ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕದಿಂದ ತುಂಬಿದೆ ‘ದೊಡ್ಡಕಲ್ಲಸಂದ್ರ ಕೆರೆ’

Last Updated 24 ಫೆಬ್ರುವರಿ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು: ದೂರದಿಂದ ನೋಡಿದರೆ ಇದೊಂದು ಭವ್ಯವಾದ ಕೆರೆ. ಹತ್ತಿರ ಹೋಗುತ್ತಿದ್ದಂತೆ ಒಡಲಲ್ಲಿ ಕಾಣುವ ಕಸ, ಪ್ಲಾಸ್ಟಿಕ್‌ ತಾಜ್ಯ ಹಾಗೂ ಕಟ್ಟಡ ತ್ಯಾಜ್ಯದ ರಾಶಿ ಮಾಲಿನ್ಯದ ದರ್ಶನ ಮಾಡಿಸುತ್ತದೆ. 

ಕೋಣನಕುಂಟೆ ಬಳಿಯ ವಸಂತಪುರ ವಾರ್ಡ್‌ನಲ್ಲಿನ ದೊಡ್ಡಕಲ್ಲಸಂದ್ರ ಕೆರೆಯ ದುಸ್ಥಿತಿ ಇದು. 21 ಎಕರೆ 16 ಗುಂಟೆ ಪ್ರದೇಶದಲ್ಲಿರುವ ಈ ಜಲಮೂಲ ಮೈದುಂಬಿದೆ. ಇತ್ತೀಚಿನ ವರ್ಷಗಳವರೆಗೆ ಸುಸ್ಥಿತಿಯಲ್ಲಿದ್ದ ಕೆರೆಗೆ ಈಗ ಹೆಚ್ಚಿನ ಪ್ರಮಾಣದಲ್ಲಿ ಕೊಳಚೆ ನೀರು ಹಾಗೂ ರಾಸಾಯನಿಕಯುಕ್ತ ನೀರು ಸೇರುತ್ತಿದೆ.

ಜಲಮೂಲಕ್ಕೆ ಘನತ್ಯಾಜ್ಯ, ಕಟ್ಟಡ ತ್ಯಾಜ್ಯ ಸುರಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ‘ಈ ಹಿಂದೆ ಪ್ರತ್ಯೇಕ ಕಾಲುವೆ ನಿರ್ಮಿಸಿದ್ದರಿಂದ ಕೆರೆಗೆ ಅಲ್ಪ ಪ್ರಮಾಣದಲ್ಲಿ ಕೊಳಚೆ ನೀರು ಸೇರುತ್ತಿತ್ತು. ಅದು ನೈಸರ್ಗಿಕವಾಗಿ ಶುಚಿಯಾಗುತ್ತಿತ್ತು. ಕೆರೆಯ ಆಸುಪಾಸಿನಲ್ಲಿ ಮನೆಗ‌ಳು ನಿರ್ಮಾಣವಾಗಿದ್ದರಿಂದ ಕೊಳಚೆ ನೀರಿನ ಪ್ರಮಾಣವೂ ಹೆಚ್ಚಾಯಿತು’ ಸ್ಥಳೀಯರು ತಿಳಿಸಿದರು.

ಈ ಜಲಮೂಲವು ಬಿಬಿಎಂಪಿ ಅಧೀನದಲ್ಲಿದೆ. 60 ಕೆರೆಗಳ ಅಭಿವೃದ್ಧಿಗಾಗಿ ಅನುದಾನ ಒದಗಿಸುವಂತೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆ ಪ್ರಸ್ತಾವ ಸಲ್ಲಿಸಿದೆ. ಪುನಶ್ಚೇತನಗೊಳಿಸಬೇಕಾದ ಕೆರೆಗಳ ಪಟ್ಟಿಯಲ್ಲಿ ದೊಡ್ಡಕಲ್ಲಸಂದ್ರ ಕೆರೆಯೂ ಸೇರಿದೆ.

ದಶಕಗಳ ಹಿಂದೆ ಈ ಭಾಗದ ಜನರು ನೀರಿಗಾಗಿ ಈ ಜಲಮೂಲವನ್ನೇ ಅವಲಂಬಿಸಿದ್ದರು. ಕೆರೆಯಲ್ಲಿ ಮೀನುಗಾರಿಕೆಯೂ ನಡೆಯುತ್ತಿತ್ತು. ಕೆರೆ ನೀರಿಗೆ ರಾಸಾಯನಿಕ ಸೇರಿರುವುದರಿಂದ ಸಾವಿರಾರು ಸಂಖ್ಯೆಯ ಮೀನುಗಳು ಮೃತಪಟ್ಟಿವೆ.

ಒತ್ತುವರಿದಾರರಿಂದಲೂ ಕೆರೆಗೆ ಆಪತ್ತು ಒದಗಿದೆ. ಈಗಾಗಲೇ 1 ಎಕರೆ 35 ಗುಂಟೆ ಒತ್ತುವರಿಯಾಗಿದೆ. ಕೆರೆ ಆವರಣದಲ್ಲಿ ದೇವಸ್ಥಾನ ಹಾಗೂ ಮನೆಗಳು ನಿರ್ಮಾಣಗೊಂಡಿವೆ. ಒತ್ತುವರಿ ತೆರವಿಗೂ ಬಿಬಿಎಂಪಿ ಕ್ರಮಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದರು.
***
‘ಕೆರೆ ಸ್ವಚ್ಛತೆ ಅಭಿಯಾನ’

‘ನೀರಿನ ಹಕ್ಕಿಗಾಗಿ ಜನಾಂದೋಲನ ಕರ್ನಾಟಕ’ ಸಂಘಟನೆಯು ಸ್ಥಳೀಯರು ಹಾಗೂ ಸರ್ಕಾರದ ಸಹಯೋಗದಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ. ದೊಡ್ಡಕಲ್ಲಸಂದ್ರ ಕೆರೆಯ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಶನಿವಾರ ಹಮ್ಮಿಕೊಂಡಿತ್ತು.

‘ಸ್ವಯಂಸೇವಕರ ಪಡೆಯನ್ನು ಕಟ್ಟಿಕೊಂಡು ಕೆರೆಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ಜೀವಜಲವನ್ನು ಉಳಿಸುವ ಕಾರ್ಯದಲ್ಲಿ ಸ್ಥಳೀಯರನ್ನು ತೊಡಗಿಸಿಕೊಳ್ಳುತ್ತಿದ್ದೇವೆ’ ಎಂದು ಸಂಘಟನೆಯ ರಾಜ್ಯ ಸಂಚಾಲಕ ಈಶ್ವರಪ್ಪ ಮಡಿವಾಳಿ ತಿಳಿಸಿದರು.
**
ವಲಸೆ ಪಕ್ಷಿಗಳ ಬೀಡಾಗಿತ್ತು

‘ಈ ಕೆರೆಗೆ ಬೇರೆ ಕಡೆಗಳಿಂದ ಪಕ್ಷಿಗಳು ವಲಸೆ ಬರುತ್ತಿದ್ದವು. ಕೆರೆ ಮಧ್ಯದಲ್ಲಿನ ಮರಗಳಲ್ಲಿ ಗೂಡು ಕಟ್ಟಿಕೊಂಡು ಮರಿ ಮಾಡುತ್ತಿದ್ದವು. ನೀರು ಕಲುಷಿತವಾಗಿರುವುದರಿಂದ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ’ ಎಂದು ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
**
ಅಂಕಿ–ಅಂಶ

21 ಎಕರೆ 16 ಗುಂಟೆ
ಮೂಲ ಕೆರೆಯ ವಿಸ್ತೀರ್ಣ

19 ಎಕರೆ 21 ಗುಂಟೆ
ಈಗಿನ ವಿಸ್ತೀರ್ಣ

1 ಎಕರೆ 37 ಗುಂಟೆ
ಖಾಸಗಿ ಒತ್ತುವರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT