ಹಾಕಿ ಪ್ರತಿಭೆ ಭರತ್

7

ಹಾಕಿ ಪ್ರತಿಭೆ ಭರತ್

Published:
Updated:
ಹಾಕಿ ಪ್ರತಿಭೆ ಭರತ್

ಐದನೇ ತರಗತಿಯಲ್ಲಿಯೇ ಹಾಕಿ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಕೆ.ಆರ್.ಭರತ್‌ ಇಂದು ಬೆಂಗಳೂರು ವಿಶ್ವವಿದ್ಯಾಲಯ ತಂಡದ ನಾಯಕರಾಗಿದ್ದಾರೆ.

ಅಖಿಲ ಭಾರತ ಅಂತರ ವಿ.ವಿ ಹಾಕಿ ಟೂರ್ನಿಯಲ್ಲಿ ಇತ್ತೀಚೆಗೆ ಚಿನ್ನದ ಪದಕ ಗೆದ್ದ ಬೆಂಗಳೂರು ವಿ.ವಿ ತಂಡವನ್ನು ಭರತ್ ಮುನ್ನಡೆಸಿದ್ದರು. ವಾರಣಾಸಿ ವಿ.ವಿ ಎದುರಿನ ಪಂದ್ಯದಲ್ಲಿ ಅವರು ಏಕೈಕ ಗೋಲು ದಾಖಲಿಸಿ ‘ಪಂದ್ಯ ಶ್ರೇಷ್ಠ’ ಗೌರವ ಗಳಿಸಿದ್ದರು.

‘ಶಿವಮೊಗ್ಗದ ಯುವ ಸಬಲೀಕರಣ ಇಲಾಖೆಯಲ್ಲಿ ಹಾಕಿ ಕೋಚ್ ಆಗಿದ್ದ ವೆಂಕಟೇಶ್ ಅವರ ಮನೆಯಲ್ಲಿ ನಾವು ಬಾಡಿಗೆಗೆ ಇದ್ದೆವು. ಅವರು ನನಗೆ ಈ ಕ್ರೀಡೆಯನ್ನು ಪರಿಚಯಿಸಿದ್ದರು. ಆಗ ಸರ್ವೋದಯ ಪ್ರೈಮರಿ ಶಾಲೆಯಲ್ಲಿ ನಾನು ಓದುತ್ತಿದ್ದೆ. ಚಿಕ್ಕವನಿದ್ದಾಗಲೇ ಹಾಕಿಯ ಬಗ್ಗೆ ತಿಳಿದುಕೊಳ್ಳುವ ಅವಕಾಶ ನನಗೆ ಸಿಕ್ಕಿತು. ಆಸಕ್ತಿ ಬೆಳೆಯಿತು. ಅದರಲ್ಲಿಯೇ ಎತ್ತರದ ಸಾಧನೆ ಮಾಡುವ ಕನಸು ಕಂಡೆ’ ಎಂದು ಭರತ್‌ ಹೇಳುತ್ತಾರೆ.

‘ಪಿಯುಸಿ ಓದಲು ಬೆಂಗಳೂರಿಗೆ ಬಂದೆ. ಲಾಲ್‌ಬಾಗ್‌ ಸಮೀಪದಲ್ಲಿರುವ ಅಲ್‌ಅಮೀನ್ ಕಾಲೇಜಿನಲ್ಲಿ ಈಗ ಅಂತಿಮ ಬಿ.ಎ ಪದವಿಯಲ್ಲಿ ಓದುತ್ತಿದ್ದೇನೆ. ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಿದ ನಂತರ ಬೆಂಗಳೂರು ವಿ.ವಿ ತಂಡಕ್ಕೆ ಆಡುವ ಅವಕಾಶ ಸಿಕ್ಕಿತು. ಗುಂಟೂರಿನ ನಾಗಾರ್ಜುನ ವಿ.ವಿಯಲ್ಲಿ ನಡೆದ ದಕ್ಷಿಣ ವಲಯ ಹಾಕಿ ಟೂರ್ನಿಯಲ್ಲಿ ಮೊದಲ ಬಾರಿಗೆ ಆಡಿದೆ. ಅಲ್ಲಿ ನಮ್ಮ ತಂಡ ನಾಲ್ಕನೇ ಸ್ಥಾನ ಪಡೆಯಿತು. ಆ ಬಳಿಕ ನನಗೆ ಈ ಕ್ರೀಡೆಯಲ್ಲಿ ಬೆಳೆಯುವ ಛಲ ಹೆಚ್ಚಾಯಿತು’ಎನ್ನುತ್ತಾರೆ.

‘ನಾಯಕನಾಗುವ ಅವಕಾಶ ನನಗೆ ಸಿಕ್ಕಾಗ ಆಶ್ಚರ್ಯ ಆಗಿತ್ತು. ನಮ್ಮ ತಂಡ ರಕ್ಷಣಾ ವಿಭಾಗದಲ್ಲಿ ಪ್ರಬಲವಾಗಿದೆ. ಈ ವಿಭಾಗದಲ್ಲಿ ಆಡಿದ್ದ ಸಂಜಯ್‌ ಪ್ರಮುಖ ಶಕ್ತಿ. ಆಭರಣ್‌, ಮೋಕ್ಷಿತ್‌, ಸ್ಟ್ಯಾಲಿನ್‌, ಸಂಜೀವ್‌, ಆ್ಯರನ್‌ ಅವರು ಫಾರ್ವರ್ಡ್‌ ವಿಭಾಗದಲ್ಲಿ ಮಿಂಚಿದ್ದಾರೆ’ ಎಂದು ಭರತ್‌ ತಮ್ಮ ಸಹ ಆಟಗಾರರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

***

ಬೆಂಗಳೂರು ವಿ.ವಿ ತಂಡದ ಬಗ್ಗೆ

ಹೋದ ವರ್ಷ ಬೆಂಗಳೂರು ವಿ.ವಿ ಹಾಕಿ ತಂಡ ಅಖಿಲ ಭಾರತ ಅಂತರ ವಿ.ವಿ ಟೂರ್ನಿ ಆಡಿದಾಗ ಸೆಮಿಫೈನಲ್‌ನಲ್ಲಿ ವಿ.ಬಿ.ಎಸ್‌.ಪಿ ತಂಡದ ಎದುರು ಸೋತಿತ್ತು. ಈ ವರ್ಷ ಸೆಮಿಫೈನಲ್‌ನಲ್ಲಿ ಮದ್ರಾಸ್ ವಿ.ವಿಯನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಫೈನಲ್‌ನಲ್ಲಿ ಜಬಲ್‌ಪುರದ ವಿ.ಬಿ.ಎಸ್‌.ಪಿ ತಂಡದ ಎದುರು ಗೆದ್ದಿದೆ. ಬೆಂಗಳೂರು ವಿ.ವಿ ತಂಡದಲ್ಲಿ ಒಟ್ಟು 18 ಆಟಗಾರರು ಇದ್ದರು. ಇದರಲ್ಲಿ 13 ಸ್ಪರ್ಧಿಗಳು ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಆಟಗಾರರು. ಉಳಿದವರು ಕ್ರೀಡಾ ನಿಲಯ ತಂಡದವರು.

ಅಭರಣ್ ಸುದೇವ್‌ ಎರಡು ಪಂದ್ಯಗಳಲ್ಲಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಪಡೆದಿದ್ದಾರೆ. ಅಮರಾವತಿ ವಿ.ವಿ ಎದುರಿನ ಎರಡನೇ ಪಂದ್ಯದಲ್ಲಿ ಅವರು ಹ್ಯಾಟ್ರಿಕ್ ಗೋಲು ಗಳಿಸಿ ಮಿಂಚಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry