ವಸ್ತ್ರಸಂಹಿತೆ:ಮುಗಿಯದ ಕಥೆ–ವ್ಯಥೆ

7

ವಸ್ತ್ರಸಂಹಿತೆ:ಮುಗಿಯದ ಕಥೆ–ವ್ಯಥೆ

Published:
Updated:
ವಸ್ತ್ರಸಂಹಿತೆ:ಮುಗಿಯದ ಕಥೆ–ವ್ಯಥೆ

ಟೆನಿಸ್‌ನಲ್ಲಿ ಮಹಿಳೆಯರು ಮಿನಿ ಸ್ಕರ್ಟ್‌ ಹಾಕಿಕೊಂಡು ಕಣಕ್ಕಿಳಿಯುವುದರಿಂದಲೇ ಈ ಕ್ರೀಡೆಯನ್ನು ನೋಡುವವರ ಸಂಖ್ಯೆ ಹೆಚ್ಚಿದೆ...’

2011ರಲ್ಲಿ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ ಈ ರೀತಿಯ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿತ್ತು. ಬ್ಯಾಡ್ಮಿಂಟನ್‌ ಆಟಗಾರ್ತಿಯರೂ ಮಿನಿ ಸ್ಕರ್ಟ್‌ ಹಾಕಿಕೊಂಡು ಆಡುವುದು ಕಡ್ಡಾಯ ಎನ್ನುವ ನಿಯಮ ಜಾರಿ ಮಾಡಿ ಟೀಕೆಗೆ ಒಳಗಾಗಿತ್ತು. ಇಂಥದ್ದೊಂದು ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ದಕ್ಷಿಣ ಕೊರಿಯಾದ ಗಾಂಗ್‌ನೆವುಂಗ್‌ನಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ನ ಐಸ್‌ ಫಿಗರ್‌ ಸ್ಕೇಟಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಫ್ರಾನ್ಸ್‌ನ ಗ್ಯಾಬ್ರಿಯೆಲಾ ಪಾಪ್‌ಡಕಿನ್‌ ಅವರ ಪೋಷಾಕಿನ ಒಂದು ಭಾಗ ಕಳಚಿತ್ತು. ಇದರಿಂದ ಅವರಿಗೆ ಚಿನ್ನದ ಪದಕ ಗೆಲ್ಲುವ ಅವಕಾಶ ತಪ್ಪಿ ಹೋಯಿತು. ಪದಕ ಗೆಲ್ಲುವ ವಿಷಯ ಬೇರೆ ಮಾತು. ಆದರೆ, ನೇರ ಪ್ರಸಾರವಾಗುತ್ತಿದ್ದ ಸ್ಪರ್ಧೆಯ ವೇಳೆ ಅವರ ಎದೆಯ ಎಡಭಾಗದ ಪೋಷಾಕು ಕಳಚಿದ್ದರಿಂದ ಅವರು ಮುಜುಗರ ಅನುಭವಿಸಬೇಕಾಯಿತು. ಮಹಿಳೆಯರು ಕ್ರೀಡಾ ಲೋಕದಲ್ಲಿ ಯಶಸ್ವಿಯಾಗಲು ಇಂತಹ ಅಂತರರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಸ್ಪರ್ಧಿಸಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಿದೆ. ಆದ್ದರಿಂದ ಬಹುತೇಕ ಬ್ಯಾಡ್ಮಿಂಟನ್‌ ಆಟಗಾರ್ತಿಯರು ನೂತನ ವಸ್ತ್ರಸಂಹಿತೆಗೆ ವಿರೋಧ ವ್ಯಕ್ತಪಡಿಸಿದ್ದರು.

ಆಟದ ಜೊತೆಗೆ ಮಾಡೆಲಿಂಗ್‌ ಮೂಲಕವೂ ಹೆಸರು ಮಾಡಿರುವ ಬ್ಯಾಡ್ಮಿಂಟನ್‌ ಆಟಗಾರ್ತಿ ಜ್ವಾಲಾ ಗುಟ್ಟಾ ಮತ್ತು ಟೆನಿಸ್ ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾ ಹೀಗೆ ಕೆಲವರು ಮಾತ್ರ ನೂತನ ವಸ್ತ್ರಸಂಹಿತೆಗೆ ಬೆಂಬಲ ನೀಡಿದ್ದರು. ಈಗ ಕ್ರೀಡೆ ಕ್ರೀಡೆಯಾಗಿಯಷ್ಟೇ ಉಳಿದುಕೊಂಡಿಲ್ಲ. ಅದಕ್ಕೆ ಆಧುನಿಕ ಸ್ಪರ್ಶ ಬೇಕು. ಕ್ರೀಡಾಪಟುಗಳು ಗ್ಲಾಮರಸ್‌ ಆಗಿ ಕಾಣಬೇಕು. ಇದೇ ಕಾರಣಕ್ಕೆ ಐಪಿಎಲ್‌ ಟೂರ್ನಿಯಲ್ಲಿ ಚಿಯರ್ ಗರ್ಲ್ಸ್‌ಗಳನ್ನು ಪರಿಚಯಿಸಲಾಯಿತು. 2013ರ ಐಪಿಎಲ್‌ ಆವೃತ್ತಿಯಲ್ಲಿ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣ ಬೆಳಕಿಗೆ ಬಂದಾಗ ಬಹಳಷ್ಟು ಕ್ರಿಕೆಟ್‌ ಪ್ರೇಮಿಗಳು ‘ಸಭ್ಯರ ಆಟಕ್ಕೆ ಚಿಯರ್‌ ಗರ್ಲ್ಸ್‌ ಏಕೆ ಬೇಕು’ ಎಂದು ಪ್ರಶ್ನೆ ಎತ್ತಿದ್ದರು.

ಸುಪ್ರೀಂ ಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಾಗ  ‘ಐಪಿಎಲ್‌ ಪಂದ್ಯಗಳ ವೇಳೆ ಇನ್ನು ಮುಂದೆ ಚಿಯರ್ ಗರ್ಲ್ಸ್‌ ಇರುವುದಿಲ್ಲ’ ಎಂದು ಬಿಸಿಸಿಐ ಮಾತಿನಲ್ಲಿ ಹೇಳಿತಾದರೂ ಅದನ್ನು ಕಾರ್ಯರೂಪಕ್ಕೆ ತರಲಿಲ್ಲ. ಬ್ಯಾಟ್ಸ್‌ಮನ್‌ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿದಾಗ, ಬೌಲರ್‌ ವಿಕೆಟ್‌ ಉರುಳಿಸಿದಾಗ ಕುಣಿಯುವ ಹುಡುಗಿಯರನ್ನು ನೋಡುವ ಸಲುವಾಗಿ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳ ದೊಡ್ಡ ಬಳಗವೂ ಇದೆ.

ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಕ್ರೀಡಾಕೂಟಗಳಂಥ ಪ್ರತಿಷ್ಠಿತ ಟೂರ್ನಿಗಳ ಆರಂಭಕ್ಕೂ ಮೊದಲು ನಡೆಯುವ ಪಥಸಂಚಲನದಲ್ಲಿ ಭಾರತೀಯ ಸ್ಪರ್ಧಿಗಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕಂಗೊಳಿಸುತ್ತಿದ್ದರು. ಈ ವಿಷಯದಲ್ಲಿ ಈಗ ಭಾರತ ಕೂಡ ಬದಲಾವಣೆಯತ್ತ ಹೆಜ್ಜೆ ಇಟ್ಟಿದೆ. ಮುಂಬರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಅಥ್ಲೀಟ್‌ಗಳು ಸಾಂಪ್ರದಾಯಿಕವಾಗಿ ತೊಡುತ್ತಿದ್ದ ಸೀರೆಯ ಬದಲು ಬ್ಲೇಜರ್‌ ಮತ್ತು ಪ್ಯಾಂಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತ ಒಲಿಂಪಿಕ್ಸ್‌ ಸಂಸ್ಥೆಯೇ ಈ ನಿರ್ಧಾರ ತೆಗೆದುಕೊಂಡಿದ್ದು ವಿಶೇಷ.

ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ ಆಟಗಾರ್ತಿಯರು ಮಿನಿ ಸ್ಕರ್ಟ್‌ ಧರಿಸಿಯೇ ಆಡಬೇಕು ಎಂದು ಆದೇಶ ಮಾಡಿತ್ತು. ಅದಕ್ಕೂ ಮೊದಲು ಚಡ್ಡಿ ಧರಿಸಿ ಆಡಲು ಅವಕಾಶವಿತ್ತು. ಇದಕ್ಕೆ ಹೆಚ್ಚು ವಿರೋಧ ವ್ಯಕ್ತವಾದ್ದರಿಂದ ಫೆಡರೇಷನ್‌ ಈ ನಿರ್ಧಾರ ಕೈಬಿಟ್ಟಿತ್ತು. ಕ್ರೀಡಾಪಟುಗಳ ವಸ್ತ್ರಸಂಹಿತೆಯ ಬಗ್ಗೆ ಮೊದಲಿನಿಂದಲೂ ಸಾಕಷ್ಟು ಚರ್ಚೆಗಳು ನಡೆದಿವೆ. ಧಾರ್ಮಿಕ ಚೌಕಟ್ಟಿನ ನಡುವೆಯೂ ಅಂಕಣಕ್ಕಿಳಿಯಬೇಕಾದ ಅನಿವಾರ್ಯತೆಯಲ್ಲಿ ಕೆಲವು ಆಟಗಾರ್ತಿಯರು ಇದ್ದಾರೆ.

ಹೋದ ವರ್ಷ ಮಲೇಷ್ಯಾದ ಕ್ವಾಲಾಲಂಪುರದಲ್ಲಿ ರಾಷ್ಟ್ರಮಟ್ಟದ ಚೆಸ್‌ ಟೂರ್ನಿಯೊಂದು ನಡೆದಿತ್ತು. 12 ವರ್ಷದ ಬಾಲಕಿಯೊಬ್ಬಳು ಮೊಣಕಾಲಿಗಿಂತಲೂ ಮೇಲೆ ಬಟ್ಟೆ ಹಾಕಿಕೊಂಡಿದ್ದರಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅನುಮತಿ ನಿರಾಕರಿಸಲಾಯಿತು. ಚೆಸ್‌ನಲ್ಲಿ ವಸ್ತ್ರಸಂಹಿತೆ ಹೊಸದೇನಲ್ಲ. ಅಂತರರಾಷ್ಟ್ರೀಯ ಚೆಸ್‌ ಸಂಸ್ಥೆಯು ಟೂರ್ನಿ ಸಂಘಟಕರಿಗೆ ಈ ವಿಷಯದಲ್ಲಿ ಪೂರ್ಣ ಅಧಿಕಾರ ನೀಡಿದೆ.

ಅದು ಸಾನಿಯಾ ಮಿರ್ಜಾ ಟೆನಿಸ್‌ನಲ್ಲಿ ಮೊದಲ ಬಾರಿಗೆ ಉತ್ತುಂಗಕ್ಕೇರಿದ್ದ ಕಾಲ. ಪಂದ್ಯಗಳನ್ನು ಆಡುವಾಗ ಹಾಕಿಕೊಳ್ಳುತ್ತಿದ್ದ ಉಡುಪು ಕೆಲ ಧಾರ್ಮಿಕ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇತ್ತೀಚೆಗೆ ಅವರು ಫೇಸ್‌ಬುಕ್‌ನಲ್ಲಿ ಮೈ ಕಾಣಿಸುವ ಉಡುಪು ಧರಿಸಿ ಟೀಕೆಗೆ ಒಳಗಾಗಿದ್ದರು. ಸಾನಿಯಾ ಮಿರ್ಜಾ ಧರಿಸುವ ಬಟ್ಟೆ ಚರ್ಚೆಗೆ ಕಾರಣವಾದಾಗ ಕೆಲ ಧಾರ್ಮಿಕ ಮುಖಂಡರು ಮುಸ್ಲಿಂ ಮಹಿಳೆಯರು ಬುರ್ಖಾ ತೆಗೆದಿಟ್ಟು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದಾದರೆ ಅಂತಹ ಆಟದಲ್ಲಿ ಅವರು ಪಾಲ್ಗೊಳ್ಳಲೇಬಾರದು ಎಂದು ಷರಾ ಬರೆದಿದ್ದರು.

ಸಾನಿಯಾ ಮಿರ್ಜಾ

2012ರಲ್ಲಿ ಇರಾನ್ ಮಹಿಳಾ ಕಬಡ್ಡಿ ತಂಡದವರು ಮೈಮುಚ್ಚುವ ಬಟ್ಟೆ ಧರಿಸಿ ಆಡಿದ್ದರು. ಅದೇ ಉಡುಪಿನಲ್ಲಿ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿಯೂ ಭಾಗವಹಿಸಿದ್ದರು. ಹೋದ ವರ್ಷ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸರ್ಕಾರಿ ಮಹಿಳಾ ಕಾಲೇಜು ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕಿಯರು ತಲೆಗೆ ಹಿಜಾಬ್‌ ಧರಿಸಿದ್ದರು. ಕೆಲವರು ಬುರ್ಖಾ ಹಾಕಿಕೊಂಡೇ ಫೀಲ್ಡಿಂಗ್‌ ಮಾಡಿದರು.

ಅಂಗಳದ ಹೊರಗೂ ಹೊರತಲ್ಲ: ಮಹಿಳಾ ಕ್ರೀಡಾಪಟುಗಳು ಅಂಗಳದ ಹೊರಗೂ ಧರಿಸುವ ಬಟ್ಟೆಗಳು ಅನೇಕ ಬಾರಿ ವಿವಾದಕ್ಕೆ ಕಾರಣವಾಗಿವೆ. ಇತ್ತೀಚೆಗೆ ಭಾರತ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಕಪ್ಪುಬಣ್ಣದ ಸ್ವಾಗೆಟಿ ಟಾಪ್‌ ಧರಿಸಿದ್ದು ಸಭ್ಯವಾಗಿರಲಿಲ್ಲ ಎಂದು ಅನೇಕರುಸಾಮಾಜಿಕ ತಾಣಗಳಲ್ಲಿ ಟೀಕಿಸಿದ್ದರು. ಇದಕ್ಕೆ ಖಡಕ್‌ ಉತ್ತರ ನೀಡಿದ್ದ ಅವರು ‘ನಾನು ಯಾವ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳಬೇಕು ಎಂದು ಬೇರೆಯವರಿಂದ ಹೇಳಿಸಿಕೊಳ್ಳಬೇಕಾದ ಅಗತ್ಯವಿಲ್ಲ’ ಎಂದಿದ್ದರು.

ಮಹಿಳೆಯರು ಧರಿಸುವ ಉಡುಪುಗಳಿಗೆ ಮಾತ್ರ ಈ ರೀತಿಯ ಟೀಕೆಗಳು ವ್ಯಕ್ತವಾಗುತ್ತವೆ. ಪುರುಷರನ್ನು ಯಾರೂ, ಏಕೆ ಪ್ರಶ್ನೆ ಮಾಡುವುದಿಲ್ಲ ಎಂದು ಮಹಿಳಾ ಕುಸ್ತಿಪಟು ವಿನೇಶ್‌ ಪೊಗಟ್‌ ಪ್ರಶ್ನಿಸಿದ್ದರು.

ಕಾಲ, ಸ್ಪರ್ಧೆಗಳ ಸ್ವರೂಪ ಬದಲಾದಷ್ಟೂ ಕ್ರೀಡೆಗಳಲ್ಲಿ ಹೊಸ ಪ್ರಯೋಗಗಳು ಆಗುತ್ತಲೇ ಇವೆ. ಮುಂದೊಂದು ದಿನ ಮಹಿಳಾ ಕ್ರಿಕೆಟ್‌ನ ಪೋಷಾಕಿನಲ್ಲಿ ಬದಲಾವಣೆಯಾದರೂ ಅಚ್ಚರಿಪಡಬೇಕಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry