುಡ್ಡದ ಲೆಕ್ಕಾಚಾರ.

ನಮ್ಮ ದುಗುಡ ಆರಂಭವಾಗಿದ್ದೇ ಆಗ. ‘ನಮ್ಮ ಐದು ಜೀವ ಬಿಟ್ಟು ಇನ್ನೊಂದು ಜೀವವನ್ನಾದರೂ ಇನ್ನೊಂದು ಗಂಟೆಯೊಳಗೆ ತೋರಿಸು ಮಣಿರಾಯ, ಮಳೆರಾಯ ಬೇರೆ ಕಾಣಿಸಿಕೊಂಡಿದ್ದಾನೆ’ ಎಂದು ಮನಸ್ಸಿನಲ್ಲೇ ಬೇಡಿಕೊಂಡು ಬೆಟ್ಟದ ಬೇಟೆ ಆರಂಭಿಸಿದೆವು.

ನಾವು ಕೇಳಿದ್ದು ಸಾಮಾನ್ಯವಾಗಿ ಚಾರಣಿಗರು ಸಾಗುವ ದಾರಿಗೆ ಸೇರಲು ಎಷ್ಟು ಹೊತ್ತು ಎಂದಾಗಿತ್ತು. ಆ ಮಣಿಮಹಾತ್ಮ ಬೆಟ್ಟದ ತುದಿ ತಲುಪಲು ನಾಲ್ಕು ಬೆಟ್ಟ ಎಂದಿದ್ದ ಅನ್ನಿಸುತ್ತದೆ. ಮತ್ತೊಂದು ಗಂಟೆ ಸವೆಸಿದ ಮೇಲೆ ಚಾರಣಿಗರು ಟೆಂಟ್ ಹಾಕುವ ಬೇಸ್‍ಗೆ ಸೇರಿಕೊಂಡಿದ್ದೆವು. ಮನುಷ್ಯ ಚಹರೆ ಕಾಣತೊಡಗಿತು. ಅಲ್ಲೊಂದಷ್ಟು ಹೊತ್ತು ವಿಶ್ರಮಿಸುವ ಮನಸಾಯ್ತು. ನನ್ನ ಬ್ಯಾಗ್‍ನೊಳಗೆ ತೂರಿಕೊಂಡಿದ್ದ ತಿನಿಸುಗಳೆಲ್ಲ ಸಾರ್ಥಕತೆ ಕಂಡುಕೊಂಡವು. ಬೆನ್ನೂ ಧನ್ಯವಾದ ಅಂದ ಹಾಗೆ ಆಯ್ತು.

ಹೀಗೊಂದು ಸ್ಥಳ ಸಮೀಕ್ಷೆ

1802ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಕೈಗೊಂಡ ದಿ ಗ್ರೇಟ್ ಟ್ರಿಗ್ನೋಮೆಟ್ರಿಕ್ ಸರ್ವೆಯ ಸಮೀಕ್ಷಾಕಾರರೂ ಈ ಜಾಗದ ಬಳಿಯೇ ಬೀಡು ಬಿಟ್ಟಿದ್ದಂತೆ. ಹತ್ತೊಂಬತ್ತನೇ ಶತಮಾನದಲ್ಲಿ ಆಂಗ್ಲರು ನಡೆಸಿದ ವಿವಿಧ ಸಮೀಕ್ಷೆಗಳ ಪ್ರಾಮುಖ್ಯತೆಯನ್ನು ಯಾರೂ ಅಲ್ಲಗಳೆಯುವುದಿಲ್ಲ. ಎವರೆಸ್ಟ್, ಗಾಡ್ವಿನ್ ಆಸ್ಟಿನ್, ಕಂಚನಜುಂಗಾ ಆದಿಯಾಗಿ ಭಾರತದ ಪರ್ವತ ಸಾಲುಗಳ ಎತ್ತರವನ್ನು ಅಳೆಯಲು ಜ್ಯಾಮಿತಿ ಅರಿಯಲು ಮಾಡಿದ ಸರ್ವೆಯ ಭಾಗವಾಗಿ ಕೊಡಗು - ಕೇರಳ ಗಡಿಭಾಗದ ತಡಿಯಾಂಡಮೊಳ್‍ ಅನ್ನೂ ಪರಿಗಣಿಸಿದ್ದರಂತೆ.

ಸಮೀಕ್ಷೆಗೆ ಐದು ವರ್ಷ ತಗುಲಬಹುದೆಂದು ಕಂಪನಿ ಯೋಚಿಸಿತ್ತು. 700 ಜನರನ್ನು ಅದಕ್ಕಾಗಿಯೇ ನೇಮಿಸಿತ್ತು. ಆದರೆ ತೆಗೆದುಕೊಂಡ ಸಮಯ ಬರೋಬ್ಬರಿ 60 ವರ್ಷಗಳು!

ಮಳೆಯ ಆರ್ಭಟ ಜೋರಾಗತೊಡಗಿತ್ತು. ನಮ್ಮ ಕಾಲ್ಗಾಡಿಯೂ ವೇಗ ಹೆಚ್ಚಿಸಿಕೊಂಡಿತ್ತು. ಮಳೆಯಿಂದ ರಕ್ಷಣೆ ಪಡೆಯಲು ತಂದ ಪಾಂಚೊ ಒಂಚೂರೂ ಸರಿಯಾಗಿ ಮೈಗೆ ಕುಳಿತುಕೊಳ್ಳಲಿಲ್ಲ. ಅದನ್ನು ಹಾಕಿಕೊಂಡರೆ ಆಕಾರವೆಲ್ಲ ವಿಕಾರ. ನನಗಂತೂ ಸೀರೆ ಉಟ್ಟು ಬೆಟ್ಟ ಹತ್ತುತ್ತಿರುವಂತೆ ಭಾಸವಾಗತೊಡಗಿತ್ತು. ಮಳೆ ಬಂದ ಮೇಲೆ ಕಾಡಿನಲ್ಲಿ ಉಂಬಳದ ರಕ್ತದ ಕಂಬಳ ಕೇಳಬೇಕೆ? ಯಾವಾಗಲೂ ನನ್ನನ್ನು ಕಾಪಾಡುತ್ತಿದ್ದ ಲೀಚ್ ಸಾಕ್ಸ್ ಅಂದು ಅಷ್ಟೊಂದು ಸಹಕಾರಕ್ಕೆ ಬರಲೇ ಇಲ್ಲ. ನಾನಂತೂ ಏಳೆಂಟು ಉಂಬಳಗಳಿಗೆ ಆಹಾರವಾಗಿ ಮಹಾ ರಕ್ತದಾನಿ ಎನ್ನಿಸಿಕೊಂಡೆ.

ಅಂತೂ ಬೆಟ್ಟದ ತುದಿ ತಲುಪಿದಾಗ ಗಂಟೆ ಮಧ್ಯಾಹ್ನ ನಾಲ್ಕು ಗಂಟೆ. ಕೆಲನಿಮಿಷ ಸಹ ಬೆನ್ನು ಹಾಕಿಯೂ ನಿಲ್ಲಲಾರದಷ್ಟು ಗಾಳಿ-ಮಳೆ. ಊಟದ ಮಾತು ಆಮೇಲೆ. ಮೊದಲು ಸಿಡಿಲ ಅಬ್ಬರದಿಂದ ಬಚಾವ್ ಆಗೋಣ ಎಂದು, ಜಸ್ಟ್ ಖೋ ಆದರೂ ಕೊಟ್ಟೆವಲ್ಲ ಎಂದು ಸಮಾಧಾನ ಮಾಡಿಕೊಂಡು ಹೆಜ್ಜೆ ಕೆಳಗಿರಿಸಿದೆವು.

ಉಂಬಳಗಳ, ಕೀಟಗಳ ಹಾಗೇ ಮಳೆಯ ಪ್ರಭಾವ ಹೆಚ್ಚಾಗುವ ಲಕ್ಷಣದಿಂದಾಗಿ, ಮೊಬೈಲ್ ಸಿಗ್ನಲ್ ಸಿಗುವ ಜಾಗ ಹುಡುಕಿಕೊಂಡು, ರೆಸಾರ್ಟ್‍ಗೆ ಪೋನ್ ಮಾಡಿ ‘‘ನಾಲ್ಕನಾಡ್’ ಅರಮನೆ ಮೇಲಿನ ರಸ್ತೆಗೆ ಜೀಪ್ ಕಳಿಸಪ್ಪ’ ಎಂದು ಸಿಗ್ನಲ್ ಕೊಟ್ಟೆವು.

ನಾಲ್ಕನಾಡ್‌ ಅರಮನೆ

ಜೀಪಿನಲ್ಲಿ ಕೂತಾಗ ಕೇಳಿದ್ದಿಷ್ಟೇ - ಯಾವಕಪಾಡಿಯ ನಾಲ್ಕನಾಡ್ ಅರಮನೆ ಕೊಡಗಿನ ಕೊನೆಯ ರಾಜ ಚಿಕ್ಕವೀರ ರಾಜೇಂದ್ರನ ಕಥೆಯನ್ನು ಹೇಳುತ್ತದಂತೆ. ಬರಗೂರ ರಾಮಚಂದ್ರಪ್ಪ ಅವರ ಕ್ರಿಯಾಶೀಲತೆಗೆ ಸಾಕ್ಷಿಯಾದ ನಟಿ ಭಾವನಾ ಏಕಪಾತ್ರದ ‘ಶಾಂತಿ’ಯ ಬಹುಪಾಲು ಚಿತ್ರೀಕರಣ ಅಲ್ಲೇ ನಡೆದಿತ್ತಂತೆ.

ನಮ್ಮ ವೇಷವನ್ನೆಲ್ಲ ಕಳಚಿ, ಇನ್ನೂ ಮೈಗೆ ಅಂಟಿಕೊಂಡಿದ್ದ ಉಂಬಳಗಳಿಗೆ ಒಂದು ಗತಿ ಕಾಣಿಸಿ ಚಾರಣ ಹಾದಿಯ ಮೆಲುಕು ಹಾಕುತ್ತಿದ್ದವಳಿಗೆ ನಿದ್ದೆಗೆ ಹೇಗೆ ಜಾರಿ ಹೋದೆ ಎಂದೇ ಅರಿವಿಲ್ಲ. ಮೈ ಕೈ ನೋವು ಎಷ್ಟಾಗಿದೆ ಎಂದು ಬೆಳಿಗ್ಗೆ ಏಳುವಾಗಲೇ ಗೊತ್ತಾಗಿದ್ದು. ಹತ್ತಿರದಲ್ಲೇ ಇದ್ದ ಸಣ್ಣ ಜಲಪಾತದ ಬಳಿ ಮುಂಜಾವಿನ ಸೂರ್ಯನ ಶಾಖಕ್ಕೆ ಮೈಯೊಡ್ಡಿ ಹೊಳೆಯ ನೀರಲ್ಲಿ ಕಾಲಿಟ್ಟು, ಕಾಲ ಕಳೆಯುವಾಗ ನನ್ನ ಕಾಲುನೋವು ನಿಜಕ್ಕೂ ಮಾಯವಾಗಿತ್ತು. ನಿಸರ್ಗದ ಅಗಾಧ ಸ್ವಯಂ ಚಿಕಿತ್ಸಾ ಶಕ್ತಿಗೆ ಇನ್ನೊಮ್ಮೆ ನಮಿಸಿದೆ.

**

ತಡಿಯಂಡಮೊಳ್ ಮಾಹಿತಿ

ಇಲ್ಲಿದೆ: ಕರ್ನಾಟಕದ ಕೊಡಗು ಜಿಲ್ಲೆ. ಕರ್ನಾಟಕದ ಮೊದಲ ಮೂರು ಎತ್ತರದ ಶಿಖರಗಳಲ್ಲಿ ಒಂದು.

ಸೂಕ್ತ ಸಮಯ: ಅಕ್ಟೋಬರ್‌ನಿಂದ ಫೆಬ್ರುವರಿ ತಿಂಗಳು ಉತ್ತಮ.

ಚಾರಣದ ಅವಧಿ: ಒಂದು ದಿನ.

ವಸತಿ ವ್ಯವಸ್ಥೆ: ಹತ್ತಿರದಲ್ಲೇ ಬೇಕಾದಷ್ಟು ರೆಸಾರ್ಟ್ ಮತ್ತು ಹೋಮ್ ಸ್ಟೇ ಗಳಿವೆ ಅಲ್ಲದೇ ವಿರಾಜಪೇಟೆಯಲ್ಲಿ ಅನೇಕ ಲಾಡ್ಜಿಂಗ್ ಸೌಲಭ್ಯವಿದೆ.

**

ತಲುಪುವುದು ಹೀಗೆ?

* ಬೆಂಗಳೂರು > ಮಂಡ್ಯ > ಶ್ರೀರಂಗಪಟ್ಟಣ > ಹುಣಸೂರು > ಗೋಣಿಕೊಪ್ಪಲ್ > ವಿರಾಜಪೇಟೆ > ಕಾಕಬ್ಬೆ

* ಬೆಂಗಳೂರು > ಮಂಡ್ಯ > ಶ್ರೀರಂಗಪಟ್ಟಣ > ಹುಣಸೂರು > ಕುಶಾಲ್ ನಾಗರ್ > ಮಡಿಕೇರಿ > ಕಾಕಬ್ಬೆ

**

ಚಾರಣ ಮಾರ್ಗ

ಅರಮನೆ ಮಾರ್ಗ: ಸುಮಾರು 12 ಕಿಮೀ (ಎರಡೂ ಬದಿ ಸೇರಿ )

ಹನಿವ್ಯಾಲಿ ಮಾರ್ಗ: ಸುಮಾರು 16 ಕಿಮೀ. (ಎರಡೂ ಬದಿ ಸೇರಿ )

ಎರಡು ಮಾರ್ಗಗಳು ಬಿಗ್ ರಾಕ್ ಎಂಬ ಬೇಸ್ ಕ್ಯಾಂಪ್‌ ಬಳಿ ತಲುಪುತ್ತವೆ. (ಬಿಗ್ ರಾಕ್‌ನಿಂದ ಪೀಕ್ ಪಾಯಿಂಟ್ / ಬೆಟ್ಟದ ತುದಿ ತಲುಪಲು ಸುಮಾರು 1.6 ಕಿಮೀ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry