ಮಹಿಳೆಯರಿಗೆ ಐತಿಹಾಸಿಕ ಸರಣಿ

7
ದಕ್ಷಿಣ ಆಫ್ರಿಕಾ ಎದುರಿನ ಐದನೇ ಟ್ವೆಂಟಿ–20 ಪಂದ್ಯದಲ್ಲಿ ಭಾರತಕ್ಕೆ ಜಯ

ಮಹಿಳೆಯರಿಗೆ ಐತಿಹಾಸಿಕ ಸರಣಿ

Published:
Updated:
ಮಹಿಳೆಯರಿಗೆ ಐತಿಹಾಸಿಕ ಸರಣಿ

ಕೇಪ್‌ಟೌನ್‌: ಮಧ್ಯಮವೇಗಿಗಳಾದ ಶಿಖಾ ಪಾಂಡೆ, ರುಮೇಲಿ ಧರ್ ಅವರ ಬಿರುಸಿನ ದಾಳಿಯ ನೆರವಿನಿಂದ ಭಾರತ ಮಹಿಳೆಯರ ತಂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ಎರಡು ಸರಣಿ ಗೆದ್ದುಕೊಳ್ಳುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದೆ.

ಒಂದೇ ಪ್ರವಾಸದಲ್ಲಿ ಭಾರತ ತಂಡ ಎರಡು ಮಾದರಿಗಳಲ್ಲಿ ಸರಣಿ ಗೆದ್ದಿರುವುದು ಇದೇ ಮೊದಲು. ದಕ್ಷಿಣ ಆಫ್ರಿಕಾ ಎದುರು 3–1ರಲ್ಲಿ ಚುಟುಕು ಕ್ರಿಕೆಟ್ ಸರಣಿ ಹಾಗೂ ಈ ಮೊದಲು ಏಕದಿನ ಸರಣಿಯನ್ನು 2–1ರಲ್ಲಿ ಗೆದ್ದುಕೊಂಡಿತ್ತು.

ಶನಿವಾರ ನಡೆದ ಅಂತಿಮ ಹಾಗೂ ಐದನೇ ಟ್ವೆಂಟಿ–20 ಪಂದ್ಯವನ್ನು ಭಾರತ ಮಹಿಳೆಯರು 54ರನ್‌ಗಳಿಂದ ಗೆದ್ದುಕೊಂಡಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಹರ್ಮನ್‌ಪ್ರೀತ್ ಬಳಗ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 166 ರನ್‌ ಕಲೆಹಾಕಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 18 ಓವರ್‌ಗಳಲ್ಲಿ 112 ರನ್ ಕಲೆಹಾಕುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಮಿಂಚಿದ ಮಧ್ಯಮವೇಗಿಗಳು: ಭಾರತ ತಂಡದ ಮಧ್ಯಮವೇಗಿಗಳಾದ ರುಮೇಲಿ ಧರ್ (26ಕ್ಕೆ3) ಹಾಗೂ ಹಾಗೂ ಶಿಖಾ ಪಾಂಡೆ (16ಕ್ಕೆ3) ಅವರ ಶಿಸ್ತಿನ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ವುಮನ್‌ಗಳು ತತ್ತರಿಸಿದರು. ರಾಜೇಶ್ವರಿ ಗಾಯಕವಾಡ್‌ (26ಕ್ಕೆ3) ಎದುರಾಳಿ ತಂಡದ ರನ್ ಹೊಳೆ ತಡೆದರು.

ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ವುಮನ್‌ಗಳಾದ ಲಿಜೆಲ್ಲಿ ಲೀ (3) ಹಾಗೂ ನಾಯಕಿ ಡೇನ್ ವಾನ್‌ ನೀಕರ್ಕ್‌ (10) ಅವರ ವಿಕೆಟ್‌ಗಳನ್ನು ರುಮೇಲಿ ಪಡೆದುಕೊಂಡರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್‌ ಚೊಲೆ ಟ್ರೊಯನ್‌ (25) ಅವರಿಗೆ ರಾಜೇಶ್ವರಿ ಗಾಯಕವಾಡ್ ಪೆವಿಲಿಯನ್ ಹಾದಿ ತೋರಿದರು. ಮಿಗ್ನಾನ್‌ ಡು ಪ್ರೀಜ್‌ (17) ಶಿಖಾ ಪಾಂಡೆ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಮರಿಜನ್ನೆ ಕಪ್‌ (2&) ದಕ್ಷಿಣ ಆಫ್ರಿಕಾ ತಂಡದ ಪರ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿದರು.

ಮಿಥಾಲಿ ಮಿಂಚು: ಸ್ಮೃತಿ ಮಂದಾನ (13) ವಿಕೆಟ್ ಒಪ್ಪಿಸಿದ ಬಳಿಕ ದೊಡ್ಡ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತುಕೊಂಡ ಮಿಥಾಲಿ ರಾಜ್‌ (62, 50ಎ, 8ಬೌಂ, 3) ಅಂಗಳದಲ್ಲಿ ಮಿಂಚು ಹರಿಸಿದರು. ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್‌ (44, 34ಎ, 3ಬೌಂ, 2ಸಿ) ಮೊದಲ ಬಾರಿಗೆ ಉತ್ತಮ ಆಟ ಆಡಿದರು.

ನಾಯಕಿ ಹರ್ಮನ್‌ಪ್ರೀತ್ ಕೌರ್ (27) ತಂಡವನ್ನು ಗೆಲುವಿನ ದಡ ಸೇರಿಸಿದರು. ವೇದಾ ಕೃಷ್ಣಮೂರ್ತಿ 8ರನ್ ಕಲೆಹಾಕಿದರು.

ದಕ್ಷಿಣ ಆಫ್ರಿಕಾ ತಂಡ ಕಳಪೆ ಬೌಲಿಂಗ್ ಹಾಗೂ ಕೆಟ್ಟ ಕ್ಷೇತ್ರರಕ್ಷಣೆಯಿಂದ ಸೋಲು ಎಳೆದುಕೊಂಡಿತು. ಆಯೋಬಂಗಾ ಕಾಕಾ ಆರಂಭಿಕ ಓವರ್‌ಗಳಲ್ಲಿ ಸತತವಾಗಿ ವೈಡ್‌ಗಳನ್ನು ಹಾಕಿದರು.

ಸಂಕ್ಷಿಪ್ತ ಸ್ಕೋರು: ಭಾರತ:

20 ಓವರ್‌ಗಳಲ್ಲಿ 4 ವಿಕೆಟ್‌ಗೆ 166 (ಮಿಥಾಲಿ ರಾಜ್‌ 62, ಸ್ಮೃತಿ ಮಂದಾನ 13, ಜೆಮಿಮಾ ರಾಡ್ರಿಗಸ್‌ 44, ಹರ್ಮನ್‌ಪ್ರೀತ್ ಕೌರ್‌ ಔಟಾಗದೆ 27, ವೇದಾ ಕೃಷ್ಣಮೂರ್ತಿ ಔಟಾಗದೆ 8).

ದಕ್ಷಿಣ ಆಫ್ರಿಕಾ: 18 ಓವರ್‌ಗಳಲ್ಲಿ 112 (ಡೇನ್ ವಾನ್ ನೀಕರ್ಕ್‌ 10, ಮರಿಜನ್ನೆ ಕಪ್‌ 27; ಶಿಖಾ ಪಾಂಡೆ 16ಕ್ಕೆ3, ರಾಜೇಶ್ವರಿ ಗಾಯಕವಾಡ್‌ 26ಕ್ಕೆ3, ರುಮೇಲಿ ಧರ್ 26ಕ್ಕೆ3).

ಫಲಿತಾಂಶ: ಭಾರತಕ್ಕೆ 54ರನ್‌ಗಳ ಜಯ.

ಪಂದ್ಯ ಶ್ರೇಷ್ಠ: ಮಿಥಾಲಿ ರಾಜ್‌,

ಸರಣಿ ಶ್ರೇಷ್ಠ: ಮಿಥಾಲಿ ರಾಜ್‌.

***

‘ಎರಡು ಸರಣಿ ಗೆದ್ದುಕೊಂಡಿರುವುದು ನಮ್ಮ ಅತ್ಯುತ್ತಮ ಸಾಧನೆ. ಸಂಘಟಿತ ಆಟದಿಂದ ನಮ್ಮ ತಂಡ ಈ ಸಾಧನೆ ಮಾಡಿದೆ’

– ಮಿಥಾಲಿ ರಾಜ್‌,  ಭಾರತ ಏಕದಿನ ತಂಡದ ನಾಯಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry