ಪಿಲಿಕುಳದಲ್ಲಿ ದೇಶದ ಪ್ರಥಮ 3ಡಿ ತಾರಾಲಯ

7
ಯಶಸ್ವಿ ಪ್ರಥಮ ಪ್ರದರ್ಶನ, ಮಾರ್ಚ್‌ 1ಕ್ಕೆ ಉದ್ಘಾಟನೆ

ಪಿಲಿಕುಳದಲ್ಲಿ ದೇಶದ ಪ್ರಥಮ 3ಡಿ ತಾರಾಲಯ

Published:
Updated:
ಪಿಲಿಕುಳದಲ್ಲಿ ದೇಶದ ಪ್ರಥಮ 3ಡಿ ತಾರಾಲಯ

ಮಂಗಳೂರು: ದೇಶದಲ್ಲೇ ಪ್ರಥಮ ಹಾಗೂ ಜಗತ್ತಿನ 21ನೇ 3 ಡಿ ತಾರಾಲಯ ಇಲ್ಲಿಗೆ ಸಮೀಪದ ಪಿಲಿಕುಳದಲ್ಲಿ ಸಜ್ಜಾಗಿದ್ದು, ಶನಿವಾರ ಪ್ರಥಮ ಪ್ರದರ್ಶನ ನಡೆಯಿತು.

ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ₹ 34 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಸ್ವಾಮಿ ವಿವೇಕಾನಂದ’ ಹೆಸರಿನ ಈ ತಾರಾಲಯ ಮಾರ್ಚ್‌ 1ರಂದು ಉದ್ಘಾಟನೆಗೊಳ್ಳಲಿದೆ.

‘18 ಮೀಟರ್ ವ್ಯಾಸ ಹೊಂದಿರುವ ಆಧುನಿಕ ತಂತ್ರಜ್ಞಾನದ ನ್ಯಾನೋ ಸೀಮ್ ಡೋಮ್‌ ಅನ್ನು ಬಳಸಿ ನಿರ್ಮಿಸಲಾಗಿದೆ. 15 ಡಿಗ್ರಿ ಕೋನದಲ್ಲಿ ಇರಿಸಲಾಗಿರುವ ಈ ಗುಮ್ಮಟದೊಳಗೆ ಅಪ್ಟೊ ಮೆಕ್ಯಾನಿಕಲ್ ಮತ್ತು 8ಕೆ ಡಿಜಿಟಲ್ ಸಿಸ್ಟಂಗಳನ್ನು ಬಳಸಲಾಗಿದೆ’ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಶನಿವಾರ ಉದ್ಘಾಟನಾ ಪೂರ್ವ ಪ್ರದರ್ಶನದ ಬಳಿಕ ಪತ್ರಕರ್ತರಿಗೆ ಮಾಹಿತಿ ನೀಡಿದರು.

3ಡಿ ಕನ್ನಡಕ ಬಳಸಿ ನೋಡುವ ಈ ತಾರಾಲಯದಲ್ಲಿ 25 ನಿಮಿಷಗಳ ಒಂದು ಪ್ರದರ್ಶನ ಇರುತ್ತದೆ. ರಜಾ ದಿನಗಳಲ್ಲಿ ಹಲವು ಪ್ರದರ್ಶನಗಳು ಇಲ್ಲಿ ಇರಲಿದ್ದು, ಇದು ಮಂಗಳೂರಿನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮತ್ತೊಂದು ಕೊಡುಗೆ ಎಂದು ಅವರು ಹೇಳಿದರು.

ಮಾನವನ ಹುಟ್ಟು, ಬೆಳವಣಿಗೆ, ನಕ್ಷತ್ರಗಳು, ಗ್ರಹಗಳು, ಸಾಗರಗಳನ್ನು ಹತ್ತಿರದಿಂದ ವೀಕ್ಷಿಸಿದ ಅನುಭವವನ್ನು ಈ ತಾರಾಲಯ ನಮಗೆ ನೀಡುತ್ತದೆ. ಮಂಗನಿಂದ ಮಾನವನ ವಿಕಾಸವಾಗಿದ್ದು, ಸೂರ್ಯನ ಪ್ರಖರತೆ, ಗ್ರಹಗಳ ಬಗೆಗಿನ ವಿವರ, ಆಮ್ಲಜನಕ, ಜಲಜನಕ, ಇಂಗಾಲಗಳು ಹೇಗೆ ತಮ್ಮ ಪ್ರಭಾವ ಬೀರುತ್ತವೆ ಎಂಬ ಮಾಹಿತಿ ತಾರಾಲಯದಲ್ಲಿ ಇದೆ. ಹಿಮದ ಗಡ್ಡೆ, ಡೈನೋಸಾರ್‌ಗಳ ಲೋಕವನ್ನು ಈ ತಾರಾಲಯ ತೆರೆದಿಡುತ್ತದೆ. ಸಮುದ್ರದಲ್ಲಿ ಈಜಿದ, ಆಕಾಶದಲ್ಲಿ ತೇಲಾಡಿದ ಅನುಭವವಾಗುತ್ತದೆ.

ವಯಸ್ಕರಿಗೆ ₹60 ಹಾಗೂ ಮಕ್ಕಳಿಗೆ ₹25 ಪ್ರವೇಶ ದರ ನಿಗದಿಪಡಿಸಲಾಗಿದೆ. ‘ಬುಕ್‌ ಮೈ ಶೋ’ ಮೂಲಕ ಟಿಕೆಟ್ ಕಾಯ್ದಿರಿಸಬಹುದು. ವಿಶೇಷ ಪ್ಯಾಕೇಜ್‌ ಆಗಿ ₹100ಕ್ಕೆ ಪಿಲಿಕುಳದ ಎಲ್ಲ ವಿಭಾಗಗಗಳಿಗೆ ಪ್ರವೇಶ ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುದಾನದೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಮೂಲಕ ಈ ಯೋಜನೆ ಅನುಷ್ಠಾನಗೊಂಡಿದೆ.

***

₹ 34 ಕೋಟಿ ವೆಚ್ಚದಲ್ಲಿ ನಿರ್ಮಾಣ

18 ಮೀಟರ್‌ ವ್ಯಾಸದ ನ್ಯಾನೊ ಸೀಮ್‌ ಡೋಮ್‌

ಬಾಹ್ಯಾಕಾಶ ವೀಕ್ಷಣೆಯ ವಿಶಿಷ್ಟ ಅನುಭವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry