ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿಯುದ್ದಕ್ಕೂ ಹೊಡೆಯುತ್ತಾ ಬಂದರು, ಕುಡಿಯಲು ನೀರು ಕೇಳಿದಾಗ ತಲೆ ಮೇಲೆ ಸುರಿದರು!

Last Updated 24 ಫೆಬ್ರುವರಿ 2018, 12:55 IST
ಅಕ್ಷರ ಗಾತ್ರ

ಅಗಳಿ: ಆದಿವಾಸಿಗಳು ಕಾಡಿನೊಳಗೆ ಹೊಕ್ಕರೆ ಕೇಸು ದಾಖಲಿಸುತ್ತಾರೆ.ಆದರೆ ಊರಿನ ಜನರು ಕಾಡಿಗೆ ನುಗ್ಗಿದರೆ ಯಾವ ಕ್ರಮಗಳನ್ನೂ ತೆಗೆದುಕೊಳ್ಳುವುದಿಲ್ಲ. ಅರಣ್ಯ ಇಲಾಖೆಯವರು ಮಧುವನ್ನು ಊರಿನ ಜನರ ಕೈಗೆ ಸಿಗುವಂತೆ ಮಾಡಿದ್ದಾರೆ ಎಂದು ಮೃತ ಆದಿವಾಸಿ ಯುವಕ ಮಧುವಿನ ಅಮ್ಮ ಮತ್ತು ಸಹೋದರಿ ಆರೋಪಿಸಿರುವುದಾಗಿ ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.

ಮನೋರಮಾ ನ್ಯೂಸ್ ವಾಹಿನಿ ಜತೆ ಮಾತನಾಡಿದ ಮಧುವಿನ ಕುಟುಂಬದ ಸದಸ್ಯರು, ತಾವು ಊಟ ಮಾಡಲು ಅಣಿಯಾಗುತ್ತಿದ್ದ ವೇಳೆ ಊರಿನ ಕೆಲವು ಜನರು ಬಂದು ಮಧುವನ್ನು  ಸೆರೆ ಹಿಡಿದಿದ್ದಾರೆ. ಮಧು ವಾಸಿಸುತ್ತಿದ್ದ ಗುಹೆಯಿಂದ ಮುಕ್ಕಾಲಿವರೆಗೆ 4 ಕಿಮೀ ನಡೆಸಿಕೊಂಡೇ ಬಂದರು. ದಾರಿ ಮಧ್ಯೆಯೂ ಆತನಿಗೆ ಹೊಡೆದರು.ಆತ ನೀರು ಕೇಳಿದಾಗ ಆತನ ತಲೆಗೆ ನೀರು ಸುರಿದರು ಎಂದು ಮಧುವಿನ ಸಹೋದರಿ ಚಂದ್ರಿಕಾ ಹೇಳಿದ್ದಾರೆ.

ನನ್ನ ಮಗನನ್ನು ಅವರೇ ಕೊಂದಿದ್ದು; ಕಣ್ಣೀರಿಟ್ಟ ಅಮ್ಮ
ನನ್ನ ಮಗನನ್ನು ಅವರೇ ಕೊಂದಿದ್ದು ಸರ್, ಅವರೇ ಹೊಡೆದು ಸಾಯಿಸಿದ್ದು ಎಂದು ಮಧುವಿನ ಅಮ್ಮ ಮಲ್ಲಿ ಒಟ್ಟಪ್ಪಾಲಂ ಉಪ ಜಿಲ್ಲಾಧಿಕಾರಿ ಜೆರಾಮಿಕ್ ಜಾರ್ಜ್ ಮುಂದೆ ಅಳುತ್ತಾ ಬೊಬ್ಬೆ ಹಾಕುತ್ತಿದ್ದರೆ ಅಲ್ಲಿ ನೆರೆದಿದ್ದ ಜನರು ಮೌನಕ್ಕೆ ಶರಣಾಗಿದ್ದರು. ಮಗನ ಕೊಲೆಗಾರರನ್ನು ಬಂಧಿಸುವವರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಬಾರದು ಎಂದು ಮಧುವಿನ ಕುಟುಂಬದವರು ಶುಕ್ರವಾರ ಪಟ್ಟು ಹಿಡಿದಿದ್ದರು.
ಅವನು ಕಾಡಿನಲ್ಲಿಯೇ ವಾಸವಾಗಿದ್ದ, ಯಾರೊಬ್ಬರಿಗೂ ಆತ ತೊಂದರೆ ಕೊಟ್ಟಿಲ್ಲ. ಯಾರಾದರೂ ಏನಾದರೂ ಕೊಟ್ಟರೆ ಮಾತ್ರ ತಿನ್ನುತ್ತಿದ್ದ. ಕಳ್ಳನೆಂದು ಹೇಳಿ ಆತನ ಕೈ ಕಟ್ಟಿ ಹಾಕಿದರು. ಆಮೇಲೆ ಥಳಿಸಿದರು, ಅಕ್ಕಿ ಮೂಟೆ ಹೊತ್ತು ನಡೆಸಿದರು. ಅವನ ಎದೆಗೂ, ಹೊಟ್ಟೆಗೂ ತುಳಿದರು.ಅವನು ಪಾಪದ ಹುಡುಗ ಸರ್, ಹೀಗೆಲ್ಲಾ ಮಾಡಬೇಕಿತ್ತಾ? ಆರೋಗ್ಯ ಸ್ಥಿತಿ  ಸರಿ ಇಲ್ಲದ ಅವನ ಮೇಲೆ ಈ ರೀತಿ ಮಾಡಿದಿರಿ, ನಾಳೆ ನನ್ನ ಮೇಲೂ ಇದೇ ರೀತಿ ಮಾಡುತ್ತೀರಿ. ಇದೆಲ್ಲಾ ಸಹಿಸಿಕೊಳ್ಳವುದಕ್ಕೆ ಸಾಧ್ಯವಿಲ್ಲ ಸರ್ ಎಂದು ಅಮ್ಮ ಮಲ್ಲಿ ಕಣ್ಣೀರು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT