ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಮನ: ಹೋರಾಟದಿಂದ ಉದ್ಯೋಗಪರ್ವದವರೆಗೆ

Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಜಾರ್ಜ್ ಫರ್ನಾಂಡಿಸ್ ಅವರನ್ನು ನೋಡಲು ಒಮ್ಮೆ ಹೋಗಿದ್ದೆ. ಅವರ ಬಳಿ ಎರಡೇ ಜೊತೆ ಬಟ್ಟೆಗಳಿದ್ದವು. ತುಂಬಾ ಸಣ್ಣ ಕೋಣೆಯಲ್ಲಿ ತಂಗಿದ್ದರು. ರಾಜಕಾರಣಿಗಳು ಹೀಗೂ ಇರುತ್ತಾರಾ ಎನ್ನುವಷ್ಟು ಸರಳತೆ. ಥಟ್ಟನೆ ಅವರ ವ್ಯಕ್ತಿತ್ವ ನನ್ನನ್ನು ಸೆಳೆಯಿತು’- ನಾಟಕಕಾರ, ಸಿನಿಮಾ-ಧಾರಾವಾಹಿ ನಿರ್ದೇಶಕ ಟಿ.ಎನ್. ಸೀತಾರಾಂ ತಮ್ಮ ತಾರುಣ್ಯದ ದಿನಗಳಲ್ಲಿ ಹೀಗೆ ಆಕರ್ಷಿತರಾದ ಅನುಭವವನ್ನು ಒಮ್ಮೆ ಹಂಚಿಕೊಂಡಿದ್ದರು.

ಭಾರತದಲ್ಲಿ ಸ್ವಾತಂತ್ರ್ಯದ ತೊರೆಗಳು ಹರಿದ ಮೇಲೆ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಸಂದರ್ಭದಲ್ಲಿ, ಅಂದರೆ 1952ರಲ್ಲಿ ನಡೆದ ಚುನಾವಣೆಗೆ ಸಹಜವಾಗಿಯೇ ಯುವಬಲವಿತ್ತು -ಮತದಾರರಲ್ಲಷ್ಟೇ ಅಲ್ಲ; ಚುನಾವಣಾ ಕಣಕ್ಕೆ ಇಳಿದವರಲ್ಲೂ.

ಆಮೇಲೆ ಕರ್ನಾಟಕ ಏಕೀಕರಣದ ಹೋರಾಟದ ಪುಟಗಳಲ್ಲಿ, ತುರ್ತು ಪರಿಸ್ಥಿತಿಯ ಕರಾಳ ನೆನಪುಗಳಲ್ಲಿ, ಬಿಹಾರ-ಗುಜರಾತ್ ನಲ್ಲಿ ಮೊದಲು ಕಾವು ಪಡೆದುಕೊಂಡು ಆಮೇಲೆ ದೇಶವ್ಯಾಪಿಯಾದ ಜಯಪ್ರಕಾಶ ನಾರಾಯಣರ ಚಳವಳಿಯಲ್ಲಿ ನಾವು ಕಂಡಿದ್ದು ಯುವಶಕ್ತಿಯನ್ನೇ ಅಲ್ಲವೇ?

ಕಾಲೇಜು ಕಾರಿಡಾರುಗಳಲ್ಲಿ ಸಾಂಸ್ಕೃತಿಕ ಚರ್ಚೆಗಳ ಭಾಗವಾಗಿ ರಾಜಕೀಯವೂ ಇರುತ್ತಿತ್ತು. ಹೀಗಾಗಿ ಯುವಶಕ್ತಿ ಬೇರೆಯಲ್ಲ; ಚುನಾವಣೆಗಳು ಬೇರೆಯಲ್ಲ ಎಂಬ ವಾತಾವರಣ. ಆಗ ಯುವ ಮತದಾರರಿಗೆ ಪ್ರತ್ಯೇಕವಾಗಿ ಏನನ್ನಾದರೂ ಹೇಳಬೇಕಾದ ಜರೂರೇ ಇರಲಿಲ್ಲ. ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ರಾಜಕೀಯ ವಲಯಗಳು ಪರಸ್ಪರ ಸಹಜ ಕೊಡು-ಕೊಡುಗೆಗಳಲ್ಲಿ ಇದ್ದ ಸಂದರ್ಭ ಅದು. ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಕಾಲಘಟ್ಟದಲ್ಲಿ ರಾಜಕೀಯ ಮೊಗಸಾಲೆಗೆ ಅವರು ತಂದುನಿಲ್ಲಿಸಿದ ಯುವಕರು ಒಬ್ಬಿಬ್ಬರಲ್ಲ. 1970ರ ದಶಕದ ಆ ಯುವ ಕಸುವನ್ನು ಈಗಲೂ ಸ್ಮರಿಸುವ ಹಿರಿಯರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಕೆ.ಆರ್. ರಮೇಶ್ ಕುಮಾರ್, ವೀರಪ್ಪ ಮೊಯಿಲಿ, ಮಹದೇವಪ್ಪ ಹೀಗೆ ಕಾಂಗ್ರೆಸ್ ಹುರಿದುಂಬಿತ ಯುವಕರ ಸಾಲು ಉದ್ದವಾಯಿತು.

ಅದಕ್ಕೂ ಮೊದಲು ಎಸ್. ನಿಜಲಿಂಗಪ್ಪನವರ ಗರಡಿಯಲ್ಲಿ ಪಳಗಿದ ರಾಮಕೃಷ್ಣ ಹೆಗಡೆ ಮೊದಲು ವಿಧಾನಸಭೆಗೆ 1957ರಲ್ಲಿ ಆಯ್ಕೆಯಾದಾಗ ಅವರಿಗಿನ್ನೂ 31 ವಯಸ್ಸು. ಅದಾಗಲೇ ಅವರಿಗೆ ಉಪಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿತ್ತು. ಕಾಂಗ್ರೆಸ್ ಎರಡಾಗಿ ಒಡೆದದ್ದೇ ನಿಜಲಿಂಗಪ್ಪನವರ ಬಣದಲ್ಲಿ ಗುರುತಿಸಿಕೊಂಡ ಅವರು ತುರ್ತುಪರಿಸ್ಥಿತಿಯ ನಂತರ ಜನತಾ ಪಕ್ಷ ಸೇರಿದರು. ಮುಂದೆ ಜನತಾದಳ ಕಟ್ಟಿದರಷ್ಟೇ ಅಲ್ಲದೆ ರಮೇಶ್ ಜಿಗಜಿಣಗಿ, ಡಾ. ಜೀವರಾಜ್ ಆಳ್ವ, ಪಿ.ಜಿ.ಆರ್. ಸಿಂಧ್ಯ, ಎಂ.ಪಿ. ಪ್ರಕಾಶ್ ಆರ್.ವಿ. ದೇಶಪಾಂಡೆ ತರಹದ ಯುವಕರ ಬೆನ್ನುತಟ್ಟಿದರು.

ಹೆಗಡೆ ಅವರ ರಾಜಕೀಯ ಕನಸುಗಳಿಗೆ ಸ್ಫೂರ್ತಿಯಾಗಿದ್ದ ಎಸ್. ನಿಜಲಿಂಗಪ್ಪನವರೂ ರಾಜಕೀಯ ಆಸಕ್ತಿ ತಳೆದದ್ದು ಯೌವನದಲ್ಲೇ. ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಕಾಂಗ್ರೆಸ್ ಅಧಿವೇಶನಗಳನ್ನು ಗಮನಿಸಿದ್ದು ತಮ್ಮ 34ನೇ ವಯಸ್ಸಿನಲ್ಲಿ. ಡಾ. ಎನ್.ಎಸ್. ಹರ್ಡೀಕರ್ ಅವರ ಕಣ್ಣಿಗೆ ಬಿದ್ದದ್ದೇ ಕಾಂಗ್ರೆಸ್‌ನ ಸ್ವಯಂ ಸೇವಕರಾದರು. ಆಮೇಲೆ ಪ್ರದೇಶ ಕಾಂಗ್ರೆಸ್ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗುವವರೆಗೆ ಅವರ ಪಯಣ ಮುಂದುವರಿದದ್ದು ತಾರುಣ್ಯದಲ್ಲಿ ಅವರು ತಳೆದ ರಾಜಕೀಯ ನಿಲುವಿನ ಫಲ. ಎರಡು ಅವಧಿಗೆ ಕರ್ನಾಟಕದ ಮುಖ್ಯಮಂತ್ರಿ ಆಗಿಯಷ್ಟೇ ಅವರನ್ನು ಸ್ಮರಿಸದ ನಾವು, ಏಕೀಕರಣಕ್ಕೆ ಸಂದ ಅವರ ಕಾಣ್ಕೆಯ ಹಿನ್ನೆಲೆಯಲ್ಲಿ ಬಗೆದು ನೋಡುತ್ತೇವೆ.

ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಓದುವಾಗಲೇ ರಾಜಕೀಯ ಉಸಿರಾಡತೊಡಗಿದ ಎಚ್.ಡಿ. ದೇವೇಗೌಡರು ಈಗಲೂ ಪಕ್ಕಾ ರಾಜಕಾರಣಿ. ಸ್ವತಂತ್ರ ಅಭ್ಯರ್ಥಿಯಾಗಿ ಅವರು 1962ರಲ್ಲಿ ಮೊದಲ ಸಲ ವಿಧಾನಸಭೆಗೆ ಆಯ್ಕೆಯಾದಾಗ ಅವರಿಗಿನ್ನೂ 29 ವರ್ಷವಾಗಿತ್ತು. ವೀರಪ್ಪ ಮೊಯಿಲಿ ತಮ್ಮ 34ನೇ ವಯಸ್ಸಿಗಾಗಲೇ ಸಣ್ಣ ಕೈಗಾರಿಕೆ ಸಚಿವರಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರು ಗುರುಮಿಟ್ಕಲ್ ಕ್ಷೇತ್ರದಿಂದ ಮೊದಲ ಸಲ ಶಾಸಕರಾದಾಗ ಅವರಿಗಿನ್ನೂ 30.

ಇಂಥ ಬೇರುಗಳಿರುವ ರಾಜಕೀಯ ಪರಿಸರದಲ್ಲಿಯೇ ರೈತಸಂಘದವರ ಹೋರಾಟ ಹೊಗೆಯಾಡಿದ್ದು. ಇತ್ತೀಚೆಗೆ ಅಗಲಿದ ಕೆ.ಎಸ್. ಪುಟ್ಟಣ್ಣಯ್ಯ 1994ರಲ್ಲಿ ಪಾಂಡಪುರದಿಂದ ಮೊದಲ ಸಲ ಗೆದ್ದಾಗ ಅವರಿಗಾಗಲೇ 45 ವರ್ಷವಾಗಿತ್ತು. ಬಾಬಾಗೌಡ ಪಾಟೀಲ್, ಕೆ.ಟಿ. ಗಂಗಾಧರ್ ರೈತ ಹೋರಾಟದ ಅಲೆಯಲ್ಲಿ ಒಂದಿಷ್ಟು ಯುವ ಮತದಾರರಲ್ಲಿ ಚರ್ಚೆ ಹುಟ್ಟುಹಾಕಿದ ಮುಖಂಡರು.

ರಾಜಕೀಯ ಚರ್ಚೆಗೆ ಇಂಬುಗೊಟ್ಟ ವಿಶ್ವವಿದ್ಯಾಲಯಗಳಿಂದ ಹೊರಬಂದ ರಾಜಕಾರಣಿಗಳೂ ಇದ್ದರು. ಎಚ್.ಎಂ. ರೇವಣ್ಣ, ಡಿ.ಬಿ. ಚಂದ್ರೇಗೌಡ, ಎಚ್. ವಿಶ್ವನಾಥ್ ಅದಕ್ಕೆ ಉದಾಹರಣೆ.

ಈಗ ಅಂಥ ಯುವ ರಾಜಕೀಯ ವಾತಾವರಣವಿಲ್ಲ. ಆದರೆ, ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಯುವ ಮೋರ್ಚಾಗಳಿವೆ. ಯುವ ಘಟಕಗಳಿವೆ. ವಿದ್ಯಾರ್ಥಿ ಸಂಘಟನೆಗಳೂ ಇವೆ. ಅವು ಎಷ್ಟರಮಟ್ಟಿಗೆ ರಾಜಕೀಯ ಪ್ರಜ್ಞೆ ಮೂಡಿಸುತ್ತಿವೆ ಎನ್ನುವುದು ಮಾತ್ರ ಸಾಪೇಕ್ಷ.

ಬರಬರುತ್ತಾ ಯುವ ಧುರೀಣರ ಸಂಖ್ಯೆ ಕಡಿಮೆಯಾಗುತ್ತಾ ಬಂತು. ರಾಜಕೀಯ ಹಿನ್ನೆಲೆಯ ಕುಟುಂಬದ ಮಕ್ಕಳು, ಧನವಂತರು ಚುನಾವಣೆಗೆ ನಿಲ್ಲುವ ಪರಿಪಾಠ ಬೆಳೆಯಿತು. 1999ರಲ್ಲಿ ಹರಪನಹಳ್ಳಿಯಲ್ಲಿ ಪಿ.ಟಿ. ಪರಮೇಶ್ವರ ನಾಯ್ಕ ಶಾಸಕರಾಗಿ ಆಯ್ಕೆಯಾದಾಗ ಚಿಕ್ಕಪ್ರಾಯದ ಅವರು ಸುದ್ದಿಯಾಗಿದ್ದರು. ಕಂಪ್ಲಿ ಮೀಸಲು (ಎಸ್‌.ಸಿ.) ಕ್ಷೇತ್ರದಿಂದ ಸ್ಪರ್ಧಿಸಿ 2008ರಲ್ಲಿ ಗೆದ್ದಾಗ ಟಿ.ಎಚ್. ಸುರೇಶ್ ಬಾಬು ಅವರಿಗಿನ್ನೂ 25ರ ಪ್ರಾಯ.

ಯುವ ಮತದಾರರ ನಾಡಿಮಿಡಿತ ಹಿಡಿಯಲೆಂದೇ ಸಂಜಯ್ ಗಾಂಧಿ 1970ರ ದಶಕದಲ್ಲಿ ಯೂತ್ ಕಾಂಗ್ರೆಸ್ ರೂಪಿಸಿದ್ದು. ಅದರ ವಿಸ್ತೃತ ರೂಪವಾಗಿ ಹಲವು ಪಕ್ಷಗಳ ಉಪ ಘಟಕಗಳು ಕಾಣುತ್ತಿವೆಯಷ್ಟೆ.

ಕರ್ನಾಟಕ ರಾಜಕೀಯದಲ್ಲಿ ಸದ್ದು ಮಾಡಿದ ವನಿತೆಯರ ಸಂಖ್ಯೆ ಮೊದಲಿನಿಂದಲೂ ಕಡಿಮೆ. ಟೆನಿಸ್ ಆಟಗಾರ್ತಿ ನಾಗರತ್ನಮ್ಮ, ರಾಣಿ ಸತೀಶ್, ಮನೋರಮಾ ಮಧ್ವರಾಜ್, ಯಶೋಧರಮ್ಮ ದಾಸಪ್ಪ, ಬಿ.ಟಿ. ಲಲಿತಾ ನಾಯಕ್, ಮೋಟಮ್ಮ, ಬಳ್ಳಾರಿಯ ಬಸವರಾಜೇಶ್ವರಿ ತರಹದ ಕೆಲವು ಹೆಸರುಗಳು ರಾಜಕೀಯ ಪುಟಗಳಲ್ಲಿ ಉಳಿದಿವೆಯಷ್ಟೆ.

ಇಂಥ ಭೂಮಿಕೆಯಲ್ಲಿ ಕೆಲವು ಯುವಕ-ಯುವತಿಯರಿಗೆ ಈಗ ಕೌಶಲ ಒರೆಗೆಹಚ್ಚಿ ನೋಡುವ ತಾತ್ಕಾಲಿಕ ಅವಕಾಶವನ್ನು ಚುನಾವಣೆಗಳು ಸೃಷ್ಟಿಸುತ್ತಿವೆ. ಸಾಮಾಜಿಕ ಜಾಲತಾಣಗಳ ಸಂವಹನ, ಆ್ಯಪ್‌ಗಳನ್ನು ರೂಪಿಸುವುದು, ಬೂತ್ ಮಟ್ಟದಲ್ಲಿ ಮತದಾರರಿಗೆ ಆಯಾ ಪಕ್ಷಗಳ ಕಾರ್ಯಕ್ರಮಗಳ ಪರಿಚಯ ಮಾಡಿಸುವುದು ಇವೆಲ್ಲವೂ ಅಂಥ ಕೆಲವು ತಾತ್ಕಾಲಿಕ ಅವಕಾಶಗಳು. ಇವುಗಳನ್ನು ಪಡೆದು ಅಲ್ಪಕಾಲದ ನೆಮ್ಮದಿಯ ನಿಟ್ಟುಸಿರಿಡುವ ಯುವಜನತೆಯ ನಡುವೆಯೇ ರಾಜಕೀಯ ಹೇವರಿಕೆ ಇರುವ ನವಮತದಾರರನ್ನೂ ಕಾಣಬಹುದು.

2013ರ ವಿಧಾನಸಭಾ ಚುನಾವಣೆಯ ನಂತರ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಕಾವೇರಿ ಮಿಶ್ರಾ ಎನ್ನುವವರು ರಾಜ್ಯದ ನಗರಗಳ ಕೆಲವು ನವಮತದಾರರನ್ನು ಮಾತನಾಡಿಸಿದ್ದರು. ಅವರು ಮತ ಹಾಕುವಂತೆ ಮಾಡುವಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಅಷ್ಟಾಗಿ ಇರಲಿಲ್ಲ ಎನ್ನುವುದು ಅವರ ಲೇಖನದ ಸಾರಾಂಶವಾಗಿತ್ತು. ಕಳೆದ ಎರಡು ವಿಧಾನಸಭಾ ಚುನಾವಣೆಗಳಿಂದ 18–19 ವರ್ಷದ ಮತದಾರರ ಸಂಖ್ಯೆ ದ್ವಿಗುಣಗೊಳ್ಳುತ್ತಾ ಬಂದಿದೆ. ಆನ್‌ಲೈನ್ ಮೂಲಕ ಮತದ ಗುರುತುಚೀಟಿ ಪಡೆಯುವ ವ್ಯವಸ್ಥೆ ಬಂದಿರುವುದೂ ನವಮತದಾರರ ಸಂಖ್ಯೆಯಲ್ಲಿ ಏರಿಕೆ ಆಗಿರುವುದಕ್ಕೆ ಕಾರಣವಿದ್ದಿರಬಹುದು.

ಈ ಬಾರಿ ಇದುವರೆಗೆ 19 ವರ್ಷದೊಳಗಿನ ಮತದಾರರ ಸಂಖ್ಯೆ 15 ಲಕ್ಷಕ್ಕೂ ಹೆಚ್ಚಾಗಿದೆ. ಕಳೆದ ಚುನಾವಣೆಯ ಸಂದರ್ಭಕ್ಕಿಂತ ಇದು ದುಪ್ಪಟ್ಟು. ಮತಹಾಕುವ ಅವಕಾಶ ಪಡೆದ ಯುವತಿಯರ ಸಂಖ್ಯೆಯಲ್ಲೂ ಶೇ 13ರಷ್ಟು ಏರಿಕೆ ಆಗಿದೆ.

ಯುವಕ–ಯುವತಿಯರಿಗೆ ತಮ್ಮ ಭವಿತವ್ಯದ ಚಿಂತೆ. ಜಾತಿ–ಧರ್ಮದ ಕುರಿತು ಅವರು ತಲೆಕೆಡಿಸಿಕೊಳ್ಳುವುದಿಲ್ಲ. ವ್ಯವಸ್ಥೆಯ ಬಗೆಗೆ ಅವರಲ್ಲಿ ಸಿಟ್ಟಿದೆ. ಜೆ.ಪಿ. ಚಳವಳಿಯ ತೀವ್ರತೆ ಆಮ್ ಆದ್ಮಿ ಪಾರ್ಟಿ (ಎಎ‍ಪಿ) ಚಳವಳಿಗೆ ಇರಲಿಲ್ಲ. ಇಷ್ಟಾಗಿಯೂ ಚುನಾವಣೆಯಲ್ಲಿ ಶೇ 40–50ರಷ್ಟು ಯುವಕರ ಮತಗಳು ಮುಖ್ಯವಾಗುತ್ತವೆ ಎನ್ನುತ್ತಾರೆ ಆಳಂದ ಶಾಸಕ ಬಿ.ಆರ್. ಪಾಟೀಲ್.

1977ರಲ್ಲಿ ಮೊದಲ ಸಲ ತಾವು ಮತ ಹಾಕಿದ ಅನುಭವದ ಪುಳಕ ಹಂಚಿಕೊಂಡವರು ಬೆಂಗಳೂರಿನ ರಾಜಾಜಿನಗರ ಶಾಸಕ ಸುರೇಶ್ ಕುಮಾರ್. ತುರ್ತು ಪರಿಸ್ಥಿತಿಯು ಯುವಕರಲ್ಲಿ ಹಚ್ಚಿದ್ದ ಕಿಚ್ಚನ್ನು ನೆನಪಿಸಿಕೊಂಡ ಅವರು, ಈಗ ಅಂಥ ಯಾವ ಕಿಚ್ಚೂ ಯುವಕರಲ್ಲಿ ಇಲ್ಲ ಎನ್ನುವುದನ್ನು ಒಪ್ಪಿಕೊಂಡರು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜಾತೀಯತೆ ವಿರುದ್ಧ ಯೋಚಿಸುವ ಪ್ರಬುದ್ಧತೆ ಈ ನವಮತದಾರರಲ್ಲಿ ಇದೆ ಎನ್ನುವುದು ಅವರ ನಂಬಿಕೆ. ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಪ್ರಿಯಾಂಕ್ ಖರ್ಗೆ ಎಲ್ಲರೂ ಕಾಲೇಜುಗಳಿಗೆ ಎಡತಾಕಿ ವಿದ್ಯಾರ್ಥಿ–ವಿದ್ಯಾರ್ಥಿನಿಯರ ಸಮಸ್ಯೆಗಳಿಗೆ ಕಿವಿಗೊಡುತ್ತಿರುವುದರಲ್ಲೇ ಆ ಮತದಾರರು ಎಷ್ಟು ಮುಖ್ಯ ಎನ್ನುವ ಉದಾಹರಣೆ ಕಾಣುತ್ತಿದೆ ಎನ್ನುತ್ತಾರೆ ಸುರೇಶ್ ಕುಮಾರ್.

ನಗರ ಹಾಗೂ ಹಳ್ಳಿ ಯುವಜನತೆಯ ಧೋರಣೆಯ ನಡುವಿನ ಗೆರೆ ತೆಳುವಾಗಿದೆ ಎನ್ನುವುದನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕೂಡ ಅನುಮೋದಿಸಿದರು. ತಿಂಗಳಿಗೆ ₹ 5,000 ಸಂಬಳ ಕೊಟ್ಟು, ಗಿಡಗಳನ್ನು ಮರಗಳನ್ನಾಗಿ ಮಾಡುವ ಉದ್ಯೋಗ ಸೃಷ್ಟಿಸಬೇಕೆಂಬ ಅವರ ಕನಸು ಹೊಸ ಕಾಲದ ತರುಣ–ತರುಣಿಯರ ನಿರುದ್ಯೋಗದ ಸಮಸ್ಯೆಯ ತೀವ್ರತೆಯನ್ನು ಹೇಳುವ ರೂಪಕದಂತೆಯೂ ಕಾಣುತ್ತಿದೆ. ಇನ್ನೊಂದು ಕಡೆ ‘ಉದ್ಯೋಗಕ್ಕಾಗಿ ವೋಟು’ ಆಂದೋಲನ ಸದ್ದು ಮಾಡುತ್ತಿದೆ.

ರಾಜಕೀಯ ಪ್ರಜ್ಞೆ ಇಲ್ಲ

ದೊಡ್ಡ ಕ್ರಾಂತಿ ಆಗಲು ಪೂರಕ ಸಾಮಾಜಿಕ ವಾತಾವರಣ ಇರುವ ಕಾಲಘಟ್ಟವಿದು. ಆದರೆ, ಶಾಲಾ-ಕಾಲೇಜುಗಳಲ್ಲಿ ರಾಜಕೀಯದ ಮಾತು ನಿಷಿದ್ಧ. ಶಿಕ್ಷಕ–ಶಿಕ್ಷಕಿಯರಾಗಲೀ, ವಿದ್ಯಾರ್ಥಿಗಳಾಗಲಿ ಚರ್ಚಾಸ್ಪರ್ಧೆಯಲ್ಲೂ ರಾಜಕೀಯ ಕುರಿತು ಮಾತನಾಡುತ್ತಿಲ್ಲ. ನಿರ್ದಿಷ್ಟ ಪಕ್ಷದ ಬಗೆಗೆ ಹೇಳುವುದು ಬೇಡ; ರಾಜಕೀಯ ಪ್ರಜ್ಞೆ ಬಿತ್ತಲು ಪೂರಕ ವಿಚಾರಗಳನ್ನು ಆಗೀಗ ಪಾಠದಿಂದ ಆಚೆ ಬಂದು ಹೇಳಬೇಕಾಗುತ್ತದೆ. ಪತ್ರಿಕೆ, ನಿಯತಕಾಲಿಕೆಗಳನ್ನು ಓದುವ ಯುವಕ-ಯುವತಿಯರ ಸಂಖ್ಯೆ ನಿಜಕ್ಕೂ ಕ್ಷೀಣಿಸಿದೆ. ಅವರಿಗೆ ಬೇಕಾದಷ್ಟು ‘ಡಿಸ್ಟ್ರ್ಯಾಕ್ಷನ್ಸ್’ ಇವೆ. ವೃತ್ತಿ ಬದುಕು ಕಟ್ಟಿಕೊಳ್ಳಲು ಏನು ಬೇಕೋ ಅಷ್ಟನ್ನು ಮಾತ್ರ ಓದುತ್ತಾರೆ. ಆಯಾ ಸಂದರ್ಭದ ಜನಪ್ರಿಯತೆಗೆ ತಕ್ಕಂತೆ ರಾಜಕಾರಣಿಗಳ ಕುರಿತು ಆರಾಧನಾ ಭಾವನೆಯನ್ನು ಸಾಮಾಜಿಕ ಜಾಲತಾಣಗಳು ಮುಡಿಸುತ್ತಿವೆಯೇ ವಿನಾ ರಾಜಕೀಯ ಪ್ರಜ್ಞೆಯನ್ನಲ್ಲ. ವೋಟು ಮಾಡುವವರಿಗೂ ತಮ್ಮ ಆಯ್ಕೆ ಯಾರಾಗಬೇಕು ಎನ್ನುವ ಸ್ಪಷ್ಟತೆ ಇರುವುದು ಕಡಿಮೆಯಾಗುತ್ತಿದೆ. ಆತ್ಮಾವಲೋಕನವಿಲ್ಲದ, ಪದಾರ್ಥ ಮೋಹ ಹೆಚ್ಚಾಗಿರುವ ಅನೇಕ ನವಮತದಾರರಲ್ಲಿ ರಾಜಕಾರಣಿಗಳ ಬಗೆಗೆ ಹೇವರಿಕೆಯ ಮನೋಭಾವ ಇದೆ.

ಎಂ. ಶ್ರೀಧರಮೂರ್ತಿ ಮನೋವಿಜ್ಞಾನಿ

***

‘ಉದ್ಯೋಗ ಕೊಡಿ, ವೋಟು ತಗೊಳ್ಳಿ’

‘ಉದ್ಯೋಗಕ್ಕಾಗಿ ವೋಟು’ ಆಂದೋಲನ ವ್ಯಾಪಿಸುತ್ತಿರುವ ಈ ಹೊತ್ತಿನಲ್ಲಿ ಅದರ ಸಂಚಾಲಕ ಮುತ್ತುರಾಜ್ ಹೀಗೆನ್ನುತ್ತಾರೆ:

‘ಉದ್ಯೋಗಕ್ಕಾಗಿ ವೋಟು’ ಆಂದೋಲನದ ಕಿಡಿ ಹತ್ತಿದ್ದು ಬಂಧು-ಮಿತ್ರರಲ್ಲೂ ಕೆಲವು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಾಗ. ಅದುವರೆಗೆ ನಿರುದ್ಯೋಗ ವೈಯಕ್ತಿಕ ಸಮಸ್ಯೆ ಎಂದಷ್ಟೆ ಭಾವಿಸಿದ್ದೆ. ಆಮೇಲೆ ಅದು ಸಾಮಾಜಿಕ ಸ್ವರೂಪ ಪಡೆದುಕೊಂಡಿರುವುದು ಗೊತ್ತಾಯಿತು.

‘2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಜಾರಿಗೆ ಬಂದಾಗ ಪ್ರಧಾನಿ ನರೇಂದ್ರ ಮೋದಿ 1 ಕೋಟಿ ಉದ್ಯೋಗ ಸೃಷ್ಟಿಯ ಆಶ್ವಾಸನೆ ನೀಡಿದ್ದರು. ಪ್ರಣಾಳಿಕೆಗಳಲ್ಲಿ ನಿರುದ್ಯೋಗಿಗಳನ್ನು ಉದ್ದೇಶಿಸಿದ ಅಂಶಗಳು ಇದ್ದದ್ದು ಅದೇ ಮೊದಲು. ಅದಕ್ಕೂ ಹಿಂದಿನ ಪ್ರಣಾಳಿಕೆಗಳನ್ನು ನಾನು ಗಮನಿಸಿದೆ; ಅಂಥ ಭರವಸೆಗಳು ಇರಲೇ ಇಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕಾರಣಿಗಳ ಗಮನ ಈ ಸಮಸ್ಯೆಯತ್ತ ರಚನಾತ್ಮಕವಾಗಿ ಹರಿಯುವಂತೆ ಮಾಡುವ ಉಮೇದಿನಿಂದ ಆಂದೋಲನವನ್ನು ಚುರುಕುಗೊಳಿಸಿದೆವು.

‘ಮೈ ಜಾಬ್’ ಎಂಬ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡಿರುವವರ ಸಂಖ್ಯೆ 27 ಸಾವಿರ ಇದೆ. ನಿರುದ್ಯೋಗಿಗಳು, ಅರೆಕಾಲಿಕ ಅಥವಾ ಗುತ್ತಿಗೆ ಆಧಾರದ ನೌಕರಿಯಲ್ಲಿ ಇರುವವರ ಸಂಖ್ಯೆ ರಾಜ್ಯದಲ್ಲಿ 95 ಲಕ್ಷ. ಇವರಲ್ಲಿ ಬಹುತೇಕರನ್ನು ಆಂದೋಲನದ ಭಾಗಿವಾಗಿಸಲು ಪಣತೊಟ್ಟೆವು.

‘ಮೊದಲು 21 ಜಿಲ್ಲೆಗಳ 100 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವಯಂಸೇವಕರು ಹುಟ್ಟಿಕೊಂಡರು. ಒಂದು ವರ್ಷದಲ್ಲಿ ಎಲ್ಲ 224 ವಿಧಾನಸಭಾ ಕ್ಷೇತ್ರಗಳಿಗೆ ಆಂದೋಲನ ವ್ಯಾಪಿಸಿತು. ಈಗ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐವರು ಯುವ ಸ್ವಯಂ ಸೇವಕರಿದ್ದಾರೆ. ಅವರಲ್ಲಿ ವಿದ್ಯಾರ್ಥಿಗಳೂ ಸೇರಿದ್ದು, ಎಲ್ಲರೂ ಸಹಿ ಸಂಗ್ರಹಣಾ ಆಂದೋಲನದಲ್ಲಿ ತೊಡಗಿದ್ದಾರೆ. 1,800 ಸ್ವಯಂ ಸೇವಕರು ಮುಂದೆ ಬಂದಿದ್ದು, ಮನೆ ಮನೆಗೆ ತೆರಳಿ ನಿರುದ್ಯೋಗಿಗಳಿಂದ ಒಂದು ಫಾರ್ಮ್ ತುಂಬಿಸಿ, ಸಹಿ ಹಾಕಿಸಿಕೊಳ್ಳುತ್ತಿದ್ದೇವೆ. ಇದುವರೆಗೆ 60 ಸಾವಿರ ಯುವತಿ-ಯುವಕರು ಸಹಿ ಹಾಕಿದ್ದಾರೆ.

‘ನಾವೇ ಪ್ರಣಾಳಿಕೆ ರೂಪಿಸಿದ್ದೇವೆ. ಅವನ್ನು ಎಲ್ಲ ಪಕ್ಷಗಳ ಗಮನಕ್ಕೆ ತರುತ್ತೇವೆ. ಅನುಷ್ಠಾನಕ್ಕೆ ತರಲು ಸಾಧ್ಯವಿರುವಂಥ ಉದ್ಯೋಗ ಖಾತರಿ ನೀಡುವ ಪಕ್ಷಕ್ಕಷ್ಟೇ ನಮ್ಮ ಮತ.’

***

ಶಾಸನ ಸಭೆಗಳಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಪ್ರಾತಿನಿಧ್ಯ <br/>ಶೇ 40ರಷ್ಟಾದರೂ ಇರಬೇಕು. ಯುವಕರ ಸಮಸ್ಯೆಗೆ ‘ನೋಟಾ’ ಪರಿಹಾರವಲ್ಲ.
– ಪ್ರಿಯಾಂಕ್ ಖರ್ಗೆ, ಐಟಿ–ಬಿಟಿ ಸಚಿವ

***

ಯುವಜನತೆ ಸಮೂಹಸನ್ನಿಗೆ ಒಳಗಾಗಿದ್ದು, ಟ್ರೆಂಡ್ ಹಿಂದೆ ಬಿದ್ದಿದ್ದಾರೆ. ಅಭಿವೃದ್ಧಿಯ ತೆಳು ಕಲ್ಪನೆಯ ಬೆನ್ನುಹತ್ತಿರುವವರಿಗೆ ಸಮಗ್ರ ಚಿತ್ರಣವಿಲ್ಲ. ಒಂದು ರೀತಿ ಅಭಿಮಾನದ ರಾಜಕಾರಣವಿದು.
  – ಚುಕ್ಕಿ ನಂಜುಂಡಸ್ವಾಮಿ, ರೈತ ಹೋರಾಟಗಾರ್ತಿ

***

ಕೃಷಿಯನ್ನೇ ಕೈಗಾರಿಕೆಯಂತೆ ಬೆಳೆಸಿ ಎಂದು ಅಂಬೇಡ್ಕರ್ ಹೇಳಿದ್ದರು. ರಾಜ್ಯದ ಯುವಕರ ನಿರುದ್ಯೋಗದ ಸಮಸ್ಯೆ ಸೊಲ್ಲಿಗೆ ಬಹುಶಃ ಅದೇ ಪರಿಹಾರ.
– ಬಿ.ಆರ್. ಪಾಟೀಲ, ಶಾಸಕ

***

ಯುವಜನರು ಸಿನಿಕರಲ್ಲ. ಅವರು ಪೊಲಿಟಿಸೈಜ್ ಆಗೋಲ್ಲ. ಅವರೆಲ್ಲ ಭವಿಷ್ಯದ ಕುರಿತೇ ಪ್ರಶ್ನೆಗಳನ್ನು ಕೇಳೋದು.‌
  – ಸುರೇಶ್ ಕುಮಾರ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT