ಪ್ರಯೋಗದ ಕೊಳದಲಿ ಅರಳಿದ ‘ಕಮಲ’

7

ಪ್ರಯೋಗದ ಕೊಳದಲಿ ಅರಳಿದ ‘ಕಮಲ’

Published:
Updated:
ಪ್ರಯೋಗದ ಕೊಳದಲಿ ಅರಳಿದ ‘ಕಮಲ’

ಅದೊಂದು ದಿನ ಕಮಲ್ ಹಾಸನ್ ಕಣ್ಣರಳಿಸಿಕೊಂಡು ಕೂತಿದ್ದರು. ಎದುರಲ್ಲಿದ್ದ ನಿರ್ದೇಶಕ ಕೆ. ಬಾಲಚಂದರ್ ಅವನ್ನು ಸಣ್ಣ ಮಾಡುವಂತೆ ಹೇಳಿಬಿಟ್ಟರು. ನಿರ್ದೇಶಕನಾಗಬೇಕು ಎನ್ನುವುದು ಕಮಲ್ ಮಹತ್ವಾಕಾಂಕ್ಷೆ. ‘ನಟನಾಗಿ, ಹಣ ಮಾಡು. ನಿರ್ದೇಶಕ ಆದರೆ ಬಡವನಾಗೇ ಇರಬೇಕಾಗುತ್ತದೆ’ - ಇದು ಬಾಲಚಂದರ್ ಹೇಳಿದ ಪಾಠ.

ಕಮಲ್ ಬರೀ ನಟನಾಗಲಿಲ್ಲ; ಪ್ರಯೋಗಮುಖಿ ಕಲಾವಿದ ಆದರು. ನಿರ್ಮಾಣದ ಉಸಾಬರಿಗಳನ್ನು ಮೈಮೇಲೆ ಎಳೆದುಕೊಂಡರು. ನಿರ್ದೇಶಕನ ಟೋಪಿಯನ್ನೂ ತೊಟ್ಟರು. ಹಾಡಿದರು, ಹಾಡುಗಳ ಬರೆದರು. ಕಥೆ ಹೇಳಿದರು. ಚಿತ್ರಕಥೆ ಬರೆದರು. ಈಗ ರಾಜಕೀಯದ ಮೊಗಸಾಲೆಯಲ್ಲಿ ನಿಂತು ಬೇರೆ ರೀತಿ ಕಣ್ಣರಳಿಸಿದ್ದಾರೆ - 'ಮಕ್ಕಳ್ ನೀದಿ ಮಯ್ಯಂ' (ಜನರ ನ್ಯಾಯ ಕೇಂದ್ರ) ಪಕ್ಷ ಕಟ್ಟಿ.

ತಮಿಳುನಾಡಿನ ರಾಮನಂತಪುರಂ ಜಿಲ್ಲೆಯ ಪರಮಕುಡಿ ಪಟ್ಟಣದಲ್ಲಿ 1954ರ ನವೆಂಬರ್ 7ರಂದು ಹುಟ್ಟಿದ ಕಮಲ್, ಕುಟುಂಬದ ಚಿಕ್ಕ ಮಗ. ಚಾರುಹಾಸನ್, ಚಂದ್ರಹಾಸನ್ ಅಣ್ಣಂದಿರು. ನಳಿನಿ ಅಕ್ಕ. ಅಪ್ಪ ವಕೀಲ ಡಿ. ಶ್ರೀನಿವಾಸನ್ ಸಂಸ್ಕೃತ ಓದಿಕೊಂಡಿದ್ದವರು. ಮಕ್ಕಳಿಗೂ ಸಂಸ್ಕೃತದ ಹೆಸರುಗಳನ್ನೇ ಇಟ್ಟರು. ‘ಹಾಸ್ಯ’ ಎನ್ನುವುದೇ ‘ಹಾಸನ್’ ಆಗಿದೆ ಎಂದು ಕಮಲ್ ಸಂದರ್ಶನವೊಂದರಲ್ಲಿ ಸ್ಪಷ್ಟನೆ ಕೊಟ್ಟಿದ್ದರು. ‘ಪಾರ್ಥಸಾರಥಿ’ ಜನ್ಮನಾಮ. ಅಮ್ಮ ರಾಜಲಕ್ಷ್ಮಿ ಮುದ್ದಿನ ಮಗನನ್ನು ಅದೇ ಹೆಸರಿನಿಂದ ಕರೆಯುತ್ತಿದ್ದುದು.

ಅವಿಚಿ ಮೇಯಪ್ಪ ಚೆಟ್ಟಿಯಾರ್ (ಎವಿಎಂ) ಹೆಸರಿನ ಸ್ಟುಡಿಯೊ ಮದ್ರಾಸ್‍ನಲ್ಲಿ ಅತಿ ಜನಪ್ರಿಯ. ಎವಿಎಂ ಅವರ ಪತ್ನಿಗೆ ಒಮ್ಮೆ ಹುಷಾರಿರಲಿಲ್ಲ. ಅವರನ್ನು ಪರೀಕ್ಷಿಸಲು ಹೊರಟ ವೈದ್ಯೆ ಕಮಲ್ ತಾಯಿಯ ಸ್ನೇಹಿತೆಯಾಗಿದ್ದರು. ತಮ್ಮ ಜೊತೆಯಲ್ಲಿ ಬಾಲಕ ಕಮಲ್ ನನ್ನೂ ಅವರ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಚುರುಕು ಕಣ್ಣುಗಳ ಹುಡುಗನ ಕಂಡಿದ್ದೇ ಎವಿಎಂ ಮಗ ಎಂ. ಸರವಣನ್ ‘ಕಮತ್ತೂರ್ ಕಣ್ಣಮ್ಮ’ ತಮಿಳು ಸಿನಿಮಾದ ಪಾತ್ರವೊಂದಕ್ಕೆ ಆರಿಸಿಕೊಂಡರು. 1960ರಲ್ಲಿ ತೆರೆಕಂಡ ಅದು ಕಮಲ್ ಅಭಿನಯದ ಮೊದಲ ಚಿತ್ರ.

ಪರಮಕುಡಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಮದ್ರಾಸ್‍ಗೆ ಹೈಸ್ಕೂಲು ಕಲಿಯಲು ಹೊರಟಾಗಲೇ ಕಮಲ್ ಒಳಗೆ ಕಲೆ ಅರಳತೊಡಗಿತ್ತು. ಅಕ್ಕನ ನೃತ್ಯದ ವರಸೆಗಳು ವರ್ಗಾವಣೆಯಾಗಿದ್ದವು. ಅದಕ್ಕೇ ನೃತ್ಯ ನಿರ್ದೇಶಕ ತಂಕಪ್ಪನ್ ಅವರೊಟ್ಟಿಗೆ ಏಳು ವರ್ಷ ನೃತ್ಯ ಸಹಾಯಕನಾಗಿ ಸಿನಿಮಾಗಳಿಗೆ ಕೆಲಸ ಮಾಡಲು ಸಾಧ್ಯವಾದದ್ದು. ಎಂ.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್, ಜಯಲಲಿತಾ ಮೂವರಿಗೂ ನೃತ್ಯ ಹೇಳಿಕೊಟ್ಟಾಗ ಕಮಲ್ ಅವರ ಕಣ್ಣಿಗೆ ಇನ್ನೂ ‘ಚಿಲ್ಟಾರಿ ಹುಡುಗ’ನಂತೆ ಕಂಡಿದ್ದರು. ನೃತ್ಯ ಹೇಳಿಕೊಡುವಾಗಲೇ ಸಣ್ಣ ಪುಟ್ಟ ಪಾತ್ರಗಳು ಸಿಗತೊಡಗಿದವು. 1970ರಲ್ಲಿ ‘ಮಾನವನ್’ ತಮಿಳು ಸಿನಿಮಾದ ನೃತ್ಯ ಸನ್ನಿವೇಶದಲ್ಲಿ ಕಾಣಿಸಿಕೊಂಡರು. ಮರುವರ್ಷ ‘ಅಣ್ಣೈ ವೇಲಂಕಣಿ’ ಸಿನಿಮಾದಲ್ಲಿ ಪೋಷಕ ಪಾತ್ರವೊಂದು ಒಲಿದುಬಂತು. ಏಳು ವರ್ಷ ನೃತ್ಯ ಸಹಾಯಕನಾಗಿ ಕೆಲಸ ಮಾಡುತ್ತಲೇ ಚಿತ್ರೀಕರಣದ ಹಲವು ಸೂಕ್ಷ್ಮಗಳನ್ನು ಕಮಲ್ ಅರಿತುಕೊಂಡರು.

ಹೊಸಬರ ಹಣೆಬರಹ ಬರೆಯುವ ನಿರ್ದೇಶಕ ಎಂದೇ ಹೆಸರಾದ ಕೆ. ಬಾಲಚಂದರ್ 1973ರಲ್ಲಿ ‘ಅರಂಗೇಟ್ರಂ’ ಚಿತ್ರದ ಮೂಲಕ ಕಮಲ್ ಅವರನ್ನು ನಾಯಕನನ್ನಾಗಿಸಿದರು. ಮಲಯಾಳಂ ಭಾಷೆಯ ‘ಕನ್ಯಾಕುಮಾರಿ’ (1974) ಕಮಲ್ ಅಭಿನಯಕ್ಕೆ ಮೊದಲ ಫಿಲ್ಮ್ ಫೇರ್ ಪ್ರಶಸ್ತಿ ತಂದುಕೊಟ್ಟಿತು. ದೊಡ್ಡ ಬ್ರೇಕ್ ಕೊಟ್ಟಿದ್ದು ಕೆ.ಬಿ. ನಿರ್ದೇಶನದ ‘ಅಪೂರ್ವ ರಾಗಂಗಳ್’. ತನಗಿಂತ ದೊಡ್ಡ ವಯಸ್ಸಿನ ಹೆಣ್ಣನ್ನು ಪ್ರೀತಿಸುವ ತಬಲಾವಾದಕನ ಪಾತ್ರದ ಪರಕಾಯ ಪ್ರವೇಶ ಮಾಡಿದ್ದ ಕಮಲ್ ಗೆ ಪ್ರಶಂಸೆಗಳ ಸುರಿಮಳೆ. ಆ ಪಾತ್ರ ನಿರ್ವಹಿಸಲಿಕ್ಕೇ ತಬಲಾ ನುಡಿಸುವುದನ್ನೂ ಕಮಲ್ ಕಲಿತದ್ದು ಅವರ ವೃತ್ತಿಪರತೆಗೆ ಸಾಕ್ಷಿ.

ಪಾತ್ರವೈವಿಧ್ಯದ ಪ್ರವಾಹವೇ ಕಮಲ್ ಕಡೆಗೆ ನುಗ್ಗಿತೋ, ಅವರ ಆಯ್ಕೆಯೇ ಅಂಥದ್ದಾಗಿತ್ತೋ ಹೇಳುವುದು ಕಷ್ಟ. ‘ಮನ್ಮದ ಲೀಲೈ’ನ ಹೆಣ್ಣುಬಾಕ, ‘ಮೂಡ್ರು ಮುದಿಚು ಅವರ್ಗಳ್’ ಚಿತ್ರದ ಮಹಿಳಾ ಚಳವಳಿಯ ಭಾಗವಾಗುವ ಪಾತ್ರ, ಹಾವು ಸೇಡು ತೀರಿಸಿಕೊಳ್ಳುವ ‘ನೀಯ’ ಎಂಬ ಫ್ಯಾಂಟಸಿಯಲ್ಲಿನ ಕ್ಲೀಷೆಯ ಪಾತ್ರ, ‘ಕೋಕಿಲಾ’ ಕನ್ನಡ ಸಿನಿಮಾದಲ್ಲಿ ಬಾಲು ಮಹೇಂದ್ರ ನಿರ್ದೇಶನದ ಚೊಚ್ಚಿಲ ಯತ್ನದ ಭಾಗವಾಗಿದ್ದು - ಇವೆಲ್ಲವೂ ಕಮಲ್ ಪ್ರಯೋಗಶಾಲೆಯ ಮೊದಲ ಕಿಡಿಗಳು. 1970ರ ದಶಕ ಮುಗಿಯುವ ಹೊತ್ತಿಗೆ ನಾಲ್ಕು ರಾಜ್ಯ ಪ್ರಶಸ್ತಿಗಳು (ಅದೂ ಸತತವಾಗಿ ಪುರಸ್ಕೃತಗೊಂಡದ್ದು), 6 ಫಿಲ್ಮ್ ಫೇರ್ ಪ್ರಶಸ್ತಿಗಳು ಕಮಲ್ ಮನೆಯ ಶೆಲ್ಫ್ ಮೇಲೆ ಇದ್ದವು.

‘ರಾಜಾ ಪಾರ್ವೈ’ ತಮಿಳು ಚಿತ್ರದಲ್ಲಿ ಅಂಧ ವಯಲಿನಿಸ್ಟ್ ಪಾತ್ರ ನಿರ್ವಹಿಸಿದ ಅವರು, ಆ ಸಿನಿಮಾದ ನಿರ್ಮಾಪಕರೂ ಆಗಿದ್ದರು. ಅದು ಅವರು ತೆಗೆದುಕೊಂಡ ಮೊದಲ ರಿಸ್ಕ್. ‘ಮೂಡ್ರಂ ಪಿರೈ’ ಚಿತ್ರದ ಕಾಡುವ ಅಭಿನಯಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ಒಲಿದಾಗ ಅವರೊಬ್ಬ ಮಾಗಿದ ನಟನಾಗಿದ್ದರು. ನಿರ್ದೇಶಕ ಕೆ. ವಿಶ್ವನಾಥ್ ಇಷ್ಟವಾದರು. ‘ಸಾಗರ ಸಂಗಮಂ’ ತೆಲುಗು ಚಿತ್ರದ ಕನಸು ನನಸಾಯಿತು. ಕೋದಂಡರಾಮಿ ರೆಡ್ಡಿ ಹೇಳಿದ ಕಥೆ ಮೆಚ್ಚಿದ್ದೇ ‘ಒಕ ರಾಧಾ ಇದ್ದರು ಕೃಷ್ಣುಲು’ ಸಾಕಾರಗೊಂಡಿತು. ‘ಸ್ವಾತಿ ಮುತ್ಯಂ’ ಬಂದಮೇಲಂತೂ ತೆಲುಗಿನಲ್ಲೂ ಕಮಲ್ ಜನಪ್ರಿಯ. ‘ಗಾಡ್ ಫಾದರ್’ ಸ್ಫೂರ್ತಿಯಿಂದ ಮಣಿರತ್ನಂ ಕಟೆದ ‘ನಾಯಗನ್’ ಕೊಟ್ಟ ಇಮೇಜ್ ತುಂಬಾ ದೊಡ್ಡದು. ಅದು ಎರಡನೇ ರಾಷ್ಟ್ರಪ್ರಶಸ್ತಿ ತಂದಿತ್ತ ಪಾತ್ರ.

ಕಮಲ್ ಪ್ರತಿಭೆಯ ಪ್ರಭಾವಳಿಯನ್ನು ಬಾಲಿವುಡ್‍ನಲ್ಲೂ ಹಿಗ್ಗಿಸಲೆಂದೇ ಬಾಲಚಂದರ್ ‘ಏಕ್ ದೂಜೆ ಕೆ ಲಿಯೆ’ ನಿರ್ದೇಶಿಸಿದ್ದು. ಆ ಚಿತ್ರ ಗೆದ್ದಮೇಲೆ ‘ಸಾಗರ್’, ‘ದೇಖಾ ಪ್ಯಾರ್ ತುಮ್ಹಾರಾ’, ‘ಗೆರಫ್ತಾರ್’ ತರಹದ ಹಿಂದಿ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆದರೆ, ಬಾಲಿವುಡ್‍ನಲ್ಲಿ ಕಮಲ್ ನೆಲೆಗೊಳ್ಳಲಿಲ್ಲ. ದಕ್ಷಿಣ ಭಾರತದ ಚಿತ್ರರಂಗವೇ ಅವರಿಗೆ ಮುಖ್ಯ ಪ್ರಯೋಗಶಾಲೆ ಎನ್ನುವುದನ್ನು ಪದೇ ಪದೇ ಸಾಬೀತುಪಡಿಸಿದರು.

‘ಅಪ್ಪು ರಾಜಾ’ದಲ್ಲಿ ಕುಳ್ಳನಾದರು. ‘ಅಪೂರ್ವ ಸಹೋದರರ್‍ಗಳ್’ನಲ್ಲಿ ಕಳ್ಳನಾದರು. ‘ಮೈಕಲ್ ಮದನ್ ಕಾಮರಾಜನ್’ನಲ್ಲಿ ಬಹುಮುಖಿಯಾದರು. ‘ಪುಷ್ಪಕ ವಿಮಾನ’ದಲ್ಲಿ ಮಾತೇ ಇಲ್ಲದೆಯೂ ನಟಿಸುವ ಪ್ರಯೋಗಕ್ಕೆ ಎದೆಗೊಟ್ಟರು. ‘ದಶಾವತಾರಂ’ನಲ್ಲಿ ಹತ್ತು ಪಾತ್ರವನ್ನು ಒಬ್ಬರೇ ಅಭಿನಯಿಸಿದರು. ‘ಅವ್ವೈ ಷಣ್ಮುಗಿ’ ಹಾಗೂ ‘ಚಾಚಿ 420’ಯಲ್ಲಿ ವಯಸ್ಸಾದ ಹೆಣ್ಣಿನ ಪಾತ್ರಧಾರಿಯಾಗಿ ನಗಿಸಿದರು. ‘ವಿಶ್ವರೂಪಂ’ ಸಿನಿಮಾ ನಿರ್ಮಿಸಿ, ನಿರ್ದೇಶಿಸಿ ಕೆಲವರ ದ್ವೇಷ ಕಟ್ಟಿಕೊಂಡರು. ‘ದೇಶವನ್ನೇ ಬಿಟ್ಟು ಹೋಗಬೇಕೆನಿಸುತ್ತಿದೆ’ ಎಂದೂ ಆಗ ಭಾವುಕರಾದರು.

ಇಷ್ಟವಾದ ಸಿನಿಮಾಗಳನ್ನು ಕಡತಂದು ರೀಮೇಕ್ ಮಾಡಿದರು. ಯಾಕೋಬ್ ಹಸನ್ ಬದುಕಿನ ಕಥೆಯುಳ್ಳ ಸಿನಿಮಾ ನಿರ್ದೇಶಿಸಲು ಕೈಹಾಕಿ, ಎರಡು ಯತ್ನಗಳ ಬಳಿಕವೂ ಅದನ್ನು ಮುಗಿಸಲಾಗದೆ ಸುಮ್ಮನಾದರು. ‘ವಿಶ್ವರೂಪಂ’ನ ಮುಂದುವರಿದ ಭಾಗದ ಚಿತ್ರೀಕರಣ ನಡೆಸಿ, ಒಂದಷ್ಟು ಖರ್ಚು ಮಾಡಿಕೊಂಡರು. ರಮೇಶ್ ಅರವಿಂದ್ ಕೈಲಿ ‘ಉತ್ತಮ ವಿಲನ್’ ಸಿನಿಮಾ ನಿರ್ದೇಶಿಸಿದರು. ಹೀಗೆ ಸಿನಿಮಾಗಳಲ್ಲಿ ವಿಪರೀತ ಎನ್ನುವಷ್ಟು ಪ್ರಯೋಗಗಳನ್ನು ಮಾಡಿರುವ ಅವರ ದಾಂಪತ್ಯ ಜೀವನದಲ್ಲೂ ಸಿಕ್ಕುಗಳೇ. ವಾಣಿ ವಿಶ್ವನಾಥ್ ಜೊತೆ 10 ವರ್ಷ, ಸಾರಿಕಾ ಜೊತೆ 16 ವರ್ಷ, ಗೌತಮಿ ಜೊತೆ 12 ವರ್ಷ ಸಂಸಾರ ಮಾಡಿದ್ದಾರೆ. ಮಕ್ಕಳಾದ ಶ್ರುತಿ ಹಾಸನ್, ಅಕ್ಷರಾ ಹಾಸನ್ ಕೂಡ ಚಿತ್ರರಂಗದಲ್ಲಿ ಪ್ರಯೋಗಮುಖಿಗಳೇ ಆಗಿದ್ದಾರೆ.

ತಮ್ಮ ಅಭಿಮಾನಿ ಸಂಘಗಳನ್ನೆಲ್ಲ ಸಮಾಜ ಕಲ್ಯಾಣ ಸಂಸ್ಥೆಗಳನ್ನಾಗಿ ಬದಲಿಸಿದ ಕಮಲ್ ಎಡಪಂಥೀಯ ನಿಲುಗಳ ಪ್ರತಿಪಾದಕರು. ಇತ್ತೀಚಿನ ತಮಿಳುನಾಡಿನ ರಾಜಕೀಯ ಪಲ್ಲಟಗಳನ್ನು ಪದೇ ಪದೇ ಟ್ವಿಟ್ಟರ್‍ನಲ್ಲಿ ಟೀಕಿಸುತ್ತಾ ಬಂದ ಅವರೀಗ ಪಕ್ಷ ರಾಜಕೀಯದ ಮೂಲಕ ಇನ್ನೊಂದು ಪ್ರಯೋಗಕ್ಕೆ ಕೈಹಾಕಿದ್ದಾರೆ. ರಜನೀಕಾಂತ್ ಜೊತೆ ಅವರು 1981ರಲ್ಲೇ ತೆರೆಹಂಚಿಕೊಂಡಿದ್ದವರು. ಈಗ ಅವರನ್ನೂ ಮಾತನಾಡಿಸಿ, ಕೆ. ಕರುಣಾನಿಧಿ ಜೊತೆಗೊಂದು ಚರ್ಚೆ ನಡೆಸಿ ಬಂದು ಹೊಸ ಪಕ್ಷ ತೇಲಿಬಿಟ್ಟಿದ್ದಾರೆ. ಜಯಲಲಿತಾ ಅನೇಕರನ್ನು ಕುಣಿಸಿದರು. ಅವರಿಗೇ ಹಿಂದೆ ನೃತ್ಯದ ವರಸೆಗಳನ್ನು ಹೇಳಿಕೊಟ್ಟಿದ್ದ ಕಮಲ್ ನಡೆಗಳು ಹೇಗಿರುತ್ತದೆ ಎನ್ನುವುದು ಈಗಿನ ಕುತೂಹಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry