ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

ಬೆಂಗಳೂರು ಮಹಾನಗರ ವಿಪ್ರರ ಸಮಾವೇಶ * ಶಾಲಾ–ಕಾಲೇಜು ಸ್ಥಾಪನೆಗೆ ಜಾಗ ನೀಡುವಂತೆ ಒತ್ತಾಯ
Last Updated 24 ಫೆಬ್ರುವರಿ 2018, 19:27 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿ, ₹25 ಕೋಟಿ ಅನುದಾನ ಒದಗಿಸಬೇಕು. ಶಾಲಾ–ಕಾಲೇಜು ಸ್ಥಾಪನೆಗೆ 10 ಎಕರೆ ಭೂಮಿ ನೀಡಬೇಕು.’

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬೆಂಗಳೂರು ಮಹಾನಗರ ವಿಪ್ರರ ಸಮಾವೇಶ’ದಲ್ಲಿ ವ್ಯಕ್ತವಾದ ಒಕ್ಕೊರಲ ಬೇಡಿಕೆಗಳಿವು.

‘ನಗರಗಳಿಗಿಂತ ಹಳ್ಳಿಗಳಲ್ಲಿ ವಾಸಿಸುತ್ತಿರುವ ಬ್ರಾಹ್ಮಣರು ಕಷ್ಟದ ಜೀವನ ನಡೆಸುತ್ತಿದ್ದಾರೆ. ಸಮುದಾಯದವರ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸುವಂತೆ ಆಗ್ರಹಿಸುತ್ತಿದ್ದೇವೆ. ಆದರೆ, ನಿಗಮ ಏಕೆ ಬೇಕು ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಕಟ್ಟ ಕಡೆಯ ಬ್ರಾಹ್ಮಣನ ಅಭಿವೃದ್ಧಿಗಾಗಿ ನಿಗಮ ಬೇಕು. ಇದು ನಮ್ಮ ಹಕ್ಕು. ಸ್ವಾರ್ಥಕ್ಕಾಗಿ ಯಾವ ರಾಜಕಾರಣಿಗಳನ್ನೂ ಕೇಳಿಲ್ಲ. ಸಮುದಾಯದ ಹಿತರಕ್ಷಣೆಗಾಗಿ ಈ ಬೇಡಿಕೆಗಳನ್ನು ಮುಂದಿಡುತ್ತಿದ್ದೇವೆ’ ಎಂದು ಮಹಾಸಭಾದ ಉಪಾಧ್ಯಕ್ಷ ಎಚ್‌.ಸಿ.ಕೃಷ್ಣ ಹೇಳಿದರು.

‘ನಾವು ಹೋರಾಟದ ಮನೋಭಾವದವರಲ್ಲ. ಆದರೆ, ನಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ ಸನ್ನಿವೇಶ ಸೃಷ್ಟಿಯಾಗಿದೆ’ ಎಂದು ಹೇಳಿದರು.

ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಸುಭುದೇಂದ್ರತೀರ್ಥ ಸ್ವಾಮೀಜಿ, ‘ಬ್ರಾಹ್ಮಣರು ಅನೇಕ ತೊಂದರೆ, ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆದರೆ, ಸರ್ಕಾರವು ಈ ಸಮಾಜವನ್ನು ಕಡೆಗಣಿಸಿರುವುದು ಸರಿಯಲ್ಲ. ಬೇರೆ ಜನಾಂಗದವರ ಕಲ್ಯಾಣಕ್ಕಾಗಿ ಯೋಜನೆ ರೂಪಿಸಿದಂತೆ ಬ್ರಾಹ್ಮಣರ ಅಭಿವೃದ್ಧಿಗೂ ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದು ಆಗ್ರಹಿಸಿದರು.

‘ಸಮಾಜದ ಜನರು ಬೇರೆ ಸಮಾಜದವರೊಂದಿಗೆ ಬೆರೆತು ಅಣ್ಣ–ತಮ್ಮಂದಿರ ರೀತಿಯಲ್ಲಿ ಬದುಕಬೇಕು. ನಮ್ಮ ಹೋರಾಟಕ್ಕೆ ಅವರ ಸಹಕಾರವನ್ನೂ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಬೇರೆ ಜನಾಂಗದವರು ಸಂಘಟನೆ ಹಾಗೂ ಹೋರಾಟದ ಮೂಲಕ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳುತ್ತಿದ್ದಾರೆ. ಆದರೆ, ನಮ್ಮ ಸಮಾಜದವರು ಶಂಕರಾಚಾರ್ಯ, ರಾಮಾನುಜಾಚಾರ್ಯ ಹಾಗೂ ಮಧ್ವಾಚಾರ್ಯರ ಅನುಯಾಯಿಗಳಾಗಿ ಛಿದ್ರಗೊಂಡಿದ್ದಾರೆ. ಎಲ್ಲರೂ ಒಂದಾಗಿ ಸಾಗಬೇಕು’ ಎಂದು ಸಲಹೆ ನೀಡಿದರು.

ಗೃಹ ಸಚಿವ ರಾಮಲಿಂಗಾರೆಡ್ಡಿ, ‘ನಿಮ್ಮ ಬೇಡಿಕೆಗೆ ನನ್ನ ಬೆಂಬಲವಿದೆ. ಸಮಯ ಬಂದಾಗ ನಿಮ್ಮ ಪರ ಧ್ವನಿ ಎತ್ತುತ್ತೇನೆ. ಬೇರೆ ರಾಜ್ಯಗಳಲ್ಲಿ ಬ್ರಾಹ್ಮಣರಿಗೆ ಮೀಸಲಾತಿ ವ್ಯವಸ್ಥೆ ಕಲ್ಪಿಸಲಾಗಿದೆ. ನಿಮಗೆ ಉದ್ಯೋಗ, ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲಾತಿ ನೀಡುವ ಅಗತ್ಯವಿದೆ’ ಎಂದರು.
***
‘ಎಲ್ಲರ ಅಭಿವೃದ್ಧಿ ಸರ್ಕಾರದ ಮಂತ್ರವಾಗಬೇಕು’

‘ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ, ಈ ಪ್ರಸ್ತಾವವನ್ನು ಕೈಬಿಟ್ಟಿದೆ ಎಂಬ ಮಾಹಿತಿ ಇದೆ. ಆದರೆ, ಸರ್ಕಾರವು ಎಲ್ಲ ಜನಾಂಗದವರನ್ನು ಗೌರವಿಸಬೇಕು. ಪ್ರತಿ ನಾಗರಿಕರ ಸಮಸ್ಯೆಗೂ ಸ್ಪಂದಿಸಬೇಕು. ನಿಗಮ ಸ್ಥಾಪನೆ ನಿಮ್ಮ ನ್ಯಾಯಯುತ ಹಕ್ಕು. ಇದಕ್ಕೆ ನಾನು ಧ್ವನಿಗೂಡಿಸುತ್ತೇನೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಈ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ನಿರ್ಣಾಯಕವಾಗಲಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ಸ್ವಂತ ಬಲದ ಮೇಲೆ ಸರ್ಕಾರ ರಚಿಸಬೇಕು ಎಂಬ ಉದ್ದೇಶದಿಂದಲೇ ಶ್ರಮಿಸುತ್ತಿದ್ದೇನೆ. ಒಂದು ವೇಳೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ‌ ನಿಮ್ಮ ಬೇಡಿಕೆಗಳಿಗಾಗಿ ಅರ್ಜಿ ಹಾಕುವ ಅಗತ್ಯ ಇರುವುದಿಲ್ಲ. ನಿಗಮ ಸ್ಥಾಪನೆ ಜತೆಗೆ ವಿಪ್ರ ನಿಧಿ ಸ್ಥಾಪಿಸುತ್ತೇವೆ. ಅದಕ್ಕೆ ₹100 ಕೋಟಿ ಅನುದಾನ ನೀಡುತ್ತೇವೆ’ ಎಂದು ಭರವಸೆ ನೀಡಿದರು.

‘ನಾನು ಮುಖ್ಯಮಂತ್ರಿ ಆಗಿದ್ದಾಗ ಅನುಭವ ಇರಲಿಲ್ಲ. ದೇವೇಗೌಡರ ಮಗ ಎಂಬುದೇ ಆಗ ಇದ್ದ ಅರ್ಹತೆ. ಆದರೆ, ಬಡವರ ಜತೆ ಬೆರೆತು ಕೆಲಸ ಮಾಡಿದಾಗ ಅರ್ಹತೆ ಹಾಗೂ ಅನುಭವ ಪಡೆದೆ’ ಎಂದರು.
**
‘ಜಾಹೀರಾತಿನಿಂದ ಜನರನ್ನು ಮೆಚ್ಚಿಸಲು ಅಸಾಧ್ಯ’

ಸರ್ಕಾರದ ಸಾಧನೆಗಳ ಬಗ್ಗೆ ಜಾಹೀರಾತು ನೀಡಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಜನರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಜಾಹೀರಾತು ಮೂಲಕ ಸರ್ಕಾರ ನಡೆಯಬಾರದು. ಅದರಿಂದ ಜನರನ್ನು ಮೆಚ್ಚಿಸಲು ಆಗುವುದಿಲ್ಲ. ಜಾಹೀರಾತಿಗೆ ಖರ್ಚು ಮಾಡಿದ ಹಣದ ಪೈಕಿ ₹5 ಕೋಟಿಯನ್ನು ಬ್ರಾಹ್ಮಣರ ಅಭಿವೃದ್ಧಿಗೆ ಬಳಸಬಹುದಿತ್ತು ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
**
ಬ್ರಾಹ್ಮಣ ಸಮುದಾಯ ಅತ್ಯಂತ ಶ್ರೇಷ್ಠ. ನಾವು ಯಾವುದೇ ಕಾರಣಕ್ಕೂ ಧರ್ಮವನ್ನು ಬಿಡಬಾರದು. ಆಗ ಮಾತ್ರ ಅಂತಃಶಕ್ತಿ ಪಡೆಯಲು ಸಾಧ್ಯ.
–ಸುಭುದೇಂದ್ರತೀರ್ಥ ಸ್ವಾಮೀಜಿ, ಮಂತ್ರಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT