ಸ್ವಚ್ಛ ಬೆಂಗಳೂರು ಅಭಿಯಾನಕ್ಕೆ ಚಾಲನೆ

7

ಸ್ವಚ್ಛ ಬೆಂಗಳೂರು ಅಭಿಯಾನಕ್ಕೆ ಚಾಲನೆ

Published:
Updated:
ಸ್ವಚ್ಛ ಬೆಂಗಳೂರು ಅಭಿಯಾನಕ್ಕೆ ಚಾಲನೆ

ಬೆಂಗಳೂರು: ಬಿಬಿಎಂಪಿಯು ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ‘ಸ್ವಚ್ಛ ಬೆಂಗಳೂರು ಅಭಿಯಾನ’ಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಹೆಬ್ಬಾಳದ ಮೇಲ್ಸೇತುವೆ ಬಳಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಮೇಯರ್‌ ಆರ್‌.ಸಂಪತ್‌ ರಾಜ್‌, ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೇರಿದಂತೆ ಅಧಿಕಾರಿಗಳು, ಅಗ್ಲಿ ಇಂಡಿಯಾ ಸಂಸ್ಥೆ ಸ್ವಯಂಸೇವಕರು, ಎಂಬೆಸಿ ಸಂಸ್ಥೆಯ ನೌಕರರು ಸ್ವಚ್ಛತಾ ಕಾರ್ಯ ನಡೆಸಿದರು. ಮೇಲ್ಸೇತುವೆಯ ಮೇಲೆ ಅಂಟಿಸಿದ್ದ ಪೋಸ್ಟರ್‌ಗಳು, ಕರಪತ್ರಗಳನ್ನು ತೆರವುಗೊಳಿಸಿದರು. ಗೋಡೆಗಳಿಗೆ ಬಣ್ಣ ಬಳಿದರು.

ಈ ಅಭಿಯಾನವು ಮಾರ್ಚ್‌ 3ರವರೆಗೆ ಮುಂದುವರಿಯಲಿದೆ. ಘನತ್ಯಾಜ್ಯ, ಕಟ್ಟಡದ ಅವಶೇಷಗಳು, ಇ–ತ್ಯಾಜ್ಯ, ಮರಳು ಹಾಗೂ ಹೂಳನ್ನು ತೆರವುಗೊಳಿಸುವುದು ಅಭಿಯಾನದ ಮೂಲ ಉದ್ದೇಶ.

ಕಾರ್ಪೊರೇಟ್‌ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು, ವೃತ್ತಿಪರ ಸೇವಾ ಸಂಸ್ಥೆಗಳು, ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘಗಳು, ಸರ್ಕಾರೇತರ ಸಂಸ್ಥೆಗಳು, ಆಟೊ ಹಾಗೂ ಕ್ಯಾಬ್‌ ಚಾಲಕರು ಹಾಗೂ ವರ್ತಕರು ಸೇರಿದಂತೆ ಎಲ್ಲರೂ ಈ ಅಭಿಯಾನಕ್ಕೆ ಕೈಜೋಡಿಸಬಹುದು. ನಾಗರಿಕರು ಶ್ರಮದಾನ ಮಾಡಬಹುದು. ಕಾರ್ಪೊರೇಟ್‌ ಸಂಸ್ಥೆಗಳು ಮಾನವಶಕ್ತಿ, ಅಗತ್ಯ ಸಲಕರಣೆ, ಸಾಮಗ್ರಿ ಹಾಗೂ ಯಂತ್ರೋಪಕರಣಗಳನ್ನು ಒದಗಿಸಬಹುದು. ನಾಗರಿಕರು ಬೆಳಿಗ್ಗೆ 6ರಿಂದ ಸಂಜೆ 6 ಹಾಗೂ ರಾತ್ರಿ 11ರಿಂದ ಬೆಳಿಗ್ಗೆ 6ರವರೆಗೆ ಪಾಲ್ಗೊಳ್ಳಬಹುದು.

ಭಾರತೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಘಟನೆಗಳ ಒಕ್ಕೂಟ (ಕ್ರೆಡಾಯ್), ಲಯನ್ಸ್‌, ರೋಟರಿ, ಬ್ರಿಗೇಡ್‌, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸೇರಿದಂತೆ ಅನೇಕ ಸಂಸ್ಥೆಗಳು ಕೈಜೋಡಿಸಿವೆ. ಅಭಿಯಾನದಲ್ಲಿ ಭಾಗವಹಿಸಲು ಇಚ್ಛಿಸುವವರು ಕ್ಲೀನ್‌ ಬೆಂಗಳೂರು ಆ್ಯಪ್‌ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಎಷ್ಟು ಮಂದಿ ಪಾಲ್ಗೊಳ್ಳಲಿದ್ದಾರೆ, ಎಲ್ಲಿ ಕೆಲಸ ಮಾಡಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಬಹುದು ಎಂದು ಆರ್‌.ಸಂಪತ್‌ ರಾಜ್‌ ತಿಳಿಸಿದರು.

‘ಶುಚಿಗೊಳಿಸಿದ ಸ್ಥಳದ ಸ್ವಚ್ಛತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಸ್ಥಳದಲ್ಲಿ ಮತ್ತೆ ಕಸ ಅಥವಾ ಕಟ್ಟಡ ತ್ಯಾಜ್ಯ ಸುರಿದರೆ ಅಂತಹವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುತ್ತೇವೆ. ದಂಡವನ್ನೂ ವಿಧಿಸುತ್ತೇವೆ’ ಎಂದು ಮಂಜುನಾಥ ಪ್ರಸಾದ್‌ ಎಚ್ಚರಿಕೆ ನೀಡಿದರು.

ಪೌರಕಾರ್ಮಿಕರಿಗೆ ಮುಂದಿನ ವಾರದಿಂದ ಹೊಸ ಸಮವಸ್ತ್ರ, ಕೈಗವಸು ಹಾಗೂ ತಳ್ಳುವ ಗಾಡಿಗಳನ್ನು ನೀಡಲಾಗುತ್ತದೆ.

– ಕೆ.ಜೆ.ಜಾರ್ಜ್‌, ಬೆಂಗಳೂರು ಅಭಿವೃದ್ಧಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry